ಕುಡಿವ ನೀರಿಗಾಗಿ ಕೊಳವೆಬಾವಿ ಸೌಲಭ್ಯ
ತಿಪಟೂರು: ನಗರದ ಗಾಂಧಿನಗರದ ಆರ್.ಸಿ.ಸಿ. ಟ್ಯಾಂಕ್ ಬಡಾವಣೆಯ ನಾಗರಿಕರಿಗಾಗಿ ಕುಡಿಯುವ ನೀರು ಪೂರೈಸಲು ದಿವಂಗತ ಡಾ.ಸತ್ಯಕುಮಾರ್ ಅವರ ಸ್ಮರಣಾರ್ಥವಾಗಿ ಅವರ ಪುತ್ರ ಡಾ.ಶ್ರೀಧರ್ ಕೊಳವೆಬಾವಿ ಕೊರೆಸಲು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸಭೆ ಸದಸ್ಯೆ ಕುಸ್ತುರ್ ಉನ್ನಿಸ್, ಬಡಾವಣೆಯ ಪ್ರಮುಖರಾದ ಮುಬಾರಕ್ ಪಾಷ, ಮುನ್ನಾ, ಅಮಾನುಲ್ಲಾಖಾನ್, ಮೆಹಬೂಬ್ ಖಾನ್, ಷಫೀರ್ ಖಾನ್ ಸೇರಿದಂತೆ ಮತ್ತಿತರರಿದ್ದರು.
ಸುದ್ದಿ ಸಂಕ್ಷೇಪ
ಮದುವೆಯಾಗುವುದಾಗಿ ನಂಬಿಸಿ ಯುವಕ ನಾಪತ್ತೆ: ದೂರು ದಾಖಲೆ
ಪಾವಗಡ: ಮದುವೆಯಾಗುತ್ತೇನೆಂದು ನಂಬಿಸಿ ಪ್ರೀತಿ ಮಾಡಿದ ಯುವಕನೊಬ್ಬ ತನ್ನ ಪ್ರೇಯಸಿಗೆ ಕೈಕೊಟ್ಟು ಪರಾರಿಯಾದ ಘಟನೆ ಸೋಮವಾರ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯ ಮರಾಡಿಪಾಳ್ಯದಲ್ಲಿ ನಡೆದಿದೆ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ ನಾಗರ್ಜುನ (22). ತಾಲೂಕಿನ ಮರಾಡಿಪಾಳ್ಯ ಗ್ರಾಮದ ನಾಗರ್ಜುನ ಎಂಬ ಯುವಕ ಅದೇ ಗ್ರಾಮದ ಪಾರ್ವತಿ (19, ಹೆಸರು ಬದಲಾಯಿಸಲಾಗಿದೆ) ಎಂಬ ಬಡ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿ ಮಾಡುತ್ತಿದ್ದ. ಇಂದು ನಾಳೆ ಮದುವೆಯಾಗುತ್ತೇನೆ ಎಂದು ಕಳೆದ ಒಂದು ವರ್ಷದಿಂದ ಸತಾಯಿಸುತ್ತಿದ್ದ. ಈತ ಮದುವೆಗೆ ಸತಾಯಿಸುತ್ತಿರುವ ಬಗ್ಗೆ ಸಂಶಯಗೊಂಡ ಪಾರ್ವತಿ ಮದುವೆಗೆ ಪಟ್ಟುಹಿಡಿದಿದ್ದಾಳೆ. ಹಿರಿಯರೊಂದಿಗೆ ಮಾತನಾಡಿ ಅತೀ ಶೀಘ್ರ ಮದುವೆ ಆಗುತ್ತೇನೆ ಎಂದು ಹೇಳಿ ಕಳೆದ ಒಂದು ವಾರದಿಂದ ನಾಪತ್ತೆಯಾಗಿ ಮರಳಿ ವಾಪಸಾದ ನಂತರ ಪಾರ್ವತಿಯನ್ನು ಮದುವೆ ಆಗುವುದಿಲ್ಲವೆಂದು ತಿಳಿಸಿದ್ದಾನೆ. ಇದರಿಂದ ತೀವ್ರ ಆತಂಕಗೊಂಡ ಪಾರ್ವತಿ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರನ್ನು ಪರಿಶೀಲಿಸಿದ ಪಿಎಸ್ಐ ನಟರಾಜ್ ಪ್ರಕರಣ ದಾಖಲಿಸಿ ಯುವಕನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.
