ತುಮಕೂರು

ರೈತರ ನೆರವಿಗೆ ಬಾರದಿದ್ದರೆ ಹೋರಾಟ

Published On :

ತುರುವೇಕೆರೆ: ತೆಂಗು ಹಾಗೂ ಅಡಿಕೆ ಬೆಳೆ ಭಾಗಶಃ ನೆಲೆಕಚ್ಚಿವೆ. ರೈತರ ಬದುಕು ಮೂರಾಬಟ್ಟೆಯಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ರಾಜ್ಯ ಸರ್ಕಾರ ರೈತರ ನೆರವಿಗೆ ಈ ಬಜೆಟ್‌ನಲ್ಲಿ ನೆರವಿಗೆ ಬಾರದಿದ್ದಲ್ಲಿ ತಾವು ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಶತಸಿದ್ಧ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
 ಮಳೆ ಇಲ್ಲದೇ ತಾಲೂಕಿನಲ್ಲಿ ತೆಂಗು ಹಾಗೂ ಅಡಿಕೆ ಬೆಳೆ ಬಹುಪಾಲು ಹಾಳಾಗಿದೆ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೆಂಗು ಹಾಗೂ ಅಡಿಕೆ ಬೆಳೆಯಿಂದಲೆ ಜೀವನ ನಿರ್ವಹಣೆ ಮಾಡಿಕೊಳ್ಳುವ ರೈತರ ಬದುಕಿಗೆ ಮಳೆ ಇಲ್ಲದೆ ಜೀವನಕ್ಕೆ ಕೊಳ್ಳಿ ಇಟ್ಟ ಹಾಗೆ ಆಗಿದೆ. ಇದನ್ನು ಸ್ವತಃ ನೋಡಲು ಆಗಮಿಸಿದ ದೇವೇಗೌಡರು ಕಡೇಹಳ್ಳಿಯ ಜೆಡಿಎಸ್ ಮುಖಂಡ  ಸಿದ್ದೇಗೌಡರ ತೋಟಕ್ಕೆ ಭೇಟಿ ನೀಡಿ ತೆಂಗಿನ ಮರಗಳ ದುಃಸ್ಥಿತಿಯನ್ನು ವೀಕ್ಷಿಸಿದರು.  ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಳೆದ ಹತ್ತಾರು ವರ್ಷಗಳಿಂದ ತೆಂಗು ಹಾಗೂ ಅಡಿಕೆ ಬೆಳೆಗೆ ವಿವಿಧ ಸಮಸ್ಯೆಗಳು ಬಂದಿದ್ದವು. ನುಸಿ ಪೀಡೆ ರೋಗದಿಂದ ಬಳಲಿ ಹೋಗಿದ್ದ ರೈತರಿಗೆ ಈಗ ಮಳೆ ಇಲ್ಲದೇ ಅಂತರ್ಜಲವೂ ಬತ್ತಿ ಹೋಗಿರುವ ಕಾರಣ ಲಕ್ಷಾಂತರ ಮರಗಳು ಜೀವಸತ್ವವನ್ನೇ ಕಳೆದುಕೊಂಡಿವೆ. ಇದರಿಂದಾಗಿ ರೈತರು ಮುಂದಿನ 15 ವರ್ಷಗಳ ಕಾಲ ಜೀವನ ನಡೆಸುವುದೇ ಕಷ್ಟದಾಯಕವಾಗಿದೆ ಎಂದರು.
13 ಸಾವಿರ ರು. ನೀಡಲು ವರದಿ: ತೆಂಗು ಅಭಿವೃಧ್ಧಿ ಮಂಡಲಿ ಈಗಾಗಲೇ ಸರ್ಕಾರಕ್ಕೆ ವರದಿಯನ್ನು ನೀಡಿದೆ. ಅದರಲ್ಲಿ ಹಾಳಾಗಿರುವ ಪ್ರತಿ ತೆಂಗಿನ ಮರಕ್ಕೆ 13 ಸಾವಿರ ರು.ಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಸರ್ಕಾರ ಆ ವರದಿಗೆ ಯಾವ ಮನ್ನಣೆ ನೀಡುವುದೋ ಗೊತ್ತಿಲ್ಲ. ಈ ಕುರಿತು ತಾವು ಖುದ್ದಾಗಿ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸುವುದಾಗಿ ದೇವೇಗೌಡರು ಹೇಳಿದರು.
