ತುಮಕೂರು

ಕಳಪೆ ಗುಣಮಟ್ಟದ ನಾಲಾ ಸೇತುವೆ ಕಾಮಗಾರಿ

Published On :

ಕ.ಪ್ರ. ವಾರ್ತೆ   ತುಮಕೂರು   ಜೂ. 3
ದೊಡ್ಡಕೆರೆಯಿಂದ ಬೇಗೂರು ಮಾರ್ಗವಾಗಿ ಇತರೆ ಭಾಗಗಳಿಗೆ ಹೇಮಾವತಿ ನಾಲಾ ನೀರು ಪೂರೈಸುವ ನಾಲಾ ಕಾಮಗಾರಿಯ ಸೇತುವೆ ಕಳಪೆ ಗುಣಮಟ್ಟದಿಂದ ಕೂಡಿದ ಕಾರಣ, ಕೆಲವು ಸೇತುವೆ ಕುಸಿದಿದ್ದು, ಇನ್ನು  ಕೆಲವು ಕುಸಿಯುವ ಹಂತಕ್ಕೆ ತಲುಪಿವೆ. ಯಾವುದೇ ಪ್ರಾಣಾಪಾಯ ಸಂಭವಿಸುವ ಮುನ್ನ ಅಗತ್ಯ ದುರಸ್ತಿಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು, ಕರವೇ ತಾಲೂಕು ಅಧ್ಯಕ್ಷರು ಆಗ್ರಹಿಸಿದ್ದಾರೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿಗೆ ಹೇಮಾವತಿ ನೀರು ಪೂರೈಕೆಗೆ ಪ್ರಮುಖ ಮಾರ್ಗವಾದ ಬೇಗೂರು- ಕೂತಾರಹಳ್ಳಿ - ಕುರುಪಾಳ್ಯ-ಸೋಮೇದೇವರಪಾಳ್ಯ ಮಾರ್ಗವಾಗಿ ಹಾದುಹೋಗಿರುವ ಹೇಮಾವತಿ ನಾಲೆಯ 196 ರಿಂದ 197ನೇ ಕಿಮಿ ನಾಲಾ ಕಾಮಗಾರಿಯಲ್ಲಿ ಸುಮಾರು ಆರು ಸೇತುವೆಗಳು ನಿರ್ಮಾಣವಾಗಿದ್ದು, ಈ ಪೈಕಿ ನಾಲ್ಕಕ್ಕೂ ಹೆಚ್ಚು ಸೇತುವೆ ಬೇಗೂರಿನಿಂದ ಯಲಿಯೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಮುಖ್ಯರಸ್ತೆಯಲ್ಲಿ ಬರುತಿವೆ. ಗುಣಮಟ್ಟ ಕಳಪೆಯಾಗಿರುವ ಕಾರಣ, ಸೇತುವೆ ನಿರ್ಮಾಣಗೊಂಡು ಕೆಲವೆ ತಿಂಗಳಲ್ಲಿ ಕುರುಪಾಳ್ಯದ ಬಳಿ ಧರಗುರುಳಿದರೆ,  ಇನ್ನು ಕೆಲವು ಬೀಳಲು ಸಿದ್ಧವಾಗಿವೆ.   ನಾಲಾ ಕಾಮಗಾರಿ ಇನ್ನು ಪ್ರಗತಿಯಲ್ಲಿರುವಾಗಲೆ, ಕೆಲ ಗುತ್ತಿಗೆದಾರರು ಇಲಾಖಾ ನಿಯಮಾವಳಿಗಳನ್ನು ಗಾಳಿಗೆ ತೂರಿ, ಸಮರ್ಪಕವಾಗಿ ಸೇತುವೆಗಳನ್ನು ನಿರ್ಮಾಣ ಮಾಡದ ಕಾರಣ, ತಾಲೂಕಿನಲ್ಲಿ ಕಳೆದೊಂದು ವಾರದಲ್ಲಿ ಒಂದೇ ದಿನ ಮಾತ್ರ ಜೋರಾಗಿ ಮಳೆಯಾಗಿದ್ದು, ಆ ಮಳೆಗೆ ಸೇತುವೆ ಒಂದು ಭಾಗ ಕುಸಿದಿದೆ. ಇನ್ನು ಬಹುತೇಕ ಸೇತುವೆಗಳ ಎರಡೂ ಬದಿ ಬಂದೋಬಸ್ತ್ ಮಾಡದೆ ಮಾಡಿರುವ ಕಾರಣ, ಎರಡೂ ಬದಿಯ ಮಣ್ಣು ಕುಸಿದು, ಸೇತುವೆಗಳ ಗೋಡೆ ಬಿರುಕು ಬಿಟ್ಟು, ಧರೆಗುರುಳಲು ದಿನ ಎಣಿಸುತ್ತಿವೆ ಎಂದು ಕುರುಪಾಳ್ಯ ಗ್ರಾಮಸ್ಥರಾದ ಕೃಷ್ಣ, ಧನ, ರಾಜು ಇತರರು ಆರೋಪಿಸಿದ್ದರೆ.
