ಪಂಕ್ತಿ ಭೇದ, ಮಡೆ ಸ್ನಾನ ತಡೆಗಟ್ಟಿ
ಕ.ಪ್ರ.ವಾರ್ತೆ ತುಮಕೂರು ಜು. 8
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪಂಕ್ತಿ ಭೇದ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆ ಮಡೆ ಸ್ನಾನ ತಕ್ಷಣ ತಡೆಗಟ್ಟ ಬೇಕು ಹಾಗೂ ರಾಜ್ಯ ಬಜೆಟ್‌ನಲ್ಲಿ ದಲಿತರಿಗೆ ಹೆಚ್ಚಿನ ಹಣ ಮೀಸಲಿಡಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ವತಿಯಿಂದ ನಗರದ ಟೌನ್‌ಹಾಲ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಉಡುಪಿಯ ಪೇಜಾವರ ಶ್ರೀಗಳು ಒಂದೆಡೆ ದಲಿತರ ಕೇರಿಗಳಲ್ಲಿ ಪಾದಯಾತ್ರೆ ಮಾಡುತ್ತಾರೆ. ಇನ್ನೊಂದೆಡೆ ತಮ್ಮ ಕೃಷ್ಣ ಮಠದಲ್ಲೇ ಪಂಕ್ತಿ ಭೇದವನ್ನಾಚರಿಸುತ್ತಾರೆ. ಹರಕೆ ಹೊತ್ತ ಭಕ್ತರಿಗೆಂದು ನೆಲದಲ್ಲಿಯೇ ಊಟ ಹಾಕುವ ಅನಾಗರಿಕ ಮತ್ತು ಸಂವಿಧಾನ ಅವೈಜ್ಞಾನಿಕ ಪದ್ಧತಿಯನ್ನು ಕೃಷ್ಣ ಮಠದಲ್ಲಿ ಆಚರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೇ ರೀತಿಯಲ್ಲಿ ರಾಜ್ಯ ಸರ್ಕಾರದ ಅಡಿಯಲ್ಲಿರುವ 168 ದೇವಸ್ಥಾನಗಳಲ್ಲಿ ಇಂತಹ ಅಮಾನವೀಯ ಪದ್ಧತಿಯನ್ನು ರಾಜ್ಯಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಮಡೆ ಮಡೆ ಸ್ನಾನ ಎಂಬ ಅಮಾನುಷವಾದ ಬ್ರಾಹ್ಮಣರ ಎಂಜಲೆಯ ಮೇಲೆ ಉರುಳಾಡುವ ಅನಿಷ್ಟ ಪದ್ದತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ದಲಿತರ ವಿಶೇಷ ಘಟಕ ಯೋಜನೆಯಲ್ಲಿ ಮೀಸಲಿರಿಸಿದ ಹಣವನ್ನು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು, ಅಧಿಕಾರಿಗಳು ದಲಿತೇತರ ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ವಿಶೇಷ ಘಟಕ ಯೋಜನೆಯ ಜಾರಿಗಾಗಿ, ಆಂಧ್ರಪ್ರದೇಶದ ಮಾದರಿಯಂತೆ ರಾಜ್ಯದಲ್ಲಿ ವಿಶೇಷ ಕಾನೂನ್ನು ರಚಿಸಬೇಕು.
ದಲಿತರಿಗೆ ವಂಚನೆ: ನವ ಉದಾರೀಕರಣದ ನೀತಿಗಳನ್ನು ಜಾರಿಗೆ ತರುತ್ತಿರುವುದರಿಂದ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ 5 ಲಕ್ಷಕ್ಕೂ ಮೀರಿ ಗುತ್ತಿಗೆ ಆಧಾರದಲ್ಲಿ ನೌಕರರು ನೇಮಕಗೊಂಡಿದ್ದಾರೆ. ಈ ನೇಮಕಾತಿಯಲ್ಲಿ 1 ಲಕ್ಷ ಹುದ್ದೆಗಳನ್ನು ದಲಿತರಿಗೆ ಮೀಸಲಿಡದೆ ವಂಚಿಸಿದ್ದಾರೆ. ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಜಾರಿಗೊಳಿಸಬೇಕು.
