ತುಮಕೂರು

ಮದ್ಯಪಾನದಂತಹ ದುಶ್ಚಟದಿಂದ ಸಾಮಾಜಿಕ ಪಿಡುಗು

Published On :

ಕ.ಪ್ರ. ವಾರ್ತೆ , ಕುಣಿಗಲ್ , ಜು.7
ಮದ್ಯಪಾನದಂತಹ ದುಶ್ಚಟದಿಂದ ಹಲವು ಸಾಮಾಜಿಕ ಪಿಡುಗುಗಳು ಕಾಣಬರುತ್ತಿದ್ದು, ಮದ್ಯವ್ಯಸನಿಗಳಿಗೆ, ವ್ಯಸನದಿಂದ ಮುಕ್ತಿಗೊಳಿಸಿ, ಸ್ವಾಸ್ತ್ಯ ಸಮಾಜ ನಿರ್ಮಾಣ ಸೇರಿದಂತೆ, ಸಮಾಜದಲ್ಲಿನ ಹಲವು ಅಪಾಯಕಾರಿ ಪಿಡುಗುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದೆಂದು ಕಿತ್ತನಾಗಮಂಗಲ ಅರೇಶಂಕರ ಮಠಾಧೀಶರಾದ ಸಿದ್ದರಾಮಚೈತನ್ಯ ಸ್ವಾಮಿಜಿ ಅಭಿಪ್ರಾಯ ಪಟ್ಟರು.
ಶನಿವಾರ, ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಕುಣಿಗಲ್ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಮದ್ಯಪಾನದಂತಹ ದುಶ್ಚಟವು ನಾಗರಿಕ ಸಮಾಜಕ್ಕೆ ದೊಡ್ಡಪಿಡುಗಾಗಿ ಪರಿಣಮಿಸಿದ್ದು, ಇದರಿಂದ ಹಲವು ಕುಟುಂಬಗಳು ಬೀದಿಗೆ ಬೀಳುತ್ತಾ, ಹಲವು ಸಾಮಾಜಿಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ ಎಂದರು.
ಸಮಾಜದ ಅವಕೃಪೆ: ಮದ್ಯವ್ಯಸನಕ್ಕೆ ಒಳಗಾದವರು ಮಾನಸಿಕ, ದೈಹಿಕ ಸ್ವಾಸ್ತ್ಯ ಕಳೆದುಕೊಳ್ಳುವುದರ ಜೊತೆಯಲ್ಲಿ ಸಮಾಜದ ಅವಕೃಪೆಗೆ ಒಳಗಾಗುತ್ತಾ ಅವರನ್ನು ನಂಬಿದ ಕುಟುಂಬದವರ ನೆಮ್ಮದಿಗೆ ಸಂಚಕಾರ ತರುತ್ತಾ, ಹಲವು ಸಮಸ್ಯೆಗೆ ಕಾರಣಕರ್ತರಾಗುತ್ತಾರೆ. ಮದ್ಯವ್ಯಸನಿಗಳಿಗೆ ಅವರ ಚಟದಿಂದ ಮುಕ್ತರಾಗಲು, ಸತ್ಸಂಗ,ಚಿಕಿತ್ಸೆ ಮೂಲಕ ಮಾರ್ಗದರ್ಶನ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಮುಂದಾಗುವ ಜೊತೆಯಲ್ಲಿ ಕುಟುಂಬದಲ್ಲಿ ನೆಮ್ಮದಿಯುತ ವಾತಾವರಣ ಸಾಧ್ಯವಾಗುತ್ತದೆ ಎಂದರು.
ಗಂಭೀರ ವಾತಾವರಣ: ಮದ್ಯವರ್ಜನ ಶಿಬಿರದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿಸದಸ್ಯ, ಕೆ.ಎಲ್. ಹರೀಶ್, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನೂರಾರು ಕುಟುಂಬದ ಮುಖ್ಯಸ್ಥರು, ಕೆಲವೆಡೆ ಸದಸ್ಯರು ಮದ್ಯದ ಚಟಕ್ಕೆ ಬಲಿಯಾಗಿ, ಇಡೀ ಕುಟುಂಬಗಳು ದಿನಬೆಳಗಾದರೆ ಕಣ್ಣೀರಲ್ಲಿ ಕೈತೊಳೆಯುವ ಗಂಭೀರ ವಾತವರಣ ನಿರ್ಮಾಣವಾಗುತ್ತಾ, ಸಮಾಜಲ್ಲಿನ ಬಹುದೊಡ್ಡ ಸಮಸ್ಯೆ ಸೃಷ್ಟಿಯಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇತರ ಸಂಘ, ಸಂಸ್ಥೆಗಳ ಸಹಕಾರದಿಂದ ಮದ್ಯವರ್ಜನ ಶಿಬಿರವನ್ನು ಹಮ್ಮಿಕೊಂಡು, ವ್ಯಸನಿಗಳನ್ನು ವ್ಯಸನಮುಕ್ತರಾಗಿಸುವ ಮೂಲಕ ಶೋಷಣೆಗೆ ಒಳಗಾದ ಕುಟುಂಬಗಳಿಗೆ ಭರವಸೆಯ ಆಶಾಕಿರಣ ಮೂಡಿಸಿದೆ ಎಂದರು.
ವಿವಿಧೆಡೆಗಳಲ್ಲಿ 601 ಶಿಬಿರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಗಂಗಾಧರ ರೈ, ದುರಭ್ಯಾಸ ಮುಕ್ತ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಯೋಜನೆ ವತಿಯಿಂದ ವಿವಿಧೆಡೆಗಳಲ್ಲಿ 601 ಶಿಬಿರಗಳ ಮೂಲಕ 36 ಸಾವಿರ ಮಂದಿ ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿಸಲಾಗಿದೆ. 91 ಶಾಲೆಗಳ ಹದಿನೈದು ಸಾವಿರ ವಿದ್ಯಾರ್ಥಿಗಳಿಗೆ ಸ್ವಾಸ್ತ್ಯ ಸಂಕಲ್ಪ ಯೋಜನೆ ಮೂಲಕ ಅವರಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.
ತಾಲೂಕು ಯೋಜನಾಧಿಕಾರಿ ಶಶಿರೇಖಾ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಗಣೇಶ್ ಬಾಬು, ಪ್ರಮುಖರಾದ ಜನಾರ್ದನ, ದಿನೇಶ್, ಚಾಮಯ್ಯ, ರಮೇಶ್ ಇತರರು ಉಪಸ್ಥಿತರಿದ್ದರು. ಶಿಬಿರದಲ್ಲಿ 150 ಕ್ಕೂ ಹೆಚ್ಚು ಮದ್ಯವ್ಯಸನಿಗಳು ದಾಖಲಾಗಿದ್ದು, ಎಂಟು ದಿನಗಳ ಕಾಲ ಶಿಬಿರ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.