ತುಮಕೂರು

ಗೆದ್ದೋರಿಗೆ ಮಂತ್ರಿ ಪಟ್ಟವಿಲ್ಲ, ಸೋತೋರಿಗೆ ಹೇಗೆ ಸಾಧ್ಯ

Published On :

ತುಮಕೂರು: ಸಿಎಂ ಸಿದ್ದರಾಮಯ್ಯ ಹಾಗೂ ಗೆದ್ದಿರುವ ಕಾಂಗ್ರೆಸ್ ಶಾಸಕರ ಪರ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಬ್ಯಾಟಿಂಗ್ ಮಾಡಿದ್ದಾರೆ.
ಗೆದ್ದಿರೋರಿಗೆ ಮಂತ್ರಿ ಪದವಿ ಇಲ್ಲ. ಇನ್ನು ಸೋತಿರೋರಿಗೆ ಹೇಗೆ ಕೊಡೋಕಾಗುತ್ತೆ. ಚುನಾವಣೆಯಲ್ಲಿ ಸೋತ ಯಾರಿಗಾದರೂ ಸರಿ ಮಂತ್ರಿ ಪದವಿ ನೀಡುವುದಕ್ಕೆ ತಮ್ಮ ಪ್ರಬಲ ವಿರೋಧವಿದೆ ಎಂದು ಸಿಎಂ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಮೇಲಿನಂತೆ ಉತ್ತರಿಸಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ಗಾಗಿ ಮಧುಗಿರಿ ಕ್ಷೇತ್ರವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಇದನ್ನು ಈಗಾಗಲೇ ಹಲವಾರು ಬಾರಿ ಹೇಳಿದ್ದೇನೆ. ಪತ್ರಿಕೆಗಳಲ್ಲೂ ಬಂದಿದೆ. ಪರಮೇಶ್ವರ್ಗೆ ಉಪಮುಖ್ಯಮಂತ್ರಿ ಪದವಿ ನೀಡುವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಷಯ. ಇದಕ್ಕೂ ತಮಗೂ ಸಂಬಂಧವಿಲ್ಲ. ಆದರೆ ಗೆದ್ದಿರುವ ಕಾಂಗ್ರೆಸ್ ಎಂಎಲ್ಎಗಳಲ್ಲಿ ಸುಮಾರು 92 ಮಂದಿ ಹಿರಿಯ ಕಾಂಗ್ರೆಸ್ಸಿಗರಿದ್ದಾರೆ. ಅವರಿಗೇ ಮಂತ್ರಿ ಪಟ್ಟ ಸಿಕ್ಕಿಲ್ಲ. ಹೀಗಿರುವಾಗ ಪರಾಭವಗೊಂಡಿರುವವರಿಗೆ ಮಂತ್ರಿ ಪದವಿ ನೀಡುವುದು ಸಾಧುವಲ್ಲ. ಸೋತಿರೋರಿಗೆ ಸಚಿವ ಸ್ಥಾನ ನೀಡಿದಲ್ಲಿ, ಹನುಮಂತನೇ ಹಗ್ಗ ಕಡೀತಿರಬೇಕಾದರೆ, ಪೂಜಾರಿ ಶಾವಿಗೆ ಬೇಡಿದಂಗಾಗುತ್ತೆ ಎಂದು ಮಾರ್ಮಿಕವಾಗಿ ನುಡಿದರು.
ಸಿದ್ದು ಸಿಎಂ ಆಗಿ ಮುಂದುವರೆಯಬೇಕು: ಇನ್ನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಾದ ಸಂದರ್ಭದಲ್ಲಿದ್ದೇವೆ. ತಾವು ಎಂಪಿ ಟಿಕೆಟ್ ಆಕಾಂಕ್ಷಿಯಲ್ಲ. ಹೈಕಮಾಂಡ್ ಹೇಳಿದಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವೆ. ಪಕ್ಷ ಯಾರನ್ನೇ ಅಭ್ಯರ್ಥಿ ಘೋಷಿಸಿದರೂ ಅವರ ಗೆಲವಿಗಾಗಿ ಶ್ರಮಿಸುವೆ. ಹೈಕಮಾಂಡ್ ಆದೇಶ ಪಾಲಿಸುವೆ. ಎಐಸಿಸಿ ತೀರ್ಮಾನ ಹೀಗೆ ಎಂದು ಹೇಳಲಾಗದು. ಏನು ಬೇಕಾದರೂ ಆಗಬಹುದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವುದು ಇಂದಿನ ತುರ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಹೆಚ್ಚು ಕಾಂಗ್ರೆಸ್ ಸಂಸದರನ್ನು ಆಯ್ಕೆ ಮಾಡಲು ಸಹಕರಿಸುವುದು ತಮ್ಮ ಕರ್ತವ್ಯ. ತಮಗೆ ಮಂತ್ರಿ ಪದವಿ ಸಿಕ್ಕಲಿ, ಬಿಡಲಿ ಅದರ ಬಗ್ಗೆ ಚಿಂತೆ ಮಾಡಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಮುಖ್ಯ. ತಮ್ಮ ಅಭಿಲಾಷೆ ಕೂಡ. ಇದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧ ಎಂದು ಸ್ಪಷ್ಟಪಡಿಸಿದರು.