ಬದ್ಧತೆ ಕೊರತೆ: ಕಳೆದ ಬಾರಿ ಹೇಮಾವತಿ ಜಲಾಶಯದಿಂದ ಕುಣಿಗಲ್ ಕೆರೆ ಕಡೆಗೆ ಸಾಕಷ್ಟು ನೀರನ್ನು ನಾಲೆಯಲ್ಲಿ ಹರಿಸಿದ್ದರೂ, ಕುಣಿಗಲ್ ದೊಡ್ಡಕೆರೆಗೆ ತುಂಬಿಸಲು ಹೇಮಾವತಿ ನಾಲಾ ವಲಯದ ಅಧಿಕಾರಿಗಳ ಬದ್ಧತೆಯ ಕೊರತೆ ಕಾರಣ ಕೆರೆ ತುಂಬಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಸದರಿ ಅಧಿಕಾರಿಗಳು, ಹೇಮಾವತಿ ನೀರನ್ನು ಕಸಬಾ, ಹುತ್ರಿದುರ್ಗ ಹಾಗೂ ಹುಲಿಯೂರುದುರ್ಗ ಹೋಬಳಿಗೆ ಹರಿಸುತ್ತೇವೆಂದು, ನಾಲಾ ಕಾಮಗಾರಿ ಕೈಗೊಂಡಿದ್ದಾರೆ. ನಾಲೆಯಲ್ಲಿ ನೀರು ಹರಿಯದಿದ್ದರೂ ಕಾಮಗಾರಿ ನೆಪದಲ್ಲಿ ಅಧಿಕಾರಿಗಳು ಹಾಗೂ ಕೆಲ ಭ್ರಷ್ಟ ಗುತ್ತಿಗೆದಾರರ ಜೋಬಿಗೆ ಭರಪೂರ ಹಣದ ಹೊಳೆ ಹರಿದಿರುವುದು, ನಾಲೆಯ ಸೇತುವೆ ಕಾಮಗಾರಿ ಕೈಗೊಂಡು ಕೆಲವೆ ತಿಂಗಳಿಗೆ ಕುಸಿದಿರುವುದು ನೋಡಿದರೆ ಅರ್ಥವಾಗುತ್ತದೆ.
ಕ್ರಮಕೈಗೊಳ್ಳಿ:  ಕಾಮಗಾರಿ ಗುಣಮಟ್ಟ ನಿಜಕ್ಕೂ ಅನುಮಾನಸ್ಪದವಾಗಿದ್ದು, ಇಲಾಖೆಯ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು, ಕೂಡಲೆ ಈ ಭಾಗದ ಸೇತುವೆ ಕಾಮಗಾರಿಗಳ ಗುಣಮಟ್ಟ ತನಿಖೆಗೆ ಮುಂದಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಕರವೇ (ನಾರಾಯಣಗೌಡ ಬಣ)ದ ಅಧ್ಯಕ್ಷ ಮಂಜುನಾಥ್ ಆಗ್ರಹಿಸಿ, ಒಂದು ವೇಳೆ ಕಾಮಗಾರಿ ಗುಣಮಟ್ಟದ ಬಗ್ಗೆ ಸಮರ್ಪಕ ತನಿಖೆಗೆ ಇಲಾಖಾಧಿಕಾರಿಗಳು ಮುಂದಾಗದಿದ್ದಲ್ಲಿ, ಗುಣಮಟ್ಟದ ಕಾಮಗಾರಿಗೆ ಆಗ್ರಹಿಸಿ, ಹೇಮಾವತಿ ನಾಲಾ ವಲಯದ ಅಭಿಯಂತರರ ಕಚೇರಿ ಮುಂದೆ ಕರವೇ ವತಿಯಿಂದ ಧರಣಿ ನಡೆಸಲಾಗುತ್ತದೆ  ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.