ತುಮಕೂರು

ವಿದ್ಯುತ್ ಅಭಾವ, ಶಾಸಕರಿಂದ ಪ್ರತಿಭಟನೆಯ ಎಚ್ಚರಿಕೆ

Published On :

ತುರುವೇಕೆರೆ: ತಾಲೂಕಿನಲ್ಲಿ ವಿದ್ಯುತ್ ಅಭಾವ ಮಿತಿ ಮೀರಿದ್ದು ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲೂ ಅಸಾಧ್ಯವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪ್ರತಿ ದಿನ ಕನಿಷ್ಠ 6 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ನೀಡಬೇಕಿದೆ. ಆದರೆ ಕೇವಲ 2 ಗಂಟೆಗಳ ಕಾಲ ಮಾತ್ರ ತ್ರಿ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ತಾಲೂಕಿಗೆ ಕನಿಷ್ಠ 50 ರಿಂದ 60 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ.
ಆದರೆ ಬೆಸ್ಕಾಂ ಕೇವಲ 30 ಮೆಗಾವ್ಯಾಟ್ ವಿದ್ಯುತ್ ಅನ್ನು ಮಾತ್ರ ನೀಡುತ್ತಿದೆ. ಇದರಿಂದಾಗಿ ತಾಲೂಕಿನಲ್ಲಿ ವಿದ್ಯುತ್ ಕ್ಷಾಮ ತಲೆದೋರಿದೆ ಎಂದರು. ಕೃಷಿ ಮಾಡಲು ಹಾಗೂ ತಮ್ಮ ದನಕರುಗಳಿಗೆ ನೀರು ಒದಗಿಸಲೂ ಆಗದ ಸ್ಥಿತಿಯಲ್ಲಿ ರೈತರು ಇದ್ದಾರೆ.
ವಿದ್ಯುತ್ ಪರಿವರ್ತಕಗಳ ಕೊರೆಯೂ ಇದೆ. 25 ಕಿಲೋ ವ್ಯಾಟ್ನ 35 ಟಿಸಿ, 63 ಕೆವಿಯ 20 ಟಿಸಿ, 100 ಕೆವಿಯ 10 ಟಿಸಿಗಳ ಕೊರತೆ ಇದ್ದು ಕೂಡಲೇ ಸರಬರಾಜು ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದ್ದಾರೆ.
ಅಕ್ರಮ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ಬೆಸ್ಕಾಂ ರೈತರಲ್ಲಿ ಒತ್ತಡ ಹೇರಿ ಹಣ ಕಟ್ಟಿಸಿಕೊಳ್ಳುತ್ತಿದೆ.
ಇದರಲ್ಲಿ ಸುಮಾರು 570 ಮಂದಿ ಕೃಷಿಕರು ಹತ್ತು ಸಾವಿರ ರು.ಗಳನ್ನು ನೀಡಿ ಕೃಷಿ ಪಂಪ್ ಸೆಟ್ಗಳನ್ನು ಸಕ್ರಮಗೊಳಿಸಲು ಮನವಿ ಮಾಡಿಕೊಂಡಿದ್ದಾರೆ. ಆದರೆ ಬೆಸ್ಕಾಂ ಕೇವಲ 280 ಮಂದಿಗೆ ಮಾತ್ರ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಿದೆ. ಉಳಿದ 290 ಮಂದಿಗೆ ನ್ಯಾಯ ಒದಗಿಸಿಲ್ಲ ಎಂದು ಆಕ್ಷೇಪಿಸಿದರು.
ಯುಜಿಡಿ ನೆನೆಗುದಿಗೆ: ಕಳೆದ 8 ವರ್ಷಗಳ ಹಿಂದೆ ಪಟ್ಟಣದಲ್ಲಿ ಪ್ರಾರಂಭಿಸಲಾಗಿರುವ ಒಳಚರಂಡಿ ಯೋಜನೆ ಇನ್ನೂ ಸಂಪೂರ್ಣಗೊಂಡಿಲ್ಲ. ಆಮೆ ನಡಿಗೆಯಲ್ಲಿ ಕಾಮಗಾರಿ ಮುಂದುವರೆದಿದೆ ಎಂದು ಕೃಷ್ಣಪ್ಪ ದೂರಿದರು.
ಪಡಿತರ ಆಹಾರ ವಿತರಣೆ ಸಂಬಂಧ ಹಲವಾರು ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಲಭ್ಯವಾಗಿಲ್ಲ. ಹಣವಂತರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿದ್ದು, ಬಡವರಿಗೆ ಎಪಿಎಲ್ ಕಾರ್ಡ್ ಸಿಕ್ಕಿದೆ. ಕಂದಾಯ ಇಲಾಖಾ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವ ಕಾರಣಕ್ಕೆ ನಿಜವಾದ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಕೃಷ್ಣಪ್ಪ ಹೇಳಿದರು.
ವಿದ್ಯುತ್ ಸಮಸ್ಯೆ, ಯುಜಿಡಿ ಯೋಜನೆ ಅನುಷ್ಠಾನ ಹಾಗೂ ಪಡಿತರ ಕಾರ್ಡ್ಗಳಿಗೆ ಸೂಕ್ತ ಪರಿಹಾರವನ್ನು ಇನ್ನು 15 ದಿನಗಳಲ್ಲಿ ನೀಡದಿದ್ದಲ್ಲಿ ಜನಸಾಮಾನ್ಯರೊಂದಿಗೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.