ಫ್ಲೋರೈಡ್ ಮುಕ್ತ ಕುಡಿವ ನೀರಿನ ಯೋಜನೆ ಜಾರಿ
ತುಮಕೂರು: ಬಹುಗ್ರಾಮ ಕುಡಿವ ನೀರು ಯೋಜನೆಯಡಿ ಹೆಬ್ಬೂರು ಮತ್ತು ಕಣಕುಪ್ಪೆ ಗ್ರಾ.ಪಂ. ನ 14 ಗ್ರಾಮಗಳಿಗೆ ಫ್ಲೋರೈಡ್ ಹಾಗೂ ನೈಟ್ರೇಟ್ ಮುಕ್ತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ.
ಹೇಮಾವತಿ ನದಿಯಿಂದ ಸರಬರಾಜು ಮಾಡುವ ಯೋಜನೆಯ 447 ಲಕ್ಷ ರು.ಗಳಲ್ಲಿ ಅನುಷ್ಠಾನಗೊಂಡಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತಿಮ್ಮಸಂದ್ರದಲ್ಲಿ ಶಾಸಕ ಬಿ. ಸುರೇಶ್ಗೌಡ ಈ ಯೋಜನೆಗೆ ಚಾಲನೆ ನೀಡಿದರು. ಪ್ರತಿನಿತ್ಯ ಪ್ರತಿಯೊಬ್ಬ ನಾಗರಿಕನಿಗೆ 40 ಲೀಟರ್ನಂತೆ 5.95 ಲಕ್ಷ ಲೀಟರ್ ನೀರನ್ನು ಕಣಕುಪ್ಪೆ ಕೆರೆಯಿಂದ 14 ಗ್ರಾಮಗಳಿಗೆ ಹೇಮಾವತಿಯಿಂದ ಶುದ್ಧ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಶಾಸಕ ಬಿ ಸುರೇಶ್ ಗೌಡರು ತಿಳಿಸಿದರು.
ಪ್ರಸ್ತುತ ಕಣಕುಪ್ಪೆ ಕೆರೆಯಲ್ಲಿ 4 ರಿಂದ 5 ತಿಂಗಳಿಗೆ ಆಗುವಷ್ಟು ನೀರು ಸಂಗ್ರಹ ಮಾಡಲಾಗಿದೆ. ಇದರಿಂದ ಹೋಬಳಿ ಕೇಂದ್ರವಾದ ಹೆಬ್ಬೂರು ಮತ್ತು ಗ್ರಾಮ ಪಂಚಾಯ್ತಿ ಕೇಂದ್ರವಾದ ಕಣಕುಪ್ಪೆ ಹಾಗು ಇತರೆ 12 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗದು ಎಂದು ಶಾಸಕ ಬಿ. ಸುರೇಶ್ ಗೌಡರು ತಿಳಿಸಿದರು, ಈ ಯೋಜನೆಯಿಂದ ಹೆಬ್ಬೂರು, ಕೋಡಿಪಾಳ್ಯ, ಬನ್ನಿಮರದಕಟೆ, ಪಾರ್ವತಿಪುರ, ಕಲ್ಲಕೆರೆ, ಸಂಗಲಾಪುರ, ಕಣಕುಪ್ಪೆ, ಬಿಸಿಲಹಳ್ಳಿ. ಗರಗದಕುಪ್ಪೆ, ರಾಯವಾರ, ತಿಮ್ಮಸಂದ್ರ, ಬೈಚೇನಹಳ್ಳಿ, ರಾಮೇನಹಳ್ಳಿ, ಬನ್ನಿಕುಪ್ಪೆಗೆ ಅನುಕೂಲವಾಗಲಿದೆ ಎಂದರು.
