ಕೊಬ್ಬರಿ: ಕೇಂದ್ರ ತೆರೆಯುವಲ್ಲಿ ವಿಳಂಬ
ಕ.ಪ್ರ. ವಾರ್ತೆ ಹುಳಿಯಾರು ಜೂ. 15
ಸಂಕಷ್ಟದಲ್ಲಿದ್ದ ತೆಂಗು ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಸದನದಲ್ಲಿ ಚರ್ಚೆ ನಡೆದು ಜೂನ್ ಹನ್ನೆರಡರಿಂದಲೇ ಕೊಬ್ಬರಿ ಉತ್ಪಾದನಾ ಪ್ರದೇಶಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ (ನಾಫೆಡ್) ತೆರೆದು ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಸಹಾಯಧನ ಸೇರಿದಂತೆ 6500 ರು.ಗೆ ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಸಹ ಎಲ್ಲಿಯೂ ಖರೀದಿ ಕೇಂದ್ರಗಳು ನಿಗದಿತವಾಗಿ ಪ್ರಾರಂಭವಾಗದೇ ತೆಂಗು ಬೆಳೆಗಾರರು ಗೊಂದಲಕ್ಕಿಡಾಗಿದ್ದಾರೆ.
ಅಂತೆಯೇ ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇದುವರೆಗೂ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರ ಪ್ರಾರಂಭವಾಗದೆ ಈ ಭಾಗದ ತೆಂಗು ಬೆಳೆಗಾರರು ಮಾರುಕಟ್ಟೆಗೆ ನಿತ್ಯವೂ ಅಲೆಯುವಂತಾಗಿದೆ.
ತೆಂಗು ಹಾಗೂ ಕೊಬ್ಬರಿ ಬೆಲೆಯಲ್ಲಿ ಭಾರಿ ಇಳಿಕೆಯಿಂದಾಗಿ ಮಾರುಕಟ್ಟೆಯಲ್ಲಿನ ನಿಂಬೆ ಹಣ್ಣಿನ ಬೆಲೆಗಿಂತ ಕಡಿಮೆಯಿದೆ ಎಂದು ವಿಧಾನಸಭೆಯಲ್ಲಿ ಕೂಡ ಚರ್ಚೆ ನಡೆಯುವಂತಾದ ಹಿನ್ನೆಲೆಯಲ್ಲಿ ತೆಂಗು
ಬೆಳೆಗಾರರ ಸಂಕಷ್ಟ ಅರಿತ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಸಾವಿರ ರು. ಸಹಾಯಧನ ನೀಡಿ ಖರೀದಿಗೆ ಒಪ್ಪಿಗೆ ನೀಡಿತ್ತು. ತೆಂಗಿನ ಇಳುವರಿಯಲ್ಲಿ ಕುಂಟಿತ ಹಾಗೂ ಕೊಬ್ಬರಿಗೆ ಸೂಕ್ತ ಬೆಲೆ ದೊರೆಯದೆ ಕಂಗಾಲಾಗಿದ್ದ ತೆಂಗು ಬೆಳೆಗಾರಿಗೆ ಇಂತಹ ಸಮಯದಲ್ಲಿ ರಾಜ್ಯ ಸರ್ಕಾರದ ಈ ಆದೇಶ ಸಂತಸ ತಂದಿತ್ತು. ಸರ್ಕಾರದ ಆದೇಶದಂತೆ ಹನ್ನೆರಡರಿಂದಲೇ ನಾಫೆಡ್ ಕೇಂದ್ರಗಳು ಪ್ರಾರಂಭವಾಗಿರುತ್ತವೆ ಎಂದು ತಿಳಿದು ಕೊಬ್ಬರಿ ಮಾರಲು ಮಾರುಕಟ್ಟೆಗೆ ಬಂದರೆ ಅಲ್ಲಿ ಕೊಬ್ಬರಿ ಖರೀದಿ ಕೇಂದ್ರ ಇನ್ನೂ ಪ್ರಾರಂಭವಾಗಿಲ್ಲ ಎಂಬ ವಿಷಯ ಕೇಳಿದ ಬೆಳೆಗಾರರು ನಿರಾಸೆಯಿಂದ ತಾವು ತಂದಿದ್ದ ಕೊಬ್ಬರಿಯನ್ನು ವಾಪಸು ಮನೆಗೆ ತೆಗೆದುಕೊಂಡು ಹೋಗಲಾರದೇ ವರ್ತಕರಿಗೆ ಇರುವಷ್ಟು ಬೆಲೆಗೆ ಮಾರುವಂತ ಪರಿಸ್ಥಿತಿ ಎದುರಾಗಿದೆ.
