ಬಂದು ಹೋದ ಲೋಕಾಯುಕ್ತರಿಗೆ ಬಂತು 7 ದೂರುಗಳು
ಕ.ಪ್ರ. ವಾರ್ತೆ ತುರುವೇಕೆರೆ ಜೂ.23
ಲೋಕಾಯುಕ್ತರು ಜನರ ಸಮಸ್ಯೆಯನ್ನು ಪರಿಹರಿಸುವರು ಎಂಬ ಭಾವನೆ ಮರೆಯಾಗುತ್ತಿದೆಯೇನೋ ಭಾವನೆ ಬರುತ್ತಿದೆ. ಕಾರಣ ಕಳೆದ ಐದಾರು ತಿಂಗಳುಗಳಿಂದ ನಡೆಯುತ್ತಿರುವ ಲೋಕಾಯುಕ್ತರ ಭೇಟಿಯಲ್ಲಿ ಜನ ಸಾಮಾನ್ಯರು ಸ್ಪಂದಿಸದೇ ಇರುವುದು.
ಈ ಹಿಂದಿನ ದಿನಗಳಲ್ಲಿ ಲೋಕಾಯುಕ್ತರು ತಾಲೂಕಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸುವರು ಎಂದರೆ ತಾಲೂಕಿನ ಮೂಲೆ ಮೂಲೆಗಳಿಗೆ ಜನ ಹಿಂಡು ಹಿಂಡಾಗಿ ಬಂದು ಸರ್ಕಾರಿ ನೌಕರರ ಹಾಗೂ ಅಧಿಕಾರಿಗಳ ಧೋರಣೆ ವಿರುದ್ಧ ಸಿಡಿದೇಳುತ್ತಿದ್ದರು. ಆದರೆ ಅದೇಕೋ ಈಗ ಆ ಕುತೂಹಲ ಇಲ್ಲದಾಗಿದೆ. ಕಳೆದ ಜನವರಿಯಿಂದ ಈ ದಿನದ ತನಕ ಕೇವಲ 20 ಮಂದಿ ಮಾತ್ರ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಈ 20 ರಲ್ಲಿ ಈ ಬಾರಿ ಭೇಟಿ ವೇಳೆ ನೀಡಿದ 7 ದೂರುಗಳೂ ಸೇರಿವೆ. ಜನರ ಈ ಪ್ರತಿಕ್ರಿಯೆ ನೋಡಿದರೆ ಈ ಲೋಕಾಯುಕ್ತರಿಂದಲೂ ತಮಗೆ ಶೀಘ್ರ ನ್ಯಾಯ ದೊರೆಯದು ಹಾಗೂ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳಿಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಈ ನಿರಾಸೆಗೆ ಕಾರಣವಿರಬಹುದು.
ಈ ಬಾರಿ ಬಂದದ್ದು 7 ದೂರು: ತಾಲೂಕಿಗೆ ಲೋಕಾಯುಕ್ತರು ನಡೆಸುವ ಜನಸಂಪರ್ಕ ಸಭೆಯ ಸಂಗತಿಯನ್ನು ಜನ ಸಾಮಾನ್ಯರಿಗೆ ತಿಳಿಸಲು ತಾಲೂಕು ಆಡಳಿತ ತಡ ಮಾಡುವುದು ಹಾಗೂ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಜನರಿಗೆ ವಿಷಯ ಮುಟ್ಟಿಸುವಲ್ಲಿ ಬೇಜವಾಬ್ದಾರಿ ತೋರುವುದು ಪ್ರಥಮವಾಗಿ ಗೋಚರವಾಗುವ ಸಂಗತಿಯಾಗಿದೆ. ಈ ಬಾರಿಯ ಭೇಟಿಯ ಕುರಿತು ಜನರಿಗೆ ಲೋಕಾಯುಕ್ತರ ಭೇಟಿ ಮಾಹಿತಿ ಇಲ್ಲದ ಕಾರಣ ಕೇವಲ 7 ಮಂದಿ ಮಾತ್ರ ದೂರು ನೀಡಿದರು. ಇವರಲ್ಲಿ ಈಗಾಗಲೇ ಎರಡು ಮೂರು ಬಾರಿ ಲೋಕಾಯುಕ್ತರಿಗೇ ದೂರು ನೀಡಿದ್ದರೂ ಕ್ರಮ ಜರುಗಿಸಿಲ್ಲ ಎಂದು ದೂರಿದವರೇ ಆಗಿದ್ದಾರೆ.
