ನನ್ನ ವಿರುದ್ಧ ಪಿತೂರಿ: ವೆಂಟರಾಮಯ್ಯ
ಪಾವಗಡ: ಗಲಾಟೆ ಸಂದರ್ಭದಲ್ಲಿ ನಾನು ಸ್ಥಳದಲ್ಲಿಯೆ ಇಲ್ಲ. ನನ್ನ ರಾಜಕೀಯ ವರ್ಚಸ್ಸಿಗೆ ಕುಂದುಂಟುಮಾಡಲು ಮುಖಂಡ ಎಸ್.ಡಿ. ಸುದೇಶ್ಕುಮಾರ್ ನಡೆಸುತ್ತಿರುವ ಪಿತೂರಿ ಇದು ಎಂದು ಮುಖಂಡ ಡಾ.ಜಿ.ವೆಂಕಟರಾಮಯ್ಯ ತಿಳಿಸಿದ್ದಾರೆ.
ಪಟ್ಟಣದ ಪತಂಜಲಿ ನಗರದ ಶ್ರೀನಿವಾಸ್ ಎಂಬುವರ ಮನೆ ನಿರ್ಮಾಣ ವಿಚಾರದಲ್ಲಿ ಡಾ.ವೆಂಕಟರಾಮಯ್ಯ ಅನುಚರರು ದೌರ್ಜನ್ಯ ಮಾಡಿದ್ದಾರೆಂದು ಆರ್ಯವೈಶ್ಯ ಸಂಘಟನೆಗಳು ಕೈಗೊಂಡ ಪ್ರತಿಭಟನೆ ಹಿನ್ನೆಲೆಯಲ್ಲಿ ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶ್ರೀನಿವಾಸ್ ಎಂಬುವರು ಆಕ್ರಮವಾಗಿ ಮನೆ ಕಟ್ಟುತ್ತಿರುವುದಲ್ಲದೆ ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡಲಾಗಿ ಮನೆಗೆ ಮೆಟ್ಟಲು ನಿರ್ಮಿಸಲು ಮುಂದಾಗಿದ್ದಾರೆ. ಅಲ್ಲದೇ ಮನೆ ರಸ್ತೆ ಪಕ್ಕದಲ್ಲಿರುವ ಕಾರಣ ರಸ್ತೆಗೆ ಜಾಗ ಬಿಟ್ಟು ಮನೆಗೆ ಕಾಂಪೌಂಡು ಅಥವಾ ಮೆಟ್ಟಲು ನಿರ್ಮಿಸಿಕೊಳ್ಳಿ ಎಂದು ಪುರಸಭೆಯಿಂದ ನೋಟಿಸ್ ಜಾರಿ ಮಾಡಿದ್ದರೂ ಅದನ್ನು ಉಲ್ಲಂಘಿಸಿ ಮೆಟ್ಟಲು ನಿರ್ಮಿಸಲು ಮುಂದಾಗಿರುವುದು ವಿಪರ್ಯಾಸವೆಂದರು.
ಪ್ರಭಾಕರ್, ಡ್ರೈವರ್ ಜಬ್ಬಿವುಲ್ಲಾ ಹಾಗೂ ವೆಂಕಟೇಶ್ ಬಾಬು ಸೇರಿದಂತೆ ಯಾರು ಮಾಲೀಕ ಶ್ರೀನಿವಾಸ್ ಮೇಲೆ ದೌರ್ಜನ್ಯನಡೆಸಿಲ್ಲ. ಇದ್ದೆಲ್ಲಾ ಪಿತೂರಿ ಎಂದರು.
ಇಂದಿನಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ
ಕುಣಿಗಲ್: ಪಟ್ಟಣದ ಉಪ್ಪಾರರ ಬೀದಿಯಲ್ಲಿನ ಶ್ರೀ ಕೊಲ್ಲಾಪುರದಮ್ಮನವರ ದೇವಾಲಯದಲ್ಲಿ ಶ್ರೀ ಅಮ್ಮನವರ ಮೂರನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ಇದೇ 23ರಿಂದ 25ರವರೆಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 23ರ ಬುಧವಾರ ಪುಣ್ಯಾಹ, ಗಣಹಯಾಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆ ಗೊಂಡಿದ್ದರೆ, 24ರ ಗುರುವಾರ ಪಂಚವಿಂಶ ಕಲಶಪ್ರತಿಷ್ಠಾಪನಾ ಪ್ರದಾನ ಹೋಮ, ಅಘೋರ ಅಸ್ತ್ರಹೋಮ, 25ರ ಶುಕ್ರವಾರ ಚಂಡಿಕಾಹೋಮ, ರಂಗಪೂಜೆ ಸೇರಿದಂತೆ ವಿವಿಧ ಹೋಮಗಳು ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಧಾರ್ಮಿಕ ಸಭೆಯಿಂದ ಅಶಾಂತಿಗೆ ಕಡಿವಾಣ ಸಾಧ್ಯ: ಸಿದ್ಧಗಂಗಾಶ್ರೀ ಆಶಯ
ನಂಜನಗೂಡು: ವಿಶ್ವದೆಲ್ಲೆಡೆ ವ್ಯಾಪಿಸಿರುವ ಭ್ರಷ್ಟಾಚಾರ, ಸ್ವಾರ್ಥ, ಅಶಾಂತಿಯಂತಹ ಸಾಮಾಜಿಕ ಪಿಡುಗುಗಳಿಗೆ ಧಾರ್ಮಿಕ ಸಭೆ ಸಮಾರಂಭಗಳಿಂದ ಕಡಿವಾಣ ಹಾಕಲು ಸಾಧ್ಯ ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಹುಲ್ಲಹಳ್ಳಿ ಸಮೀಪ ಕಪಿಲಾ ಮತ್ತು ನುಗು ನದಿಗಳ ಸಂಗಮ ಕ್ಷೇತ್ರದಲ್ಲಿ ಪವಾಡ ಪುರುಷ ಶ್ರೀ ಸದ್ಗುರು ಮಹದೇವ ತಾತಾ ಅವರ 25ನೇ ಪ್ರಮಥ ಗಣಾರಾಧನೆ ಸಂದರ್ಭದಲ್ಲಿ ಮಂಗಳವಾರ ಮಂಗಳ ಮಂಟಪ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾನವ ಜನ್ಮ ಶ್ರೇಷ್ಠವಾದುದು. ಮನುಷ್ಯ ಧರ್ಮ ಪರಿಪಾಲನೆ ಪ್ರತಿಯೊಬ್ಬರ ಕರ್ತವ್ಯ. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಂಡು ಧರ್ಮದ ಪಾವಿತ್ರ್ಯತೆಯನ್ನು ಅರಿಯಬೇಕಾಗಿದೆ. ಮನುಷ್ಯನಿಗೆ ಊಟ, ಬಟ್ಟೆ, ವಸತಿ ಹೇಗೆ ಮುಖ್ಯವೂ ಹಾಗೆಯೇ ಉತ್ತಮ ಬಾಳ್ವೆ ನಡೆಸಲು ಧರ್ಮವೂ ಅತ್ಯಗತ್ಯ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶ್ಯಾಮನೂರು ಶಿವಶಂಕರಪ್ಪ ಅವರು ಸಂಗಮ ಕ್ಷೇತ್ರದಲ್ಲಿ ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಅತಿಥಿ ಗೃಹವನ್ನು ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಲೋಕಾರ್ಪಣೆ ಮಾಡಿ ಮಾತನಾಡಿ, ತಾತಾರವರ ಸಾನ್ನಿಧ್ಯದಿಂದಾಗಿ ಸಂಗಮ ಕ್ಷೇತ್ರದ ಪಾವಿತ್ರ್ಯತೆ ಹೆಚ್ಚಿದೆ ಎಂದು ತಿಳಿಸಿದರು. ತಾತಾರವರ ರಜತ ವಿಗ್ರಹ ರಥೋತ್ಸವವೂ ಬೆಳಿಗ್ಗೆ ನಡೆಯಿತು.
