ತುಮಕೂರು

ಪ್ರಯಾಣಿಕರನ್ನು ಹತ್ತಿಸಿಕೊಳ್ಳದ್ದಕ್ಕೆ ಆಕ್ರೋಶ

Published On :

ಕುಣಿಗಲ್: ಕುಣಿಗಲ್ ಮೂಲಕವೇ ಹಾದುಹೋಗುವ ಸಾರಿಗೆಸಂಸ್ಥೆ ಬಸ್ ನಿರ್ವಾಹಕ, ಬೆಂಗಳೂರಿನಲ್ಲಿ ಕುಣಿಗಲ್ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿರಾಕರಿಸಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕುಣಿಗಲ್ ಪ್ರಯಾಣಿಕರು, ಇತರೆ ನಾಗರಿಕರೊಂದಿಗೆ ಶುಕ್ರವಾರ ರಾತ್ರಿ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಗಿರೀಶ್, ನಂಜೇಶ್ ಸೇರಿದಂತೆ ಇತರರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಶುಕ್ರವಾರ ರಾತ್ರಿ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಕುಣಿಗಲ್ ಮೂಲಕ ಉಡುಪಿಗೆ ತೆರಳುವ ಸಾರಿಗೆ ಸಂಸ್ಥೆ ಕೆಂಪು ಬಸ್ನಲ್ಲಿ ಪ್ರಯಾಣಿಸಲು ಮುಂದಾದರು. ನಿರ್ವಾಹಕ ಕುಣಿಗಲ್ ಪಟ್ಟಣದದಲ್ಲಿ ನಿಲುಗಡೆ ಇಲ್ಲವೆಂದು ಹತ್ತಿಸಿಕೊಳ್ಳಲು ನಿರಾಕರಿಸಿದರು. ಕೆಲವರು ಕುಟುಂಬ ಸಮೇತ ಇದ್ದು, ಖಾಸಗಿ ಬಸ್ ಸೇರಿದಂತೆ ಇತರೆ ವಿಭಾಗದ ಬಸ್ ಕಡೆ ತೆರಳಿದರು. ಆದರೆ ಕುಣಿಗಲ್ ಡಿಪೋಗೆ ಸೇರಿದ ಬಸ್ಸು, ಪಟ್ಟಣದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ್ದರಿಂದ ರೋಸಿ ಹೋದ ಪ್ರಯಾಣಿಕರು, ಖಾಸಗಿ ಕಾರು ಮಾಡಿಕೊಂಡು ಪಟ್ಟಣಕ್ಕೆ ಆಗಮಿಸಿ, ಕರವೇ ಅಧ್ಯಕ್ಷ ಮಂಜುನಾಥ್, ಅಂಬರೀಶ್ ಅಭಿಮಾನಿ ಸಂಘದ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಇತರೆ ನಾಗರಿಕರ ಗಮನಕ್ಕೆ ತಂದರು.
ಈ ಹಿನ್ನೆಲೆಯಲ್ಲಿ ರಾತ್ರಿ ಹತ್ತೂವರೆ ಸಮಯದಲ್ಲಿ ಬಸ್ ಅಗಮಿಸಿದಾಗ, ಬಸ್ಸನ್ನು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ತಡೆದು, ನಿರ್ವಾಹಕ, ಚಾಲಕನ್ನು ಕೆಳಗಿಳಿಸಿ, ತರಾಟೆಗೆ ತೆಗೆದುಕೊಂಡರು. ಚಾಲಕ ತಮ್ಮದೇನು
ಪಾತ್ರವಿಲ್ಲ ನಿರ್ವಾಹಕರೇ ಎಂದು ಜಾರಿಕೊಂಡರು. ಸರಿರಾತ್ರಿಯ ಚಳಿಯನ್ನು ಲೆಕ್ಕಿಸದೆ ನೂರಾರು ನಾಗರಿಕರು ಜಮಾವಣೆಗೊಂಡು, ಸಾರಿಗೆಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮ್ಯಾನೆಜರ್ ಸ್ಥಳಕ್ಕೆ ಆಗಮಿಸಿ, ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಬಸ್ಸನ್ನು ಮುಂದಕ್ಕೆ ಬಿಡುವುದಿಲ್ಲವೆಂದು ಪಟ್ಟುಹಿಡಿದರು. ಬಸ್ಸಿನಲ್ಲಿದ್ದ ಪಾನಮತ್ತ ಪ್ರಯಾಣಿಕನೋರ್ವ ಅವಾಚ್ಯ ಶಬ್ದ ಬಳಸಿದ್ದು, ಪ್ರತಿಭಟನಾಕಾರರು ಧರ್ಮದೇಟು ನೀಡಿದರು.
