ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಪ್ರತಿಭಟನೆ (ಸುದ್ದಿ ಸಂಕ್ಷೇಪ)
ಕುಣಿಗಲ್: ತಾಲೂಕಿನ ಕೊತ್ತಗೆರೆ ಹೋಬಳಿಯ ಸಿಂಗೋನಹಳ್ಳಿ ದಾಖಲೆಯ ಕಟ್ಟೆಪಾಳ್ಯದ ಮಿನಿ ಅಂಗನವಾಡಿಕೇಂದ್ರದ ಕಾರ್ಯಕರ್ತೆಯ ಅಸಮರ್ಪಕ ಕಾರ್ಯನಿರ್ವಹಣೆ ಖಂಡಿಸಿದ ಗ್ರಾಮಸ್ಥರು, ಕೂಡಲೆ ಆಕೆಯನ್ನು ಅಮಾನತ್ತುಗೊಳಿಸಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಪಟ್ಟಣದ ಕೋಟೆ ಪ್ರದೇಶದಲ್ಲಿನ ಸಿಡಿಪಿಒ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸೋಮವಾರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶಿವಶಂಕರ್, ಕಾಂಗ್ರೆಸ್ ಮುಖಂಡ ಬಿ.ಡಿ.ಕುಮಾರ್ ನೇತೃತ್ವದಲ್ಲಿ ಸಂಘಟಿತರಾದ ಕಟ್ಟೆಪಾಳ್ಯ ಗ್ರಾಮಸ್ಥರು, ಪಟ್ಟಣದ ಕೋಟೆ ಪ್ರದೇಶದ ಸಿಡಿಪಿಒ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಗ್ರಾಮದ ಮಹಿಳೆಯರಾದ ಸವಿತಾ, ಗಂಗಲಕ್ಷ್ಮಮ್ಮ, ಗಿರಿಜಾ, ಲಕ್ಷ್ಮಮ್ಮ ಮತ್ತಿತರರು, ಆಕೆಯ ವಿರುದ್ಧ ಕ್ರಮ ಕೈಗೊಳ್ಳದೇ ಹೋದಲ್ಲಿ ಮಂಗಳವಾರದಿಂದ ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳಿಸದೆ, ಕೇಂದ್ರಕ್ಕೆ ಬೀಗ ಜಡಿದು ಗ್ರಾಮದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗುಣಮಟ್ಟದ ಶಿಕ್ಷಣ ಅವಶ್ಯ: ಜ್ಯೋತಿ
ತುಮಕೂರು: ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಾಗಾಲೋಟದಲ್ಲಿ ಓಡುತ್ತಿರುವ ತಾಂತ್ರಿಕತೆ, ವೈಜ್ಞಾನಿಕತೆಯ ಹಾದಿಯಲ್ಲಿ ಸಾಗಿ ಗುರಿ ಮುಟ್ಟುವಂತಾಗಬೇಕಾದರೆ ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಸಿಐಟಿ ಕಾಲೇಜಿನ ಕಾರ್ಯದರ್ಶಿ ಜಿ.ಬಿ. ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟರು. ಅವರು ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ, ಬಿಎಸ್ಸಿ ವಿಭಾಗದ ವತಿಯಿಂದ ಬಿರ್ಲಾ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ವಿ-ಇನ್ಸ್ಪೈರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ವಿ. ದೊಡ್ಡಪ್ಪ ವೆಬ್ಸೈಟ್ ಬಿಡುಗಡೆ ಮಾಡಿ ಮಾತನಾಡಿ ವಿದ್ಯೆ ಯಾರ ಸ್ವತ್ತೂ ಅಲ್ಲ. ಯಾರು ಕಷ್ಟಪಟ್ಟು ಓದುತ್ತಾರೋ ಅವರಿಗೆ ಒಲಿಯುತ್ತದೆ ಎಂದರು. ಸಂಸ್ಥೆ ಅಧ್ಯಕ್ಷ ಕೆ.ಬಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಬಯೋನೀಡ್ಸ್ ಕಂಪನಿಯ ಡಾ. ಎಸ್.ಎನ್. ವಿನಯಬಾಬು, ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ಕುಮಾರ್, ಪ್ರಾಚಾರ್ಯ ಬಿ.ಟಿ. ಗುರುರಾಜ್, ಗುರುಸಿದ್ದಪ್ಪ ಇದ್ದರು. ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ವಾರುಣಿ ಸ್ವಾಗತಿಸಿ ಪ್ರಾಚಾರ್ಯ ಬಿ.ಟಿ. ಗುರುರಾಜ್, ಬಿಸಿಎ ವಿಭಾಗದ ಮುಖ್ಯಸ್ಥ ಮಧುಪ್ರಿಯ ವಾರ್ಷಿಕ ವರದಿ ವಾಚಿಸಿದರು. ಸಿದ್ದೇಶ್ ವಂದಿಸಿದರು. ಸೌಮ್ಯ, ಲತಾ ನಿರೂಪಿಸಿದರು.
ರು. 280 ಕೋಟಿ ಸಾಲ ಸೌಲಭ್ಯ
ಗುಬ್ಬಿ: ಜಿಲ್ಲೆಯಲ್ಲಿ ಈವರೆಗೆ 28 ಸಾವಿರ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗಿದ್ದು 2 ಲಕ್ಷ 80 ಸಾವಿರ ಸದಸ್ಯರುಗಳಿದ್ದಾರೆ. ಕೃಷಿ, ಹೈನುಗಾರಿಕೆ, ಮೀನುಸಾಗಣೆಕೆ ಸೇರಿದಂತೆ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು 280 ಕೋಟಿ ರು. ಆರ್ಥಿಕ ಸಾಲ ಸೌಲಭ್ಯ ನೀಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಂಗಾಧರ ರೈ ತಿಳಿಸಿದರು. ತಾಲೂಕಿನ ನಿಟ್ಟೂರು ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಉತ್ಸವ ವ್ಯವಸ್ಧಾಪನಾ ಸಮಿತಿ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಕೃಷಿ ಉತ್ವವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತುಮಕೂರು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಜಿ.ಚಂದ್ರಶೇಖರ್ ಮಾತನಾಡಿದರು. ಬಿಜೆಪಿ ಮುಖಂಡ ಎನ್.ಸಿ. ಪ್ರಕಾಶ್, ತಾಲೂಕು ಪಂಚಾಯ್ತಿ ಸದಸ್ಯೆ ಮಮತಾ ಯೋಗೀಶ್, ಸಹಾಯಕ ಕೃಷಿ ನಿರ್ದೇಶಕ ಡಾ. ಚಾಮರಾಜಪ್ಪ, ತೋಟಗಾರಿಕೆ ಅಧಿಕಾರಿ ಡಾ.ಎಸ್.ನಂಜುಂಡಾರಾಧ್ಯ, ಪಶು ಇಲಾಖೆ ಅಧಿಕಾರಿ ಡಾ.ಲಿಂಗರಾಜಣ್ಣ, ಹೋರಾಟಗಾರ ಗುರುಮಲ್ಲಯ್ಯ, ಡಾ.ಸುಬ್ರಾಯಭಟ್, ಯೋಜನಾಧಿಕಾರಿ ಪ್ರವೀಣ್ ಕುಮಾರ್, ವೇಣುಗೋಪಾಲ್, ಗಂಗಾಧರ್, ಜಯರಾಂ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

