ತುಮಕೂರು

ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸಿ

Published On :

ಕ.ಪ್ರ. ವಾರ್ತೆ   ತುಮಕೂರು   ಜು.16
ಮರಳು ಸಾಗಾಣಿಕೆಗೆ ಅವಕಾಶ ನೀಡಿ, ಕಟ್ಟಡ ಕಾರ್ಮಿಕರ ಜೀವನೋಪಾಯಕ್ಕೆ ಅವಕಾಶ ಕಲ್ಪಿಸಿ ಎಂದು ತುಮಕೂರು ಜಿಲ್ಲಾ ಕಟ್ಟಡ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕರ್ಣಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಮರಳು ಸಾಗಣೆ ನಿಷೇಧಿಸುವುದರಿಂದ ಕಟ್ಟಡ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಕಟ್ಟಡ ಕಾರ್ಮಿಕರು ಕೆಲಸವಿಲ್ಲದೇ ಜೀವನೋಪಾಯಕ್ಕೆ ಪರದಾಡುವಂತಾಗಿದೆ. ಯಾವುದೇ ಕಟ್ಟಡ ನಿರ್ಮಾಣಕ್ಕೆ ಮರಳು ಅತ್ಯಗತ್ಯ. ಯಾವುದೇ ನಿರ್ಮಾಣ ಕಾರ್ಯಕ್ಕೆ ಆರಂಭದಿಂದ ಅಂತ್ಯದವರೆಗೂ ಮರಳು ಅತ್ಯಗತ್ಯ. ಮರಳು ನಿಷೇಧದಿಂದ ಕಟ್ಟಡ ಕಾರ್ಮಿಕರ ಭವಿಷ್ಯ ಅತಂತ್ರದತ್ತ ಸಾಗಿದೆ ಎಂದರು. ಅಷ್ಟೇ ಅಲ್ಲದೆ, ಕಟ್ಟಡಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸುವ ಎಲೆಕ್ಟ್ರೀಷಿಯನ್ಗಳು, ಜಲ್ಲಿ, ಇಟ್ಟಿಗೆ, ಪೈಂಟಿಂಗ್ಸ್, ಟೈಲ್ಸ್, ಕಬ್ಬಿಣ ಮತ್ತು ಮರಗೆಲಸದವರಿಗೆ ಕೆಲಸವಿಲ್ಲದೇ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ ಅಕ್ರಮ ಮರಳು ಸಾಗಾಣಿಕೆಗೆ ನಿಷೇಧ ಹೇರಿ, ಸಕ್ರಮ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ತುಮಕೂರು ಜಿಲ್ಲಾ ಕಟ್ಟಡ ಕಾರ್ಮಿಕರ ಒಕ್ಕೂಟ ಆರಂಭಗೊಂಡು ಒಂದು ವರ್ಷ ಕಳೆದಿದೆ. ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಕಟ್ಟಡ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರನ್ನೇ ನಂಬಿಕೊಂಡು ಕುಟುಂಬದವರು ಸುಮಾರು 5 ಲಕ್ಷ ಮಂದಿಯಿದ್ದಾರೆ. ಇದೆಲ್ಲವನ್ನೂ ಜಿಲ್ಲಾಡಳಿತ ಮನಗಂಡು, ಕೂಡಲೇ ಮರಳು ಸಾಗಾಣಿಕೆಗೆ ಅನುಮತಿ ನೀಡಬೇಕು. ಅನಂತರ ಮರಳು ಸಾಗಾಣಿಕೆಗೆ ಸಮಗ್ರ ನೀತಿ ರೂಪಿಸಿಕೊಂಡು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಕರ್ಣಸ್ವಾಮಿ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಹನುಮಯ್ಯ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆರ್. ಆನಂದ್,  ಖಜಾಂಚಿ ಕೆ. ಯೋಗೀಶ್, ಮಂಜುನಾಥ್, ಜಗದೀಶ್,  ರಾಘವೇಂದ್ರ ಇತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.