ಶಿರಾ ಜೆಡಿಯುನಿಂದ ಅರ್ಜಿ ಆಹ್ವಾನ
ತುಮಕೂರು: ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿರಾ ತಾಲೂಕು ಜೆಡಿಯು ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಶಿರಾದಿಂದ ಸ್ಪರ್ಧಿಸುವ ಆಕಾಂಕ್ಷಿಗಳು ಶಿರಾ ಜೆಡಿಯು ಕಚೇರಿಯಲ್ಲಿ ಅರ್ಜಿ ಪಡೆದು ಫೆ. 21 ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಬಿ.ಎ. ರಂಗರಾಜು 9945954151, 8884883079, ಮಹಮದ್ ಅಬ್ದುಲ್ಲಾ, 9342183919, 9845048275 ಸಂಪರ್ಕಿಸುವಂತೆ ಕೋರಲಾಗಿದೆ.
ಶಾಲಾ ಕಾಲೇಜು ವಿವಿ ಬಂದ್
ತುಮಕೂರು: ವಿದೇಶಿ ಖಾಸಗಿ ವಿವಿ ಸ್ಥಾಪನೆ ವಿರೋಧಿಸಿ ಫೆ. 20 ಮತ್ತು 21 ರಂದು ರಾಜ್ಯಾದ್ಯಂತ ಶಾಲಾ, ಕಾಲೇಜು, ವಿವಿ ಬಂದ್ ಆಚರಿಸಲಾಗುವುದು ಎಂದು ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಈ. ಶಿವಣ್ಣ ತಿಳಿಸಿದ್ದಾರೆ. ಸರ್ಕಾರಿ ವಿವಿಗಳನ್ನು ಬಲಪಡಿಸಲು ಆಗ್ರಹಿಸಿ, ಶಿಕ್ಷಣಕ್ಕಾಗಿ ಬಜೆಟ್ ಹೆಚ್ಚಳ, ಶುಲ್ಕ ಏರಿಕೆ ಹಾಗೂ ಡೊನೇಷನ್ ಹಾವಳಿ ವಿರುದ್ಧ ಬಂದ್ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.
ವಿನಾಯಕ ನಗರದಲ್ಲಿ ಜೆಡಿಎಸ್ ನೂತನ ಕಚೇರಿ ಉದ್ಘಾಟನೆ
ಗುಬ್ಬಿ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು ಮುಂಬರುವ ಚುನಾವಣೆಗಳಲ್ಲಿ ಜನತೆ ಜನಪರವಾದ ಕಾಳಜಿ ಹೊಂದಿರುವ ಜೆಡಿಎಸ್ ಅಭ್ಯರ್ಥಿಗಳ ಗೆಲವಿಗೆ ಪೂರ್ಣ ಪ್ರಮಾಣದ ಸಹಕಾರ ನೀಡುವಂತೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮನವಿ ಮಾಡಿದರು.
ಅವರು ಪಟ್ಟಣದ ವಿನಾಯಕ ನಗರದಲ್ಲಿ ಜೆಡಿಎಸ್ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಪಟ್ಟಣ ಪಂಚಾಯ್ತಿಯಲ್ಲಿ ಕಳೆದ ಭಾರಿ 11 ಜೆಡಿಎಸ್ ಸದಸ್ಯರು ಆಯ್ಕೆಯಾಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡಿ ಜನಮನ್ನಣೆಗಳಿಸಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತದಾರರು ಹೆಚ್ಚಿನ ಒಲವು ತೋರುವಂತೆ ಮನವಿ ಮಾಡಿದರು.
ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನಿಕೇತನ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಭಾರತಿ ಶ್ರೀನಿವಾಸ್, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಜೆಡಿಎಸ್ ತಾಲೂಕು ಕಾರ್ಯದರ್ಶಿ ಎಚ್.ಡಿ. ಯಲ್ಲಪ್ಪ, ತಾಲೂಕು ಪಂಚಾಯ್ತಿತಿ ಅಧ್ಯಕ್ಷ ಎಲ್.ಕೆ.ರಾಜಣ್ಣ, ಮುಖಂಡರಾದ ವೀರೇಶ್, ಲಕ್ಷ್ಮೀನಾರಾಯಣ, ತಾಪಂ ಸದಸ್ಯ ಬಾಲಕೃಷ್ಣ, ತಾಲೂಕು ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಜಿ.ವಿ. ಮಂಜುನಾಥ್, ಯೋಗಾನಂದ್ ಭಾಗವಹಿಸಿದ್ದರು.
ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ
ತುಮಕೂರು: ಫೆ. 20 ಮತ್ತು 21 ರಂದು ಕಾರ್ಮಿಕ ಸಂಘಟನೆಗಳು ಭಾರತದಾದ್ಯಂತ ಕರೆ ಕೊಟ್ಟಿರುವ ಸಾರ್ವತ್ರಿಕ ಮುಷ್ಕರವನ್ನು ಅಖಿಲ ಭಾರತ ಯುವಜನ ಫೆಡರೇಷನ್ ಬೆಂಬಲಿಸಿದೆ. ಅಲ್ಲದೇ ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದು ಜಿಲ್ಲೆಯಾದ್ಯಂತ ಇರುವ ಸಂಘಟನೆಯ ಕಾರ್ಯಕರ್ತರು, ಯುವಜನ ಮಿತ್ರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಸಮಿತಿ ಅಧ್ಯಕ್ಷ ಎನ್. ಶಶಿಕಾಂತ್ ಹಾಗೂ ಕಾರ್ಯದರ್ಶಿ ಕೆ.ಎಸ್. ವಾಸುದೇವಕುಮಾರ್ ಕೋರಿದ್ದಾರೆ.ಎಐಟಿಯುಸಿ ಬೆಂಬಲ: ಫೆಬ್ರವರಿ 20, 21 ರಂದು 48 ಗಂಟೆ ನಡೆಯುತ್ತಿರುವ ಜೆಸಿಟಿಯು ಮುಷ್ಕರಕ್ಕೆ ಆಲ್ ಇಂಡಿಯಾ ಟ್ರೇಡ್ ಯೂನಿಯ್ ಕಾಂಗ್ರೆಸ್ ಬೆಂಬಲ ಘೋಷಿಸಿದರೆ. ಜಿಲ್ಲೆಯಾದ್ಯಂತ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರು ಬೆಂಬಲ ಸೂಚಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಕೋರಿದ್ದಾರೆ.
ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆ
ಪಾವಗಡ: ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್. ವಿ.ವೆಂಕಟೇಶ್ ಹಾಗೂ ಸುದೇಶ್ ಬಾಬು, ಮುಖಂಡರಾದ ಚಿನ್ನಮ್ಮನಹಳ್ಳಿ ಶ್ರೀರಾಮು ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ದವಡಬೆಟ್ಟ ಭಾಗ್ಯಲಕ್ಷ್ಮೀ ಸಮ್ಮುಖದಲ್ಲಿ ಗುಜ್ಜನಡು ಗ್ರಾಪಂ ವ್ಯಾಪ್ತಿಯ ಮುಖಂಡಡರು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದರು.ಇದೇ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷ ಮೈಲಾರರೆಡ್ಡಿ, ಯುವ ಮುಖಂಡರಾದ ನಾಗರ್ಜುನರೆಡ್ಡಿ,ಬಂಗಾರಪ್ಪ ಮುಂತಾದವರು ಹಾಜರಿದ್ದರು.
ಅನುದಾನ
ತುಮಕೂರು: ತುಮಕೂರು ಎಂಪ್ರೆಸ್ ಬಾಲಕಿಯರ ಪ.ಪೂ. ಕಾಲೇಜಿನ ಶತಮಾನೋತ್ಸವಕ್ಕೆ ಆಯವ್ಯಯದಲ್ಲಿ 1 ಕೋಟಿ ರು. ಅನುದಾನ ನೀಡಿದ್ದಕ್ಕೆ ಪ್ರಾಚಾರ್ಯ ಬಿ. ಮರುಳಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಶಿವಣ್ಣ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾವು, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದ್ದಾರೆ.