 ಈ ಮಧ್ಯೆ ಡಿಪೋ ಮ್ಯಾನೆಜರ್ಗೆ ನಾಗರಿಕರು, ನಿರ್ವಾಹಕರು ಕರೆ ಮಾಡಿದರೂ, ಡಿಪೋ ಮ್ಯಾನೇಜರ್
ಅಥವಾ ಜವಾಬ್ದಾರಿಯುತ ಯಾವುದೇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಲಿಲ್ಲ.  ರೋಸಿ ಹೋದ ಪ್ರತಿಭಟನಾಕಾರರು ಬಸ್ಸಿನ ಮೇಲೆ ಹಲ್ಲೆಗೆ ಮುಂದಾದರು. ವಿಷಯ ತಿಳಿದ ಪಿಎಸೈ ಗುರುಪ್ರಸಾದ್, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಲೆತ್ನಿಸಿದರು. ಪ್ರತಿಭಟನಾಕಾರರು,  ಕುಣಿಗಲ್ ಮೂಲಕವೇ ಹೋಗುವ ಬಸ್, ಪಟ್ಟಣದ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಹೋಗುವುದು ಹಾಗೂ ರಾತ್ರಿ ಎಂಟು ಗಂಟೆ ನಂತರ ಈ ಮಾರ್ಗದಲ್ಲಿ ಹಾದುಹೋಗುವ ಸಾರಿಗೆ ಸಂಸ್ಥೆ ಬಸ್ ಪಟ್ಟಣದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕಿರಿಕಿರಿ ಮಾಡುವುದು, ಹಾಸನ, ಚನ್ನರಾಯಪಟ್ಟಣ ಕಡೆಯಿಂದ, ರಾತ್ರಿ 7 ಗಂಟೆ ನಂತರ ಪಟ್ಟಣ ಮೂಲಕ ಹಾದುಹೋಗುವ ಸಾರಿಗೆ ಸಂಸ್ಥೆ ಬಸ್ನವರು ಸಹ ಪಟ್ಟಣದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿರಾಕರಿಸಿ,ನಿಯಮಬಾಹಿರವಾಗಿ ಬೈಪಾಸ್ ಮೂಲಕ ಹಾದುಹೋಗುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.    ಪ್ರತಿಭಟನಾಕಾರರು ಬಸ್ಸನ್ನು ತಡೆದು ಒಂದು ಗಂಟೆಯಾದರೂ, ಸಾರಿಗೆಸಂಸ್ಥೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಲ್ಲ. ಡಿಪೋಗೆ ತೆರಳಿದರೆ ಆಯಕಟ್ಟಿನ ಅಧಿಕಾರಿಗಳಿಲ್ಲ, ಜವಾಬ್ದಾರಿ ಸ್ಥಾನದಲ್ಲಿ ಯಾರೂ ಇಲ್ಲದಿರುವುದು ನೋಡಿದರೆ ಸಾರಿಗೆ ಸಂಸ್ಥೆ ತಾಲೂಕಿನಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಿಎಸೈ, ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ, ದೂರು ನೀಡಿದಲ್ಲಿ ನಿರ್ವಾಹಕ ಮಲ್ಲೇಗೌಡ ವಿರುದ್ಧ ಪ್ರಕರಣ ದಾಖಲಿಸುವ ಭರವಸೆ ನೀಡಿದ ಮೇರೆಗೆ, ಪ್ರತಿಭಟನೆ ಹಿಂಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.