ನಿಧಾನವಾಗಿ ರಂಗೇರುತ್ತಿರುವ ಚುನಾವಣೆ
ಕುಣಿಗಲ್: 2007ರಲ್ಲಿ ನಡೆದ ಪುರಸಭಾ ಚುನಾವಣೆ ಸಮಯದಲ್ಲಿ ಮಿತ್ರರಾಗಿದ್ದ ಕೆಲ ಪ್ರಮುಖ ರಾಜಕೀಯ ಪಕ್ಷದ ಮುಖಂಡರು, 2013ರಲ್ಲಿ ನಡೆಯಲಿರುವ ಪುರಸಭಾ ಚುನಾವಣೆ ವೇಳೆಗೆ ಪರಸ್ಪರ ಎದುರಾಳಿಗಳಾಗಿ, ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಹಣಾಹಣಿಗೆ ಸಜ್ಜಾಗಿ, ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಹಗಲಿರುಳು ತಂತ್ರ - ಪ್ರತಿತಂತ್ರ ನಡೆಸುವಲ್ಲಿ ನಿರತರಾಗುವ ಮೂಲಕ ಚುನಾವಣೆ ರಂಗು ನಿಧಾನವಾಗಿ ಕಾವೇರತೊಡಗಿದೆ.
2007ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾರಥ್ಯವನ್ನು ಎಸ್.ಪಿ. ಮುದ್ದಹನುಮೇಗೌಡ, ಬಿ.ಬಿ.ರಾಮಸ್ವಾಮಿಗೌಡ, ಅನಸೂಯಮ್ಮ ವೈಕೆಆರ್, ವಹಿಸಿದ್ದು, ಇವರ ಪರಿಶ್ರಮದ ನಡುವೆಯೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಕ್ಕೆ ತೃಪ್ತಿಪಟ್ಟಕೊಳ್ಳಬೇಕಾಯಿತು. ಆದರೆ ಈ ಬಾರಿ, ಎಸ್.ಪಿ.ಮುದ್ದಹನುಮೇಗೌಡ, ಅನಸೂಯಮ್ಮ ವೈಕೆಆರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಕಾರಣ, ಕಾಂಗ್ರೆಸ್ ಹಾಲಿ ಶಾಸಕ ಬಿ.ಬಿ. ರಾಮಸ್ವಾಮಿಗೌಡರ ನೇತೃತ್ವದಲ್ಲಿ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್ ಸಜ್ಜಾಗಿದೆ. ಶಾಸಕರು ಈಗಾಗಲೆ 23 ವಾರ್ಡ್ಗಲ್ಲಿ ಆಕಾಂಕ್ಷಿತರ ಪಟ್ಟಿ ಅಖೈರುಗೊಳಿಸಿ, ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ.
ಯಶಸ್ವಿ: ಇನ್ನು ಜೆಡಿಎಸ್ ಪಕ್ಷ ಕಳೆದಬಾರಿ ಮಾಜಿ ಸಚಿವ ಡಿ.ನಾಗರಾಜಯ್ಯ, ಅವರ ತಮ್ಮ ಡಿ.ಕೃಷ್ಣಕುಮಾರ್ ಸಾರಥ್ಯದಲ್ಲಿ ಪುರಸಭೆ ಚುನಾವಣೆ ಎದುರಿಸಿದ್ದು, ಇವರೊಂದಿಗೆ ಮಾಜಿ ಶಾಸಕ ಎಚ್.ನಿಂಗಪ್ಪ ಸಾಥ್ ನೀಡಿದ್ದರು.
