ತುಮಕೂರು

ಮರಳು ಹರಾಜಿಗೆ ಗ್ರಾಮಸ್ಥರ ವಿರೋಧ

Published On :

ಕನ್ನಡಪ್ರಭ ವಾರ್ತೆ     ಕುಣಿಗಲ್    ಜೂ. 17
ಸರ್ಕಾರ ವಶಪಡಿಸಿಕೊಂಡಿದ್ದ ಮರಳನ್ನು ಹರಾಜು ಮಾಡಲು ಹೋದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ, ಗ್ರಾಮಸ್ಥರು ಹರಾಜು ನಡೆಸದಂತೆ ತಡೆದು ವಾಗ್ವಾದ ನಡೆಸಿದಾಗ ಕೆಲ ಕಾಲ ಉದ್ವಿಘ್ನ ಪರಿಸ್ಥಿತಿ ಉಂಟಾದ ಘಟನೆ ತಾಲೂಕಿನ ತೊರೆಬೊಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
 ಶಿಂಷಾ ನದಿ ಪಾತ್ರದಲ್ಲಿನ ತೊರೆಬೊಮ್ಮನಹಳ್ಳಿಯಲ್ಲಿ, ನದಿಪಾತ್ರದಿಂದ ಅಕ್ರಮ ಮರಳು ಸಂಗ್ರಹಣೆ ಮಾಡಿದ್ದನ್ನು, ಇಲಾಖೆ ವಶಕ್ಕೆ ಪಡೆದು ಮರಳು ಹರಾಜಿಗೆ ಲೋಕೋಪಟೋಗಿ ಇಲಾಖೆ ಅಧಿಕಾರಿಗಳು ಸೋಮವಾರ ತೆರಳಿದ್ದರು. ಈ ಸಂದರ್ಭದಲ್ಲಿ ಮರಳು ಹರಾಜು ಮಾಡದಂತೆ ತೀವ್ರ ತಡೆಯೊಡಿದ್ದ ಗ್ರಾಮಸ್ಥರಾದ ಜಯರಾಮ, ವಿನೋದ್ ಇತರರು, ಈಗಾಗಲೆ ಕಳೆದ ಎಂಟು ತಿಂಗಳ ಹಿಂದೆ ಸಾವಿರಾರು ಟನ್ ಮರಳು ವಶಪಡಿಸಿಕೊಂಡಿದ್ದು, ಅವುಗಳನ್ನು ಅಕ್ರಮವಾಗಿ ಇಲಾಖೆಯವರೇ ಮಾರಿಕೊಂಡಿದ್ದು, ಈಗ ಸದರಿ ವಿಚಾರದ ಬಗ್ಗೆ ನೂತನ ಶಾಸಕರು, ವಿಧಾನ ಸೌಧದಲ್ಲಿ ಪ್ರಸ್ತಾಪಿಸಿ, ಇಲಾಖಾ ತನಿಖೆಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ,
ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನದಿಯಿಂದ ಇತ್ತೀಚೆಗೆ ಕೆಲ ದಿನಗಳ ಹಿಂದೆ ಮರಳನ್ನು ತೆಗೆಸಿ, ಅದನ್ನು ಹರಾಜು ಮಾಡಿ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆಂದು, ಈ ಹಿಂದೆ ಸರ್ಕಾರ ವಶಪಡಿಸಿಕೊಂಡಿರುವ ಮರಳನ್ನು ಮಾರಿಕೊಂಡು ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಅಧಿಕಾರಿಗಳ ಮೇಲೆ ಮುಗಿಬಿದ್ದು, ಮರಳು ಖರೀದಿಸಲು ಬಂದಿದ್ದವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಈ ಕಾರಣ, ಕೆಲಕಾಲ ಉದ್ವಿಘ್ನ ಪರಿಸ್ಥಿತಿ ಉಂಟಾಯಿತು.
