ಇಂಗ್ಲಿಷ್ ದುರಹಂಕಾರ ಹೊಲತಾಳರಲ್ಲಿಲ್ಲ
ತುಮಕೂರು: ಇಂಗ್ಲಿಷ್ ದುರಹಂಕಾರ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಸಿದ್ದಗಂಗಯ್ಯ ಹೊಲತಾಳರಲ್ಲಿಲ್ಲ. ಅವರೊಬ್ಬ ಸೀದಾ-ಸಾದಾ ಮನುಷ್ಯ. ಇಂಗ್ಲಿಷ್-ಕನ್ನಡ ಬೆಸೆಯುವ ಕಾವ್ಯ ಸಂಹವನ ಕೃತಿ ರಚನೆ ಅವರ ವಿದ್ವತ್ತಿಗೆ ಸಾಕ್ಷಿ. ಕನ್ನಡದ ಮೂಲಕ ಇಂಗ್ಲಿಷ್ ಕಲಿಸಲು ಶ್ರಮಿಸುತ್ತಿರುವ, ಅಪರೂಪದ ಶಿಕ್ಷಕ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ಶ್ಲಾಘಿಸಿದರು.
ಅವರು ತುಮಕೂರಿನ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸ್ಟೂಡೆಂಟ್ ಬುಕ್ ಕಂಪನಿವತಿಯಿಂದ ಏರ್ಪಾಟಾಗಿದ್ದ ಹೊಲತಾಳ್ರ 6 ಸಾಹಿತ್ಯ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಹೊಲತಾಳರ ಕಾವ್ಯ ಸಂವಹನ ಕೃತಿ ಕುರಿತು ಮಾತನಾಡಿದರು.
ಇಂಗ್ಲಿಷ್ ಎಂಎ ಮಾಡಿದವರೆಲ್ಲಾ ಸಿದ್ದಗಂಗಯ್ಯನವರ ರೀತಿ ಇದ್ದಿದ್ದರೆ ದೇಶ -ಭಾಷೆ ಇನ್ನೂ ಉತ್ತಮವಾಗಿರುತ್ತಿತ್ತು. ಆದರೆ ಇಂಗ್ಲಿಷರಿಗಿಲ್ಲದ ಇಂಗ್ಲಿಷ್ ಭಾಷಾ ದರ್ಪ, ಇಂಗ್ಲಿಷ್ ಕಲಿತ ಭಾರತೀಯರಿಗಿರುವುದು ದುರಂತವೇ ಸರಿ ಎಂದು ದಳವಾಯಿ ಮಾರ್ಮಿಕವಾಗಿ ನುಡಿದರು. ಕನ್ನಡ ಸರಿಯಾಗಿ ಕಲಿಸುವುದೇ ಇಂದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿರುವಾಗ, ಕನ್ನಡದ ಮೂಲಕ ಇಂಗ್ಲಿಷ್ ಕಲಿಕೆಗೆ ಶ್ರಮಿಸುತ್ತಿರುವ, ಅದಕ್ಕಾಗಿ ಸರಣಿ ಪುಸ್ತಕಗಳನ್ನು ಹೊರತರಲು ಶ್ರಮಿಸಿರುವ ಹೊಲತಾಳ್ ಕೊಡುಗೆ ಅಪಾರ. ಇಂದು ಮನುಷ್ಯ ಸಹಜವಾಗಿರೋದು, ಸರಳವಾಗಿರೋದು ತಪ್ಪು ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಆದರೆ ಅದು ತಪ್ಪಲ್ಲ. ಅದು ಆ ರೀತಿ ನೋಡೋರ ತಪ್ಪು. ವಕ್ರದೃಷ್ಟಿ ಎಂದು ವಿಶ್ಲೇಷಿಸಿದ ದಳವಾಯಿ, ಸಿದ್ದಗಂಗಯ್ಯ ಭಿನ್ನ ವ್ಯಕ್ತಿತ್ವದ, ಸರಳ, ಸಹಜ ಇಂಗ್ಲಿಷ್ ಮೇಷ್ಟ್ರು ಎಂದು ಪ್ರಶಂಶಿಸಿದರು.