ಕರಾರುವಾಕ್ ತಂತ್ರಗಳ ಹೂಡಿಕೆಯಿಂದಾಗಿ ಜೆಡಿಎಸ್ 23 ಸ್ಥಾನಗಳ ಪೈಕಿ 14 ಸ್ಥಾನಗಳಲ್ಲಿ ಜಯಗಳಿಸಿ, ಬಹುಮತ ಹೊಂದಿ ಪುರಸಭೆ ಆಡಳಿತ ಜೆಡಿಎಸ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಡಿ. ಕೃಷ್ಣಕುಮಾರ್ ಬಿಜೆಪಿಗೆ ಸೇರ್ಪಡೆಗೊಂಡು ತಾಲೂಕು ಬಿಜೆಪಿ ನೇತೃತ್ವವಹಿಸಿಕೊಂಡು, ಜೆಡಿಎಸ್ ಗೆಲವಿಗೆ ಕಡಿವಾಣ ಹಾಕಿ, ಅಭ್ಯರ್ಥಿಗಳ ಗೆಲವಿಗೆ ಟಾಂಗ್ ನೀಡಲು 23 ವಾರ್ಡ್ಗಳಲ್ಲೂ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ.
ಹರಸಾಹಸ: 2007ರ ಪುರಸಭಾ ಚುನಾವಣೆಯಲ್ಲಿ ಪುರಸಭೆ ಇತಿಹಾಸದಲ್ಲೆ ಮೊದಲ ಬಾರಿಗೆ ಬಿಜೆಪಿ 23 ವಾರ್ಡ್ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಏಳು ಸ್ಥಾನದಲ್ಲಿ ಭರ್ಜರಿ ಗೆಲವು ಸಾಧಿಸಲು ಅಂದಿನ ಬಿಜೆಪಿ ಮುಖಂಡ, ಹಾಲಿ ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ಶ್ರಮಿಸಿದ್ದರು. ಬದಲಾದ ಕ್ಷೇತ್ರ ಪುನರ್ ವಿಂಗಡನೆಯಿಂದ ಅವರು ಗ್ರಾಮಾಂತರ ಕ್ಷೇತ್ರಕ್ಕೆ ತೆರಳಿದ್ದರೆ, ಹಾಲಿ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಸಾರಥ್ಯ ವಹಿಸಿಕೊಂಡು ಮುಂದಿನ ವಿಧಾನಸಭೆಯ ದಿಕ್ಸೂಚಿ ಎಂದು ಭಾವಿಸಿ ಶತಾಯ ಗತಾಯ ಪುರಸಭೆಯಲ್ಲಿ ಕಮಲ ಅರಳಿಸಲು ಹರಸಾಹಸ ಪಡುತ್ತಿದ್ದಾರೆ.
ಪಕ್ಷದ ಸಮಾರಂಭದಲ್ಲಿ ಬಹಿರಂಗವಾಗಿ ನಾಯಕರು ಒಟ್ಟಾಗಿ ಕಾಣದ ಕಾರಣ ಜೆಡಿಎಸ್ನಲ್ಲಿ ಗುಂಪುಗಾರಿಕೆಗೆ ಎಡೆ ಮಾಡಿಕೊಟ್ಟಿದೆ. ಕಾರ್ಯಕರ್ತರ ಪಾಲಿಗೆ ಇದು ತಲೆ ನೋವಿನ ಸಂಗತಿಯೇ.
ಜೆಡಿಎಸ್ ಪಕ್ಷದಲ್ಲಿನ ಮುಖಂಡರ ಗುಂಪುಗಾರಿಕೆ ವಿದ್ಯಾಮಾನವನ್ನು ಕಾಂಗ್ರೆಸ್, ಬಿಜೆಪಿ ಮುಖಂಡರು ಸೂಕ್ಷ್ಮವಾಗಿ ಅವಲೋಕಿಸಸಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯಲು ಹಲವು ರೀತಿಯ ಲೆಕ್ಕಾಚಾರದಲ್ಲಿ ಮುಳುಗಿ ತಮ್ಮದೇ ಆದ ತಂತ್ರಗಳನ್ನು ಅನುಸರಿಸಿ, ಪುರಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸಾಧನೆ ಮತ್ತಷ್ಟು ಉತ್ತಮಗೊಳಿಸುವ ನಿರೀಕ್ಷೆಯಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