ಇಂದು ಕರವೇ ಮಹಿಳಾ ಜಾಗೃತಿ ಸಮಾವೇಶ
ತುಮಕೂರು: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹಿಳಾ ಜಾಗೃತಿ ಸಮಾವೇಶ ಹಾಗೂ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮ ಫೆ. 19 ರಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಾಟಾಗಿದೆ. ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ಏರ್ಪಾಟಾಗಿದೆ. ಸಮಾರಂಭವನ್ನು ಜೆಡಿಎಸ್ ಯುವ ಮುಖಂಡ ನರಸೇಗೌಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರವೇ ರಾಜ್ಯಾಧ್ಯಕ್ಷ ಟಿ. ನಾರಾಯಣಗೌಡ ವಹಿಸಲಿದ್ದಾರೆ. ಮಾಜಿ ಶಾಸಕ ಗೌರಿಶಂಕರ್ ಸನ್ಮಾನ ನೆರವೇರಿಸಲಿದ್ದಾರೆ. ಕಾಂಗ್ರೆಸ್ ಯುವ ಮುಖಂಡ ಡಾ. ರಫೀಕ್ ಅಹಮದ್ ಬೆಳ್ಳಿ ಪದಕ ವಿತರಿಸಲಿದ್ದಾರೆ. ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಗೋವಿಂದರಾಜು ಬಹುಮಾನ ವಿತರಿಸಲಿದ್ದಾರೆ. ಕೆಜೆಪಿ ಯುವ ಮುಖಂಡ ಜ್ಯೋತಿಗಣೇಶ್ ಪ್ರಶಸ್ತಿ ಪತ್ರ ವಿತರಿಸಲಿದ್ದಾರೆ. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪ್ರಿಯಾ ಹಾಸನ್ ಉಪಸ್ಥಿತರಿರುವರು. ಮಾಜಿ ಸಚಿವೆ ರಾಣಿ ಸತೀಶ್ ಪ್ರಧಾನ ಭಾಷಣಕಾರರಾಗಿ ಪಾಲ್ಗೊಳ್ಳಲ್ಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ, ಅಬಕಾರಿ ಆಯುಕ್ತ ಡಾ. ಸಿ. ಸೋಮಶೇಖರ್ ಉಪಸ್ಥಿತರಿರುವರು. ಸಾಲುಮರದ ತಿಮ್ಮಕ್ಕ, ಅನಘಾ ಪ್ರಸಾದ್, ವಿಶಾಲಾಕ್ಷಿ ನಾರಾಯಣಗೌಡ, ಸರ್ವ ಮಂಗಳ ಸೋಮಶೇಖರ್ ಅವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಜಿಪಂ ಸಿಇಓ ಗೋವಿಂದರಾಜು, ಜಿಪಂ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ತುಮಕೂರು ನಗರಸಭಾಧ್ಯಕ್ಷೆ ಗೀತಾ ರುದ್ರೇಶ್, ಉಪಾಧ್ಯಕ್ಷ ಅಸ್ಲಾಂ ಪಾಷಾ, ಬೆಳ್ಳಿ ಲೋಕೇಶ್, ಮರಿಚೆನ್ನಮ್ಮ, ಆಶಾ ಪ್ರಸನ್ನಕುಮಾರ್, ಪ್ರೊ. ಲೀಲಾ ಲೇಪಾಕ್ಷ್, ಆರ್. ತನುಜ್ಕುಮಾರ್ ಇತರರನ್ನು ಸನ್ಮಾನಿಸಲಾಗುವುದು.
ಪಾಪ್ಯುಲರ್ ಫ್ರಂಟ್ ವರ್ಷಾಚರಣೆ
ತುಮಕೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತುಮಕೂರು ಜಿಲ್ಲಾ ಸಮಿತಿ ವತಿಯಿಂದ 6 ನೇ ವರ್ಷದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧ್ಯಕ್ಷ ಅಲೀಮ್ ಅಹಮದ್ ಮಾತನಾಡಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಿನಾಚರಣೆ ಕುರಿತು ಮಾತನಾಡಿದರು.
