ನೆಪ ಹೇಳದೆ ಅರ್ಜಿ ವಿಲೇವಾರಿ ಮಾಡಿ
ತುಮಕೂರು: ಸಕಾಲದ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷತೆ, ಉದಾಸೀನ ಮನೋಭಾವವನ್ನು ಸರ್ಕಾರ ಸಹಿಸುವುದಿಲ್ಲ. ಯಾವುದೇ ನೆಪ ಹೇಳದೆ ಅರ್ಜಿ ವಿಲೇವಾರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ಎಸ್ಐಟಿ ಕಾಲೇಜು ಬಿರ್ಲಾ ಸಭಾಂಗಣದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ನೌಕರರಿಗೆ ಏರ್ಪಡಿಸಲಾಗಿದ್ದ ಸಕಾಲ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಕಾಲ ಜನಸಾಮಾನ್ಯರ ಕೈಗೆ ಸಿಕ್ಕಿರುವ ಪರಿಣಾಮಕಾರಿ ಅಸ್ತ್ರ. ಇದರ ಜಾರಿಯಿಂದಾಗಿ ಶ್ರೀಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆಯುವುದು ತಪ್ಪುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಭ್ರಷ್ಟಾಚಾರವನ್ನು ತಡೆಯಲು ಎಲ್ಲಾ ಗ್ರಾ.ಪಂ.ಗಳಲ್ಲಿ ಸಕಾಲ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದು ತಿಳಿಸಿದರು.
ಪ್ರಥಮ ಆದ್ಯತೆ: ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡುವುದು ಸರ್ಕಾರ ಪ್ರಥಮ ಆದ್ಯತೆಯಾಗಿದೆ. ಇದಕ್ಕೆ ಪೂರಕವಾಗಿರುವ ಸಕಾಲದಂತಹ ಯೋಜನೆಯನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸಿ ಸೇವೆಗೆ ವೇಗ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ 265 ಇಲಾಖೆಗಳ 1800 ಸೇವೆಗಳು ಸಕಾಲ ವ್ಯಾಪ್ತಿಯಲ್ಲಿವೆ. ಇದೀಗ 6 ಇಲಾಖೆಗಳ 110 ಸೇವೆಗಳನ್ನು ಹೊಸದಾಗಿ ಸೇರಿಸಲಾಗಿದೆ ಎಂದರು.
ರಾಜ್ಯದಲ್ಲಿ ಕೇವಲ ಶೇ.39ರಷ್ಟು ನಾಗರಿಕರು ಸಕಾಲದ ಬಗ್ಗೆ ತಿಳಿದುಕೊಂಡಿದ್ದಾರೆ ಎನ್ನುವುದು ಆತಂಕದ ವಿಚಾರ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ಇದಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಕಾಲ ಕಾಲಕ್ಕೆ ಬದಲಾಗುವ ಕಾನೂನುಗಳು, ತಂತ್ರಜ್ಞಾನಕ್ಕೆ ಅಧಿಕಾರಿಗಳು, ನೌಕರರು ಹೊಂದಿಕೊಂಡು ಸೇವೆಯ ವೇಗ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಜಡ್ಡುಗಟ್ಟಿದ ಸರ್ಕಾರಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ, ಜನಸಾಮಾನ್ಯರಿಗೆ ಇಷ್ಟವಾಗುವ ರೀತಿಯಲ್ಲಿ ಆಡಳಿತ ನಡೆಯಬೇಕು. ಕೆಲವು ಅಧಿಕಾರಿಗಳು ಸಕಾಲ ಯೋಜನೆಯಲ್ಲಿ ಅರ್ಜಿ ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಇಂತಹ ದೂರುಗಳು ಮತ್ತೆ ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದರು.
ಪ್ರಶಸ್ತಿ: ಸಕಾಲವು ಸಂಯುಕ್ತ ರಾಷ್ಟ್ರದ ಸಾರ್ವಜನಿಕ ಸೇವಾ ಪ್ರಶಸ್ತಿಯ ಅಂತಿಮ ಸುತ್ತಿಗೆ ಪ್ರವೇಶ ಪಡೆದಿರುವುದು ನಮ್ಮ ಹೆಮ್ಮೆ. ಇಂತಹ ಜನಪ್ರಿಯ ಯೋಜನೆ ಯಾವುದೇ ಸರ್ಕಾರ ಜಾರಿಗೆ ತಂದಿರಲಿ, ಅದನ್ನು ಮುಂದುವರೆಸಿಕೊಂಡು ಹೋಗಲು ಸರ್ಕಾರ ಬದ್ಧವಾಗಿದ್ದು ಅಧಿಕಾರಿಗಳು ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಅರ್ಜಿಗಳ ವಿಳಂಬ ವಿಲೇವಾರಿ, ತಿರಸ್ಕೃತ ಅರ್ಜಿಗಳ ಪಟ್ಟಿಯಲ್ಲಿ ಉಡುಪಿ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳು 30, 29 ಮತ್ತು 28 ಸ್ಥಾನ ಪಡೆದಿವೆ. ಉಳಿದಂತೆ ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಶ್ರೇಯಾಂಕದಲ್ಲಿ ಹಿಂದೆ ಬಿದ್ದವೆ. ಇದು ಬದಲಾಗಲೇ ಬೇಕು, ಮುಂದಿನ ದಿನಗಳಲ್ಲಿ ಜಿಲ್ಲೆಗಳು ಪೈಪೋಟಿಯ ಮೇಲೆ ಅರ್ಜಿ ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ತುಮಕೂರು ಹಿಂದೆ ಬಿದ್ದಿದೆ: ತುಮಕೂರು ಜಿಲ್ಲೆ ಶ್ರೇಯಾಂಕದಲ್ಲಿ 14 ನೇ ಸ್ಥಾನ ಪಡೆದಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದ ಸಚಿವರು, ಮುಂದಿನ ಕೆಲವೇ ತಿಂಗಳಲ್ಲಿ ಮೊದಲ 5 ಸ್ಥಾನದಲ್ಲಿ ಜಿಲ್ಲೆ ಸ್ಥಾನ ಪಡೆಯಬೇಕು. ಅತೀ ಹಿಂದೆ ಇರುವ ಚಿಕ್ಕನಾಯಕನಹಳ್ಳಿ, ಪಾವಗಡ, ಗುಬ್ಬಿ, ತುರುವೇಕೆರೆಗಳಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಡಾ.ರಫೀಕ್ ಅಹಮದ್,ಷಡಕ್ಷರಿ, ಸಕಾಲ ಅಪರ ಕಾರ್ಯದರ್ಶಿ ಮನೋಜ್, ಪ್ರಭಾರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿ.ಪಂ. ಸಿಇಒ ಗೋವಿಂದರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