ಅಸಹಾಯಕತೆ: ಬಾಣಸಂದ್ರದ ಜವರಯ್ಯನವರು ತಮ್ಮ ಜಮೀನಿನ ಖಾತೆಯನ್ನು ಗ್ರಾಮ ಪಂಚಾಯ್ತಿ ಸಿಬ್ಬಂದಿ ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಆ ಕುರಿತು ಲೋಕಾಯುಕ್ತರ ಸೂಚನೆ ಮೇರೆಗೂ ಜಗ್ಗದಿರುವ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಪುನಃ ದೂರು ಸಲ್ಲಿಸಿದರು. ನಿಮ್ಮ ಮಾತಿಗೂ ಈ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಬೆಲೆಯೇ ಕೊಡ್ತಿಲ್ವಲ್ಲ ನಾವೇನು ಮಾಡಬೇಕು ಹೇಳಿ ಸ್ವಾಮಿ ಎಂದು ಜವರಯ್ಯ ಲೋಕಾಯುಕ್ತ ಇನ್ಸ್ ಪೆಕ್ಟರ್ ರಮೇಶ್ ಕುಮಾರ್ ಅವರಲ್ಲಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಮತ್ತೊಬ್ಬರದೂ ಇದೇ ಕಥೆ: ತಾವು ಈ ಹಿಂದೆಯೇ ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ತಮ್ಮ ಜಮೀನನ್ನು ಇತರೆಯವರು ಉಳುಮೆ ಮಾಡಿಕೊಂಡಿದ್ದಾರೆ. ಬಿಡಿಸಿಕೊಡಿ ಎಂದರೂ ಯಾವುದೇ ಕಾರ್ಯ ಪ್ರಗತಿಯಾಗಿಲ್ಲ ಎಂದು ಹೊಣಕೆರೆಯ ಪರಿಶಿಷ್ಟ ಜಾತಿಗೆ ಸೇರಿದ ಮಾರುತಿ ಎಂಬುವವರು ಪುನಃ ಅರ್ಜಿ ಸಲ್ಲಿಸಿದರು. ಲೋಕಾಯುಕ್ತದವರ ಸೂಚನೆಗೂ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಹೀಗಾದರೆ ನಾವು ಇನ್ಯಾರ ಬಳಿ ಹೋಗಬೇಕು ಎಂದು ಕಳವಳ ವ್ಯಕ್ತಪಡಿಸಿದರು. ಕೆ.ಗಂಗನಹಳ್ಳಿಯಲ್ಲಿ ಸುಮಾರು 3.60 ಲಕ್ಷ ರು.ಗಳ ವೆಚ್ಚದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ನಡೆದಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಸರಿಪಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗ್ರಾಮದ ರಾಮಸ್ವಾಮಿ ಲೋಕಾಯುಕ್ತ ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದರು. ದೊಡ್ಡಾಘಟ್ಟದಲ್ಲಿ ನಿರ್ಮಾಣ ಮಾಡಿರುವ ಹೇಮಾವತಿ ನದಿ ನೀರಿನ ಚಾನಲ್ ನಿರ್ಮಾಣದ ವೇಳೆ ಪರಿಹಾರ ನೀಡುವ ಅಧಿಕಾರಿಗಳು ಹಣ ವಿತರಣೆ ಮಾಡುವಾಗ ತಾರತಮ್ಯ ಮಾಡಿದ್ದಾರೆ, ಸರಿಪಡಿಸಿಕೊಡಿ ಎಂದು ಗ್ರಾಮದ ನಂಜಪ್ಪ ದೂರಿದ್ದಾರೆ. ಬಿಗನೇನಹಳ್ಳಿಯ ಎಸ್ ಸಿ, ಎಸ್ ಟಿ ಕಾಲೋನಿಗೆ ಸೂಕ್ತವಾದ ಸಿಮೆಂಟ್ ರಸ್ತೆ ಮಾಡಿಸಿ ಕೊಡಿ ಎಂದು ಕೇಳಲಾಗಿದೆ. ಬಾಣಸಂದ್ರದ ಮಾಯಾಚಾರ್ ಎಂಬುವವರು ತಮ್ಮ ಸುಪರ್ಧಿನಲ್ಲಿರುವ ಜಮೀನಿನ ವಿಸ್ತೀರ್ಣವನ್ನು ಅಳತೆ ಮಾಡಿಕೊಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಅಧಿಕಾರಿಗಳ ಹಾಜರು: ಹೀಗೆ ಕೆಲವೇ ಮಂದಿ ತಮ್ಮ ನೋವುಗಳನ್ನು ಹೇಳಿಕೊಳ್ಳಲು ಆಗಮಿಸಿದ್ದರು. ಈ ಬಾರಿಯ ವಿಶೇಷವೆಂದರೆ ತಾಲೂಕಿನ ಬಹುತೇಕ ಅಧಿಕಾರಿಗಳು ಲೋಕಾಯುಕ್ತರ ಸಭೆಗೆ ಹಾಜರಿದ್ದರು. ಆದರೆ ದೂರು ಕೊಡುವವರೇ ಇಲ್ಲದ್ದು ಹಲವಾರು ಪ್ರಶ್ನೆಗಳಿಗೆ ಆಸ್ಪದ ನೀಡುತ್ತಿತ್ತು. ತಾಲೂಕಿನಲ್ಲಿ ಸಮಸ್ಯೆಗಳೇ ಇಲ್ಲವೇ ಅಥವಾ ಸಾರ್ವಜನಿಕರಿಗೆ ಭೇಟಿ ಕುರಿತು ಮಾಹಿತಿ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆಯೇ ಎಂಬುದು. ತಹಸೀಲ್ದಾರ್ ಜೆ.ಪಿ.ಮಂಜೇಗೌಡ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಯ್ಯ ಹಾಗೂ ಸರ್ಕಲ್ ಇನ್ಸೆಪೆಕ್ಚರ್ ಆಂಜನ್ ಕುಮಾರ್ ಉಪಸ್ಥಿತರಿದ್ದರು. ತಮ್ಮ ಇಲಾಖೆಯ ಬಗ್ಗೆ ಯಾವುದೇ ತಕರಾರು ಇಲ್ಲದ ಕೆಲವು ಅಧಿಕಾರಿಗಳು ಮೊಬೈಲ್ಗೆ ಮೊರೆ ಹೋಗಿದ್ದು ಸಾಮಾನ್ಯವಾಗಿತ್ತು.
10 ದೂರು ವಿಲೇವಾರಿ: ಕಳೆದ ಜನವರಿಯಿಂದ ಮೇ ತನಕ ಬಂದಿದ್ದ 13 ದೂರುಗಳ ಪೈಕಿ 10 ದೂರುಗಳು ವಿಲೇವಾರಿಯಾಗಿದೆ. 3 ದೂರುಗಳನ್ನು ಬಗೆಹರಿಸಲು ಕಾಲಾವಕಾಶ ಕೋರಿ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಲೋಕಾಯುಕ್ತ ಇನ್ಸೆಪೆಕ್ಟರ್ ರಮೇಶ್ ಕುಮಾರ್ ಹೇಳಿದರು.
ಒಟ್ಟಿನಲ್ಲಿ ಮೂಗುತಿಗಿಂತ ಮೂಗೇ ಭಾರ ಎನ್ನುವಂತೆ ಎಲ್ಲಾ ಅಧಿಕಾರಿಗಳು ಹಾಜರಿದ್ದರೂ ಸಹ ದೂರು ನೀಡುವವರೇ ಇಲ್ಲದೇ ಇಡೀ ವ್ಯವಸ್ಥೆಯನ್ನು ಅಣಕಿಸುವಂತಿತ್ತು. ಮುಂಬರುವ ದಿನಗಳಲ್ಲಿ ಭೇಟಿಯ ಕುರಿತು ಸಾರ್ವಜನಿಕರಿಗೆ ಒಂದು ವಾರ ಕಾಲ ಮೊದಲೇ ಮಾಹಿತಿ ತಲುವಲು ವ್ಯವಸ್ಥೆ ಮಾಡುವುದಾಗಿ ಲೋಕಾಯುಕ್ತ ಅಧಿಕಾರಿಗಳು ಮಾಧ್ಯಮದವರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

