ತುಮಕೂರು

ಕುರುಬೂರು ಕೃಷಿ ಕಾಲೇಜಿಗೆ ಸಿ.ಬೈರೇಗೌಡರ ಹೆಸರಿಡಿ

Published On :

ಕ.ಪ್ರ. ವಾರ್ತೆ,ಕೋಲಾರ,ಜು.29
ಮಾಜಿ ಸಚಿವ ದಿ. ಸಿ. ಬೈರೇಗೌಡರು ನಾಡಿನ ಧೀಮಂತ ರಾಜಕಾರಣಿಯಾಗಿ, ಉತ್ತಮ ಆಡಳಿತಗಾರರಾಗಿ ಅಪಾರ ಕೊಡುಗೆ ನೀಡಿರುವುದರಿಂದ ಇವರ ಹೆಸರು ಚಿರಸ್ಥಾಯಿಯಾಗಿ ಉಳಿಯುವ ಕಾರ್ಯಗಳನ್ನು ಸರ್ಕಾರ ಮಾಡಬೇಕೆಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಅವರು ಸೋಮವಾರ ತಾಲೂಕಿನ ತೊರದೇವಂಡಹಳ್ಳಿಯಲ್ಲಿರುವ ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿ.ಬೈರೇಗೌಡ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್‌ವತಿಯಿಂದ ಬೈರೇಗೌಡರ 10ನೇ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಸಿ.ಬೈರೇಗೌಡರು ಕೋಲಾರ ಜಿಲ್ಲೆಯ ಕೀರ್ತಿ ಹೆಚ್ಚಿಸುವ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಕೃಷಿ ಸಚಿವರಾಗಿದ್ದಾಗ ರೈತರಿಗೆ ಅವರು ನೀಡಿರುವ ಸೇವೆ ಅವಿಸ್ಮರಣೀಯ. ಚಿಂತಾಮಣಿ ತಾಲೂಕಿನ ಕುರುಬೂರಿನಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಆಗಿದ್ದು ಸಿ.ಬೈರೇಗೌಡರ ಕಾಲದಲ್ಲಿ. ಅದೇ ರೀತಿ ರೇಷ್ಮೆ ಸಂಶೋಧನಾ ಕೇಂದ್ರ ಸಹ ಆಗಿದೆ.
ಈ ಹಿಂದಿನ ಸರ್ಕಾರಗಳೇ ಬೈರೇಗೌಡರ ಸೇವೆ ಪರಿಗಣಿಸಿ ಕೃಷಿ ಮಹಾವಿದ್ಯಾಲಯಕ್ಕೆ ಬೈರೇಗೌಡರ ಹೆಸರು ಇಡಬೇಕಾಗಿತ್ತು. ಈಗ ಬೈರೇಗೌಡರ ಮಗ ಕೃಷ್ಣ ಬೈರೇಗೌಡರೇ ಕೃಷಿ ಮಂತ್ರಿ ಆಗಿರುವುದರಿಂದ ಜನತೆಯ ಅಭಿಪ್ರಾಯ, ಒತ್ತಾಸೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕೃಷಿ ಕಾಲೇಜಿಗೆ ಬೈರೇಗೌಡರ ಹೆಸರು ನಾಮಕರಣ ಮಾಡಿಸಬೇಕೆಂದು ಸಲಹೆ ನೀಡಿದರು.
ಸರ್ಕಾರ ಸಿ.ಬೈರೇಗೌಡರ ಮಗನೆಂಬ ಕಾರಣಕ್ಕೆ ಕೃಷ್ಣಬೈರೇಗೌಡರಿಗೆ ಕೃಷಿ ಮಂತ್ರಿ ಸ್ಥಾನ ನೀಡಿದರೆ ಸಾಲದು. ಬೈರೇಗೌಡರ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸಗಳನ್ನು ಸಹ ಮಾಡಿದಾಗ ಮಾತ್ರ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಕೃಷಿ ಪ್ರಧಾನ ಕೋಲಾರ ಜಿಲ್ಲೆಯಲ್ಲಿ ಈಗ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಜನತೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಯಾವುದೇ ಒಬ್ಬ ವ್ಯಕ್ತಿ ಗೌರವದಿಂದ ಜೀವನ ನಡೆಸಬೇಕಾದರೆ ವಿದ್ಯೆ ಅತಿ ಮುಖ್ಯವೆಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಸಚಿವ ಕೃಷ್ಣಬೈರೇಗೌಡರು, ಕೋಲಾರ ತಾಲೂಕಿನ ವೇಮಗಲ್ ಸಮೀಪದ ಸೀತಿ ಗ್ರಾಮದಲ್ಲಿ ಐಟಿಐ ಮತ್ತು ಡಿಪ್ಲೊಮಾ ಕಾಲೇಜು ಸ್ಥಾಪನೆ ಮಾಡುವುದು ಬೈರೇಗೌಡರ ಕನಸಾಗಿತ್ತು. ಅದಕ್ಕಾಗಿ 40 ಎಕರೆ ಭೂಮಿಯನ್ನು ಸಹ ನೀಡಿದ್ದರು. ಆದರೆ ಯೋಜನೆ ಜಾರಿಗೆ ತರಲಾಗಿಲ್ಲವೆಂದು ವಿಷಾದಿಸಿದರು.
ತಂದೆಯವರ ಮೌಲ್ಯಗಳನ್ನು ಅಳವಡಿಸಿಕೊಂಡು ಸಿಕ್ಕಿರುವ ಪದವಿಯಿಂದ ರೈತರಿಗೆ, ಬಡ ಜನತೆಗೆ ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಬೈರೇಗೌಡರ ಹೆಸರಿನಲ್ಲಿ ಪ್ರಾರಂಭಿಸಿರುವ ತಾಂತ್ರಿಕ ಮಹಾವಿದ್ಯಾಲಯ ಕಡಿಮೆ ಅವಧಿಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವುದು ಸಂತಸ ಉಂಟು ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಬಿಇಸಿಟಿ ಅಧ್ಯಕ್ಷ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಬೈರೇಗೌಡರನ್ನು ನನ್ನ ರಾಜಕೀಯ ಗುರು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ತಾವು ಕೃಷಿ ಸಚಿವರಾಗಿದ್ದಾಗ ಪ್ರಗತಿಪರ ರೈತನಿಗೆ ಕೃಷಿ ಪಂಡಿತ್ ಪ್ರಶಸ್ತಿ ಘೋಷಣೆ ಮಾಡಿದ್ದು, ಇದಕ್ಕೆ ಸಿ.ಬೈರೇಗೌಡರ ಹೆಸರಿಡುವುದಕ್ಕೆ ಕೃಷಿ ಸಚಿವ ಕೃಷ್ಣಬೈರೇಗೌಡರು ಮನಸು ಮಾಡಬೇಕೆಂದರು.
ತಾವು ಅಧ್ಯಕ್ಷರಾಗಿರುವ ಇಫ್ಕೋ-ಟೋಕಿಯಾ ಸಂಸ್ಥೆಯಿಂದ ಸಿಬಿಐಟಿಯಲ್ಲಿ ಸಂದರ್ಶನ ನಡೆಸಿ ಈಗಾಗಲೇ ಮೂವರಿಗೆ ಉದ್ಯೋಗ ಸಿಕ್ಕಿದೆ. ಮುಂದಿನ ದಿನಗಳಗಲ್ಲಿ ಇನ್ನಷ್ಟು ಯೋಜನೆಗಳನ್ನು ತಂದು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಾಗಿ ತಿಳಿಸಿದರು. ಸಿಬಿಐಟಿಯ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ, ಖಜಾಂಚಿ ಡಾ.ಎ.ಪ್ರಭಾಕರ್ ರೆಡ್ಡಿ ಇದ್ದರು.

