ಜಿಎಸ್ಎಸ್ ನಿಧನದಿಂದ ಕನ್ನಡ ಅನಾಥ
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಡಿ.25
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಗ್ರಹಣ ಬಡಿದಂತಾಗಿದೆ ಎಂದು ಸಾಹಿತಿ ಎಂ.ವಿ. ನಾಗರಾಜರಾವ್ ನುಡಿದರು.
ಅವರು ಪಟ್ಟಣದ ನೆಹರು ಸರ್ಕಲ್ ಬಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕುಗ್ರಾಮದಲ್ಲಿ, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅವರು ಬೆಳೆದ ರೀತಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ.
ಇಂದು ಅವರ ನೆನಪಿಗೆ ಮುಖ್ಯಕಾರಣ ಅವರು ಕನ್ನಡಕ್ಕಾಗಿ ಮಾಡಿದ ಸೇವೆ, ಇಂದಿನ ಭಾವಗೀತೆ ಗಾಯಕರಿಗೆ ಜಿಎಸ್ಎಸ್ ಅವರ ಗೀತೆಗಳನ್ನು ಹಾಡದೆ ಕಾರ್ಯಕ್ರಮ ಕೊಡಲು ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ಅವರ ಕಾವ್ಯಗಳು ರಚನೆಯಾಗಿರುವುದು ಅವರಲ್ಲಿದ್ದ ಕನ್ನಡದ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿದೆ. ಎಷ್ಟೋ ಬಿರುದುಗಳು ಬರಬೇಕಾಗಿದ್ದ ಅವರಿಗೆ ಕೈತಪ್ಪಿ ಹೋದರೂ ಸಹ, ವ್ಯಾಕುಲಗೊಳ್ಳದೆ, ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ ಎಂದು ಬರೆದ ಅವರು ನಿಜವಾಗಿ ಇಂದಿನ
ವ್ಯವಸ್ಥೆಯ ಮುಖಗಳನ್ನು ಅನಾವರಣ ಮಾಡಿದರು. ಅವರು ಸಜ್ಜನರಲ್ಲಿ ಸಜ್ಜನ, ಸಾಹಿತ್ಯ ಜಂಗಮ ಎಂದರೆ ತಪ್ಪಾಗಲಾರದೆಂದು ಅಭಿಪ್ರಾಯಪಟ್ಟರು.
ತಮ್ಮ ಗುರುಗಳ ಬಗ್ಗೆ ಅಭಿಮಾನದ ನುಡಿಗಳನ್ನಾಡಿದ ಉಪನ್ಯಾಸಕ ಕಣ್ಣಯ್ಯ ನವ್ಯ ಮತ್ತು ನವೋದಯ ಸಾಹಿತ್ಯದ ಪ್ರತಿಭೆ ಜಿಎಸ್ಎಸ್ ಅವರು. ಅವರು ಜ್ಞಾನಪೀಠಕ್ಕೆ ಅರ್ಹರಾಗಿದ್ದರು. ಪ್ರವಾಸ ಕಥನಗಳು, ವಿಮರ್ಶಾ ಗ್ರಂಥಗಳು, ಹಳಗನ್ನಡದ ಜೊತೆಗೆ ನಾಟಕ ಸಾಹಿತ್ಯಗಳನ್ನು ರಚಿಸಿದ ಅವರು ಕನ್ನಡದ ಅದಮ್ಯ ಚೇತನವಾಗಿದ್ದರು. ನಮ್ಮನ್ನಗಲಿರುವುದು ಕನ್ನಡಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಕವಿ, ವಿಮರ್ಶಕ, ಕಾವ್ಯ ಮೀಮಾಂಸೆಗಳನ್ನು ರಚಿಸಿ ಅನಾವರಣದಂತಹ ಕೃತಿಯನ್ನು ಕನ್ನಡಕ್ಕೆ ನೀಡಿದವರು ಜಿಎಸ್ಎಸ್. ಕವಿಯಾಗಿ ಎದೆ ತುಂಬಿ ಹಾಡಿದ ಅವರು ಕನ್ನಡಿಗರ ಕಣ್ಣು ತುಂಬಿದರು ಎಂದರು.
ಪುರಸಭಾಧ್ಯಕ್ಷೆ ಗೀತಾ, ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸದಸ್ಯರಾದ ಅಶೋಕ್, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೇಗೌಡ, ಸುಪ್ರೀಂ ಸುಬ್ರಹ್ಮಣ್ಯ, ಸಿ.ಬಿ.ರೇಣುಕಸ್ವಾಮಿ, ಸಿ.ಎಸ್.ನಟರಾಜ್,ಪ್ರಾಂಶುಪಾಲ ಎಂ.ವಿ. ರಾಜಕುಮಾರ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