ಮನುಷ್ಯನ ಮೇಲೆ ಪ್ರಭಾವ: ಸಿದ್ದಗಂಗಯ್ಯ ಹೊಲತಾಳ್, ಕಾವ್ಯ ಸಂಹವನ ಎಂಬ ಡಿಲಿಟ್ ಸಂಶೋಧನಾ ಪ್ರಬಂಧ ಮಂಡಿಸುವ ಮೂಲಕ ಕನ್ನಡ ವಿದ್ವತ್ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಕಾವ್ಯವೇ ಕ್ಲಿಷ್ಟ. ಅಂತದ್ದರಲ್ಲಿ ಕಾವ್ಯ ಸಂಹವನ ಇನ್ನೂ ಕಷ್ಟ. ಆದರೆ ಹೊಲತಾಳ್ ಕಾವ್ಯವನ್ನು ಸರಳಗೊಳಿಸಿದ್ದಾರೆ. ಈ ಮೂಲಕ ಜನ ಸಾಮಾನ್ಯರ ಹತ್ತಿರಕ್ಕೆ ಕಾವ್ಯವನ್ನು ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಕಾವ್ಯ ಮನುಷ್ಯರ ಮೇಲೆ ಪ್ರಭಾವ ಬೀರುತ್ತೆ. ಸುಮಾರು 400 ಕ್ಕೂ ಹೆಚ್ಚು ಗ್ರಂಥಗಳನ್ನು ಅಧ್ಯಯನ ಮಾಡಿ, ಈ ಮಹತ್ತರ ಕಾವ್ಯ ಸಂವಹನ ಕೃತಿ ರಚಿಸಿರುವುದು ಸಿದ್ದಗಂಗಯ್ಯನವರ ಹೆಗ್ಗಳಿಕೆ. ಎಲಿಯೆಟ್-ರಿಚರ್ಡ್ಸ್ ಅವರನ್ನು ಆಳವಾಗಿ ಅಧ್ಯಯನ ಮಾಡಿ, ಕಾವ್ಯ, ಸಮಕಾಲೀನ ವಿಷಯ ಕುರಿತಂತೆ ವಿದ್ವತ್ ಪೂರ್ಣವಾಗಿ ಚರ್ಚಿಸಿರುವುದು ಅವರ ಅಧ್ಯಯನದ ವಿಸ್ತಾರಕ್ಕೆ ಉದಾಹರಣೆಯಾಗಿದೆ. ಈ ಕೃತಿಯಲ್ಲಿ ಪ್ರಧಾನವಾಗಿ ಪ್ರತಿಭೆ, ಸಹೃದಯತೆ ಕುರಿತು ಚರ್ಚಿಸಿದ್ದಾರೆ ಎಂದು ವಿವರಿಸಿದರು.
ಸಾಕಷ್ಟು ಕೊಡುಗೆ: ಇಂಗ್ಲಿಷ್ ಭಾಷೆಯನ್ನು ಭಾರತ ಬೆಳೆಸಿದಷ್ಟು ಬೇರಾವ ದೇಶವೂ ಬೆಳೆಸಿಲ್ಲ. ಭಾಷಾ ವೈವಿಧ್ಯತೆಗೆ, ಬಹುಸಂಸ್ಕೃತಿಗೆ ಹೆಸರಾಗಿರುವ ಭಾರತದ ಇಂಗ್ಲಿಷ್ ಬರಹಗಾರರು ಆಯಾ ಭಾಷೆಯ ಸೊಗಡನ್ನು ಇಂಗ್ಲಿಷ್ ಮೂಲಕ ಹರಿಸಲು ಶ್ರಮಿಸುತ್ತಲೇ ಇದ್ದಾರೆ. ಹೀಗಾಗಿ ಇಂಗ್ಲಿಷ್ ಇನ್ನಷ್ಟು-ಮತ್ತಷ್ಟು ಸಮೃದ್ಧಗೊಳ್ಳುತ್ತಲೇ ಬೆಳೆಯುತ್ತಿದೆ ಎಂದರು. ಕಾವ್ಯವನ್ನು ಇನ್ನಷ್ಟು-ಮತ್ತಷ್ಟು ಹತ್ತಿರಕ್ಕೆ ತಂದ ಕೀರ್ತಿ ಸುಗಮ ಸಂಗೀತಗಾರರದ್ದು. ಹಾಡುಗಾರರದ್ದು. ಇದರಲ್ಲಿ ಅಶ್ವತ್ಥ್, ಕಾಳಿಂಗರಾವ್, ಎಂ.ಡಿ. ಪಲ್ಲವಿ, ಅಪ್ಪಗೆರೆ ತಿಮ್ಮರಾಜು ಇತ್ಯಾದಿ ಹಾಡುಗಾರರ ಕೊಡುಗೆ ಸಾಕಷ್ಟಿದೆ ಎಂದರು.