ಮಳೆ ಕೊರತೆ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಿದ್ಧ
ಕನ್ನಡಪ್ರಭವಾರ್ತೆ,ಕೋಲಾರ,ಜು.29

ರಾಜ್ಯದ ಬಹುತೇಕ ಕಡೆ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳು ಭರ್ತಿಯಾಗಿವೆ. 40 ತಾಲೂಕುಗಳಲ್ಲಿ ಮಳೆಯ ಕೊರತೆ ಕಂಡು ಬಂದಿದ್ದು ಸರ್ಕಾರ ಪರಿಸ್ಥಿತಿ ನಿಭಾಯಿಸಲು ಸಿದ್ಧವಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಅವರು ತಾಲೂಕಿನ ತೊರದೇವಂಡಹಳ್ಳಿಯಲ್ಲಿನ ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿ.ಬೈರೇಗೌಡ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್‌ವತಿಯಿಂದ ದಿ. ಸಿ.ಬೈರೇಗೌಡರ 10ನೇ ಪುಣ್ಯ ತಿಥಿಯ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೆಲವು ಕಡೆ ಮುಂಗಾರು ಕೈಕೊಟ್ಟರು ಸಹ ಹಿಂಗಾರು ಮಳೆಯಾಗುವುದರಿಂದ ಜನತೆ ಆತಂಕಪಡಬೇಕಾಗಿಲ್ಲ. ಮಳೆಯ ಕೊರತೆ ಇರುವ 40 ತಾಲೂಕುಗಳಲ್ಲಿ ಶೀಘ್ರವೇ ಉತ್ತಮ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯು ಸೂಚನೆ ನೀಡಿದೆ. ಒಂದು ವೇಳೆ ಮಳೆಯಾಗದೆ ಬರ ಪರಿಸ್ಥಿತಿ ನಿರ್ಮಾಣವಾದಲ್ಲಿ ಸರ್ಕಾರ ಕೃಷಿ ಮತ್ತು ಕುಡಿಯುವ ನೀರಿಗೆ ಬೇಕಾದ ಎಲ್ಲ ಏರ್ಪಾಟುಗಳನ್ನು ಮಾಡಲು ತಯಾರಿದೆ ಎಂದರು.
ಮಳೆಗಾಲ ಇನ್ನೂ ನಿಂತಿಲ್ಲವಾದ್ದರಿಂದ ಹಾಗೂ 40 ತಾಲೂಕುಗಳಲ್ಲಿ ಅಷ್ಟೇನು ಗಂಭೀರ ಪರಿಸ್ಥಿತಿ ಇಲ್ಲದಿರುವುದರಿಂದ ಈಗಲೇ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡುವ ಅಗತ್ಯ ಕಂಡು ಬರುತ್ತಿಲ್ಲ. ಇನ್ನು ಸ್ವಲ್ಪ ದಿನಗಳು ಕಾದು ನೋಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆಂದು ತಿಳಿಸಿದರು.

ಮಠದ ಮೇಲೆ ಐಟಿ ದಾಳಿ; ಪ್ರತಿಭಟನೆ ಏಕೆ?
ಕೋಲಾರ:
ಆದಾಯ ತೆರಿಗೆ ಇಲಾಖೆಯವರು ಮಠಗಳಿಗೆ ಸೇರಿದ ವಿದ್ಯಾಸಂಸ್ಥೆಗಳ ಮೇಲೆ ದಾಳಿ ಮಾಡಿರುವ ಸಂಬಂಧ ಆದಿಚುಂಚನಗಿರಿ ಮಠದ ಸ್ವಾಮೀಜಿಗಳೇ ಸ್ಪಷ್ಟನೆ ನೀಡಿರುವುದರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಅಗತ್ಯವಿಲ್ಲವೆಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಿಸಿದರು.
ಅವರು ಸೋಮವಾರ ನಗರದ ಹೊರವಲಯದಲ್ಲಿನ ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿವಂಗತ ಸಿ.ಬೈರೇಗೌಡರ 10ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದುರ. ಆದಾಯ ತೆರಿಗೆ ಅಧಿಕಾರಿಗಳು ಯಾವ ಕಾರಣಕ್ಕೆ ದಾಳಿ ಮಾಡಿದರು ಎಂಬುದು ನನಗೆ ಗೊತ್ತಿಲ್ಲ, ಮಾಹಿತಿ ಬೇಕಾದರೆ ಇಲಾಖೆಯ ಅಧಿಕಾರಿಗಳನ್ನು ಕೇಳುವುದು ಸೂಕ್ತ. ಆದರೆ ದಾಳಿಯ ನಂತರದ ಟೀಕೆ-ಟಿಪ್ಪಣಿ ಹಾಗೂ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸ್ವಾಮೀಜಿಯವರೇ ಸ್ಪಷ್ಟನೆ ನೀಡಿರುವುದರಿಂದ ಪ್ರತಿಭಟನೆಗಳು ಮುಂದವರಿಸುವುದು ಸರಿಯಲ್ಲವೆಂದರು.
ವಿಧಾನಸೌಧದ 3ನೇ ಮಹಡಿಯಲ್ಲಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿದ್ದ ದೇವೇಗೌಡರ ಭಾವಚಿತ್ರವನ್ನು ತೆರವುಗೊಳಿಸಿದ ನಂತರ ಬಂದ ಟೀಕೆಗಳಿಂದ ಎಚ್ಚೆತ್ತ ಅಧಿಕಾರಿಗಳು ಮತ್ತೆ ದೇವೇಗೌಡರ ಭಾವಚಿತ್ರವನ್ನು ಸಿಎಂ ಕಚೇರಿಯಲ್ಲಿ ಹಾಕಿದ್ದಾರೆ. ವಿಧಾನಸಭೆಯ ಆಧಿವೇಶನದಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಹೇಳಿಕೆ ನೀಡಿರುವುದರಿಂದ ಅದು ಮುಗಿದ ಅಧ್ಯಾಯವೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.