ಪಾಪ್ಯುಲರ್ ಫ್ರಂಟ್ ಆರಂಭಗೊಂಡು 6 ವರ್ಷಗಳಾಗಿವೆ. ನಿರಂತರವಾಗಿ ಸಂಘಟನೆ ಜನ ಸಾಮಾನ್ಯರ ಸಮಸ್ಯೆ ಬಗೆಹರಿಸಲು, ಅಮಾಯಕರ ಬಂಧನ ಖಂಡಿಸಿ, ಭಯೋತ್ಪಾದನೆ ವಿರುದ್ಧ, ಸಾಮಾಜಿಕ ನ್ಯಾಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೋರಾಟ ನಡೆಸುತ್ತಲೇ ಬಂದಿದೆ ಎಂದರು.
ಡಿಎಸ್ಎಸ್ನ ನರಸಿಂಹಯ್ಯ, ಎಸ್ಡಿಪಿಐನ ಕಾರ್ಯದರ್ಶಿ ಮೆಹಬೂಬ್, ಉಪಾಧ್ಯಕ್ಷೆ ಬಿ. ಜಯಮ್ಮ, ಪ್ರಧಾನ ಕಾರ್ಯದರ್ಶಿ ಮಹಮದ್ ಸಾಧಿಕ್ ಜಮೀಲ್, ಕಾರ್ಯದರ್ಶಿ ರೆಹಾನ್ಖಾನ್, ಶಿರಾದ ಯೂನಸ್, ರಿಹಾನ್ಬೇಗ್ ಪಾಲ್ಗೊಂಡಿದ್ದರು.
ಬಾಬು ಆಯ್ಕೆ
ತಿಪಟೂರು: ತಾಲೂಕು ಜೆಡಿಎಸ್ ಹಿರಿಯ ಉಪಾಧ್ಯಕ್ಷರಾಗಿ ಬಾಬು (ಲಿಂಗರಾಜು) ಅವರನ್ನು ಅಧ್ಯಕ್ಷ ಗುರುಮೂರ್ತಿ ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಾಬು ತಾಲೂಕಿನಲ್ಲಿ ಜೆಡಿಎಸ್ ಬಲವರ್ಧನೆಗೆ ಹಗಲಿರುಳು ಶ್ರಮಿಸುವುದಲ್ಲದೆ ನಗರಸಭಾ ಚುನಾಣೆಯಲ್ಲಿ ಈ ಬಾರಿ ನಗರಸಭಾ ಅಧಿಕಾರವನ್ನು ನಮ್ಮ ಪಕ್ಷ ಹಿಡಿಯಲು ಎಲ್ಲಾ ಕಾರ್ಯಕರ್ತರು ಮುಖಂಡರು ಶ್ರಮಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತಾ.ಹಿರಿಯ ಉಪಾಧ್ಯಕ್ಷ ಸ್ಥಾನ ದೊರೆಯಲು ಕಾರಣರಾದ ಅಧ್ಯಕ್ಷ ಗುರುಮೂರ್ತಿ, ಮುಖಂಡರಾದ ಜಕ್ಕನಹಳ್ಳಿ ಲಿಂಗರಾಜು, ಮಹಾಪ್ರಧಾನ ಕಾರ್ಯದರ್ಶಿ ಶಿವಶಂಕರ್ ಮತ್ತು ನಗರಾಧ್ಯಕ್ಷ ನಟರಾಜು ಅವರಿಗೆ ಅಭಿನಂದನೆ ಸಲ್ಲಿಸಿದರು.
ಇಂದು ಕಾಲೇಜು ವಾರ್ಷಿಕೋತ್ಸವ
ತುಮಕೂರು: ಕೊರಟಗೆರೆ ತಾಲೂಕು ಹೊಳವನಹಳ್ಳಿ ಸರ್ಕಾರಿ ಸ್ವತಂತ್ರ ಪಪೂ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಕಾಲೇಜಿನ ಆವರಣದಲ್ಲಿ ಫೆ.19 ರಂದು ಬೆಳಗ್ಗೆ 11 ಗಂಟೆಗೆ ಏರ್ಪಾಟಾಗಿದೆ. ಸಮಾರಂಭವನ್ನು ಕೊರಟಗೆರೆ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಡಿಡಿಪಿಐ ಜಯಪ್ರಕಾಶ್ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜು ಪ್ರಿನ್ಸಿಪಾಲ್ ಡಿ.ಎಸ್. ಕೃಷ್ಣಮೂರ್ತಿ ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಶಿರಾ ತಾಲೂಕು ಗುಳಿಗೇನಹಳ್ಳಿ ಸಪಪೂ ಕಾಲೇಜು ಪ್ರಿನ್ಸಿಪಾಲ್ ಓಬಳನರಸಿಂಹಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯ ದಾಕ್ಷಾಯಿಣಿ ರಾಜಣ್ಣ, ತಾಪಂ ಸದಸ್ಯ ಎಲ್.ವಿ. ಪ್ರಕಾಶ್, ಹೊಳವನಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಅಂಜನಪ್ಪ ಹಾಗೂ ಸದಸ್ಯರು, ರಿಯಾಸತ್ ಅಲಿ, ಪದ್ಮನಾಭ ಶ್ರೇಷ್ಠಿ, ಸೀಬಿ ರಂಗಮ್ಮ, ಕವಿತಾ, ರಾಮಣ್ಣ ಇತರರು ಪಾಲ್ಗೊಳ್ಳಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಲೇಜಿನ ದ್ವಿತೀಯ ದರ್ಜೆ ಸಹಾಯಕ ಮಹೇಶ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಾಟಾಗಿದೆ.
ತಾ. ಸಮ್ಮೇಳನ ಮುಂದಕ್ಕೆ
ತಿಪಟೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಫೆ.22 ಮತ್ತು 23ರಂದು ನಡೆಯಬೇಕಿದ್ದ ಮೂರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚುನಾವಣಾ ನೀತಿ ಸಂಹಿತೆಯ ಕಾರಣದಿಂದ ಮಾರ್ಚ್ 12 ಮತ್ತು 13ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ತಿಳಿಸಿದ್ದಾರೆ.
ಬಿ.ಎಸ್.ಆರ್ ಕಾಂಗ್ರೆಸ್ ಅರ್ಜಿ ಆಹ್ವಾನ
ತಿಪಟೂರು: 2013ರ ಮಾರ್ಚ್ 7ರಂದು ನಡೆಯಲಿರುವ ತಿಪಟೂರು ನಗರಸಭೆ ಸಾಮಾನ್ಯ ಚುನಾಣೆಗೆ ಬಿ.ಎಸ್.ಆರ್. ಕಾಂಗ್ರೆಸ್ನಿಂದ ಸ್ಪರ್ಧಿಸಬಯಸುವ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳು ಫೆ.22ರೊಳಗೆ ತಾಲೂಕು ಘಟಕಕ್ಕೆ ಅರ್ಜಿ ನೀಡಬೇಕೆಂದು ಪಕ್ಷದ ತಾಲೂಕು ಅಧ್ಯಕ್ಷ ಎಲ್.ಪಿ.ಯದುನಂದನ ಮತ್ತು ಕಾರ್ಯದರ್ಶಿ ರಾಜು ತಿಳಿಸಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ತಿಪಟೂರು: ತಿಪಟೂರು ಉಪವಿಭಾಗದ ವ್ಯಾಪ್ತಿಗೆ ಒಳಪಡುವ ನೊಣವಿನಕೆರೆ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಮಂಗಳವಾರ (ಫೆ.19) ಮತ್ತು ಫೆ.21ರಂದು ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ತುಮಕೂರು ಪ್ರಸರಣ ವಲಯದವರು ತುರ್ತು ಕೆಲಸ ನಿರ್ವಹಿಸುವುದರಿಂದ, ನೊಣವಿನಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಲ್. ಮಲ್ಲಪ್ಪಾಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