ಶಿಕ್ಷಕರನ್ನು ಬಿಟ್ಟು ಮಿಕ್ಕವರೆಲ್ಲಾ ಎಚ್ಚರ: ಇಂದು ತರಗತಿಗಳು ಅತ್ಯಂತ ನೀರಸವಾಗಿವೆ. ಅಧ್ಯಾಪಕರಲ್ಲಿ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಒಂದು ರೀತಿಯಲ್ಲಿ ಟಿವಿ ಆಂಕರ್ ತನ್ನ ಚಲನಶೀಲತೆಯಿಂದಾಗಿಯೇ ನೋಡುಗರನ್ನು ತನ್ನತ್ತ ಸೆಳೆಯುತ್ತಿರುವ ಸಂದರ್ಭದಲ್ಲಿ, ಸಂವಹನವೇ ಉದ್ಯೋಗ ಮಾಡಿಕೊಂಡಿರುವ ಶಿಕ್ಷಕರಲ್ಲಿ ಸಂವಹನ ಕೊರತೆ ಅಗಾಧವಾಗಿರುವುದು ಬೇಸರದ ಸಂಗತಿಯಾಗಿದೆ. ತರಗತಿಗಳಲ್ಲಿ ಪಾಠ ಕೇಳುವುದೇ ಭಯೋತ್ಪಾದನೆಗೆ ಬಲಿಯಾದಂತೆ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ತರಗತಿಗಳಲ್ಲಿ ಕಬ್ಬಿಣ ಕುಟ್ಟುವ ಕೆಲಸ ನಡೆಯುತ್ತಿದೆ. ಇಂದು ಶಿಕ್ಷಕರನ್ನು ಬಿಟ್ಟು ಮಿಕ್ಕವರೆಲ್ಲಾ ಎಚ್ಚರವಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದ ದಳವಾಯಿ, ಅಧ್ಯಾಪಕರು ಕ್ರಿಯಾಶೀಲತೆ ಕಳೆದುಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳಕಳಿ: ಶಿಕ್ಷಕರು ಉತ್ತಮವಾಗಿ ಸಂವಹನ ನಡೆಸುತ್ತಿದ್ದಾರೆ ಅಂದರೆ ಪಾಠ ಮಾಡುತ್ತಿದ್ದಾರೆ ಎಂದರೆ ಸಮಾಜದ ಬಗ್ಗೆ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ ಎಂದರ್ಥ. ಆದರೆ ಇಂದು ಶಾಲಾ-ಕಾಲೇಜುಗಳಲ್ಲಿ ಉತ್ತಮ ಸಂವಹನ ನಡೆಯುತ್ತಿಲ್ಲ. ಕಬ್ಬಿಣ ಕುಟ್ಟುವ ಕೆಲಸ ನಡೆಯುತ್ತಿದ್ದು, ಪಾಠ ಕೇಳುವುದು ಎಂದರೆ ಬೋರ್ ಎಂಬಂತಹ ಕಠೋರ ಸ್ಥಿತಿ ನಿರ್ಮಾಣವಾಗಿರೋದು ದೇಶಕ್ಕೆ ಒಳ್ಳೆಯದಲ್ಲ ಎಂದು ದಳವಾಯಿ ಮಾರ್ಮಿಕವಾಗಿ ನುಡಿದರು.
ಹೊಲತಾಳರ ಹಾದಿ ಕುರಿತು ಡಾ. ಸೋ.ಮು. ಭಾಸ್ಕರಾಚಾರ್, ವೈವಿಧ್ಯ ಕುರಿತು ತುಮಕೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಡಿ.ವಿ. ಪರಮಶಿವಮೂರ್ತಿ, ಜ್ಞಾನಪೀಠ ಪುರಸ್ಕೃತ ಕನ್ನಡಿಗರು ಕೃತಿ ವಿಮರ್ಶಕ ಕೆ.ಪಿ. ನಟರಾಜ್, ಹ್ಯಾಂಡ್ಪುಲ್ ವಾಟರ್ ಕುರಿತು ಗುಬ್ಬಿ ಇಂಗ್ಲಿಷ್ ಉಪನ್ಯಾಸಕ ಜಿ.ಎಂ. ಜಯದೇವಪ್ಪ, ಫ್ರೀಡಂ ಫೈಟರ್ಸ್ ಕುರಿತು ಪ್ರೊ.ಟಿ.ಎಸ್. ನಾಗರಾಜಶೆಟ್ಟಿ ಮಾತನಾಡಿದರು.
ಕೃತಿಕಾರ ಡಾ. ಸಿದ್ದಗಂಗಯ್ಯ ಹೊಲತಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ.ಎಚ್. ನಾಗರಾಜ್ ನಿರೂಪಿಸಿ, ನಾಗರಾಜರಾವ್ ಸ್ವಾಗತಿಸಿದರು.
ಸ್ಟೂಡೆಂಟ್ ಬುಕ್ ಕಂಪನಿಗೆ ಶ್ಲಾಘನೆ
ತುಮಕೂರು: ಓದುಗರು ವಿರಳವಾಗುತ್ತಿರುವ, ಪುಸ್ತಕ ಪ್ರಕಾಶನಕ್ಕೆ ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ, ಕಿರಿಯ ವಯಸ್ಸಿಗೇ ಪುಸ್ತಕ ಪ್ರಕಾಶನ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸ್ಟೂಡೆಂಟ್ ಬುಕ್ ಕಂಪನಿಯ ಮಾಲೀಕ, ಪ್ರಕಾಶಕ ಹಾಗೂ ಹೊಲತಾಳ್ ಸಾಹಿತ್ಯ ಕೃತಿ ಶ್ರೇಣಿ ಹೊರತರಲು ಸಹಕರಿಸಿರುವ ಸದಾಶಿವ ಅವರ ಕಾರ್ಯವನ್ನು ಡಾ. ರಾಜಪ್ಪ ದಳವಾಯಿ ಹಾಗೂ ಡಾ. ಸೋ.ಮು. ಭಾಸ್ಕರಾಚಾರ್, ಸಿದ್ದಗಂಗಯ್ಯ ಹೊಲತಾಳ್ ಪ್ರಶಂಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

