ಅಂತೂ ಕಲ್ಪತರು ನಾಡಿಗೂ ಪಾಲಿಕೆ ಯೋಗ
ಉಗಮ ಶ್ರೀನಿವಾಸ್
ತುಮಕೂರು: ಅಂತೂ ಇಂತೂ ಕಡೆಗೂ ತುಮಕೂರಿಗೆ ಮಹಾನಗರ ಪಾಲಿಕೆ ಮನ್ನಣೆ ದೊರೆತಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ತುಮಕೂರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಆದರೆ ಆಗ ಕೆಲವರು ಇದರ ವಿರುದ್ಧ ಕೋರ್ಟ್ಗೆ ಮೊರೆ ಹೋಗಿದ್ದರು. ಹಾಗಾಗಿ ಪುನಃ ನಗರಸಭೆಯಾಗಿ ತುಮಕೂರು ಹಿಂಬಡ್ತಿ ಪಡೆಯಿತು.
ಅಲ್ಲದೇ ಆಗ ಪಾಲಿಕೆ ಘೋಷಣೆ ಹಿನ್ನೆಲೆಯಲ್ಲಿ ಮೊದಲ ಕಂತಾಗಿ ಬಂದಿದ್ದ 50 ಕೋಟಿ ಮತ್ತೆ ಸರ್ಕಾರಕ್ಕೆ ವಾಪಸ್ ಆಯ್ತು. ಜನಸಂಖ್ಯೆ 3 ಲಕ್ಷ ದಾಟಿತ್ತು. ಹಾಗಾಗಿ ಅತಿ ಶೀಘ್ರವೇ ಮಹಾನಗರಪಾಲಿಕೆಯಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ತುಮಕೂರು ಈಗ ಮಹಾನಗರಪಾಲಿಕೆಯಾಗಿದೆ.ಈಗ ಕನಿಷ್ಠ 100 ಕೋಟಿ ರು. ಹಣ ಹರಿದು ಬರಲಿದೆ. ಹಾಗಾಗಿ ತುಮಕೂರು ಇನ್ನಷ್ಟು ಅಭಿವೃದ್ಧಿ ಹೊಂದಲಿದೆ.ಈಗಾಗಲೇ ಬೆಂಗಳೂರಿನ ಭವಿಷ್ಯದ ಉಪನಗರಿ ಎಂದೇ ತುಮಕೂರು ಬಿಂಬಿತವಾಗಿದೆ. ಅಲ್ಲದೇ ಬೆಂಗಳೂರಿಗೆ ರಾಜ್ಯದ 18 ಜಿಲ್ಲೆಗಳನ್ನು ಸಂಪರ್ಕಿಸುವ ಹೆಬ್ಬಾಗಿಲು ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೂಡ ಸಾಕಷ್ಟು ಅನುದಾನ ಹರಿದು ಬಂದಿತ್ತು. ಕಳೆದ ವಿಧಾನಸಭೆ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಕೂಡ ಸಾಕಷ್ಟು ಅನುದಾನ ನೀಡಿದ್ದರು.
ಅಲ್ಲದೇ ಅದೇ ಸಂದರ್ಭದಲ್ಲಿ ಪಾಲಿಕೆ ಘೋಷಣೆ ಕೂಡ ಮಾಡಲಾಗಿತ್ತು. ಆದರೆ ಪಾಲಿಕೆ ಘೋಷಣೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಲಾಗಿತ್ತು. ಈಗ ಮತ್ತೆ ಪಾಲಿಕೆಯಾಗುತ್ತಿರುವುದರಿಂದ ತುಮಕೂರಿಗೆ ಮತ್ತಷ್ಟು ಹಣ ಹರಿದು ಬರುವಂತಾಗಿದೆ.
ಕ್ಷಿಪ್ರಗತಿಯಲ್ಲಿ ಬೆಳವಣಿಗೆ: ಈಗಾಗಲೇ ತುಮಕೂರು ಬಹಳಷ್ಟು ಅಭಿವೃದ್ಧಿ ಹೊಂದಿದೆ. ಹಲವಾರು ಯೋಜನೆಗಳು ಬಂದಿದೆ. ಮೇಲ್ಸೇತುವೆ ನಿರ್ಮಾಣವಾಗಿದೆ. ನಗರ ಸಾರಿಗೆ ವ್ಯವಸ್ಥೆ ಬಂದಿದೆ. ಈಗ ಮತ್ತೆ 100 ಕೋಟಿ ರು. ಹಣ ಹರಿದು ಬರುವುದರಿಂದ ಕ್ಷಿಪ್ರಗತಿಯಲ್ಲಿ ತುಮಕೂರು ಬೆಳೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಪಾಲಿಕೆ ಹಿನ್ನೆಲೆಯಲ್ಲಿ ತುಮಕೂರಿಗೆ ಮತ್ತೆ 100 ಕೋಟಿ ರು. ಹಣ ಬಿಡುಗಡೆಯಾಗಲಿದೆ. ಈ ಹಣದಲ್ಲಿ ರಸ್ತೆ, ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಯೋಜನೆ ರೂಪಿಸಲಾಗುವುದು ಎನ್ನುತ್ತಾರೆ ನಗರ ಶಾಸಕ ಡಾ. ರಫೀಕ್ ಅಹಮದ್.
