ಗುಬ್ಬಿ ಪಿಯು ಕಾಲೇಜು ಅಭಿವೃದ್ಧಿಗೆ ಅನುದಾನ: ಬಿ.ಜಯಶ್ರೀ ಭರವಸೆ
ಗುಬ್ಬಿ: ವಿದ್ಯಾರ್ಥಿಗಳ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ ಹಾಗೂ ಕೊಠಡಿಗಳ ದುರಸ್ತಿ ಕಾರ್ಯ ನಡೆಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುವಂತೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಉಪನ್ಯಾಸಕರಿಗೆ ಮನವಿ ಮಾಡಿದರು. ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಗೆ ಭೇಟಿ ನೀಡಿದ ಅವರು ಒಂದು ಸಾವಿರ ಸಂಖ್ಯೆ ವಿದ್ಯಾರ್ಥಿಗಳನ್ನು ಹೊಂದಿರುವ ಈ ಕಾಲೇಜಿಗೆ ಕೊರತೆ ಇರುವ 6 ಕೊಠಡಿಗಳ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಶಾಲಾ ಕೊಠಡಿ, ಬಿಸಿಯೂಟ ಕೊಠಡಿ ಸೇರಿದಂತೆ ಪ್ರೌಢಶಾಲಾ ಮತ್ತು ಕಾಲೇಜಿನ ಎಲ್ಲಾ ವಿಭಾಗವನ್ನು ಪರಿಶೀಲಿಸಿದ ಅವರು ಸೋಲಾರ್ ದೀಪ ಅಳವಡಿಕೆ ಮಾಡುವ ಭರವಸೆ ನೀಡಿದರು. ಕೂಡಲೇ ನಿರ್ಮಿತ ಕೇಂದ್ರದ ಸಹಾಯಕ ನಿರ್ದೇಶಕ ರಾಜಶೇಖರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಅಗತ್ಯ ಮೂಲಭೂತ ಸವಲತ್ತುಗಳೊಂದಿಗೆ ಕೊಠಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಮತ್ತು ಅಂದಾಜುಪಟ್ಟಿ ತಯಾರಿಸುವಂತೆ ಸೂಚಿಸಿದರು. ಪ್ರಾಚಾರ್ಯ ಕೆ.ಎಸ್.ಸಿದ್ದಲಿಂಗಪ್ಪ, ಉಪ ಪ್ರಾಚಾರ್ಯರಾದ ಪುಟ್ಟಮ್ಮ, ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಗುಬ್ಬಿ, ಚನ್ನಬಸವೇಶ್ವರ ಯುವಕ ಸಂಘದ ಕಾರ್ಯದರ್ಶಿ ಸಿ.ಆರ್.ಶಂಕರ್ಕುಮಾರ್ ಇದ್ದರು.
ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಶಿರಾ: ಇಂದಿನ ಮಕ್ಕಳಲ್ಲಿ ತಮ್ಮ ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳುವ ಕೊರತೆ ಎದ್ದು ಕಾಣುತ್ತಿದ್ದು ಈ ನಿಟ್ಟಿನಲ್ಲಿ ಪೋಷಕರು ಅಂತಹ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಪಟ್ಟಣದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಪಿ.ಎಚ್.ಮಹೇಂದ್ರಪ್ಪ ತಿಳಿಸಿದರು. ಅವರು ತಾಲೂಕಿನ ಪಟ್ಟನಾಯಕನಹಳ್ಳಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಲೇಜಿನ ಪ್ರಾಚಾರ್ಯ ಬಿ.ಪಿ.ಪಾಂಡುರಂಗಪ್ಪ, ಉಪ ಪ್ರಾಚಾರ್ಯ ಈಶ್ವರಯ್ಯ, ಸಿ.ಡಿ.ಎಂ.ಸಿ. ಉಪಾಧ್ಯಕ್ಷ ಎನ್.ಸಿ.ದೊಡ್ಡಯ್ಯ, ಎ.ಕಾಂತರಾಜು, ಡಿ.ಎನ್.ಪರಮೇಶ ಗೌಡ ಮತ್ತಿತರರು ಹಾಜರಿದ್ದರು.
ತುಮಕೂರಿಗೆ ಮತ್ತೆರಡು ಟ್ರಾಫಿಕ್ ಲೈಟ್
ತುಮಕೂರು: ಈಗಾಗಲೇ ಮಹಾನಗರಪಾಲಿಕೆಯಾಗಿ ಘೋಷಣೆಯಾಗಿರುವ ತುಮಕೂರು ನಗರಕ್ಕೆ ಮತ್ತೆರಡು ಟ್ರಾಫಿಕ್ ಸಿಗ್ನಲ್ ಲೈಟ್ಗಳು ಬರಲಿವೆ. ಇನ್ನು ಒಂದು ತಿಂಗಳೊಳಗಾಗಿ ಭದ್ರಮ್ಮ ಸರ್ಕಲ್ ಹಾಗೂ ಕೋಟೆ ಆಂಜನೇಯ ಸ್ವಾಮಿ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗುವುದು. ತುಮಕೂರು ನಗರ ದಿನೇ ದಿನೆ ಬೆಳೆಯುತ್ತಿದ್ದು ವಾಹನ ದಟ್ಟಣೆ ಹೆಚ್ಚುತ್ತಲೇ ಇದೆ. ತುಮಕೂರಿನ ಭದ್ರಮ್ಮ ಛತ್ರದ ಬಳಿ ಸಾವಿರಾರು ವಾಹನಗಳ ಸಂಚಾರವಿದೆ. ಹಾಗೆಯೇ ಶಿರಾ ಹಾಗೂ ಮಧುಗಿರಿ ರಸ್ತೆ ಹಾದು ಹೋಗುವ ಕೋಟೆ ಆಂಜನೇಯ ಸ್ವಾಮಿ ವೃತ್ತದಲ್ಲೂ ವಾಹನ ದಟ್ಟಣೆ ಹೆಚ್ಚುತ್ತಲೇ ಇದೆ. ಹೀಗಾಗಿ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇತ್ತು. ಇದನ್ನು ಮನಗಂಡ ಜಿಲ್ಲಾ ಎಸ್ಪಿ ರಮಣಗುಪ್ತ ಅವರು ತುಮಕೂರು ನಗರಕ್ಕೆ ಎರಡು ಟ್ರಾಫಿಕ್ ಸಿಗ್ನಲ್ ಲೈಟ್ಗಳನ್ನು ಅಳವಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಮಾರಣಾಂತಿಕ ಹಲ್ಲೆ, ಬಂಧನ
ಮಧುಗಿರಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಜಾತಿ ನಿಂದನೆ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಪಟ್ಟಣದ ಕೆ.ಆರ್. ಬಡಾವಣೆಯಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಪಟ್ಟಣದ ಕೆ.ಆರ್.ಬಡಾವಣೆಯ ವಾಸಿ ಚಿನ್ನಸ್ವಾಮಿ ಅಲಿಯಾಸ್ ನಲ್ಲ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಸೇರಿಸಲಾಗಿದೆ. ಗಾಯಾಳು ಪತ್ನಿ ಮಮತಾ ಎಂಬುವರು ಪ್ರಸನ್ನ, ಪವನಕುಮಾರ್, ಚಂದ್ರಶೇಖರ್, ಶಿವಕುಮಾರ್ ಎಂಬುವರು ನನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಧುಗಿರಿ ಠಾಣೆಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

