ಕೊನೆಗೂ ಶವ ಸಂಸ್ಕಾರ ಗೊಂದಲದ ಪ್ರಸಂಗಕ್ಕೆ ತೆರೆ
ಕ.ಪ್ರ.ವಾರ್ತೆ ಶಿರಾ ಜು. 8
ಶ್ರೀ ಗುರುಗುಂಡ ಬ್ರಹ್ಮೇಶ್ವರ ಸಂಸ್ಥಾನ ಮಠದ ಆವರಣದಲ್ಲೇ ಶವ ಸಂಸ್ಕಾರ ನಡೆಯಬೇಕೆಂಬ ಕುಟುಂಬವೊಂದರ ಗೊಂದಲದ ವಿದ್ಯಮಾನಕ್ಕೆ ಮಂಗಳವಾರ ತೆರೆ ಬಿತ್ತು.
ಸುಮಾರು 700 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸರ್ಪಗಾವಲಿನ ನಡುವೆ ಮೃತರ ಸಂಬಂಧಿಕರ ಹೊಲದಲ್ಲೇ ಜಯಮ್ಮ ಅವರ ಪಾರ್ಥಿವ ಶರೀರವನ್ನು ಹೂಳುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಶವ ಸಂಸ್ಕಾರದ ಪ್ರಸಂಗ ಅಂತ್ಯಗೊಂಡಿತು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಶಾಂತಿಯುತವಾಗಿ ಈ ಕಾರ್ಯ ನೆರವೇರಿತು. ಸೋಮವಾರ ಮೃತ ಜಯಮ್ಮನವರ ಶವಸಂಸ್ಕಾರ ಮಾಡಲು ಅವರ ಸಂಬಂಧಿಕರು ಶ್ರೀ ಗುರುಗುಂಡ ಬ್ರಹ್ಮೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಹೂಳಲು ಹೋದಾಗ ಶ್ರೀಮಠ ಶವಸಂಸ್ಕಾರಕ್ಕೆ ಆಸ್ಪದ ನೀಡಲಿಲ್ಲ. ಇದು ಸಾರ್ವಜನಿಕರು, ಶಾಲೆ ಕಾಲೇಜು ವಿದ್ಯಾರ್ಥಿಗಳು, ಮಠದ ಭಕ್ತರು ಸಂಚರಿಸುವ ಸಾರ್ವಜನಿಕ ಸ್ಥಳವಾಗಿದ್ದು ಇಲ್ಲಿ ಶವಸಂಸ್ಕಾರ ಬೇಡ ಎಂದು ತಡೆಯಿತು. ಆದರೆ ಜಯಮ್ಮ ಸಂಬಂಧಿಕರು ಈ ಜಾಗವನ್ನು ನಾವೇ ಮಠಕ್ಕೆ ದಾನವಾಗಿ ನೀಡಿದ್ದೆವು. ಮೃತ ಜಯಮ್ಮ ಮಠಕ್ಕೆ ಭೂಮಿ ದಾನಮಾಡಿದ್ದ ಸೋಮಲಿಂಗಪ್ಪನವರ ವಂಶಸ್ಥರಾಗಿದ್ದು ಅವರನ್ನು ಸಂಪ್ರದಾಯದಂತೆ ಶ್ರೀಮಠದ ಭೂಮಿಯಲ್ಲೇ ಶವಸಂಸ್ಕಾರ ಮಾಡುವುದಾಗಿ ಹಠ ಹಿಡಿದರು. ಅನೇಕ ಸುತ್ತಿನ ಸಂಧಾನ, ಮಾತುಕತೆ ನಡೆಯಿತು.
ಸೋಮವಾರ ರಾತ್ರಿ 3 ಗಂಟೆವರೆಗೂ ಎರಡೂ ಕಡೆಯವರ ನಡುವೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂಧಾನ ಏರ್ಪಡಿಸಿದ್ದರೂ ವಿಫಲವಾಗಿತ್ತು. ಮತ್ತೆ ಮಂಗಳವಾರ ಮೃತ ಜಯಮ್ಮ ಅವರ ಮನೆ ಹತ್ತಿರ ತೆರಳಿದ ಜಿಲ್ಲಾಧಿಕಾರಿ ಸತ್ಯಮೂರ್ತಿ ಹಾಗೂ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರಮಣಗುಪ್ತ, ಉಪವಿಭಾಗಾಧಿಕಾರಿ ಸಿ.ಅನಿತ ಹಾಗೂ ಪೊಲೀಸ್ ತಂಡ ಸಂಬಂಧಿಕರೊಡನೆ ಚರ್ಚಿಸಿ ಶವಸಂಸ್ಕಾರಕ್ಕೆ ಸಿದ್ಧತೆ ನಡೆಸಿದರು.
