ತುಮಕೂರು

ಒಣಗಿ ಹೋಗುತ್ತಿರುವ ಹೆಸರು, ಉದ್ದು, ಎಳ್ಳು ಬೆಳೆ

Published On :

ಮಳೆ ಬಾರದೆ ರೈತರ ಸ್ಥಿತಿ ಬೆಂಕಿಯಿಂದ ಬಾಣಲೆಗೆ, ಸರ್ಕಾರದ ನೆರವೂ ದೊರಕದೇ ಆತಂಕದಲ್ಲಿ ಜನತೆ
ತಿಪಟೂರು: ತಾಲೂಕಿಗೆ ಕಳೆದ ವರ್ಷ ಸಾಕಷ್ಟು ಪ್ರಮಾಣದಲ್ಲಿ ಮಳೆ ಬಾರದಿದ್ದರಿಂದ ಈಗಾಗಲೆ ಬರಗಾಲಕ್ಕೆ
ತುತ್ತಾಗಿದ್ದು, ಸರ್ಕಾರ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸಿ, ರೈತರಿಗೆ ಸಾಕಷ್ಟು ನೆರವು ನೀಡಬಹುದಿತ್ತು. ಆದರೆ ಈವರೆಗೂ ತಾಲೂಕಿನ ರೈತರಿಗೆ ಯಾವ ನೆರವೂ ಸರ್ಕಾರದಿಂದ ಸಿಗದಿರುವುದು  ಮತ್ತು ಈ ವರ್ಷವೂ ಮಳೆ ಕೈಕೊಟ್ಟಿದ್ದು, ರೈತರ ಸ್ಥಿತಿಯಂತೂ ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿದೆ.
ತೀವ್ರ ಬರಗಾಲ ಕಾಡುತ್ತಿರುವುದರಿಂದ  ರೈತರ ಜೀವನಾಡಿ ಬೆಳೆಯಾದ ತೆಂಗನ್ನು ಉಳಿಸಿಕೊಳ್ಳುವುದಂತೂ ಕಷ್ಟವಾಗಿದೆ. ಜೀವನ ನಿರ್ವಹಣೆಗೆ ಉಳಿದಿರುವ ಇಲ್ಲಿನ ಮುಖ್ಯ ಉಪಕಸುಬಾದ ಹೈನುಗಾರಿಕೆಗೆ ಪ್ರಮುಖವಾಗಿ ಬೇಕಾದ ಮೇವು, ನೀರಿಲ್ಲದೆ ದನಕರುಗಳನ್ನು ಕೇಳಿದಷ್ಟು ಬೆಲೆಗೆ ಕಡುಕರಿಗೆ ಮಾರುವಂತಹ
ಸ್ಥಿತಿ ನಿರ್ಮಾಣವಾಗಿದ್ದು, ರೈತರು ಗುಳೆ ಹೋಗುವ ಸಂಕಷ್ಟ ಪರಿಸ್ಥಿತಿ ಎದುರಾಗಿದೆ.
ಒಣಗಿದ ಬೆಳೆ: ಈ ಮೊದಲೆ ಬರಗಾಲದ ದವಡೆಯಲ್ಲಿರುವ ತಾಲೂಕಿನ ಪ್ರಸಕ್ತ ವರ್ಷದ ಪೂರ್ವ ಮುಂಗಾರು ಹಂಗಾಮು ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಮಳೆಯ ಅಭಾವದಿಂದ ಹಸಿರಿನೊಂದಿಗೆ ನಳನಳಿಸುತ್ತಿದ್ದ ಹೆಸರು, ಉದ್ದು ಸೇರಿದಂತೆ ಬಿತ್ತಿದ್ದ ಬೆಳೆಗಳೆಲ್ಲಾ ಒಣಗಿ ಹೋಗಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ. ಈ ವರ್ಷ ತಾಲೂಕಿನಲ್ಲಿ ಹೆಸರುಕಾಳು ಬಂಪರ್ ಬೆಳೆಯಾಗಿ ಬರುವುದೆಂಬ ಎಲ್ಲಾ ನಿರೀಕ್ಷೆಗಳಿದ್ದರೂ, ಹೂ ಬಿಟ್ಟು ಕಾಳು ಕಟ್ಟುವ ಈ ಹಂತದಲ್ಲಿ ಕೈಕೊಟ್ಟಿರುವ ಮಳೆರಾಯನಿಗೆ ರೈತರು ಹಗಲಿರುಳು ಮೊರೆಯಿಡುತ್ತಿದ್ದಾರೆ. ಏಪ್ರಿಲ್ ಕೊನೆ ಮತ್ತು ಮೇ ತಿಂಗಳ ಮೊದಲ ವಾರದಲ್ಲಿ ಬಿದ್ದಿದ್ದ ಅಲ್ಪ-ಸ್ವಲ್ಪ ಮಳೆಗೆ ತಾಲೂಕಿನಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಹೆಸರು, ಉದ್ದು, ಅಲಸಂದೆ ಮತ್ತು ಎಳ್ಳು ಇತ್ಯಾದಿ ಪೂರ್ವ ಮುಂಗಾರು ಬೆಳೆಗಳನ್ನು ಸಾವಿರಾರು ರು. ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ನಂತರದಲ್ಲಿ ಒಂದೆರಡು ಬಾರಿ ಬಿದ್ದ ಹದ ಮಳೆಗೆ ಬಿತ್ತಿದ್ದ ಬೀಜಗಳು ಮೊಳಕೆಯೊಡೆದು ಪೈರುಗಳಾಗಿ ಹುಲುಸಾಗಿ ಬೆಳೆದಿದ್ದವು. ಈಗ ಸುಮಾರು ಒಂದು ತಿಂಗಳಿಂದಲೂ ಮಳೆ ಬೀಳದ್ದರಿಂದ ಬೆಳೆಗಳು ಸಂಪೂರ್ಣವಾಗಿ ಒಣಗಲಾರಂಬಿಸಿದ್ದು,ನೀರಾವರಿ ಸೌಲಭ್ಯವಿರುವ ಕೆಲವೇ ಮಂದಿ ರೈತರಿಗೆ ಅಲ್ಪಸ್ವಲ್ಪ ಬೆಳೆ ದಕ್ಕುವ ನಿರೀಕ್ಷೆಯಲ್ಲಿದ್ದು ಉಳಿದ ರೈತರ ಪಾಡು ಭಯಾನಕವಾಗಿದೆ.
ನಿರಾಶಾದಾಯಕ: ಇನ್ನು ಈಗಾಗಲೆ ಪೂರ್ವ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿಯೇ, ಪ್ರಸಕ್ತ ಸಾಲಿನ ಮುಂಗಾರು ಮಳೆಗಾಲವೂ ಆಶಾದಾಯಕವಾಗಿರದೆ,ರೈತರಲ್ಲಿ ದುಗುಡ ಹುಟ್ಟಿಸಿದೆ. ಈ ವೇಳೆಗಾಗಲೆ ಮಳೆ ಪ್ರಾರಂಭವಾಗಿದ್ದರೆ ಮುಂಗಾರು ಬೆಳೆಗಳಾದ ರಾಗಿ, ತೊಗರಿ, ಅವರೆ ಇತ್ಯಾದಿ ಬೆಳೆಗಳನ್ನು ಬಿತ್ತಲು ಭೂಮಿಯನ್ನು ಉತ್ತು ಹದಗೊಳಿಸಿ ಬಿತ್ತನೆಗೆ ತಯಾರಿ ಮಾಡಿಕೊಳ್ಳಬಹುದಿತ್ತು. ಮಳೆ ಹನಿಯುವುದು ಮತ್ತಷ್ಟು ತಡವಾದಲ್ಲಿ ಪ್ರಮುಖ ಬೆಳೆ ರಾಗಿ ಮತ್ತಿತರೆ ಬೆಳೆಗಳನ್ನು ಬಿತ್ತುವುದಕ್ಕೆ ಸಮಯ ಮೀರಲಿದೆ. ಈ ಮೊದಲೆ ತಾಲೂಕು ಬರದ ಬೇಗೆಯಲ್ಲಿ ಬೇಯುತ್ತಿದ್ದು, ಇನ್ನೂ ಮಳೆ ಬಾರದಿರುವುದು ರೈತರನ್ನ ಮತ್ತೆ ಮತ್ತೆ ಆತಂಕಕ್ಕೀಡು ಮಾಡಿದೆ. ಆದರೂ ಕೇವಲ ನಂಬಿಕೆ-ನಿರೀಕ್ಷೆಗಳಲ್ಲೇ ತಮ್ಮ ಬದುಕು ಕಟ್ಟಿಕೊಂಡಿರುವ ರೈತರು ದಿನನಿತ್ಯವೂ ಮೋಡ ಮುಸುಕಿನ ಆಕಾಶದತ್ತ ನೋಡುತ್ತಾ, ಮಳೆರಾಯ ಇಂದು ಕೃಪೆ ತೋರುವನೋ, ನಾಳೆ ತೋರುವನೋ ಎಂದು ಅಳಿದುಳಿದ ಅಲ್ಪಸ್ವಲ್ಪ ಆಸೆ-ಭರವಸೆಗಳಿಂದ ಆಕಾಶ ದಿಟ್ಟಿಸುತ್ತಲೇ ಬರದ ಬೇಗೆಯ ಬದುಕು ಸವೆಸುತ್ತಿದ್ದಾರೆ. ನಿರಂತರವಾಗಿ ಹಲವಾರು ವರ್ಷಗಳಿಂದ ಬರದ ಬೇಗೆಯಲ್ಲೇ ನರಳುತ್ತಿರುವ ಕಲ್ಪತರು ನಾಡಿನ ರೈತರ ಗೋಳು ಮಳೆರಾಯನಿಗೆ ಯಾವಾಗ ಮುಟ್ಟಿ ಇಳೆಯನ್ನು ತಂಪಾಗಿಸುತ್ತದೋ ಕಾಯ್ದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.