ರೈಲು ಮೇಲುಸೇತುವೆ, ಸುರಂಗದ ಸಾಧ್ಯತೆ ತಿಳಿಸುವಂತೆ ಹೈ ಸೂಚನೆ
ಬೆಂಗಳೂರು: ವಿಜಯ್ಮಲ್ಯ ಒಡೆತನದ ಕುಣಿಗಲ್ನ ಕುದುರೆ ಫಾರಂ ಪ್ರದೇಶದಲ್ಲಿ ರೈಲು ಮೇಲು ಸೇತುವೆ ಇಲ್ಲವೇ ಸುರಂಗ ಮಾರ್ಗ ನಿರ್ಮಾಣದ ಕುರಿತು ಸಾಧ್ಯಾಸಾಧ್ಯತೆಗಳನ್ನು ತಿಳಿಸುವಂತೆ ನೈಋತ್ಯ ರೇಲ್ವೆ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ.
ಕುದುರೆ ಸಾಕಾಣಿಕೆ ಕೇಂದ್ರ ಉಳಿಸುವ ಸಲುವಾಗಿ ರೈಲು ಮಾರ್ಗವನ್ನೇ ಬದಲಾಯಿಸಿದ ರೇಲ್ವೆ ಇಲಾಖೆ ಕ್ರಮ ಪ್ರಶ್ನಿಸಿ ರಾಮಣ್ಣ ಸೇರಿದಂತೆ ಇತರ ರೈತರು ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಾಮಮೋಹನರೆಡ್ಡಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಕುದುರೆ ಸಾಕಾಣಿಕೆ ಕೇಂದ್ರವನ್ನು ಪಾರಂಪರಿಕ ಸ್ಥಳವನ್ನಾಗಿ ಉಳಿಸಿಕೊಳ್ಳುವ ಯೋಜನೆಯಿದ್ದರೆ, ಕೇಂದ್ರದ ಬಳಿ ರೈಲು ಮೇಲು ಸೇತುವೆ ಇಲ್ಲವೇ ಸುರಂಗ ಮಾರ್ಗ ನಿರ್ಮಿಸಬಾರದೇಕೆ? ಅದರ ಬದಲಿಗೆ, ರೈಲು ಮಾರ್ಗವನ್ನು ಬದಲಿಸುವ ಅಗತ್ಯವೇನಿದೆ ಎಂದು ಪೀಠ ಪ್ರಶ್ನಿಸಿದೆ.
ವಿವಾದವೇನು?: ಕುಣಿಗಲ್ ನಗರದ ಮೂಲಕ ಬೆಂಗಳೂರು ಹಾಗೂ ಹಾಸನದ ನಡುವೆ ರೈಲು ಮಾರ್ಗ ನಿರ್ಮಿಸಲು ರೇಲ್ವೆ ಇಲಾಖೆ 2007ರಲ್ಲಿ ಆದೇಶ ಹೊರಡಿಸಿತ್ತು. ಇದಕ್ಕಾಗಿ ಮಾರ್ಗಮಧ್ಯದಲ್ಲಿನ ವಿಜಯ್ಮಲ್ಯ ಒಡೆತನದ ಕುಣಿಗಲ್ ಕುದುರೆ ಫಾರಂನ 12 ಎಕರೆ 34 ಗುಂಟೆ ಜಮೀನನ್ನು ವಶಪಡಿಸಿಕೊಳ್ಳಲು ರೇಲ್ವೆ ಇಲಾಖೆ ಉದ್ದೇಶಿಸಿತ್ತು. 2011ರಲ್ಲಿ ಈ ಯೋಜನೆ ಬದಲಾಯಿಸಿ ಕೇಂದ್ರದ ಪಕ್ಕದ ಕೃಷಿ ಭೂಮಿಯಲ್ಲಿ ಹಾದುಹೋಗುವಂತೆ ಯೋಜನೆಯನ್ನು ಬದಲಾಯಿಸಲಾಯಿತು.
ಇದನ್ನು ಸ್ಥಳೀಯ ರೈತರು ಪ್ರಶ್ನಿಸಿದ್ದಾರೆ. ವಿಜಯ್ಮಲ್ಯ ಪ್ರಭಾವಿ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ಇಲಾಖೆ, ಮೂಲ ನಕ್ಷೆಯನ್ನು ಬದಲಾಯಿಸಿದೆ. ಇದರಿಂದ 47 ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ ಎಂದು ಅರ್ಜಿದಾರರು ಆರೋಪಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