ವಿಶೇಷ ಘಟಕ ಯೋಜನೆಗೆ ಜಾರಿಗಾಗಿ ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ಕಾನೂನು ಅಂಗೀಕರಿಸಬೇಕು. ಒದಗಿಸಿದ ಹಣ ಕಡಿತ (ಲ್ಯಾಪ್ಸ್) ಆಗಬಾರದು. ದಲಿತ ಕಾಲೋನಿಗಳ ಅಭಿವೃದ್ಧಿಗೆ ಹಣ ಒದಗಿಸಬೇಕು. ಪೌರ ಕಾರ್ಮಿಕರಿಗೆ ಕನಿಷ್‌ಠ ವೇತನ 12 ಸಾವಿರ ನಿಗದಿಪಡಿಸಬೇಕು, ಪೌರ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗಳಲ್ಲಿ ಇಳಿಸುವುದು ನಿಲ್ಲಿಸಬೇಕು. ಉನ್ನತ ಹುದ್ದೆಗಳಲ್ಲಿ ಬಡ್ತಿ ಮತ್ತು ಮೀಸಲಾತಿಯಲ್ಲಿ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಬೇಕು. ದಲಿತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಸಮಾಜ ಕಲ್ಯಾಣ ಇಲಾಖೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿದರು. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿಯನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಮಾಡಬೇಕು. ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮಂಡಳಿಯಲ್ಲಿ ದಲಿತ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಲು ಸಮಾಜ ಕಲ್ಯಾಣ ಇಲಾಖೆಯ ವರದಿಯನ್ನು ಜಾರಿಮಾಡಬೇಕು. ಮನೆಯಿಲ್ಲದವರಿಗೆ ಮಹಾನಗರ ಪಾಲಿಕೆ ರೂ.4 ಲಕ್ಷ, ನಗರ ಪ್ರದೇಶದಲ್ಲಿ ರೂ.3.5 ಲಕ್ಷ, ಗ್ರಾಮಾಂತರದಲ್ಲಿ ರೂ.3 ಲಕ್ಷ ನಿವೇಶನ ನೀಡಿ ಮನೆ ಕಟ್ಟಿಸಿಕೊಡಬೇಕು. ಭೂರಹಿತ ದಲಿತ ಕುಟುಂಬಕ್ಕೆ 2 ಎಕರೆ ಭೂಮಿ ನೀಡಬೇಕು. ಎಸ್.ಸಿ.ಎಸ್.ಟಿ. ವಿದ್ಯಾರ್ಥಿ ವೇತನ 2 ಸಾವಿರಕ್ಕೆ ಹೆಚ್ಚಿಸಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಹಾರ ಭತ್ಯೆ ಹೆಚ್ಚಿಸಬೇಕು. ಇತರೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ದಲಿತರ ಮೇಲೆ ಹೆಚ್ಚುತ್ತಿರುವ ಜಾತಿ ದೌರ್ಜನ್ಯ ದಾಳಿ ದಬ್ಬಾಳಿಕೆ ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಾಗಿ ಕ್ರಮ ಜರುಗಿಸಬೇಕು.
ಉದಾರೀಕರಣ ನೀತಿ ಜಾರಿಯಿಂದಾಗಿ ದಲಿತರು ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಹೊರಗುತ್ತಿಗೆ ವ್ಯವಸ್ಥೆಯಲ್ಲಿ ಕೂಡ ಎಸ್.ಸಿ.ಎಸ್.ಟಿ.ಯವರಿಗೆ ಮೀಸಲಾತಿ ಅನ್ವಯಿಸಬೇಕು. ದೇವದಾಸಿ ಮಹಿಳೆಗೆ ಪರಿಹಾರದ ಪ್ಯಾಕೇಜ್ 25 ಸಾವಿರದ ಬದಲು 1 ಲಕ್ಷಕ್ಕೆ ಹೆಚ್ಚಿಸಬೇಕು. 2 ಲಕ್ಷ ರು. ವೆಚ್ಚದಲ್ಲಿ ಮನೆ ಕಟ್ಟಿಸಿ ಕೊಡಬೇಕು. 1500 ಮಾಸಾಶನ ನೀಡಬೇಕು. ದೇವದಾಸಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಸಂಬಳ ಹೆಚ್ಚಿಸಬೇಕು. ದೇವದಾಸಿ ಮಕ್ಕಳ ಅಭಿವೃದ್ಧಿಗೆ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕ್ರಮ ಜರುಗಿಸಬೇಕು. 2 ಎಕರೆ ಭೂಮಿ ಉಚಿತವಾಗಿ ನೀಡಬೇಕು. ದೇವದಾಸಿ ಮಹಿಳೆಯರು ದಲಿತರಾದ್ದರಿಂದ ಅವರ ಅಭಿವೃಧ್ದಿ ಕೆಲಸಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ನಗರ ಸಮಿತಿ ಸದಸ್ಯರಾದ ಅಜ್ಜಪ್ಪ, ರಾಘವೇಂದ್ರ, ಆದಿಮೂರ್ತಿ, ಮಂಜುನಾಥ್, ನರಸಿಂಹಮೂರ್ತಿ ಮುಂತಾದವರು ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

