765 ಕೆ.ವಿ. ಸಾಮರ್ಥ್ಯದ ವಿದ್ಯುತ್ ಗ್ರಿಡ್
ತುಮಕೂರು: ತುಮಕೂರು ಬಳಿಯ ವಸಂತನರಸಾಪುರದಲ್ಲಿ 650 ಕೋಟಿ ರು. ವೆಚ್ಚದ 765 ಕೆ.ವಿ. ಸಾಮರ್ಥ್ಯದ ವಿದ್ಯುತ್ ಗ್ರಿಡ್ ಕಾಮಗಾರಿಯನ್ನು ಸಂಸದ ಜಿ.ಎಸ್. ಬಸವರಾಜು ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ಶುಕ್ರವಾರ ಪರಿಶೀಲಿಸಿದರು.
ಕೇಂದ್ರ ಇಂಧನ ಇಲಾಖೆ ಪವರ್ ಗ್ರಿಡ್ ಕಾರ್ಪೋರೇಶನ್ ಇಡೀ ಭಾರತ ಒಂದು ಕಾರಿಡಾರ್ ಎಂಬ ಧ್ಯೇಯ ವಾಕ್ಯದಡಿ ತುಮಕೂರನ್ನು ಕೇಂದ್ರ ಭಾಗವಹಿಸಿಕೊಂಡು ದಕ್ಷಿಣ ಭಾರತದಾದ್ಯಂತ ಒಂದೇ ಕಾರಿಡಾರ್ನಲ್ಲಿ ವಿದ್ಯುತ್ ಪಸರಿಸಲು ಈ ಯೋಜನೆ ಹಮ್ಮಿಕೊಂಡಿದೆ ಎಂದು ಸಂಸದ ಜಿ.ಎಸ್. ಬಸವರಾಜು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಯೋಜನೆ ಪೂರ್ಣಗೊಂಡಲ್ಲಿ ಇಡೀ ರಾಜ್ಯವನ್ನು ಸಂಪರ್ಕಿಸುವ ಮೊದಲ ಹೈ ಪವರ್ ಗ್ರಿಡ್ ಕಾರಿಡಾರ್ ಎಂಬ ಹೆಗ್ಗಳಿಕೆಗಳಿಗೆ ಪಾತ್ರವಾಗಲಿದೆಯೆಂದರು.
ಈ ಯೋಜನೆಯಡಿ ಕೊಲ್ಲಾಪುರದಿಂದ-ಬಿಜಾಪುರ, ತುಮಕೂರು-ಸೇಲಂ-ಟ್ಯೂಟಿಕೊರಿನ್-ನಾಗಪಟ್ಟಣಂವರೆಗೆ, ಸೊಲ್ಲಾಪರದಿಂದ- ರಾಯಚೂರು- ಕರ್ನೂಲ್-ವೆಲ್ಲೂರು-ನೆಲ್ಲೂರುವರೆಗೆ 765 ಕೆವಿ ವಿದ್ಯುತ್ ಪ್ರವಹಿಸಲಿದೆ ಎಂದರು.
ವಸಂತನರಸಾಪುರದ ಮೂರನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 110 ಎಕರೆ ಪ್ರದೇಶದಲ್ಲಿ ಈ ಸೆಂಟ್ರಲ್ ಪವರ್ ಗ್ರಿಡ್ ನಿರ್ಮಾಣವಾಗುತ್ತಿದ್ದು, ತುಮಕೂರು ಜಿಲ್ಲೆಗೂ ಇದರ ಪ್ರಯೋಜನ ಪಡೆದುಕೊಳ್ಳಲು 220 ಕೆವಿ ಸಾಮರ್ಥ್ಯದ ಕೆಪಿಟಿಸಿಎಲ್ ಲೈನ್ ಅಳವಡಿಸಿ ಮಧುಗಿರಿ ಉಪ ಘಟಕದ ಮೂಲಕ ಶಿರಾ ನಿಟ್ಟೂರು, ಮಧುಗಿರಿ, ಅಂತರಸನಹಳ್ಳಿ, ವಸಂತನರಸಾಪುರ ಹಾಗೂ ತಮಿಳುನಾಡಿನ ಧರ್ಮಪುರಿಗೂ ವಿದ್ಯುತ್ ಪಡೆದುಕೊಳ್ಳುವ ಅವಕಾಶವನ್ನು ಯೋಜನೆಯಲ್ಲಿ ಸೇರಿಸಲಾಗಿದೆಯೆಂದರು.
