ಸರ್ವೆಯರ್ಗೆ ರೈತನಿಂದ ಧರ್ಮದೇಟು
ಕ.ಪ್ರ. ವಾರ್ತೆ ಕುಣಿಗಲ್ ಜು.3
ತಾನು ಖರೀದಿಸಿದ್ದ ಜಮೀನಿಗೆ ಗಡಿಗುರುತಿಗಾಗಿ ಸರ್ವೆಯರ್ಗೆ ಹಣ ನೀಡಿ ವರ್ಷಗಳೆ ಕಳೆದರೂ, ಸರ್ವೇ ಮಾಡದೆ ಸತಾಯಿಸುತ್ತಿದ್ದಲ್ಲದೆ, ಪಡೆದ ಹಣವನ್ನು ನೀಡದೆ ಅಲೆದಾಡಿಸುತ್ತಿದ್ದ ಸರ್ವೇಯರ್ಗೆ, ರೈತನೊಬ್ಬ ಧರ್ಮದೇಟು ನೀಡಿದ ಘಟನೆ ಬುಧವಾರ ಬೆಳಗ್ಗೆ ತಾಲೂಕು ಸರ್ವೇಯರ್ ಕಚೇರಿಯಿಂದ ವರದಿಯಾಗಿದೆ.
ಕಸಬಾ ಹೋಬಳಿಯ ಕುಂದೂರು ಗ್ರಾಮದ ಕುಂಟೇಗೌಡ ಎಂಬಾತ, ಭೈರನಾಯಕನಹಳ್ಳಿ ಕಳೆದೊಂದು ವರ್ಷದ ಕೆಳಗೆ ಎರಡು ಎಕರೆ ಭೂಮಿ ಖರೀದಿಸಿದ್ದ, ಗಡಿಗುರುತು ಮಾಡಿಕೊಡಲು ತಾಲೂಕು ಸರ್ವೇಯರ್ ಕಚೇರಿಗೆ ಅರ್ಜಿ ಸಲ್ಲಿಸಿದ ಮೇರೆಗೆ, ಸರ್ವೇಯರ್ ಒಬ್ಬರನ್ನು ಸದರಿ ಕಾರ್ಯಕ್ಕೆ ನೇಮಿಸಲಾಗಿತ್ತು.
ಸರ್ವೆ ಮಾಡಲು ಆ ಸರ್ವೇಯರ್ ಐದು ಸಾವಿರಕ್ಕೆ ಬೇಡಿಕೆ ಇಟ್ಟು ಹಣ ಪಡೆದುಕೊಂಡಿದ್ದಲ್ಲದೆ, ಜಮೀನು ಗುರುತಿಗೆ ಕೆಲವರಿಂದ ತಂಟೆ ತಕರಾರಿದೆ. ಸರ್ವೆ ಮಾಡಲು ರಕ್ಷಣೆ ಪಡೆಯಲು ಪೊಲೀಸರಿಗೂ ಹಣ ನೀಡಬೇಕೆಂದು ಸ್ಥಳೀಯ ಠಾಣಾ ಪೇದೆಯೊಬ್ಬರಿಗೆ ಐದು ನೂರುಗಳನ್ನು ಕೊಡಿಸಿದ್ದನೆಂದು ರೈತ ಆರೋಪಿಸಿದರು.
ಅರ್ಜಿ ಸಲ್ಲಿಸಿ, ಆತ ಕೇಳಿದಷ್ಟು ಹಣ ನೀಡಿದರೂ, ಸೂಕ್ತ ಕಾಲದಲ್ಲಿ ಹದ್ದುಬಸ್ತು ಮಾಡದೆ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ರೈತ ಕುಂಟೇಗೌಡ, ತಾಲೂಕು ಸರ್ವೇಯರ್ಗೆ ದುಂಬಾಲು ಬಿದ್ದ ಮೇರೆಗೆ ಸದರಿ ಕಾರ್ಯವನ್ನು ಬೇರೊಬ್ಬ ಸರ್ವೇಯರ್ರಿಂದ ಮಾಡಿ, ರೈತನಿಗೆ ಗಡಿಗುರುತಿಸಿ ಕೊಟ್ಟಿದ್ದರು.
