ತುಮಕೂರು

ಮೊರಾರ್ಜಿ ಹೊರಗುತ್ತಿಗೆ ಶಿಕ್ಷಕರ ಮುಂದುವರಿಸಲು ಆಗ್ರಹ

Published On :

ಕ.ಪ್ರ.ವಾರ್ತೆ ಪಾವಗಡ ಜು.27
ಹೈಕೋರ್ಟ್ ಆದೇಶದಂತೆ ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ಆಯ್ಕೆಯಾದ 800 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಅವರಂತೆಯೇ ತಡವಾಗಿ ನ್ಯಾಯಾಲಯದ ಆದೇಶ ಪಡೆದ ಶಿಕ್ಷಕರನ್ನು ಸಹ ಮುಂದುವರಿಸಿ ಎಂದು ಮೊರಾರ್ಜಿ ವಸತಿ ಶಾಲೆಯ ವಂಚಿತ ಶಿಕ್ಷಕರು ರಾಜ್ಯ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಶನಿವಾರ ಮೊರಾರ್ಜಿ ವಸತಿ ಶಾಲೆಯ ನೊಂದ ಶಿಕ್ಷಕರ ಪರ ನೇತೃತ್ವ ವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕಿನ ಚನ್ನಸಾಗರ ಮಲ್ಲೇಶ್, ರಾಜ್ಯ ಸರ್ಕಾರ 1996, 97ರಲ್ಲಿ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಮೊರಾರ್ಜಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿಯೊಂದಿಗೆ ರಾಜ್ಯದ ಆನೇಕ ಕಡೆ ವಸತಿ ಶಾಲೆಗಳನ್ನು ತೆರೆಯಲಾಯಿತು. ಈ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಹಿನ್ನೆಲೆಯಲ್ಲಿ ಹೊರಸಂಪನ್ಮೂಲ ಹಾಗೂ ಹೊರಗುತ್ತಿಗೆ ಆಧಾರದಡಿಯಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದು, ವಸತಿ ಶಾಲೆಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಬೇರ್ಪಡಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು(ಕೆಆರ್‌ಇಐಎಸ್) ಎಂಬ ಸಂಸ್ಥೆ ತೆರೆದು ಆ ಸಂಸ್ಥೆಗೆ ನಿಯೋಜಿಸಿತು. ತದನಂತರ 2011, 12ನೇ ಸಾಲಿನಲ್ಲಿ ಏಕಾಏಕಿ ಸದರಿ ಶಾಲೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಹೊಸ ನೇಮಕಾತಿಯನ್ನು ವಸತಿ ಶಾಲೆಗಳಿಗೆ ನಿಯೋಜಿಸಿದ ಕಾರಣ ಹೊರಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಮಂದಿ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರು ಬೀದಿ ಪಾಲಾದರು.
ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುವ ಸುಮಾರು 800ಮಂದಿ ಶಿಕ್ಷಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಇವರ ಪರ ತೀರ್ಪು ನೀಡಿ ವಸತಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಿಗೆ ಆದೇಶ ಜಾರಿ ಮಾಡಿದ ಪ್ರಯುಕ್ತ 800 ಮಂದಿ ಶಿಕ್ಷಕರು ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದಡಿ ವಂಚಿತರಾಗಿ ತಡವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಸುಮಾರು 1ಸಾವಿರ ಮಂದಿ ಶಿಕ್ಷಕರನ್ನು ಮುಂದುವರಿಸಲು ನ್ಯಾಯಾಲಯ ಆದೇಶ ನೀಡಿದರೂ ರಾಜ್ಯ ವಸತಿ ಶಿಕ್ಷಣ ಸಂಸ್ಥೆ ನಿರ್ದೇಶಕರು ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ನೊಂದ ಶಿಕ್ಷಕರು ನಿರ್ದೇಶಕರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಾವಾಗಿಲ್ಲ ಎಂದ ಅವರು, ವಸತಿ ಶಾಲೆಗಳ ನೊಂದ ಸಾವಿರಾರು ಶಿಕ್ಷಕರು ಜು.29ರಂದು ಬೆಂಗಳೂರಿಗೆ ನಿಯೋಗ ತೆರಳಿ ವಸತಿ ಶಿಕ್ಷಣ ಸಂಸ್ಥೆಯ ಮುಂದೆ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.