ತುಮಕೂರು

ಮನಸ್ಸಿಗೆ ಮುದ ನೀಡುವ ಜಾನಪದ ಕಲೆ

Published On :

ಕ,ಪ್ರ,ವಾರ್ತೆ       ಮಧುಗಿರಿ      ಡಿ. 28
ಶುದ್ಧ ದೇಶೀಯ ಜಾನಪದ ಕಲೆ, ನೃತ್ಯ ನೋಡಿದಾಗ  ಮನಸ್ಸಿಗೆ ಆಗುವ  ಆನಂದ ಅಷ್ಟಿಷ್ಟಲ್ಲ. ಆ ವಿಚಾರದಲ್ಲಿ  ನಮ್ಮ ದೇಶ ಸಂಪದ್ಭರಿತ  ಎಂದು ಉಪವಿಭಾಗಾಧಿಕಾರಿ ತಬಸ್ಸುಮ್ ಜುಹೇರಾ ಅಭಿಪ್ರಾಯಪಟ್ಟರು.
ಜಿ.ಪಂ.ತಾ.ಪಂ.ಸಾ.ಶಿ.ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಧುಗಿರಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ಯಾರ ಸ್ವತ್ತು ಅಲ್ಲ, ಅದು ಸಾಧನಕನ ಸ್ವತ್ತು, ನಮ್ಮ ಅಪ್ಪಟ ದೇಶೀಯ ಜಾನಪದ ಕಲೆ,  ನೃತ್ಯ, ಸಂಗೀತ, ಸಾಹಿತ್ಯ  ಕೇಳಿ ನೋಡುವುದರಲ್ಲಿ ಸಿಗುವ  ಆನಂದ ಅಷ್ಟಿಷ್ಟಲ್ಲ, ಅದೇ  ಪಾಶ್ಚಿಮಾತ್ಯ   ನೃತ್ಯಗಳಲ್ಲಿ ಈ ಆನಂದ  ಕಂಡು ಬರುವುದಿಲ್ಲ. ಹಾಗಾಗಿ  ವಿದ್ಯಾರ್ಥಿಗಳು  ಪಠ್ಯೇತರ ಚಟುವಟಿಕೆ ಜತೆಗೆ ತಮ್ಮ ಪ್ರತಿಭೆಯನ್ನು ಅವಕಾಶ ಸಿಕ್ಕಾಗ ಸದ್ಬಳಕೆ ಮಾಡಿಕೊಂಡು ಎತ್ತರಕ್ಕೆ ಬೆಳೆಯಬೇಕು. ಸರ್ಕಾರಿ ಶಾಲೆ ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ತಾ.ಮಲ್ಲನಾಯಕನಹಳ್ಳಿ ಶಾಲಾ ಮಕ್ಕಳು  ಈಗ ಕೋಲಾಟದ ಮೂಲಕ ಪ್ರದರ್ಶಿಸಿದ್ದಾರೆ. ಇಂತಹ ದೇಸಿ ಕಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಇಂತಹ ವೇದಿಕೆ ಬೇಕು: ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಅಧ್ಯಕ್ಷೆ ಸಿದ್ಧಗಂಗಾಂಬಿಕೆ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರ ಹಾಕಲು ಇಂತಹ ವೇದಿಕೆ ಬೇಕು. ಅದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಅಚ್ಚುಕಟ್ಟಾಗಿ ಒದಗಿಸಿ ಕೊಟ್ಟಿದ್ದಾರೆ. ಇದರ ಸದುಪಯೋಗ ಪಡೆದುಕೊಂಡು ತಾಲೂಕಿನಿಂದ ಬಂದಿರುವ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಕಲಿಸಿದ ಗುರುಗಳಿಗೆ ಹೆತ್ತ ತಂದೆ-ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂದು ಹಾರೈಸಿದರು.
ನೌಕರರ ಸಂಘದ ಅಧ್ಯಕ್ಷ ಎನ್. ಮಹಾಲಿಂಗೇಶ್, ಮಕ್ಕಳು ಕಲಿಯುವ ವಯಸ್ಸಿನಲ್ಲಿ ಮೆದುಳಿಗೆ ಚಾಲನೆ ನೀಡಬೇಕು. ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ಸೋಲು-ಗೆಲವನ್ನು ಸಮಾನಾಗಿ ಸ್ವೀಕರಿಸಬೇಕು. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ಹುದ್ದೆಯಲ್ಲಿದ್ದಾರೆ ಎಂಬುದನ್ನು ಮರೆಬಾರದು ಎಂದರು. ಜಿ.ಪಂ.ಸದಸ್ಯೆ ಮಂಜುಳಾ ವೀರೇಂದ್ರ ಪ್ರಸಾದ್, ನೋಡಲ್ ಅಧಿಕಾರಿ ಅಶ್ವತ್ಥನಾರಾಯಣ ಮಾತನಾಡಿದರು.
 ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಕೆ.ಎನ್. ಹನುಮಂತರಾಯಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ವೆಂಕಟರಾಮು, ಬಿಆರ್ಪಿ ಚಿತ್ತಯ್ಯ, ರಾಜ್ಯ ಪರಿಷತ್ ಸದಸ್ಯ ಗಂಗಹನುಮಯ್ಯ, ಪಾಂಡಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಕಾಂತ್, ಮುಖ್ಯಾಧಿಕಾರಿ ಬಿ. ಶುಭ ಮುಖ್ಯ ಶಿಕ್ಷಕರುಗಳಾದ ಶಿವಕುಮಾರ್, ದಯಾನಂದ್, ರಂಗಧಾಮಯ್ಯ, ಓ.ರಾಮಕೃಷ್ಣಪ್ಪ, ಬಿಇಓ ವೈ.ಎನ್.ರಾಮಕೃಷ್ಣಯ್ಯ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕಿ ಉಮಾದೇವಿ ಪ್ರಾರ್ಥಿಸಿದರು. ಬಿಇಓ ರಾಮಕೃಷ್ಣಯ್ಯ ಸ್ವಾಗತಿಸಿ ನಿರಂಜನ್ ನಿರೂಪಿಸಿ ಮಂಜುನಾಥ್ ವಂದಿಸಿದರು. ನಂತರ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.