'ಗಂಗರಾಜುಗೆ ಟಿಕೆಟ್ ನೀಡಿ'
ತುಮಕೂರು: ಕೊರಟಗೆರೆ ಕ್ಷೇತ್ರದಿಂದ ಜೆಡಿಎಸ್ ವತಿಯಿಂದ ಅಂಗವಿಕಲರಾದ ಸಿ. ಗಂಗರಾಜು ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಜೆಡಿಎಸ್ ಅಂಗವಿಕಲರ ಘಟಕದ ಜಿಲ್ಲಾ ಅಧ್ಯಕ್ಷ ಬಿ.ಕೆ. ರಮೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಕಾರ್ಯದರ್ಶಿ ಇನಾಯತ್ ಖಾನ್ ಮನವಿ ಮಾಡಿದ್ದಾರೆ. ಗಂಗರಾಜು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಹಾಲಿ ತುಮಕೂರು ತಾಲೂಕು ಹೆಬ್ಬೂರು ಗ್ರಾ.ಪಂ. ಸದಸ್ಯರಾಗಿ ಜನಸೇವೆಯಲ್ಲಿ ತೊಡಗಿದ್ದು, ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಐತಿಹಾಸಿಕ ಸಮಾವೇಶದಲ್ಲಿ ನೀಡಿದ ಭರವಸೆಯಂತೆ 224 ವಿಧಾನಸಭಾ ಕ್ಷೇತ್ರಗಳ 2ರಲ್ಲಿ ಅಂಗವಿಕಲರು ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ತುಮಕೂರು: 28 ರಂದುಜನಸಂಪರ್ಕ ಸಭೆ
ತುಮಕೂರು: ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕಿನಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಸ್.ಆರ್. ಶಿದ್ಲಿಂಗಣ್ಣನವರ ನೇತೃತ್ವದಲ್ಲಿ ಜ.28 ರಂದು ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೊರಟಗೆರೆ ತಾ.ಪಂ.ಸಭಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 3 ರಿಂದ 5ರವರೆಗೆ ಮಧುಗಿರಿ ತಾ.ಪಂ. ಹಾಗೆಯೇ ಅಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ಪಾವಗಡ ತಾ.ಪಂ. ನಲ್ಲಿ ಸಭೆ ನಡೆಯಲಿದೆ. ಸಾರ್ವಜನಿಕರು ಇತ್ಯರ್ಥವಾಗದೆ ಬಾಕಿ ಉಳಿದಿರುವ ಅರ್ಜಿಗಳ ಬಗ್ಗೆ ಹಾಗೂ ಮನವಿಗಳನ್ನು ಸಲ್ಲಿಸಿದಲ್ಲಿ ಅರ್ಜಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಚರ್ಚಿಸಲಾಗುವುದೆಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಗುರುಕುಲ ಶ್ರೀಗಳಿಂದ ಕ್ಯಾಲೆಂಡರ್ ಬಿಡುಗಡೆ
ತಿಪಟೂರು: ನಗರದ ಗುರುಕುಲ ಆಶ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೊನ್ನವಳ್ಳಿ ಹೋಬಳಿ ಘಟಕ, ತಾಲೂಕು ಶ್ರೀ ಸೇವಾಲಾಲ್ ಲಂಬಾಣಿ ಸಂಘ ಹಾಗೂ ತಿಪಟೂರು ಯುವ ವೇದಿಕೆ ಸಂಯುಕ್ತವಾಗಿ ಹೊರ ತಂದಿರುವ ಪ್ಯಾಕೆಟ್ ಕ್ಯಾಲೆಂಡರ್ಗಳನ್ನು ಗುರುಕುಲ ಶ್ರೀಗಳಾದ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಸಂಘಟನೆಗಳು ನಾಡು, ನುಡಿ, ಜಲ ಮತ್ತು ಭಾಷೆಗಳ ಪರ ಹೋರಾಟ ಮಾಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಯಾವುದೇ ಜಾತಿಗೆ ಸೀಮಿತವಾಗದೆ ಎಲ್ಲಾ ಜನಾಂಗಕ್ಕೂ ಸ್ಪಂದಿಸುವ ಸಂಘಟನೆಗಳಾಗಿ ಶಾಂತಿ, ಸೌಹಾರ್ದತೆಯಿಂದಿರಬೇಕೆಂದು ತಿಳಿಸಿದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ಹೊನ್ನವಳ್ಳಿ ಜಯರಾಂ, ಶ್ರೀ ಸೇವಾಲಾಲ್ ಲಂಬಾಣಿ ಸಂಘದ ತಾ. ಅಧ್ಯಕ್ಷ ಬಿ.ಟಿ.ಕುಮಾರ್, ತಿಪಟೂರು ಯುವ ವೇದಿಕೆ ಅಧ್ಯಕ್ಷ ಎಲ್.ಎಸ್. ಗುರುಪ್ರಸನ್ನ, ಕಸಾಪ ತಾ.ಸಂಚಾಲಕ ಎಂ.ಆರ್. ಸೋಮಶೇಖರ್, ಮುಖಂಡರಾದ ಅಶೋಕ್ಗೌಡ, ರಾಮನಾಯ್ಕ, ಚಂದ್ರನಾಯ್ಕ, ಕಿರಣ್, ಬಾಬು ನಾಯ್ಕ, ಜಯನಾಯ್ಕ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ರಾಷ್ಟ್ರೀಯ ಮತದಾರರ ದಿನಾಚರಣೆ
ತುಮಕೂರು: ಭಾರತ ಚುನಾವಣಾ ಆಯೋಗ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ತುಮಕೂರು ಜಿಲ್ಲೆ ವತಿಯಿಂದ ಜನವರಿ 25 ರಂದು ಬೆಳಿಗ್ಗೆ 10 ಗಂಟೆಗೆ ಡಾ. ಗುಬ್ಬೀವೀರಣ್ಣ ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುವುದು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್. ಬಿ. ಪ್ರಭಾಕರ ಶಾಸ್ತ್ರಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಆರ್.ಕೆ. ರಾಜು ಆಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿ.ಪಂ.ಸಿ.ಇ.ಓ ಅವರು ಪಾಲ್ಗೊಳ್ಳುವರು.
ಮಾಜಿ ಸೈನಿಕರ ಸಭೆ
ತುಮಕೂರು: ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿ ವಾರ್ಷಿಕ ಸಭೆಯನ್ನು ಮಹಾತ್ಮಾಗಾಂಧಿ ಕ್ರೀಡಾಂಗಣದ ಮುಂಭಾಗವಿರುವ ಬಾಪೂಜಿ ಆಶ್ರಮದಲ್ಲಿ ಜನವರಿ 26 ರಂದು ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ. ಕರ್ನಾಟಕ ಸರ್ಕಾರದ ಸೂಚನೆಯ ಮೇರೆಗೆ ಮನೆ ಕಂದಾಯದ ರಿಯಾಯಿತಿ ಹಾಗೂ ಮಕ್ಕಳ ಶಿಷ್ಯ ವೇತನ ಹೆಚ್ಚುವರಿಕೆ, ಭಾರತ ಸರ್ಕಾರದಿಂದ ಮಂಜೂರಾಗಿರುವ ಸಮಾನ ಹುದ್ದೆ, ಸಮಾನ ಪಿಂಚಣಿ, ವಿಧವಾ ಪಿಂಚಣಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಲಾಗುವುದು. ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು ಹಾಗೂ ಮಾಜಿ ಸೈನಿಕರ ವಿಧವಾ ಪತ್ನಿಯರು ತಪ್ಪದೆ ಹಾಜರಾಗುವಂತೆ ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

