ತುಮಕೂರು

ಬಿಪಿಎಲ್ ಫಲಾನುಭವಿಗಳಿಗೆ ಅನ್ಯಾಯ ಬೇಡ

Published On :

ಕ.ಪ್ರ. ವಾರ್ತೆ   ತುಮಕೂರು   ಜೂ. 1
ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಿರುವಂತಹ ನೈಜ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು.  ಅರ್ಹ ಫಲಾನುಭವಿಗಳಿಗೆ ಬಿ.ಪಿ.ಎಲ್. ಕಾರ್ಡ್ ದೊರಕುವ ಹಾಗೆ ನೋಡಿಕೊಳ್ಳುವ ಹೊಣೆ ಆಹಾರ ಇಲಾಖೆಯ ಅಧಿಕಾರಿಗಳ ಮೇಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಡಿತರ ಚೀಟಿ ವಿತರಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇಡೀ ರಾಜ್ಯದ ಜನತೆಯ ಗಮನ ಪಡಿತರ ಚೀಟಿ ವಿತರಣೆ ವ್ಯವಸ್ಥೆಯ ಮೇಲಿದೆ.  ಆಹಾರ ಇಲಾಖೆಯ ಮುಂದೆ ದೊಡ್ಡ ಸವಾಲಿದೆ.  ಇಲಾಖೆಯ ಅಧಿಕಾರಿಗಳ ಸಹಕಾರ ಮನೋಭಾವ, ಕಾಳಜಿ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಕಾರ್ಯ ಮುಂದಿನ ದಿನಗಳಲ್ಲಿ ಸುಗಮವಾಗಿ ಸಾಗಲಿದೆ ಎಂದರು.
ಬಿ.ಪಿ.ಎಲ್. ಫಲಾನುಭವಿಗಳಿಗೆ  ಪಡಿತರ ಚೀಟಿ ವಿತರಿಸುವ ಸಂದರ್ಭ ನೀತಿ ನಿಯಮ  ಪಾಲಿಸುವ ನೆಪದಲ್ಲಿ ಅಲೆದಾಡಿಸದೆ, ತ್ವರಿತವಾಗಿ ಪರಿಶೀಲಿಸಿ, ಸಕಾಲದಲ್ಲಿ ಬಡ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಿ ಬಡವರಿಗೆ ನೆರವಾಗಿ ಎಂದು ಸಚಿವರು ಈ ಸಂದರ್ಭ ಅಧಿಕಾರಿಗಳಿಗೆ ಸೂಚಿಸಿದರು.
ಸಾಕಷ್ಟು ಸುಧಾರಣೆ: ಹಲವಾರು ಹಂತಗಳಲ್ಲಿ ಆಹಾರ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯ ಕೆಲಸಗಳು ಆಗುತ್ತಿದೆ. ಪಡಿತರ ಅಂಗಡಿಗಳಲ್ಲಿ ಆಧುನಿಕ ಯಂತ್ರಗಳ ಅಳವಡಿಕೆ, ಗೋದಾಮುಗಳಲ್ಲಿ ಕಂಪ್ಯೂಟರೀಕರಣ ವ್ಯವಸ್ಥೆ, ಬಿಲ್ಲಿಂಗ್ ವ್ಯವಸ್ಥೆ ಇತ್ಯಾದಿ ಸುಧಾರಣೆಗಳು ಆಗಿದ್ದು, ಬೇರು ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಶಿರಸ್ತೇದಾರ್ ಮತ್ತು ಪುಡ್ ಇನ್ಸ್ಪೆಕ್ಟರ್ಗಳು ಪಡಿತರ ಚೀಟಿ ವಿತರಣೆ ಮತ್ತು ಪಡಿತರ ವಿತರಣೆ ಬಗ್ಗೆ ನಿಗಾವಹಿಸಬೇಕು ಎಂದರು. ಜಿಲ್ಲೆಯಲ್ಲಿ ಒಟ್ಟು 64,246 ಕಾಯಂ ಪಡಿತರ ಚೀಟಿಗಳು ವಿತರಣೆಗೆ ಸಿದ್ಧವಿದ್ದು, ಸದರಿ  ಪಡಿತರ ಚೀಟಿಗಳನ್ನು ಆಯಾ ಗ್ರಾಮಪಂಚಾಯತಿಗಳಿಗೆ  ಕಳುಹಿಸಿಕೊಡಲಾಗಿದೆ.  