ಪ್ರಧಾನಿಯಿಂದ ಉದ್ಘಾಟನೆ: ಕೇಂದ್ರದ ಮಹತ್ವಕಾಂಕ್ಷಿ ಯೋಜನೆ ಇದಾಗಿದ್ದು, ದಕ್ಷಿಣದ ಐದು ರಾಜ್ಯಗಳಿಗೆ ವಿದ್ಯುತ್ ಸಂಪರ್ಕ ಏರ್ಪಡಿಸುವ ಈ ಯೋಜನೆಗೆ 650 ಕೋಟಿ ತಗಲುತ್ತಿದ್ದು, ಕರ್ನಾಟಕದ ವಿದ್ಯುತ್ ಸಂಪರ್ಕಕ್ಕೆ 400 ಕೋಟಿ ವೆಚ್ಚವಾಗುತ್ತಿದೆ ಎಂದರು.
ಈ ಯೋಜನೆ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಮಾರ್ಚ್ ಅಂತ್ಯದ ವೇಳೆಗೆ ಪ್ರಧಾನಿ ಮನಮಹೋನ್ ಸಿಂಗ್ ಅವರನ್ನು ಕರೆಸಿ ಗ್ರಿಡ್ ಅನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆಯೆಂದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲೇ ನಿರ್ಮಾಣವಾಗುತ್ತಿರುವ 12 ಸಾವಿರ ಎಕರೆ ನಿಮ್ಜ್ ವಲಯಕ್ಕೂ ಈ ಪವರ್ ಗ್ರಿಡ್ನಿಂದ ಅನುಕೂಲವಾಗಲಿದೆ ಎಂದ ಸಂಸದರು ಯೋಜನೆ ಜಾರಿಯಿಂದ ನಿರಂತರ ವಿದ್ಯುತ್ ಪೂರೈಕೆಗೆ ಸಹಾಯಕವಾಗಲಿದೆ. ಜತೆಗೆ ಶಿರಾದಲ್ಲಿ ನಿರ್ಮಾಣವಾಗಲಿರುವ 4 ಸಾವಿರ ಎಕರೆ ವಿಸ್ತೀರ್ಣದ ಜಪಾನೀ ಕೈಗಾರಿಕಾ ಗ್ರಾಮ, ಗುಬ್ಬಿ ಬಿದರೆಗುಡಿ ಕಾವಲ್ನ ಎಚ್ಎಎಲ್ ಹೆಲಿಕಾಪ್ಟರ್ ಘಟಕ ಸ್ಥಾಪನೆಗೂ ಪೂರಕವಾಗಲಿದೆಯೆಂದರು.
ಪವರ್ಗ್ರಿಡ್ ಕಾರ್ಪೋರೇಶನ್ನಿನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ರವೀಂದ್ರಕುಮಾರ್, ಉಪ ಪ್ರಧಾನ ವ್ಯವಸ್ಥಾಪಕ ವಿ.ಎಸ್. ಜೋಸೆಪ್ಸ್, ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್ ಕೆ.ಟಿ. ಮಹಾಂತಪ್ಪ ಹಾಗೂ ಸೂಪರಿಟಿಂಡೆಂಟ್ ಎಂಜಿನಿಯರ್ ಜಿ.ಎಂ. ಚಂದ್ರಶೇಖರಯ್ಯ ಸ್ಥಳದಲ್ಲೇ ಹಾಜರಿದ್ದು, ಸಂಸದರಿಗೆ ಗ್ರಿಡ್ ಕಾಮಗಾರಿಯ ಪ್ರಗತಿಯನ್ನು ವಿವರಿಸಿದರು.
ಲೈನ್ ಹಾದುಹೋಗುವುದಕ್ಕೆ ರೈತರು ಸಹಕರಿಸಬೇಕೆಂದು ಅಧಿಕಾರಿಗಳು ಇದೇ ವೇಳೆ ಮನವಿ ಮಾಡಿದರು. ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ರಘುತ್ತೋಮರಾವ್, ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆಚಂದ್ರು ಮತ್ತಿತರ ಮುಖಂಡರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

