ಜೀತ ವಿಮುಕ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿ
ಕ.ಪ್ರ. ವಾರ್ತೆ ಮಧುಗಿರಿ ಜು.8
ಜೀತ ವಿಮುಕ್ತರಿಗೆ ರಾಜ್ಯ ಸರ್ಕಾರ ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಪ್ರತ್ಯೇಕ ಹಣ ಮೀಸಲಿಡಬೇಕು ಎಂದು ಆಗ್ರಹಿಸಿ ಮಧುಗಿರಿ ತಾಲೂಕು ಜೀವಿಕ ಸಂಘಟನೆ ವತಿಯಿಂದ ಮಧುಗಿರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರಮೇಶ್ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇಲ್ಲಿನ ಪುರಸಭೆ ಆವರಣದಲ್ಲಿ 1 ಸಾವಿರಕ್ಕೂ ಅಧಿಕ ಜೀತ ವಿಮುಕ್ತರು ಸಮಾವೇಶಗೊಂಡು ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರಭಟನಾ ಮೆರವಣೆಗೆ ನಡೆಸಿ ನಂತರ ಎಸಿ ಕಚೇರಿ ಮುಂದೆ ಧರಣಿ ಕೂತು ಪ್ರತಿಭಟಿಸಿದರು.
ತಾಲೂಕಿನಲ್ಲಿ 916 ಜೀತದಾಳಗಳನ್ನು ಈಗಾಗಲೇ ಜೀತದಿಂದ ವಿಮುಕ್ತಿ ಗೊಳಿಸಿದ್ದು, ಸರ್ಕಾರ ಯಾವುದೇ ರೀತಿಯ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ ಪ್ರತಿಭಟನಕಾರರು ಪ್ರತಿ ವರ್ಷ ರಾಜ್ಯಾದ್ಯಂತ ಏಕಕಾಲದಲ್ಲಿ ಜೀತದಾಳುಗಳ ಮರು ಸಮೀಕ್ಷೆ ನಡೆಸಬೇಕು. ಬಿಡುಗಡೆಗೊಂಡ ಜೀತದಾಳುಗಳಿಗೆ ಪ್ರಸ್ತುತ ಜಾರಿಯಿರುವ 300 ರು.ಮಾಸಾಶನದ ಬದಲು 2 ಸಾವಿರ ರು.ಹೆಚ್ಚಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲ ಜೀತಗಾರರನ್ನು ಪರಿಶೀಲಿಸಿ, ಗ್ರಾಮ ಲೆಕ್ಕಿಗರು ಹಾಗೂ ರಾಜಸ್ವ ನಿರೀಕ್ಷರ ವರದಿ ಪ್ರಕಾರ ಅವರನ್ನು ಜೀತ ವಿಮುಕ್ತರೆಂದು ಪರಿಗಣಿಸಿ ಪ್ರಮಾಣ ಪತ್ರ ಕೊಡಬೇಕು ಎಂದು ಆಗ್ರಹಿಸಿದರು.
ತಾ.ಸಂಚಾಲಕ ಡಿ.ಟಿ.ಸಂಜೀವಮೂರ್ತಿ ಮಾತನಾಡಿ, ಆಹಾರ ಪದಾರ್ಥಗಳ ಬೆಲೆ ಗನಕ್ಕೇರಿರುವ ದೃಷ್ಟಿಯಿಂದ ಜೀತ ವಿಮುಕ್ತರಿಗೆ ಈಗ ನೀಡುತ್ತಿರುವ 20 ಸಾವಿರ ರು.ಪರಿಹಾರ ಧನವನ್ನು 2ಲಕ್ಷ ರು.ಗಳಿಗೆ ಹೆಚ್ಚಿಸಬೇಕು. ಜೀತ ನಿರ್ಮೂಲನೆ ಸಮಗ್ರ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಹಿರಿಯ ಶ್ರೇಣಿ ಅಧಿಕಾರಿ ನೇಮಿಸಬೇಕು.