ಆದರೆ ಫಲಾನುಭವಿಗಳು  ಪಡಿತರ ಚೀಟಿಯನ್ನು ಪಡೆದಿರುವುದಿಲ್ಲ ಎಂಬ ಇಲಾಖೆ ಅಧಿಕಾರಿಗಳ ಮಾಹಿತಿಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಕಾಯಂ ಪಡಿತರ ಚೀಟಿ ಹೆಚ್ಚಿನ ಸಂಖ್ಯೆಯಲ್ಲಿ ವಿತರಣೆಯಾಗಬೇಕಿರುವ ಮಧುಗಿರಿ (12597 ಪಡಿತರ ಚೀಟಿಗಳು) ಮತ್ತು ತುಮಕೂರು (12837 ಪಡಿತರ ಚೀಟಿಗಳು) ತಾಲೂಕಿನ ಆಯ್ದ ಗ್ರಾಮಪಂಚಾಯತಿಗಳಿಗೆ ಭೇಟಿ ನೀಡಿ, ಪಡಿತರ ಚೀಟಿಯನ್ನು ಏಕೆ ವಿತರಿಸಲಾಗಿಲ್ಲ ಎಂಬುದರ ಕುರಿತು ಪರಿಶೀಲಿಸಿ, ನೈಜ ವರದಿಯನ್ನು ಒಂದು ವಾರದೊಳಗೆ ತಮಗೆ ಸಲ್ಲಿಸುವಂತೆ ತುಮಕೂರು ಉಪವಿಭಾಗಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಲೋಪದೋಷ ಸರಿಪಡಿಸಿ: ಆಹಾರ ಪದಾರ್ಥಗಳನ್ನು ವಿಲೇವಾರಿ ಮಾಡುವ ಸಂಸ್ಥೆಗಳ ಮೂಲಕ ಬರುವ  ಲೋಡಿನಲ್ಲಿ ಆಹಾರ ಧಾನ್ಯಗಳ ತೂಕದಲ್ಲಿ ವ್ಯತ್ಯಾಸ ಬಂದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಲಿಖಿತ ದೂರನ್ನು ಸಲ್ಲಿಸುವ ಮೂಲಕ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು.
ಅಧಿಕಾರಿಗಳ ಮಾಹಿತಿ:  ಜಿಲ್ಲೆಯ 321 ಗ್ರಾಮಪಂಚಾಯತಿಗಳ ಪೈಕಿ 86 ಪಂಚಾಯತಿಗಳಲ್ಲಿ ನೆಟ್ವರ್ಕ್ ಸೌಲಭ್ಯ ಇರುವುದಿಲ್ಲ.  ಒಂದು ಕಂಪ್ಯೂಟರ್ ಮೂಲಕ ದಿನವೊಂದಕ್ಕೆ 50 ರಿಂದ 60 ಅರ್ಜಿಗಳನ್ನು ಅಪ್ಡೇಟ್ ಮಾಡಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಪಡಿತರ ವಿತರಣೆ ವಿಳಂಬವಾಗುತ್ತಿದೆ.  ಅಲ್ಲದೆ ನುರಿತ ಕಂಪ್ಯೂಟರ್ ಆಪರೇಟರ್ಗಳ ಕೊರತೆಯೂ ಸಹ ವಿಳಂಬಕ್ಕೆ ಕಾರಣವಾಗಿದೆ.  