ಬೇಡವೇ ಬೇಡ: ಕಾವೇರಿ ನೀರಿನ ಹಂಚಿಕೆ ಸಂಬಂಧ ತಮಿಳುನಾಡಿನ ಮನವಿಯಂತೆ ಉಸ್ತುವಾರಿ ಸಮಿತಿ ರಚನೆ ಮಾಡಿದಲ್ಲಿ ರಾಜ್ಯಕ್ಕೆ ತೀವ್ರ ಸಂಕಟದ ವಾತಾವರಣ ನಿರ್ಮಾಣವಾಗುತ್ತದೆ ಎಂದು ದೇವೇಗೌಡರು ಕಳವಳ ವ್ಯಕ್ತಪಡಿಸಿದರು.  
ತಾಲೂಕಿನಲ್ಲಿ ಸುಮಾರು ಎರಡು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ತೆಂಗಿನ ಮರಗಳು ಹಾಗೂ ಸುಮಾರು ನಾಲ್ಕು ಲಕ್ಷದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ಹಾಳಾಗಿವೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ಗಂಗಾಧರ್ ಮಾಜಿ ಪ್ರಧಾನಿ ದೇವೇಗೌಡರಿಗೆ ಮಾಹಿತಿ ನೀಡಿದರು. ಶಾಸಕರಾದ ಚಲುವರಾಯಸ್ವಾಮಿ, ಎಂ.ಟಿ.ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ತಹಸೀಲ್ದಾರ್ ಜಿ.ಪಿ.ಮಂಜೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎ.ಬಿ.ಜಗದೀಶ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀಕಾಂತ್, ಮಾಜಿ ತಾ.ಪಂ.ಸದಸ್ಯ ಹಾಗೂ ತಾಲೂಕು ಪಡಿತರ ಮಾರಾಟಗಾರರ ಸಂಘದ ಅಧ್ಯಕ್ಷ ಕಡೇಹಳ್ಳಿ ರಾಮಚಂದ್ರು ಮೊದಲಾದವರು ಇದ್ದರು. ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ನೇತೃತ್ವದಲ್ಲಿ ಸದಸ್ಯರಾದ ಶಂಕರೇಗೌಡ, ಆಂಜನಪ್ಪ ಹಾಗೂ ಮಂಗೀಕುಪ್ಪೆ ಬಸವರಾಜು ಮೊದಲಾದವರು ವರ್ಷಪೂರ್ತಿ ನ್ಯಾಫೆಡ್ ತೆರೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆಯೂ, ಪ್ರತಿ ಕ್ವಿಂಟಾಲ್ ಕೊಬರಿಗೆ 10 ಸಾವಿರ ರು.ಗಳನ್ನು ನಿಗದಿ ಮಾಡುವಂತೆ ಕೇಂದ್ರವನ್ನು ಒತ್ತಾಯ ಮಾಡಬೇಕು ಎಂದು ಆಗ್ರಹಿಸಿ ದೇವೇಗೌಡರಿಗೆ ಮನವಿ ಪತ್ರ ಸಲ್ಲಿಸಿದರು.
ಶಿರಾ ತಾಲೂಕಿನಲ್ಲಿ ತೆಂಗು ಹಾಗೂ ಅಡಿಕೆ ಬೆಳೆ ಹಾಳಾಗಿದ್ದು ಅಲ್ಲಿನ ರೈತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದೆ ಬರಬೇಕು ಎಂದು ಆಗ್ರಹಿಸಿ ಶಿರಾ ತಾಲೂಕು ಪಂಚಾಯ್ತಿ ಸದಸ್ಯ ಸಿ.ಆರ್.ಉಮೇಶ್ ಸಂಪೂರ್ಣ ಮಾಹಿತಿ ಹೊತ್ತಿದ್ದ ಕಿರು ಹೊತ್ತಿಗೆಯನ್ನು ದೇವೇಗೌಡರಿಗೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.