ಈಗಾಗಲೇ ತುಮಕೂರು ನಗರ ಸಾಕಷ್ಟು ಬೆಳೆದಿದ್ದು ಹೊಸ ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. 50 ಕ್ಕೂ ಹೆಚ್ಚು ನಗರ ಸಾರಿಗೆ ಬಸ್ಗಳು ಸಂಚಾರ ನಡೆಸುತ್ತಿದೆ. ಮತ್ತಷ್ಟು ಹೊಸ ಬಸ್ಗಳನ್ನು ಓಡಿಸುವ ಚಿಂತನೆಯನ್ನು ಹೊಂದಲಾಗಿದೆ.
ಹೊರ ವಲಯದ ಬಡಾವಣೆಗಳಲ್ಲಿ ಇನ್ನೂ ಬೀದಿ ದೀಪ ಹಾಕಿಸಿಲ್ಲ. ಹಾಗಾಗಿ ಕೆಲವು ಕಡೆ ಕಗ್ಗತ್ತಲು ಆವರಿಸಿದೆ. ಈ ಹಿನ್ನೆಲೆಯಲ್ಲಿ 100 ಕೋಟಿ ರು. ಅನುದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು ಎನ್ನುತ್ತಾರೆ ರಫೀಕ್ ಅಹಮದ್.
ತೆಂಗು ಬೆಳೆಗಾರನಿಗಿಲ್ಲ ನೆರವು...
ತೋಟಗಾರಿಕೆಗೆ ಬಜೆಟ್ನಲ್ಲಿ ಆದ್ಯತೆ ಇಲ್ಲ. ತೆಂಗು ಬೆಳೆಗಾರರು ಬಸವಳಿದು ಹೋಗಿದ್ದಾರೆ. ಒಂದು ಕಡೆ ತೆಂಗಿನ ತೋಟಗಳು ಒಣಗಿವೆ. ಹೀಗಾಗಿ ತೋಟಗಾರಿಕೆ ನೆರವಿಗೆ ಬಜೆಟ್ನಲ್ಲಿ ಆದ್ಯತೆ ಸಿಗುತ್ತೆ ಎಂದು ನಂಬಿದ್ದೆವು. ಆದರೆ ಈಗ ಹುಸಿಯಾಗಿದೆ.
-ಬಿ.ಸಿ.ನಾಗೇಶ್,
ಮಾಜಿ ಶಾಸಕ
ಚೇತೋಹಾರಿ ಬಜೆಟ್...
ಬಜೆಟ್ ಚೇತೋಹಾರಿಯಾಗಿದೆ. ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಶೋಷಿತರ ಪರವಾದ ಬಜೆಟ್ ಅನ್ನು ಸಿದ್ದರಾಮಯ್ಯನವರು ನೀಡಿದ್ದಾರೆ. ಎಲ್ಲ ರಂಗಕ್ಕೂ ಆದ್ಯತೆ ನೀಡಿರುವ ಮುಖ್ಯಮಂತ್ರಿ ಕ್ರಾಂತಿಕಾರಿ ಬಜೆಟ್ ಮಂಡಿಸಿದ್ದಾರೆ.
- ಮೋಹನಕುಮಾರ್,
ಸ್ವಯಂ ಉದ್ಯೋಗಿ
ಎಲ್ಲ ವರ್ಗಗಳಿಗೂ ಆದ್ಯತೆ...
ತುಮಕೂರು ಮಹಾನಗರಪಾಲಿಕೆಯಾಗಿರುವುದು ಸಂತೋಷದ ವಿಷಯ. ಸಿಎಂ ರೈತ ಪರ ಹಾಗೂ ಜನಪರ ಬಜೆಟ್ ಅನ್ನು ಮಂಡಿಸಿದ್ದಾರೆ. ಎಲ್ಲ ವರ್ಗಗಳಿಗೂ ಆದ್ಯತೆ ನೀಡಿದ್ದು ಅಭಿನಂದನಾರ್ಹ ಕೆಲಸವಾಗಿದೆ.
- ಪಟೇಲ್ ನಾಗರಾಜರಾವ್,
ನಗರಸಭಾ ಸದಸ್ಯ
ಶುದ್ಧ ನೀರಿಗೆ ಒತ್ತು ಸ್ವಾಗತಾರ್ಹ...
ಶುದ್ಧ ಕುಡಿಯುವ ನೀರಿನ ಯೋಜನೆಗೆ ಒತ್ತು ನೀಡಿರುವುದು ಖುಷಿಯ ವಿಷಯ. ಎತ್ತಿನಹೊಳೆ ಯೋಜನೆಗೆ ಒತ್ತು ಕೊಟ್ಟಿರುವುದು ಒಳ್ಳೆಯದು. ಆದರೆ, ರೈತರ ಹಿತವನ್ನು ಮತ್ತಷ್ಟು ಕಾಪಾಡಬೇಕಿತ್ತು.
- ಸಾ.ಚಿ. ರಾಜಕುಮಾರ್,
ವಕೀಲರು
ಆಶಾದಾಯಕ ಬಜೆಟ್...
ಶುದ್ಧ ಕುಡಿಯುವ ನೀರಿನ ಯೋಜನೆಗೆ ಒತ್ತು ನೀಡಿರುವುದು ಖುಷಿಯ ವಿಷಯ. ಎತ್ತಿನಹೊಳೆ ಯೋಜನೆಗೆ ಒತ್ತು ಕೊಟ್ಟಿರುವುದು ಒಳ್ಳೆಯದು. ಆದರೆ, ರೈತರ ಹಿತವನ್ನು ಮತ್ತಷ್ಟು ಕಾಪಾಡಬೇಕಿತ್ತು.
- ಎನ್.ಆರ್. ಸ್ವಾಮಿ,
ರಿಯಲ್ ಎಸ್ಟೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

