ಅಂಗನವಾಡಿ ಕೇಂದ್ರಗಳಿಗೆ ಸೌಕರ್ಯ ಒದಗಿಸಲು ಪ್ರಸ್ತಾವನೆ
ತುಮಕೂರು: ತುಮಕೂರು ನಗರ ವ್ಯಾಪ್ತಿಯಲ್ಲಿ 138 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಸ್ವಂತ ಕಟ್ಟಡವಿರುವ 23 ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದ್ದು, ಈ ನಿಟ್ಟಿನಲ್ಲಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸುಜಾತ ಅವರು ತಿಳಿಸಿದರು. ಅವರು ನಗರಸಭೆ ಸಭಾಂಗಣದಲ್ಲಿ ಇತ್ತೀಚೆಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳಿಂದ ಅನುಷ್ಟಾನಗೊಳ್ಳುತ್ತಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಂಬಂಧ ಚರ್ಚಿಸಲು ಕರೆಯಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸ್ವಂತ ಕಟ್ಟಡಗಳಲ್ಲಿ 5 ಕೇಂದ್ರಗಳಿಗೆ ಅಡಿಗೆಕೋಣೆ, 15 ಕೇಂದ್ರಗಳಿಗೆ ದಾಸ್ತಾನು ಕೊಠಡಿ, 18 ಕೇಂದ್ರಗಳಿಗೆ ಶೌಚಾಲಯ, 12 ಕಟ್ಟಡಗಳ ದುರಸ್ತಿ ಮಾಡಬೇಕಿದ್ದು, ಈ 23 ಸ್ವಂತ ಕಟ್ಟಡಗಳಿಗೂ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್ ಅಳವಡಿಸಬೇಕಾಗಿದೆ ಎಂದು ಅವರು ತಿಳಿಸಿದರು. ಪಿ.ಎಸ್.ಪಾಳ್ಯ ಮತ್ತು ಉಪ್ಪಾರಹಳ್ಳಿಯ 3 ಕೇಂದ್ರಗಳಿಗೆ ನಿವೇಶನ ಲಭ್ಯವಿದ್ದು, ಕಟ್ಟಡ ನಿರ್ಮಿಸಬೇಕಾಗಿರುತ್ತದೆ. ಮರಳೂರುದಿಣ್ಣೆ, ಗೆದ್ದಲಹಳ್ಳಿ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲವಾಗಿದ್ದು, ಈ ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಬಾಡಿಗೆ ಕಟ್ಟಡದಲ್ಲಿ: ನಗರಸಭೆ ವ್ಯಾಪ್ತಿಯಲ್ಲಿ 94 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಲಾಖೆಯಿಂದ 750 ಬಾಡಿಗೆ ಪಾವತಿಸಲಾಗುತ್ತಿದೆ. ನಗರಸಭೆಯಿಂದ ಪ್ರತಿ ಕೇಂದ್ರಕ್ಕೆ ಹೆಚ್ಚುವರಿಯಾಗಿ ಅನುದಾನ ಒದಗಿಸಿಕೊಟ್ಟಲ್ಲಿ ಉತ್ತಮ ಕಟ್ಟಡಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು. ಗುಂಪು ಮನೆ ನಿರ್ಮಾಣ ಮಾಡುವಾಗ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸುವಾಗ ಒಂದು ಕಟ್ಟಡವನ್ನು ಅಂಗನವಾಡಿ ಕೇಂದ್ರಕ್ಕೆ ಮೀಸಲಿಡಬೇಕು. ಹೊಸದಾಗಿ ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚುವಾಗ ಒಂದು ನಿವೇಶನ ಅಂಗನವಾಡಿ ಕೇಂದ್ರಕ್ಕೆ ಮೀಸಲಿಡಬೇಕು ಎಂದು ಅವರು ತಿಳಿಸಿದರು. ತುಮಕೂರು ನಗರ ಎಂ.ಜಿ.ರಸ್ತೆಯಲ್ಲಿ ಬಾಲಭವನ ಕಟ್ಟಡವಿದ್ದು, ದೊಡ್ಡ ವಿಸ್ತೀರ್ಣದ ಆಟದ ಮೈದಾನವಿದ್ದು, ನಗರಸಭೆ ವತಿಯಿಂದ ಆಟಿಕೆ ಸಾಮಾನುಗಳನ್ನು ಒದಗಿಸಿದಲ್ಲಿ ಮಕ್ಕಳ ಮನರಂಜನೆಗೆ ಅನುಕೂಲವಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.
