ತುಮಕೂರು

ವಕೀಲರು ವೃತ್ತಿ ಬದ್ಧತೆ ತೋರಲಿ: ಶಾಸಕ ನಾಗರಾಜಯ್ಯ

Published On :

ಕ.ಪ್ರ. ವಾರ್ತೆ  ಕುಣಿಗಲ್  ಜೂ.20
ವಕೀಲರು ವೃತ್ತಿ ಬದ್ಧತೆ ತೋರುವ ಮೂಲಕ ಕಾನೂನಿನ ಅರಿವಿಲ್ಲದಂತಹ ಗ್ರಾಮಾಂತರ ಪ್ರದೇಶದ ಜನತೆಯ ಶೋಷಣೆ ಮಾಡದೆ, ಅವರಲ್ಲಿ ಸೂಕ್ತ ಅರಿವು ಮೂಡಿಸುವುದರ ಜೊತೆಯಲ್ಲಿ ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಶಾಸಕ ಡಿ. ನಾಗರಾಜಯ್ಯ ಅಭಿಪ್ರಾಯಪಟ್ಟರು.
ಬುಧವಾರ, ಪಟ್ಟಣದ ನ್ಯಾಯಾಲಯ ಅವರಣದಲ್ಲಿನ ತಾಲೂಕು ವಕೀಲರ ಸಂಘದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ಹಿಂದೆ ತಾಲೂಕಿನಲ್ಲಿ ಪ್ರಕರಣಗಳು ಕಡಿಮೆ ಇದ್ದ ಕಾರಣ ತುಮಕೂರಿನ ನ್ಯಾಯಾಲಯಕ್ಕೆ ತೆರಳಬೇಕಿದ್ದು, ನಂತರದ ದಿನಗಳಲ್ಲಿ ತಾಲೂಕಿಗೆ ನ್ಯಾಯಾಲಯದ ಅವಶ್ಯಕತೆ ಮನಗಂಡು ಹಳೆಯ ಪ್ರವಾಸಿ ಮಂದಿರವಾದ ಇಂದಿನ ಹಳೇ ನ್ಯಾಯಾಲಯ ಕಟ್ಟಡದಲ್ಲಿ ಕಲಾಪಗಳು ಪ್ರಾರಂಭಗೊಂಡವು. ತಾವು ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದಾಗ ನ್ಯಾಯಾಧೀಶರಿಗೆ ವಸತಿ ಸೌಕರ್ಯವನ್ನು ತಾಲೂಕು ಪಂಚಾಯಿತಿ ವಸತಿ ಗೃಹಗಳ ವ್ಯವಸ್ಥೆ ಗೊಳಿಸಿದ್ದನ್ನು ಸ್ಮರಿಸಿದರು.
ಕಿವಿಮಾತು: ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಇಂದಿಗೆ ಮೂರು ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಹಲವು ಕಾನೂನಾತ್ಮಕ ಸಮಸ್ಯೆಗಳ ಪರಿಹಾರಕ್ಕಾಗಿ ವಕೀಲರ ಬಳಿ ಬರುವಂತೆ ಗ್ರಾಮಾಂತರ ಪ್ರದೇಶದ ಜನತೆಗೆ, ತಮ್ಮ ಸೇವೆಗೆ ಹೆಚ್ಚಿನ ಶುಲ್ಕ ವಸೂಲು ಮಾಡದೆ,  ಸ್ಪಷ್ಟ ಮಾರ್ಗದರ್ಶನ ನೀಡುವ ಮೂಲಕ ಸಮಯದ ಉಳಿತಾಯದ ಜೊತೆಯಲ್ಲಿ, ಅವರ ಆರ್ಥಿಕ ವೆಚ್ಚವನ್ನು ಕಡಿಮೆಗೊಳಿಸುವತ್ತ ಶ್ರಮಿಸುವಂತೆ ಕಿವಿಮಾತು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ದಯಾನಂದ್, ದಿನಕಳೆದಂತೆ ವಕೀಲರ ಸಂಘದ ಸದಸ್ಯರು ಹೆಚ್ಚುತ್ತಾ ಹಾಲಿ 150 ವಕೀಲರಿದ್ದು, ಇರುವ ವಕೀಲರಿಗೆ ಮೂಲ ಭೂತಸೌಕರ್ಯದ ಕೊರತೆ ಇರುವ ಕಾರಣ, ವಕೀಲಸಂಘದ ಭವನ ನಿರ್ಮಾಣಕ್ಕೆ ಮುಂದಾಗಿದೆ. ಶಾಸಕರು ಸಾಧ್ಯವಿರುವ ನೆರವು ನೀಡುವಂತೆ, ನ್ಯಾಯಾಲಯದ ಅವರಣದಲ್ಲಿ ಶೌಚಾಲಯ ನಿರ್ಮಾಣಗೊಂಡಿದ್ದರೂ  ನೀರಿನ ವ್ಯವಸ್ಥೆ ಇಲ್ಲದೆ ಶೌಚಾಲಯ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಮೂರು ವರ್ಷದ ಕೆಳಗೆ ಬೋರ್ ಕೊರೆಸಿದ್ದು, ಸದರಿ ಬೋರ್‌ಗೆ ಪಂಪು, ಮೋಟಾರ್ ಅಳವಡಿಸಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಹಲವು ಸಮಸ್ಯೆಗಳ ಪರಿಹರಿಸಲು ಶಾಸಕರು ಸೂಕ್ತ ನೆರವು ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಹಿರಿಯ ವಕೀಲರಾದ ರಂಗಸ್ವಾಮಿ ಎ.ಎಆರ್, ಬಿ.ಕೆ.ರಂಗಸ್ವಾಮಿ, ಮುಮ್ತಾಜ್ ಅಹಮದ್, ಸತೀಶ್, ಹುಚ್ಚೇಗೌಡ, ನಾರಾಯಣಗೌಡ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.