ವರ್ತಕರಿಗೆ ಅನುಕೂಲ: ನಾಫೆಡ್ ಬಗ್ಗೆ ಪ್ರಚಾರದ ಕೊರತೆ ಹಾಗೂ ನಿಗದಿತ ಸಮಯದಲ್ಲಿ ಕೇಂದ್ರ ಆರಂಭಿಸದಿದ್ದಲ್ಲಿ ವರ್ತಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ. ಕಾಲಾವಕಾಶ ದೊರೆಯುವುದರಿಂದ ರೈತರ ಕೊಬ್ಬರಿಯನ್ನು ಕೊಂಡು ದಾಸ್ತಾನು ಮಾಡಿಕೊಂಡು ಕೇಂದ್ರ ಆರಂಭವಾಗುತ್ತಿದ್ದಂತೆಯೇ ಮಾರಾಟಕ್ಕೆ ಮುಂದಾಗುತ್ತಾರೆ. ಕ್ವಿಂಟಾಲ್ಗೆ ಸಾವಿರಕ್ಕೂ ಹೆಚ್ಚಿನ ಲಾಭಗಳಿಸುತ್ತಾರೆ. ಇದಕ್ಕೆ ನಿದರ್ಶನವಾಗಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವ ಆದೇಶವನ್ನು ಸರ್ಕಾರ ಹೊರಡಿಸುವುದಕ್ಕಿಂತ ಮುಂಚೆ ಹುಳಿಯಾರಿನ ಮಾರುಕಟ್ಟೆಯಲ್ಲಿ ಕೆಲ ತಿಂಗಳುಗಳಿಂದ 4400ರ ಅಜುಬಾಜಿನಲ್ಲಿದ್ದ ಕೊಬ್ಬರಿ ಬೆಲೆ ಇದೀಗ ದಿಢೀರನೆ 5 ಸಾವಿರಕ್ಕೆ ಹೆಚ್ಚಳ ಮಾಡುವ ಮೂಲಕ ರೈತರನ್ನು ತಮ್ಮತ್ತ ಸೆಳೆಯುತ್ತಿದ್ದು, ಹೆಚ್ಚಿನ ಸಂಗ್ರಹಕ್ಕೆ ಮುಂದಾಗಿದ್ದಾರೆ.
20ರಿಂದ ಖರೀದಿ ಪ್ರಾರಂಭ: ಮಾರುಕಟ್ಟೆ ಆವರಣದಲ್ಲಿ ಖರೀದಿ ಕೇಂದ್ರದ ಬಗ್ಗೆ ಯಾವೊಂದು ಪ್ರಚಾರವಿಲ್ಲದಿರುವುದರ ಬಗ್ಗೆ ಮಾರುಕಟ್ಟೆ ಸಮಿತಿಯನ್ನು ವಿಚಾರಿಸಲಾಗಿ 12ಕ್ಕೆ ಪ್ರಾರಂಭ ಎಂದು ಪತ್ರಿಕೆಯಲ್ಲಿ ಬಂದಿದ್ದೆ ವಿನಃ ತಮಗೆ ಯಾವುದೇ ರೀತಿಯ ಆದೇಶ ಬಂದಿಲ್ಲ. ಕೇಂದ್ರ ಪ್ರಾರಂಭಿಸಲು ನಾಫೆಡ್ ಅಧಿಕಾರಿಗಳು ಯಾರೊಬ್ಬರೂ ಇದುವರೆವಿಗೂ ಬಂದಿಲ್ಲ. ಹಾಗಾಗಿ ಇನ್ನೂ ನಾಫೆಡ್ ಕೇಂದ್ರ ಪ್ರಾರಂಭವಾಗಿಲ್ಲ. 19ರಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯವರು ಖರೀದಿ ಕೇಂದ್ರದ ಉದ್ಘಾಟನೆ ಮಾಡಲಿದ್ದು, 20 ರಿಂದ ಕೊಬ್ಬರಿ ಖರೀದಿ ಪ್ರಾರಂಬಗೊಳ್ಳಲಿದ್ದು, ಪ್ರತಿ ಕ್ವಿಂಟಾಲ್ಗೆ 5500 ರು. ಮತ್ತು ಸಹಾಯಧನ 1000 ರು. ನಂತೆ ಖರೀದಿ ನಡೆಯಲಿದೆ. ಪ್ರತಿ ಹತ್ತು ಕ್ವಿಂಟಾಲ್ಗೆ ಮಾತ್ರ ಸಹಾಯಧನ ಸೀಮಿತವಾಗಿದ್ದು ಬೆಳೆಗಾರರ ಪಹಣಿ ಆಧಾರದ ಮೇಲೆ ಕೊಬ್ಬರಿ ನಡೆಯಲಿದೆ ಎಂದು ಕಾರ್ಯದರ್ಶಿ ಜಯರಾಮ್ ತಿಳಿಸಿದರು.
ಪ್ರತಿ ಬಾರಿಯೂ ಖರೀದಿ ಕೇಂದ್ರ ಪ್ರಾರಂಭಿಸುವಾಗ ಗೋಡೌನ್, ದಾರ, ಚೀಲ ಇಲ್ಲ ಎನ್ನುವ ಸಮಸ್ಯೆಗಳೆಲ್ಲಾ ಮುಂದಿಟ್ಟುಕೊಂಡು ಖರೀದಿ ತಡವಾಗುತ್ತಿತ್ತು. ಈ ಬಾರಿ ಅದರ ಪುನರಾವರ್ತನೆಗೆ ಅವಕಾಶ ನೀಡದಂತೆ ಖರೀದಿ ಕೇಂದ್ರ ಶೀಘ್ರ ಪ್ರಾರಂಭಿಸಿದಲ್ಲಿ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