ತರಬೇತಿ: ಜಿಲ್ಲಾ ಮತ್ತು ಉಪವಿಭಾಗ ಮಟ್ಟದ ಜಾಗೃತ ಸಮಿತಿ ಸಭೆಯನ್ನು 2 ತಿಂಗಳಿಗೊಮ್ಮೆ ನಡೆಸಿ ಪ್ರತಿ ವರ್ಷ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ, ಅಪಾರ ಜಿಲ್ಲಾಧಿಕಾರಿ ಸಿಇಓ, ಎಸಿ ಹಾಗೂ ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳಿಗೆ ಜೀತ ಕಾನೂನಿನ ಬಗ್ಗೆ ರಾಜ್ಯ ಮಟ್ಟದಲ್ಲಿ ತರಬೇತಿ ನಡೆಸಬೇಕು. ಸಂಘಟನೆಯಿಂದ ಪತ್ತೆ ಹಚ್ಚಿ ಅಧಿಕಾರಿಗಳಿಗೆ ಸಲ್ಲಿಸಿದ ಜೀತದಾಳುಗಳ ಪಟ್ಟಿಯನ್ನು 1 ತಿಂಗಳ ಒಳಗೆ ತನಿಖಾ ತಂಡವೂ ತನಿಖೆ ನಡೆಸಿ ಬಿಡಿಗಡೆ ಮಾಡಬೇಕು. ಬಿಡುಗಡೆಗೊಂಡವರಿಗೆ ಲಭ್ಯವಿರುವ ಕಡೆ ಸರ್ಕಾರಿ ಭೂಮಿ ಗುರುತಿಸಿ ತಲಾ ಒಂದು ಕುಟುಂಬಕ್ಕೆ 5 ಎಕರೆ ಭೂಮಿ ನೀಡಬೇಕು. ಸರ್ಕಾರದ ವಿವಿಧ ಇಲಾಖೆ ಯೋಜನೆಗಳಿಂದ ಪ್ರಥಮ ಆದ್ಯತೆ ಮೇರೆಗೆ ಸೌಲಭ್ಯ ನೀಡಲು ಮುತುವರ್ಜಿ ವಹಿಸಬೇಕು. ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ಜಾಗೃತ ಸಮಿತಿಗಳಲ್ಲಿ ನೇಮಿಸಿರುವ ಕೆಲ ಸದಸ್ಯರು ಜೀತ ಸಮಸ್ಯೆ ಬಗ್ಗೆ ಹೆಚ್ಚು ಮಾಹಿತಿ ಇಲ್ಲದವರಾಗಿದ್ದು ಇವರನ್ನು ಕೈ ಬಿಟ್ಟು ಜೀತ ನಿರ್ಮೂಲನೆಗಾಗಿ ಕೆಲಸ ಮಾಡುತ್ತಿರುವ ಮುಖಂಡರು ಮತ್ತು ಕಾರ್ಯಕರ್ತರನ್ನು ಈ ಕೂಡಲೇ ಸಮಿತಿಗೆ ಸೇರಿಸಿಕೊಳ್ಳಬೇಕು. ಮಧುಗಿರಿ ತಾಲೂಕಿನಲ್ಲಿ ಜೀತದಾಳು ಕುಟುಂಬದ ಮಹಿಳೆಯರು ಮತ್ತು ಪುರುಷರು ರಚಿಸಿರುವ 120 ಸ್ವಸಹಾಯ ಗುಂಪುಗಳಿಗೆ ವಿಶೇಷ ಅನುದಾನ, ಸಾಲ ಸೌಲಭ್ಯ ಒದಗಿಸುವ ಜೊತೆಗೆ ಅವರ ಕುಟುಂಬದ ಮಕ್ಕಳಿಗೆ ಹಾಗೂ ಬಾಲ ಜೀತದಾಳುಗಳಿಗೆ ವಿಶೇಷ ಆದ್ಯತೆ ಮೇರೆಗೆ ಪ್ರತಿಷ್ಠಿತ ವಸತಿ ವ್ಯಾಸಂಗಕ್ಕೆ ಅನುದಾನ ಮೀಸಲಿಡಬೇಕು. ಜೀತ ವಿಮುಕ್ತ 916 ಜನರಿಗೆ ಮನೆ,ನಿವೇಶನ ಮಂಜೂರು ಮಾಡಿ ಅಂತ್ಯೋದಯ ಅನ್ನ ಯೋಜನೆ, ಪಡಿತರ ಚೀಟಿ ಹಾಗೂ ಸಬ್ಸಿಡಿ ಸಾಲ ನೀಡುವಂತೆ ಸಂಜೀವಮೂರ್ತಿ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

