ಮುಗಿಯುತ್ತಾ? ರೇಲ್ವೆ ಮೇಲ್ಸೇತುವೆ ಕಾಮಗಾರಿ
- ಉಗಮ ಶ್ರೀನಿವಾಸ್
ತುಮಕೂರು: ಸದ್ಯಕ್ಕೆ ತುಮಕೂರು ನಗರದ ಸಮಸ್ತ ನಾಗರಿಕರ ಏಕೈಕ ಪ್ರಶ್ನೆ ಉಪ್ಪಾರಹಳ್ಳಿ ಮೇಲ್ಸೇತುವೆ ಮುಗಿಯೋದು ಯಾವಾಗ, ಶೆಟ್ಟಿಹಳ್ಳಿ ಕೆಳಸೇತುವೆ ಕಾಮಗಾರಿ ಆರಂಭವಾಗುವುದು ಯಾವಾಗ ಎಂಬುದೇ ಆಗಿದೆ.
ಕಳೆದ 10 ವರ್ಷಗಳಿಂದ ಶೆಟ್ಟಿಹಳ್ಳಿ ಮೇಲ್ಸೇತುವೆ ಕಾಮಗಾರಿ ಕುಂಟುತ್ತಲೇ ಸಾಗಿದೆ. ಒಂದಷ್ಟು ದಿನ ರೇಲ್ವೆ ಇಲಾಖೆಯಿಂದ ಸಮಸ್ಯೆಯಾಯಿತು. ನಂತರ ಲೋಕೋಪಯೋಗಿ ಇಲಾಖೆಯಿಂದ ತಕರಾರು ಸೃಷ್ಟಿಯಾಯಿತು. ಇನ್ನೊಂದಿಷ್ಟು ದಿನ ಗುತ್ತಿಗೆದಾರರಿಂದ ತಡವಾಯ್ತು. ಕಡೆಗೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಒಂದಷ್ಟು ಅಡಚಣೆಯಾಯ್ತು. ಹೀಗೆ ತಡವಾಗುತ್ತಾ 10 ವರ್ಷಗಳೇ ಕಳೆದು ಹೋಗಿವೆ.
60 ರೈಲು ಸಂಚಾರ: ತುಮಕೂರು ಬೆಂಗಳೂರು ನಡುವೆ ಪ್ರತಿ ದಿನ 60 ರೈಲು ಸಂಚಾರ ನಡೆಸುತ್ತದೆ. ಜೋಡಿ ರೈಲು ಆರಂಭವಾಗಿದೆ. ಉಪ್ಪಾರಹಳ್ಳಿ, ಗೂಳೂರು, ಸಪ್ತಗಿರಿ, ವಿಜಯನಗರ ಮುಂತಾದ ಕಡೆ ನಗರ ಸಾರಿಗೆ ಬಸ್ಗಳು ಹಾದು ಹೋಗುತ್ತಿವೆ. ಪ್ರತಿ ದಿನ 60 ಬಾರಿ ಗೇಟ್ ಅನ್ನು ಹಾಕುತ್ತಾರೆ. ಒಂದು ಸಲ ಗೇಟು ಹಾಕಿದರೆ ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಂತು ಬಿಡುತ್ತವೆ. ಕಚೇರಿಗೆ ಹೋಗುವವರು, ಶಾಲಾ ಕಾಲೇಜಿಗೆ ಹೋಗುವವರು ಈ ಮಾರ್ಗದಲ್ಲಿ ಯಮ ಯಾತನೆ ಪಡುವಂತಾಗಿದೆ.
10 ವರ್ಷಗಳಿಂದ ಕುಂಟುತ್ತಾ ಸಾಗಿದೆ: ಭರ್ತಿ 10 ವರ್ಷಗಳಿಂದ ಈ ಮಹತ್ವಾಕಾಂಕ್ಷಿ ಯೋಜನೆಗೆ ಒಂದಲ್ಲಾ ಒಂದು ವಿಘ್ನಗಳು ಉಂಟಾಗುತ್ತಲೇ. ಹಲವಾರು ಹೋರಾಟಗಳು ಈ ಮೇಲ್ಸೇತುವೆಗಾಗಿ ನಡೆದಿದೆ. ಸ್ವತಃ ಸಚಿವ ಸೊಗಡು ಶಿವಣ್ಣನವರೇ ರೇಲ್ವೆ ಹಳಿಗಳ ಮೇಲೆ ಕುಳಿತು ಧರಣಿ ನಡೆಸಿದ್ದಾರೆ. ಇನ್ನೇನು ಸಂಚಾರಕ್ಕೆ ಮುಕ್ತ ಮಾಡಲಾಗುವುದು ಎಂದು 1 ವರ್ಷದಿಂದ ಹೇಳುತ್ತಲೇ ಬಂದಿದ್ದಾರೆ. ಆದರೂ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ.
ಉದ್ಘಾಟನಾ ದಿನಾಂಕ ಮುಂದಕ್ಕೆ ಹೋಗುತ್ತಿದೆ: ಫೆಬ್ರವರಿ 18 ಕ್ಕೆ ಉದ್ಘಾಟನೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅಂದು ಉದ್ಘಾಟನೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹಣಕಾಸು ಸಮಸ್ಯೆಯೇ ಇದೆಯೇ, ಇಚ್ಛಾಶಕ್ತಿ ಕೊರತೆ ಇದೆಯೇ ಎಂಬುದನ್ನು ಯಾರೊಬ್ಬರು ಸ್ಪಷ್ಟಪಡಿಸುವ ಗೋಜಿಗೂ ಹೋಗುತ್ತಿಲ್ಲ.
ಹೋರಾಟದ ಕಾವು ಕಡಿಮೆ: ಈ ಹಿಂದೆ ಶೆಟ್ಟಿಹಳ್ಳಿ ಉಪ್ಪಾರಹಳ್ಳಿ ಮೇಲ್ಸೇತುವೆ ಕಾಮಗಾರಿ ಸಂಬಂಧ ಹೋರಾಟ ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೋರಾಟದ ಕಾವು ಕೂಡ ಕಡಿಮೆಯಾಗಿದೆ. ಹೋರಾಟದ ಕಾವು ಕಡಿಮೆಯಾಗಿದ್ದರಿಂದಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಾಮಗಾರಿ ಬಗ್ಗೆ ಆಸಕ್ತಿ ತೋರುವುದನ್ನು ಮರೆತರೆ ಎಂಬ ಅನುಮಾನ ಸಹ ಕಾಡುತ್ತಿದೆ. ಒಟ್ಟಾರೆಯಾಗಿ ಈ ಮಹತ್ವಾಕಾಂಕ್ಷಿ ಯೋಜನೆ ಆರಂಭವಾಗುವುದನ್ನೇ ಜನ ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಅಪಾರ ಹಣ ಖರ್ಚು: ಈ ಹತ್ತು ವರ್ಷಗಳಿಂದ ಸಮಸ್ಯೆ ಬೆಳೆಯುತ್ತಲೇ ಇದೆ. ಅಪಾರವಾಗಿ ಹಣ ಖರ್ಚಾಗುತ್ತಿದೆ. ಅಧಿಕಾರಿಗಳು ಬದಲಾಗುತ್ತಿದ್ದಾರೆ, ಆದರೆ ಕೆಲಸ ಮಾತ್ರ ವೇಗವನ್ನು ಪಡೆದುಕೊಂಡಿಲ್ಲ. ಇದೊಂದು ಯೋಜನೆ ಪೂರ್ಣಗೊಂಡರೆ ನಾಗರಿಕರೆ ಅನುಕೂಲವಾಗಲಿದೆ. ಜತೆಗೆ ಟ್ರಾಫಿಕ್ ಸಮಸ್ಯೆ ಕೂಡ ತಗ್ಗಲಿದೆ.
ಯಾವಾಗ ಕೆಳಸೇತುವೆ ಕಾಮಗಾರಿ: ಶೆಟ್ಟಿಹಳ್ಳಿ ಕೆಳಸೇತುವೆ ಕಾಮಗಾರಿ ಯಾವಾಗ ಆರಂಭವಾಗುತ್ತದೆ ಎಂಬುದು ಈಗ ಎಲ್ಲರ ಒಂದಂಶದ ಪ್ರಶ್ನೆಯಾಗಿದೆ. ಸದ್ಯದ ಮಟ್ಟಿಗೆ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಆಗುವವರೆಗೂ ಈ ಕಾಮಗಾರಿಯನ್ನು ಕೈಗೆತ್ತುಕೊಳ್ಳುವುದಿಲ್ಲ ಎನ್ನಲಾಗಿದೆ. ಹೋಗಲಿ ಮೇಲ್ಸೇತುವೆಯನ್ನಾದರೂ ಮುಗಿಸಲಿ ಅಷ್ಟು ಸಾಕು ಎಂಬುದು ಜನರ ನಿಟ್ಟುಸಿರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