ಕಣಕುಪ್ಪೆ ಕೆರೆಯಿಂದ ತಿಮ್ಮಸಂದ್ರ ಗ್ರಾಮದಲ್ಲಿ ಜಲ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿ ಇಲ್ಲಿ ನೀರನ್ನು ಶುದ್ಧೀಕರಿಸಿ ಇಲ್ಲಿಂದ ಗರಗದಕುಪ್ಪೆ ಗ್ರಾಮದಲ್ಲಿ 18 ಮೀಟರ್ ಎತ್ತರದಲ್ಲಿ ನಿರ್ಮಾಣ ಮಾಡಿರುವ 50 ಸಾವಿರ ಲೀಟರ್ ಸಾಮರ್ಥ್ಯದ ಮಾಸ್ಟರ್ ಬ್ಯಾಲೆನ್ಸಿಂಗ್ ಟ್ಯಾಂಕ್ಗೆ ಹಾಗೂ ಇದೇ ಅಳತೆಯಲ್ಲಿ ಹೆಬ್ಬೂರು ಗ್ರಾಮದಲ್ಲಿ 1 ಲಕ್ಷ ಸಾಮರ್ಥ್ಯದಲ್ಲಿ ನಿರ್ಮಾಣ ಮಾಡಿರುವ ಓವರ್ ಹೆಡ್ ಟ್ಯಾಂಕ್ ನಿಂದ 14 ಗ್ರಾಮಗಳಿಗೆ ಗುರುತ್ವಾಕರ್ಷಣೆಯಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಕ್ತಿ ದೋರಕಲಿದೆ: ಫ್ಲೋರೈಡ್ಮುಕ್ತ ನೀರನಿಂದಾಗಿ ಮೂಳೆ ಸವೆತ ಹಲ್ಲು ಸವೆತ ಕ್ಯಾನ್ಸರ್ನಂತ ರೋಗಗಳಿಂದ ನಮ್ಮ ಜನರಿಗೆ ಮುಕ್ತಿ ದೊರೆಯಲಿದೆ. ಸರ್ಫ್ರೇಜ್ ವಾಟರ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ. ಸರ್ಕಾರದ ಬೊಕ್ಕಸಕ್ಕೆ ಅಂದರೆ ಪಂಚಾಯ್ತಿಯ ಕಂದಾಯ ಸಂಗ್ರಹದಿಂದಾಗಿ ಜಾಸ್ತಿ ಆಗಲಿದೆ. ಹಣ ಸೋರಿಕೆ ಪ್ರಮಾಣ ಕಡಿಮೆ ಅಗುತ್ತದೆ ಎಂದರು. ಹೆಬ್ಬೂರು ಗ್ರಾಮವೊಂದರಲ್ಲೇ 8 ಮೋಟಾರುಗಳ ಬಳಕೆ ಅಗುತ್ತಿತ್ತು ಎಂದು ಬಿ. ಸುರೇಶ್ಗೌಡರು ತಿಳಿಸಿದರು.
ಸಮಸ್ಯೆಗಳಿಗೆ ಕಾರಣ: ಪ್ರತೀ ನಿತ್ಯ ಒಂದಲ್ಲ ಒಂದು ಗ್ರಾಮದಲ್ಲಿ ಮೋಟಾರು ಇಲ್ಲ, ಸ್ಟಾರ್ಟರ್ ಸುಡುವುದು, ಅದನ್ನು ರೆಡಿ ಮಾಡಿಸಿ ತರುವುದರಲ್ಲೇ ನಮ್ಮ ಪಂಚಾಯ್ತಿಗಳಿಗೆ ಬರುವ ರೆವಿನ್ಯೂ ಪೂರ್ಣ ಖಾಲಿ ಆಗಿ ಅನೇಕ ಪಂಚಾಯ್ತಿಗಳು ಎಲೆಕ್ಟ್ರಿಕ್ ಅಂಗಡಿಯವರ ಬಳಿ ಸಾಲದಲ್ಲಿವೆ ಎನ್ನುತ್ತಾರೆ ಮತ್ತು ಅನೇಕ ಗ್ರಾಮ ಪಂಚಾಯ್ತಿಗಳಿಗೆ ವಾಟರ್ ಮ್ಯಾನೇಜ್ಮೆಂಟ್ ಕೌಶಲ್ಯ ಇಲ್ಲದೇ ಇರುವುದೂ ಕೂಡಾ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ ಎಂದು ಬಿ. ಸುರೇಶ್ ಗೌಡರು ತಿಳಿಸಿದರು.
ಇದನ್ನು ಮನಗಂಡು ತುಮಕೂರು ಗ್ರಾಮಾಂತರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಇದರ ಸಮರ್ಪಕ ಸದ್ಬಳಕೆಗೆ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಿಸುವಂತೆ ತಾ.ಪಂ ಇಓ ಅವರಿಗೆ ಸೂಚಿಸಿದರು.
ಜನವರಿ ಮೊದಲ ವಾರದಲ್ಲಿ ಹೊನ್ನುಡಿಕೆ ಮತ್ತು ಇತರೆ 26 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಮೇಲ್ಕಂಡ ಮಾದರಿಯಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