ಧೈರ್ಯ ಯಾರಿಗಿದೆ: ಕಾಂಗ್ರೆಸ್ ಕದ ತಟ್ಟುತ್ತಿರುವ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ನೇರವಾಗಿ ಸೋನಿಯಾಗಾಂಧಿಯವರ ಸಂಪರ್ಕದಲ್ಲಿರುವ ವ್ಯಕ್ತಿ. ಜತೆಗೆ ಹಳೇ ಕಾಂಗ್ರೆಸ್ಸಿಗ. ಜಿಎಸ್ಬಿ ಹಿರಿಯ ಸಂಸದ. ಅಷ್ಟೇ ಅಲ್ಲ ಹೈಕಮಾಂಡ್, ಹಿರಿಯ ಕಾಂಗ್ರೆಸ್ಸಿಗರ ಸ್ನೇಹ ಹೊಂದಿರುವ ಚಾಣಾಕ್ಷ ರಾಜಕಾರಣಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿ.ಎಸ್. ಬಸವರಾಜು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದಲ್ಲಿ, ಸೋನಿಯಾ ಮೇಡಂ ವಿರುದ್ಧ ಮಾತನಾಡುವ ಧೈರ್ಯ ಯಾವ ಕಾಂಗ್ರೆಸ್ಸಿಗರಿದೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ತುಮಕೂರು ಲೋಕಸಭಾ ಕ್ಷೇತ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 3  ರಲ್ಲಿ ಠೇವಣಿ ಕಳೆದುಕೊಂಡಿದೆ. 3 ರಲ್ಲಿ ಗೆದ್ದಿದೆ. 1 ನ್ನು ಸೋತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ಥಿತಿ-ಗತಿ ಉತ್ತಮವಾಗಿದೆ ಅಂತ ಹೇಳಿದರೆ ಹುಚ್ಚುತನವಾದೀತು ಎಂದು ಆತ್ಮಾವಲೋಕನದ ನುಡಿಗಳನ್ನಾಡಿದರು.
ಬಿಎಸ್ವೈ ವಿರುದ್ದವೂ ಸ್ಪರ್ಧೆ: ಇತ್ತೀಚೆಗೆ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಕಾಂಗ್ರೆಸ್ ಸೇರ್ಪಡೆ ಕುರಿತಂತೆ ನಡೆದಿರುವ ವಿಷಯವನ್ನು ತಮ್ಮೊಂದಿಗೆ ಹಂಚಿಕೊಂಡರು. ಕಾಂಗ್ರೆಸ್ನಿಂದ ಟಿಕೆಟ್ ನೀಡಿದಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸಿದರೂ ಅವರ ವಿರುದ್ಧ ಸ್ಫರ್ಧಿಸುವ ಇರಾದೆಯನ್ನು ವ್ಯಕ್ತಪಡಿಸಿದರು.
ಈ ಹಿಂದೆ ತಾವು ಜಿಎಸ್ಬಿ ವಿರುದ್ಧ, ಜಿಎಸ್ಬಿ ತಮ್ಮ ವಿರುದ್ಧ ಪ್ರಚಾರ ನಡೆಸಿದ್ದ ಉದಾಹರಣೆಗಳಿವೆ. ಪಕ್ಷ ಬೇರೆ-ಬೇರೆಯಾಗಿದ್ದ ಸಂದರ್ಭಗಳವು. ಪರಸ್ಪರರ ಪರ ಪ್ರಚಾರ ನಡೆಸಿದ ಉದಾಹರಣೆಗಳೂ ಇವೆ.
ಅವೆಲ್ಲಾ ಆಯಾ ಕಾಲಘಟ್ಟಕ್ಕೆ ಸಂಬಂಧಿಸಿದವು. ಅಷ್ಟೆ ಎಂದರು. ಬಸವರಾಜು ಕಾಂಗ್ರೆಸ್ಗೆ ಬಂದು, ಹೈಕಮಾಂಡ್ ಟಿಕೆಟ್ ನೀಡಿದಲ್ಲಿ ತಾವು ಅವರ ಪರ ಪ್ರಚಾರ ನಡೆಸುವುದು ಶತಸ್ಸಿದ್ಧ. ಇದರಲ್ಲಿ ಎರಡು ಮಾತಿಲ್ಲ ಎಂದು ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.