ಆದರೆ, ಈ ಹಿಂದಿನ ಸರ್ವೇಯರ್ಗೆ ಐದುಸಾವಿರ ರು. ಹಣ ನೀಡಿದ್ದು, ಕಳೆದೆರಡು ಸಾಲಿನಿಂದಲೂ ಮಳೆ, ಬೆಳೆ ಇಲ್ಲ. ಈಗ ಜಡಿಮಳೆ ಬೀಳುತ್ತಿದ್ದು, ಹಿಂದೆ ಪಡೆದಿರುವ ಹಣ ಆತ ನೀಡಿದರೆ, ಗೊಬ್ಬರ ಇತ್ಯಾದಿ ಪಡೆಯಲು ಅನುಕೂಲವಾಗುತ್ತದೆ ಎಂದು ಹಣಕ್ಕಾಗಿ ಬುಧವಾರ ಕುಂಟೇಗೌಡ ಆಗ್ರಹಿಸಿದರು.
ಉದ್ಧಟತನ: ಹಣ ಪಡೆದಿದ್ದ ಸರ್ವೆಯರ್ ಉದ್ಧಟತನದಿಂದ ವರ್ತಿಸಿದ ಹಿನ್ನೆಲೆಯಲ್ಲಿ, ರೋಸಿಹೋದ ರೈತ ಕುಂಟೇಗೌಡ, ಆ ಸರ್ವೆಯರ್ನನ್ನು ಎಳೆದಾಡಿ, ಧರ್ಮದೇಟು ನೀಡಿದರನ್ನೆಲಾಗಿದೆ. ಈ ಮಧ್ಯೆ ಕಸಬಾ ಸರ್ವೇಯರ್ ಶಿವನಂಜೇಗೌಡ, ತಾಲೂಕು ಸರ್ವೆಯರ್ ಗಂಗಯ್ಯ ಇತರರು ಮಧ್ಯಪ್ರವೇಶಿಸಿ ರೈತನನ್ನು ಸಮಾಧಾನಗೊಳಿಸಿ, ಪಡೆದಿರುವ ಹಣ ಹಿಂತಿರುಗಿಸಲು ಕಾಲಾವಕಾಶ ಕೊಡಿಸಿದ ಮೇರೆಗೆ ರೈತ ಸಮಾಧಾನಗೊಂಡರು.
ಘಟನೆಗೆ ಪ್ರತಿಕ್ರಿಯಿಸಿದ ತಾಲೂಕು ಸರ್ವೆಯರ್ ಗಂಗಯ್ಯ, ಸರ್ವೆ ಮಾಡಲು ಯಾವ ತರಹದ ಒಪ್ಪಂದ ಮಾಡಿಕೊಂಡಿದ್ದರೊ ತಿಳಿಯದು. ಸರ್ವೆಯರ್ ಕೆಲಸ ಮಾಡದೆ ತಡಮಾಡಿದ ಮೇರೆಗೆ, ರೈತ ನೀಡಿದ ಮನವಿ ಮೇರೆಗೆ ಸರ್ವೆ ಮಾಡಿಸಿಕೊಟ್ಟಿದ್ದು, ಈಗ ರೈತ ಗಲಾಟೆ ಮಾಡಿದ್ದು, ಹಣ ಕೊಡಿಸುವ ಭರವಸೆ ನೀಡಿ ಕಳಿಸಿದ್ದೇನೆ, ಎಷ್ಟು ಹಣ ಏನೆಂದು ನಮಗೆ ತಿಳಿಯದು ಎಂದಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ತಾಲೂಕು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್, ಸರ್ಕಾರ ರೈತರಿಗೆ ಸಹಕಾರವಾಗಲು ಸಾಕಷ್ಟು ಪಾರದರ್ಶಕ ನೀತಿ ಅಳವಡಿಸಿದ್ದರೂ, ಸರ್ವೇ ಇಲಾಖೆಯಲ್ಲಿ ರೈತರ ಶೋಷಣೆ ವ್ಯಾಪಕವಾಗಿದ್ದು, ಸತತ ಮೂರು ವರ್ಷಗಳ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಸರ್ವೇ ಇಲಾಖೆಯಿಂದ ಅನಾನುಕೂಲವಾಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ದಿಸೆಯಲ್ಲಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

