ತುಮಕೂರು

ರೈತರ ಕೃಷಿ ಸಾಲ ಮನ್ನಾಕ್ಕೆ ಬೋರೇಗೌಡ ಒತ್ತಾಯ

Published On :

ತುರುವೇಕೆರೆ: ಬರಗಾಲದಿಂದ ತತ್ತರಗೊಂಡಿರುವ ರೈತರು ಮಾಡಿರುವ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ತಾಲೂಕು ಭಾರತೀಯ ಜನತಾಪಕ್ಷದ ಅಧ್ಯಕ್ಷ ಟಿ.ಎಸ್.ಬೋರೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು ಕಳೆದ ಒಂದೆರಡು ವರ್ಷಗಳಿಂದ ಮಳೆ ಬಾರದೆ ರೈತರು ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯವಾಗಿಲ್ಲ. ಅಲ್ಲದೆ ಸಕಾಲಕ್ಕೆ ಸೂಕ್ತ ವಿದ್ಯುತ್ ಸಹ ದೊರೆಯದ ಕಾರಣ ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆಗಳು ಕೂಡ ನೆಲಕಚ್ಚಿವೆ. ಆದ್ದರಿಂದ ರೈತಾಪಿಗಳು ಹಲವಾರು ಸಹಕಾರ ಸಂಘಗಳ ಮೂಲಕ ಪಡೆದಿದ್ದ ಕೃಷಿ ಸಾಲ ಹಾಗೂ ದೀರ್ಘಾವಧಿ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
 ಸರ್ಕಾರ ಒಂದು ರು.ಗೆ ಒಂದು ಕೆಜಿ ಅಕ್ಕಿ ವಿತರಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಬೆಳೆಯುವ ರೈತನಿಗೆ ಸೂಕ್ತ ನೆರವು ನೀಡಲು ಮುಂದಾಗಬೇಕು. ಸಕಾಲಕ್ಕೆ ರಸಗೊಬ್ಬರ, ವಿದ್ಯುತ್ ಹಾಗೂ ಸೂಕ್ತ ಬೆಂಬಲ ಬೆಲೆಯನ್ನು ಸರ್ಕಾರ ನೀಡುವ ಮನಸ್ಸ ಮಾಡಬೇಕು ಎಂದರು. ರೈತಾಪಿಗಳ ಬದುಕು ಮೂರಾಬಟ್ಟೆಯಾಗುತ್ತಿದೆ. ಕೆಟ್ಟು ಪಟ್ಟಣ ಸೇರು ಎನ್ನುವಂತೆ ರೈತಾಪಿಗಳು ಪಟ್ಟಣ ಸೇರುತ್ತಿದ್ದಾರೆ. ಅಲ್ಲಿ ಕನಿಷ್ಠ ಕೂಲಿಯಾದರೂ ಸಿಕ್ಕಿ ಜೀವನ ನಿರ್ವಹಣೆ ಮಾಡಬಹುದು ಎಂಬ ಆಲೋಚನೆಯಲ್ಲಿ ರೈತರು ಇದ್ದಾರೆ. ರೈತರಿಗೆ ಬೇಸಾಯ ಮಾಡಲು ಅಗ್ಯವಿರುವ ಸಕಲ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಟ್ಟರೆ ಮಾತ್ರ ರೈತರು ಭೂಮಿಯನ್ನು ಉತ್ತು ಬಿತ್ತು ಬೆಳೆ ತೆಗೆಯುವರು ಎಂದು ಬೋರೇಗೌಡ ಹೇಳಿದರು.
ಆಗ್ರಹ : ಕೊಬರಿ ಬೆಲೆ ಕೇವಲ 4500 ರು.ಗಳಿದ್ದು ಅತ್ಯಂತ ಕೆಳ ಹಂತದಲ್ಲಿದೆ. ಬಿಜೆಪಿ ಸರ್ಕಾರವಿದ್ದಾಗ ನ್ಯಾಫೆಡ್ ಪ್ರಾರಂಭಿಸಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 6500 ರೂ ನೀಡುತ್ತಿತ್ತು. ಈ ಬಾರಿ ಬರದ ನಡುವೆಯೂ ಸಿಕ್ಕ ಕಡಿಮೆ ಫಸಲಿಗೆ ಕನಿಷ್ಠ ಬೆಲೆ ಸಿಗುವುದರಿಂದ ರೈತರ ಬದುಕು ದುಸ್ತರವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಕೊಬ್ಬರಿಗೆ ಕನಿಷ್ಠ10 ಸಾವಿರ ರು.ಗಳ ಬೆಂಬಲ ಬೆಲೆ ನಿಗದಿಗೊಳಿಸಿ ಆದೇಶಿಸಬೇಕು ಎಂದು ಆಗ್ರಹಿಸಿದರು.
 ತಾಲೂಕಿನಲ್ಲಿ ಬಿಜೆಪಿ ಅತ್ಯಂತ ಕಡಿಮೆ ಮತಗಳಿಸಿದುದು ವಿಷಾದನೀಯ. ಇದಕ್ಕೆ ರಾಜ್ಯ ಹಾಗೂ ಜಿಲ್ಲೆಯ ಮುಖಂಡರೇ ಕಾರಣ. ಕ್ಷೇತ್ರದ ಅಭ್ಯರ್ಥಿಯನ್ನು ಕನಿಷ್ಠ 3 ತಿಂಗಳ ಮೊದಲೇ ಘೋಷಣೆ ಮಾಡಬೇಕಿತ್ತು. ಘೋಷಣೆ ಮಾಡಲ್ಪಟ್ಟಿದ್ದ ಅಭ್ಯರ್ಥಿ ಬಿಜೆಪಿಯ ಕಾರ್ಯಕರ್ತರನ್ನಾಗಲೀ ಅಥವಾ ಮತದಾರರನ್ನಾಗಲೀ ಭೇಟಿ ಮಾಡಲೂ ಸಹ ಆಗದೇ ಇರುವುದೇ ಕಾರಣ. ಮುಂಬರುವ ದಿನಗಳಲ್ಲಿ ಬರಲಿರುವ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಸದೃಢಗೊಂಡು ಉತ್ತಮ ಮತಗಳಿಸಲಿದೆ ಎಂದು ಟಿ.ಎಸ್.ಬೋರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ವಿರೂಪಾಕ್ಷ, ಪ್ರಧಾನ ಕಾರ್ಯದರ್ಶಿ ಹಾಲೇಗೌಡ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಶಿವಯೋಗೀಶ್ವರ ಸ್ವಾಮಿ, ಬಿಜೆಪಿ ಕಾರ್ಯದರ್ಶಿ ಪ್ರಕಾಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.