ಪೊಲೀಸರಿಂದಲೆ ಶವಸಂಸ್ಕಾರ: ಪೊಲೀಸ್ ಸಿಬ್ಬಂದಿಯೇ ಪಾರ್ಥೀವ ಶರೀರವನ್ನು ಹೊತ್ತು ಶವಸಂಸ್ಕಾರ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಸಂಬಂಧಿಕರು ಹಾಗೂ ನೂರಾರು ಸಾರ್ವಜನಿಕರ ಸಮ್ಮುಖದಲ್ಲಿ ಶವಸಂಸ್ಕಾರವನ್ನು ಧಾರ್ಮಿಕ ವಿಧಿವಾಧಾನಗಳ ಮೂಲಕ ನೆರವೇರಿಸಿದರು.
ಜುಲೈ 17ಕ್ಕೆ ಮತ್ತೆ ಸಭೆ: ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರು, ಬರುವ ಜುಲೈ 17 ರಂದು ಎರಡೂ ಕಡೆಯವರನ್ನು ಸಮಕ್ಷಮ ಸಭೆ ಕರೆದು ಎರಡೂ ಕಡೆಯವರಲ್ಲಿನ ದಾಖಲೆಗಳನ್ನು ಪರಿಶೀಲಿಸಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ಸೋಮವಾರದಿಂದ 144 ಸೆಕ್ಷನ್ ಜಾರಿಯಿಂದ ಪಟ್ಟನಾಯಕನಹಳ್ಳಿಯಲ್ಲಿ ಬಿಗುವಿನ ವಾತಾವರಣ ಮೂಡಿತು.್ತ ಮೃತ ಜಯಮ್ಮನವರ ಸಂಬಂಧಿಕರ ಆಕ್ರೋಶದ ನುಡಿಗಳು ಇನ್ನೂ ತಣ್ಣಗಾಗಿರಲಿಲ್ಲ, ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆಯಿಂದ ಕೆ.ಎಸ್.ಆರ್.ಪಿ. ತುಕಡಿಗಳು ಸೇರಿದಂತೆ 700 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗ್ರಾಮದಲ್ಲೆ ಮೊಕ್ಕಾಂ ಹೂಡಿತ್ತು. ಶವಸಂಸ್ಕಾರದ ನಂತರ ಸಮಸ್ಯೆ ತಕ್ಷಣಕ್ಕೆ ಶಾಂತಿಯುತವಾಗಿ ಬಗೆಹರಿದಿದೆ.
ಬೃಹತ್ ಪ್ರತಿಭಟನಾ ಮೆರವಣಿಗೆ
ಶಿರಾ: ಮೃತ ಜಯಮ್ಮ ಶವಸಂಸ್ಕಾರಕ್ಕೆ ಅವರೇ ಶ್ರೀಮಠಕ್ಕೆ ದಾನವಾಗಿ ನೀಡಿದ್ದ ಭೂಮಿಯಲ್ಲೇ ಅವಕಾಶ ಮಾಡಿಕೊಡಬೇಕೆಂದು ಪಟ್ಟಣದ ರೇವಣ್ಣ ಸಿದ್ದೇಶ್ವರ ಕಲ್ಯಾಣ ಮಂಟಪದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮಂಗಳವಾರ ನಡೆಯಿತು. ಪ್ರತಿಭಟನೆಯ ನೇತೃತ್ವವನ್ನು ಮಾಜಿ ಶಾಸಕರಾದ ಎಸ್.ಕೆ.ದಾಸಪ್ಪ, ಬರಗೂರು ನಟರಾಜ್, ಎಸ್.ಎನ್.ಕೃಷ್ಣಯ್ಯ, ಡಾ.ಮಂಜುನಾಥ್, ಎಸ್.ಎಲ್.ರಂಗನಾಥ್, ಸೇರಿದಂತೆ ಹಲವು ಮುಖಂಡರು ವಹಿಸಿದ್ದರು. ಪ್ರತಿಭಟನಾ ಮೆರವಣಿಗೆಯ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ತಹಸೀಲ್ದಾರ್ ಕಚೇರಿಗೆ ನೀಡಿ ಜಿಲ್ಲಾಧಿಕಾರಿಗಳಿಗೆ ತಲುಪಿಸಲು ಮನವಿ ಪತ್ರ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

