ನಾಯಕರ ವರ್ತನೆ: ಸುರೇಶ್ಕುಮಾರ್ ಕ್ಷಮೆಯಾಚನೆ
ಕುಣಿಗಲ್: ರಾಜ್ಯದ ಜನತೆ ಸೇರಿದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಪ್ರಸಕ್ತ ಪಕ್ಷದ ನಾಯಕರಿಂದಾಗುತ್ತಿರುವ
ಗೊಂದಲಕಾರಿ ಕ್ರಮಗಳು, ನಿಲವುಗಳ ಕುರಿತು ಸಚಿವ ಸುರೇಶ್ ಕುಮಾರ್ ಬಹಿರಂಗ ಕ್ಷಮೆ ಯಾಚಿಸಿದರು.
ಗುರುವಾರ, ತಾಲೂಕಿನ ಅಮೃತೂರಿನಲ್ಲಿ ನಡೆದ ಅಮೃತೂರು ಹೋಬಳಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಬಗ್ಗೆ ಜನತೆ ಹಾಗೂ ಬಿಜೆಪಿ ಕಾರ್ಯಕರ್ತರು ಬಹಳಷ್ಟು ಭರವಸೆಗಳನ್ನಿಟ್ಟುಕೊಂಡಿದ್ದು, ಅವರ ಭಾವನೆಗಳಿಗೆ ತಕ್ಕಂತೆ ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯ ಬಿಜೆಪಿ ಸರ್ಕಾರ ಮಾಡಿದೆ. ಆದರೆ, ಪಕ್ಷದ ಕೆಲ ನಾಯಕರ ಗೊಂದಲಕಾರಿ ನಡೆಗಳು, ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದ್ದು ಇದಕ್ಕಾಗಿ ತಾವು ಕ್ಷಮೆ ಯಾಚಿಸುವುದಾಗಿ ಹೇಳಿದರು.
ಸಾಕಷ್ಟು ಅಭಿವೃದ್ಧಿ ಕಾರ್ಯ: ರಾಜ್ಯವನ್ನಾಳಿದ ಈ ಹಿಂದಿನ ಯಾವುದೇ ಸರ್ಕಾರಗಳು ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ಮಾಡಿದೆ. ಸಕಾಲ ಯೋಜನೆ, ರೈತರಿಗೆ ಶೂನ್ಯಬಡ್ಡಿದರದಲ್ಲಿ ಸಾಲ, ಮಡಿಲು ಕಿಟ್ ವಿತರಣೆ, ಹಿಂದುಳಿದ ವರ್ಗಗಳ, ದಲಿತರ ಸಮಗ್ರ ಅಭಿವೃದ್ಧಿಗೆ ಹಲವು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ, ಆದರೆ, ಕೆಲವು ಸಣ್ಣಮನಸ್ಸಿನ ವ್ಯಕ್ತಿಗಳು ಗೊಂದಲ ಸೃಷ್ಟಿಸುತ್ತಿದ್ದು, ಕಾರ್ಯಕರ್ತರು ಈ ಬಗ್ಗೆ ತಲೆಕೆಡಿಸಿಕೊಳ್ಳದೆ, ಪಕ್ಷದ ಕಾರ್ಯಕ್ರಮಗಳನ್ನು ಮತದಾರರಲ್ಲಿ ಅರಿವು ಮೂಡಿಸಿ, ಪಕ್ಷ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಬೇಕೆಂದರು.ಸಾಕಷ್ಟು ಅನುದಾನ: ಬಿಜೆಪಿ ಜಿಲ್ಲಾಧ್ಯಕ್ಷ ಶಿವಪ್ರಸಾದ್, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ವ್ಯಾಪಕ ಭ್ರಷ್ಟಾಚಾರ ಸೇರಿದಂತೆ ಜನವಿರೋಧಿ, ಬೆಲೆಏರಿಕೆ ನೀತಿಯ ಬಗ್ಗೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯಾದ್ಯಂತ ಪ್ರತಿಯೊಬ್ಬರ ಮನೆಗಳಿಗೆ ತಲುಪಿಸಲು, ಮನೆ ಮನೆಗೆ ಬಿಜೆಪಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆ ಸೇರಿದಂತೆ ತಾಲೂಕಿಗೂ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದರೂ, ಸ್ಥಳೀಯ ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳದೆ ಕ್ಷೇತ್ರವು ಹಿಂದುಳಿಯುವಂತೆ ಮಾಡಿದ್ದಾರೆಂದರು.ಸಣ್ಣತನ: ಬಿಜೆಪಿ ಮುಖಂಡ, ರಾಜ್ಯಪರಿಷತ್ ಸದಸ್ಯ ಡಿ.ಕೃಷ್ಣಕುಮಾರ್, ತಾಲೂಕಿನಲ್ಲಿ ಭೀಕರ ಬರಗಾಲ ತಾಂಡವವಾಡುತ್ತಾ ಜನ, ಜಾನುವಾರು ಕುಡಿಯಲು ನೀರಿಲ್ಲದೆ ಪರದಾಡುತ್ತಿರುವ ಸಂದರ್ಭದಲ್ಲಿ ಸರ್ಕಾರದೊಡನೆ ಪರಿಣಾಮಕಾರಿಯಾಗಿ ಕ್ರಮ ಕೈಗೊಂಡು ತಾಲೂಕಿಗೆ ಸಮರ್ಪಕ ನೀರು ಪೂರೈಕೆ ಸೇರಿದಂತೆ ಬರಪರಿಹಾರ ಕಾರ್ಯಕ್ರಮ ಕೈಗೊಳ್ಳಬೇಕಾದ ಶಾಸಕರು, ವಿದೇಶಿ ಪ್ರವಾಸದಲ್ಲಿ ಮುಳುಗಿದ್ದಾರೆ. ಜನತೆ ಸಮಸ್ಯೆ ಪರಿಹರಿಸಲು ಬದ್ಧತೆ ಇಲ್ಲದೆ, ಜನವಿರೋಧಿಯಾಗಿದ್ದಾರೆ. ಇನ್ನು ಸ್ಥಳೀಯ ಜೆಡಿಎಸ್ ಮುಖಂಡರು,
ಅಮೃತೂರಿನಲ್ಲಿ ನಡೆಯುವ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಕಾಯಕರ್ತರು ತೆರಳದಂತೆ ಹಣದ ಆಮಿಶ ಒಡ್ಡಿ ಸಣ್ಣತನ ಮೆರೆಯುತ್ತಿದ್ದಾರೆ. ಜೆಡಿಎಸ್ ಮುಖಂಡರು ಜನತೆಯ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕೆ ಹೊರತು ಹಣದಿಂದ ಕಾರ್ಯಕರ್ತರನ್ನು ಕೊಳ್ಳುವ ಯತ್ನ ನಡೆಸುವ ಮೂಲಕ ತಮ್ಮ ಸಣ್ಣತನ ತೋರಿರುವುದು ಖಂಡನೀಯ. ತಾಲೂಕಿನ ಸಮಗ್ರ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದು, ಸ್ಥಳೀಯ ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳದೆ, ಸಮರ್ಪಕ ನೀರು ಹರಿದರೂ ಕ್ಷೇತ್ರಕ್ಕೆ ಹರಿಸುವಲ್ಲಿ ವಿಫಲರಾಗಿದ್ದಾರೆಂದರು.
ತಾಲೂಕು ಅಧ್ಯಕ್ಷ ಚಿಕ್ಕರಾಮಯ್ಯ, ಪ್ರಮುಖರಾದ ಗೌರಮ್ಮ, ಶಶಿಕಲಾ, ತನ್ವೀರ್, ರಂಗಸ್ವಾಮಿ, ತಿಮ್ಮಪ್ಪ, ನಟರಾಜು, ತಿಮ್ಮೇಗೌಡ, ನಾಗರಾಜು, ಸೋಮಶೇಖರ್, ರಾಘವೇಂದ್ರ, ರವಿ, ಸುರೇಶ್ ಇತರರು ಉಪಸ್ಥಿತರಿದ್ದು, ಅಮೃತೂರು ಹೋಬಳಿಯ ವಿವಿಧ ಗ್ರಾಮಗಳ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