ತೆಂಗು,ಅಡಿಕೆ ಬೆಳೆ ವೀಕ್ಷಣೆಗೆ ಇಂದುದೇವೇಗೌಡರ ಆಗಮನ
ತುರುವೇಕೆರೆ: ತೀವ್ರ ಬರಗಾಲದಿಂದ ಜಿಲ್ಲೆ ಹಾಗೂ ತಾಲೂಕಿನ ತೆಂಗು ಹಾಗೂ ಅಡಿಕೆ ಬೆಳೆ ಹಾಳಾಗಿರುವುದನ್ನು ಸ್ವತಃ ಕಣ್ಣಾರೆ ವೀಕ್ಷಣೆ ಮಾಡಲು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ನ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಮಂಗಳವಾರ ತಾಲೂಕಿಗೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾವು ವಿಧಾನಸಭೆಯಲ್ಲಿ ತೆಂಗು ಹಾಗೂ ಅಡಿಕೆ ಮರಗಳು ಸುಳಿ ಕಳೆದುಕೊಂಡು ಹಾಳಾಗಿರುವ ಕುರಿತು ಪ್ರಸ್ತಾಪಿಸಿದಾಗ ಪ್ರತಿ ನಾಶವಾಗಿರುವ ತೆಂಗಿನ ಮರಕ್ಕೆ ಕೇವಲ 25 ರು.ಗಳನ್ನು ನೀಡುವ ಭರವಸೆ ಸಿಕ್ಕಿತ್ತು. ಆದರೆ ತಾವು ಮರವೊಂದಕ್ಕೆ 25 ಸಾವಿರ ರು.ಗಳನ್ನು ನೀಡಬೇಕು ಎಂದು ಒತ್ತಾಯಿಸಿರುವುದಾಗಿ ಹೇಳಿದರು. ರೈತರ ಆಶಾಕಿರಣವಾಗಿರುವ ಮಾಜಿ ಪ್ರಧಾನಿ ದೇವೇಗೌಡರು ಹಾಸನ ಜಿಲ್ಲೆಯಲ್ಲಿ ಆಗಿರುವ ಮರಗಳ ಅನಾಹುತವನ್ನು ವೀಕ್ಷಿಸಿ ಈಗ ತುಮಕೂರು ಜಿಲ್ಲೆಯಲ್ಲೂ ಪ್ರವಾಸ ಮಾಡಿ ತೆಂಗಿನ ಮರಗಳು ಹಾಗೂ ಅಡಿಕೆ ಮರಗಳಿಗೆ ಆಗಿರುವ ಅನಾಹುತದ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡುವ ಸಲುವಾಗಿ ಭೇಟಿ ನೀಡಲಿದ್ದಾರೆ ಎಂದರು. ಬೆಳೆಗ್ಗೆ 10 ಗಂಟೆಗೆ ತಾಲೂಕಿನ ಕಡೇಹಳ್ಳಿಗೆ ಆಗಮಿಸಿ ಜೆಡಿಎಸ್ ಮುಖಂಡ ಕಡೇಹಳ್ಳಿ ಸಿದ್ದೇಗೌಡರ ತೋಟಕ್ಕೆ ಭೇಟಿ ನೀಡುವ ಮೂಲಕ ವೀಕ್ಷಣೆಗೆ ಚಾಲನೆ ನೀಡುವರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

