ಪೂರೈಕೆ ಲೋಪ: ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಡಿಸಿ ಸೂಚನೆ
ಹಾಸನ: ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ವಿತರಣಾ ವ್ಯವಸ್ಥೆಯಲ್ಲಿ ಹಲವು ಲೋಪಗಳಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ವಾರದೊಳಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಪ್ಪುಗಳು ಮರುಕಳಿಸದಂತೆ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಗ್ಯಾಸ್ ಏಜೆನ್ಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಿಲಿಂಡರ್ ವಿತರಣೆ ಯೋಜನೆ ಕುರಿತು ಪರಾಮರ್ಶೆ ಸಭೆ ನಡೆಸಿದ ಅವರು ನಿಯಮಾವಳಿ ಉಲ್ಲಂಘನೆ ಮುಂದುವರಿಸಿದಲ್ಲಿ ಏಜೆನ್ಸಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಅಂಗನವಾಡಿ, ವಿದ್ಯಾರ್ಥಿ ನಿಲಯಗಳು ಮತ್ತು ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳಾಗಿದ್ದು, ಅದಕ್ಕಾಗಿ ಅಗತ್ಯವಿರುವ ಹೊಸ ಗ್ಯಾಸ್ ಸಂಪರ್ಕ ಒಂದು ವಾರದೊಳಗೆ ನೀಡಬೇಕು ಮತ್ತು ಮಾಸಿಕ ಬೇಡಿಕೆಗೆ ಅನುಸಾರ ವಿಳಂಬವಿಲ್ಲದಂತೆ ಆದ್ಯತೆ ಮೇಲೆ ಸಿಲಿಂಡರ್ಗಳನ್ನು ಪೂರೈಸಬೇಕು ಇದಕ್ಕೆ ಏಜೆನ್ಸಿಗಳು ಯಾವುದೇ ಸಬೂಬುಗಳನ್ನು ಹೇಳಿ ಹೊಣೆಗಾರಿಕೆಯಿಂದ (ಗ್ಯಾಸ್ ಕಂಪನಿಗಳು, ಏಜೆನ್ಸಿಗಳು) ಜಾರಿಕೊಳ್ಳುವಂತಿಲ್ಲ ಎಂದು ತಿಳಿಸಿದರು.
ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಅಧಿಕಾರಿಗಳು ತಾವು ಅನುಮತಿ ನೀಡಿರುವ ಏಜೆನ್ಸಿಗಳ ವಹಿವಾಟುಗಳ ಬಗ್ಗೆ ಕನಿಷ್ಠ 2 ತಿಂಗಳಿಗೊಮ್ಮೆ ಲೆಕ್ಕ ಪರಿಶೋಧನೆ ಸಿಲಿಂಡರ್ ತಪಾಸಣೆ, ಗ್ರಾಹಕರ ಮನೆಗಳಲ್ಲಿ ಸುರಕ್ಷತಾ ತಪಾಸಣೆ ಹಾಗೂ ಸಾರ್ವಜನಿಕರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಗ್ರಾಹಕರು ಬುಕಿಂಗ್ ಅಥವಾ ಸಿಲಿಂಡರ್ ಪಡೆಯಲು ಸರದಿ ಸಾಲುಗಳಲ್ಲಿ ನಿಲ್ಲುವಂತೆ ಮಾಡಬಾರದು ಮನೆಯಿಂದಲೇ ಬುಕಿಂಗ್ ಮಾಡಿ ಮನೆಯಲ್ಲೇ ಪಡೆಯುವಂತಾಗಬೇಕು ಯಾರೂ ಸಹ ಗ್ಯಾಸ್ ಏಜೆನ್ಸಿಗಳಿಗೆ ಬಂದು ಪಡೆಯುವಂತೆ ಒತ್ತಾಯಿಸುವಂತಿಲ್ಲ. ಜನವಸತಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಸಿಲಿಂಡರ್ಗಳನ್ನು ದಾಸ್ತಾನು ಮಾಡುವಂತಿಲ್ಲ ಮತ್ತು ಏಜೆನ್ಸಿಗಳು ಅನಧಿಕೃತವಾಗಿ ಸಬ್ ಏಜೆನ್ಸಿಗಳನ್ನು ನೇಮಿಸಿಕೊಂಡು ವಹಿವಾಟು ನಡೆಸುವಂತಿಲ್ಲ. ಈ ಬಗ್ಗೆ ಗ್ಯಾಸ್ ಏಜೆನ್ಸಿಗಳು, ಮಾಲೀಕರು ಹಾಗೂ ಕಂಪನಿಗಳ ಮುಖ್ಯಸ್ಥರು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಹಾಜರಿದ್ದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಉಪವ್ಯವಸ್ಥಾಪಕ ಬೇಬಿಯವರು ಈಗಾಗಲೇ ಕಂಪನಿ ತಮ್ಮ ಎಲ್ಲಾ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ನಿಯಮಾವಳಿಗಳ ಬಗ್ಗೆ ತಿಳಿವಳಿಕೆ ನೀಡಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ ಮತ್ತು ನಿರಂತರ ಮೇಲ್ವಿಚಾರಣೆ ಲೆಕ್ಕ ಪರಿಶೋಧನೆ, ಸಾರ್ವಜನಿಕ ಜಾಗೃತಿ, ಸುರಕ್ಷತಾ ತಪಾಸಣೆ ಕ್ರಮಗಳನ್ನು ಮಾಡುತ್ತಿದೆ ಎಂದರು.ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ಜಗದೀಶ್, ಶ್ರೀವಿದ್ಯಾ ತಹಸೀಲ್ದಾರರು, ಅಧಿಕಾರಿಗಳು ಏಜೆನ್ಸಿಗಳ ಮಾಲೀಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