ಒಟ್ಟಾರೆ ಸರ್ವರ್ ಸಮಸ್ಯೆ ಇರುವುದರಿಂದ ಅರ್ಜಿ  ಸ್ವೀಕರಿಸಿ, ಬಯೋವುಟ್ರಿಕ್ ಮಾಡುವ ಕಾರ್ಯ ವಿಳಂಬವಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಸಚಿವರಿಗೆ ಈ ಸಂದರ್ಭ ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ  ಮಾರ್ಚ್ 2012 ರವರೆಗೆ ಹೊಸದಾಗಿ ಪಡಿತರ ಚೀಟಿ ಕೋರಿ 1,05,567 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 51,684 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.  ಮತ್ತು 53,673 ಪಡಿತರ ಚೀಟಿಗಳನ್ನು ಮುದ್ರಿಸಲಾಗಿದೆ ಮತ್ತು 40,841 ಅರ್ಜಿದಾರರಿಗೆ ಹೊಸ ಪಡಿತರ ಚೀಟಿಗಳನ್ನು ವಿತರಿಸಲಾಗಿದ್ದು, 12,832 ಪಡಿತರ ಚೀಟಿಗಳು ವಿತರಣೆಗಾಗಿ ಬಾಕಿ ಉಳಿದಿರುತ್ತವೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ತಾತ್ಕಾಲಿಕ ಚೀಟಿ: ಜಿಲ್ಲೆಯಲ್ಲಿ 189428 ತಾತ್ಕಾಲಿಕ ಪಡಿತರ ಚೀಟಿಗಳನ್ನು ನೀಡಲಾಗಿದ್ದು, ಈ ಪೈಕಿ 112402 ತಾತ್ಕಾಲಿಕ ಪಡಿತರ ಚೀಟಿದಾರರಿಗೆ ಖಾಯಂ ಪಡಿತರ ಚೀಟಿಗಳನ್ನು ಮುದ್ರಿಸಿ ವಿತರಿಸಲಾಗಿದ್ದು, ಈ ಪೈಕಿ 64,246 ಚೀಟಿಗಳು ವಿತರಣೆಗೆ ಬಾಕಿ ಇರುತ್ತವೆ ಎಂದು ಅಧಿಕಾರಿಗಳು ವಿವರಿಸಿದರು.
ಮಾರ್ಚ್ 8 ರಿಂದ ಆನ್ ಲೈನ್ ಮೂಲಕ  ಹೊಸ ಪಡಿತರ ಚೀಟಿ ಕೋರಿ 15,862 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 11,039 ಅರ್ಜಿದಾರರು ಭಾವಚಿತ್ರ ಹಾಗೂ ಬಯೋವುಟ್ರಿಕ್ಸ್ ನೀಡಿರುತ್ತಾರೆ.  2908 ಅರ್ಜಿದಾರರು ಭಾವಚಿತ್ರ ಹಾಗೂ ಬಯೋವುಟ್ರಿಕ್ಸ್ ನೀಡಿರುವುದಿಲ್ಲ.  ಉಳಿದ 1915 ಅರ್ಜಿದಾರರು ಪರಿಚಯಸ್ಥರ ಮಾಹಿತಿಯನ್ನು ನೀಡಿದ್ದು, ಸದರಿ ಅರ್ಜಿಗಳು ದಾಖಲಾತಿಗಾಗಿ ಬಾಕಿ ಇರುತ್ತದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಆಹಾರ ಮತ್ತು  ನಾಗರೀಕ ಸರಬರಾಜು ಇಲಾಖೆಯ ಹೆಚ್ಚುವರಿ ನಿರ್ದೇಶಕ  ಮೀರ್ ಅನಿಸ್ ಅಹಮ್ಮದ್, ಪ್ರಭಾರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿ.ಪಂ. ಸಿ.ಇ.ಓ. ಗೋವಿಂದರಾಜು, ಉಪವಿಭಾಗಾಧಿಕಾರಿ ನಕುಲ್ ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.