ಗೊಂದಲದ ವಾತಾವರಣ: ಲೋಕೋಪಯೋಗಿ ಇಲಾಖೆ ಎಇಇ ಜಗದೀಶ್, ವಾಸ್ತವತೆ ಮನವಿ ಮಾಡಿಕೊಡಲು ಯತ್ನಿಸಿದಾಗ, ಅದನ್ನು ಕೇಳಲು ಸಿದ್ದರಿರದ ಗ್ರಾಮಸ್ಥರು, ಈಗಾಗಲೆ ಸರ್ಕಾರ ವಶಪಡಿಸಿಕೊಂಡಿದ್ದ ಸಾವಿರಾರು ಟನ್ ಮರಳನ್ನು ನಿಮ್ಮ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಮಾರಿಕೊಂಡಿದ್ದು, ಈಗ ಹರಾಜು ಮಾಡಲು ಯಾವ ಮಾನದಂಡದ ಮೇಲೆ ಬಂದಿದ್ದೀರಾ, ಕೂಡಲೆ ಹರಾಜು ರದ್ದುಗೊಳಿಸಿ ತೆರಳುವಂತೆ ಆಗ್ರಹಿಸಿ, ಗೊಂದಲದ ವಾತಾವರಣಕ್ಕೆ ಕಾರಣರಾದರು.
ಸಿಪಿಐ ಧಮೇಂದ್ರ ಸಿಬ್ಬಂದಿ ಆಗಮಿಸಿ, ಗ್ರಾಮಸ್ಥರನ್ನು ಸಮಾಧಾನಗೊಳಿಸಿ, ಹರಾಜನ್ನು ತಾತ್ಕಾಲಿಕವಾಗಿ ಮುಂದುವೆರಸುವ ಭರವಸೆ ಮೇರೆಗೆ ಉದ್ವಿಘ್ನ ಸ್ಥಿತಿ ಶಮನಗೊಂಡಿತು. ಘಟನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಲೋಕೋಪಯೋಗಿ ಇಲಾಖೆ ಎಇಇ ಜಗದೀಶ್, ಕಳೆದ ಸಾಲಿನ ಎಂಟನೆ ತಿಂಗಳಲ್ಲಿ ತೊರೆಬೊಮ್ಮನಹಳ್ಳಿ, ಹನುಮಂತನಗರ ಸೇರಿದಂತೆ 150ಕ್ಕೂ ಹೆಚ್ಚು ಕಡೆ, ಅಕ್ರಮ ಮರಳು ಸಂಗ್ರಹಣೆ ಮಾಡಿರುವ ಬಗ್ಗೆ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್ ಇಲಾಖೆ ದಾಳಿ ಮಾಡಿ, ಮರಳನ್ನು ಅಂದಿನ ಇಲಾಖೆಯ ಜೆಇ ವಶಕ್ಕೆ ನೀಡಿದ್ದರು. ಈ ರೀತಿ ನೀಡುವಾಗ ಒಟ್ಟಾರೆ ನಿಖರ ಪರಿಮಾಣ ದಾಖಲಿಸದೆ, ಜಿಪಿಎಸ್ ಸರ್ವೇ ಮೂಲಕ ಅಂದಾಜಿಸಿ ಲೆಕ್ಕ ತಿಳಿಸಿದ್ದರು.
ಪೋಲಾಗಿದೆ: ಈ ಬಗ್ಗೆ ಇಲಾಖೆಯ ಹಿಂದಿನ ಎಇಇ ಸವಿವರವಾಗಿ ಇಲಾಖೆಯ ಮೇಲಾಧಿಕಾರಿಗೆ ತಿಳಿಸಿದ ಮೇರೆಗೆ, ಇಲಾಖಾಧಿಕಾರಿಗಳು ಹಾಲಿ ಸ್ಥಳದಲ್ಲಿನ ಮರಳನ್ನು ಹರಾಜು ಮಾಡುವಂತೆ ಸೂಚಿಸಿದ್ದು, ಸೂಕ್ತ ರಕ್ಷಣೆ ಇಲ್ಲದೆ ಸಾಕಷ್ಟು ಮರಳು ಪೋಲಾಗಿದೆ, ಹಲವು ಕಾರಣಗಳಿಂದ ರಕ್ಷಣೆ ದೊರೆಯದೆ ಮರಳು ಕಳ್ಳತನವಾಗಿದೆ. ಈ ಬಗ್ಗೆ ದೂರು ಸಹ ನೀಡಲಾಗಿದೆ. ಈಗ ಇನ್ನು ಮರಳು ಸಾಕಷ್ಟು ಪ್ರಮಾಣದಲ್ಲಿದ್ದು, ಗ್ರಾಮಸ್ಥರು ವಿನಾಕಾರಣ ಇಲಾಖೆಯ ಮೇಲೆ ಆರೋಪ ಸತ್ಯಕ್ಕೆ ದೂರವಾಗಿದೆ. ಈಗಾಗಲೆ 18ಲಕ್ಷ ಹಣವನ್ನು ಜಮಾ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ರಕ್ಷಣೆ ಪಡೆದು ಮರಳನ್ನು ವಿಲೇವಾರಿ ಮಾಡಲಾಗುವುದೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.