ಮಾಜಿ ಮೇಯರ್ ಪುತ್ರಿ ಆತ್ಮಹತ್ಯೆ
ತುಮಕೂರು: ಮಾಜಿ ಮೇಯರ್ ಯಶೋದ ಗಂಗಪ್ಪ ಪುತ್ರಿ ಗೀತಾಶ್ರೀ ಭಾನುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬೆಳಕಿಗೆ ಬಂದಿದೆ. 25 ವರ್ಷದ ಈಕೆ ತುಮಕೂರಿನ ಎಚ್ಎಂಎಸ್ಐಟಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಕೆ ನೇಣು ಬಿಗಿದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ವಾಸನೆ ಬಂದಿದ್ದರಿಂದ ಬಾಗಿಲು ಒಡೆದು ನೋಡಿದಾಗ ಈ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣವಿನ್ನೂ ತಿಳಿದು ಬಂದಿಲ್ಲ.
ನಾಳೆಯಿಂದ ಹೆಚ್ಚುವರಿ ನಫೆಡ್ ಪ್ರಾರಂಭ
ಹುಳಿಯಾರು: ಚಿಕ್ಕನಾಯಕನಹಳ್ಳಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ತಾ.27ರ ಗುರುವಾರದಿಂದ ಹೆಚ್ಚುವರಿ ನಫೆಡ್ ಕೊಬ್ಬರಿ ಖರೀದಿ ಕೇಂದ್ರ ಪ್ರಾರಂಭಗೊಳ್ಳಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ಸರ್ಕಾರ ಮುಂದಾಗಿದ್ದು, ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಬೆಂಬಲ ಬೆಲೆ 5500 ರು. ಮತ್ತು ಸಹಾಯಧನ 1000 ರು. ನಂತೆ ಖರೀದಿ ನಡೆಯಲಿದೆ. ಈಗಾಗಲೇ ಸೆ. ತಿಂಗಳವರೆಗೆ ಕೊಬ್ಬರಿ ಬಿಡಲು ರೈತರಿಗೆ ದಾಸ್ತಾನು ತರುವ ದಿನಾಂಕಕ್ಕೆ ಟೋಕನನ್ನು ನಫೆಡ್ ಅಧಿಕಾರಿಗಳು ನೀಡಿದ್ದು, ತಾಲೂಕಿನ ಎಲ್ಲಾ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೊಬ್ಬರಿಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿಕೊಳ್ಳುವಂತೆ ಎಪಿಎಂಸಿ ಅಧ್ಯಕ್ಷ ಶಿವರಾಜ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅನಾಥ ಮಗುವಿಗೆ ಶಾಲೆಯಲ್ಲಿ ಆಶ್ರಯ
ಪಾವಗಡ: ದೂರು ನೀಡಿದರೂ ರಕ್ಷಿಸುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ 6 ವರ್ಷದ ಅನಾಥ ಮಗುವೊಂದು ಸರ್ಕಾರಿ ಶಾಲೆಯಲ್ಲಿ ಆಶ್ರಯಿಸಿದ ಘಟನೆ ತಾಲೂಕಿನ ವಳ್ಳೂರು ಗ್ರಾಮದಲ್ಲಿ ನಡೆದಿದೆ. ಮೂರು ವರ್ಷದ ಬಾಲಕಿಯೊಬ್ಬಳು ಪತ್ತೆಯಾಗಿದ್ದು ಈ ಬಾಲಕಿ ರಸ್ತೆ ಬದಿಯಲ್ಲಿ ಅಮ್ಮ, ಅಮ್ಮ, ಎಂದು ಗೋಳಾಡುತ್ತಿರುವಾಗ ಸಾರ್ವಜನಿಕರು ಆ ಮಗುವನ್ನು ವಿಚಾರಿಸಿದ್ದಾರೆ. ವಿಳಾಸ ವಿವರ ಸರಿಯಾಗಿ ವಿವರಿಸಲು ಬಾರದ ಆ ಬಾಲಕಿ ತೊದಲುವ ಕಾರಣ ವಿಳಾಸ ಪತ್ತೆ ಮಾಡಲು ಸಾಧ್ಯವಾಗದೆ ಗ್ರಾಮಸ್ಥರು ಬಾಲಕಿಯ ಆರೈಕೆ ಮಾಡಿ, ನಂತರ ಗ್ರಾಮದ ಶಾಲೆಯಲ್ಲಿ ಬಿಟ್ಟಿದ್ದಾರೆ. ಶಾಲೆಯ ಶಿಕ್ಷಕರು ಮಗುವನ್ನು ಕಂಡು ವಿಚಾರಿಸಿದ್ದಾರೆ. ವಿಳಾಸ ಹೇಳಲು ಬಾರದ ಆ ಮಗುವನ್ನು ಶಾಲೆಯಲ್ಲಿಯೇ ಇಟ್ಟುಕೊಂಡು ಬಾಲಕಿಯ ಆರೈಕೆಗೆ ಬಿಸಿಯೂಟದ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಕಳೆದ ಮೂರು ದಿನಗಳಿಂದ ಬಿಸಿಯೂಟದ ಸಿಬ್ಬಂದಿ ಬಾಲಕಿಯ ಆರೈಕೆಯಲ್ಲಿ ನಿರತರಾಗಿರುವುದಾಗಿ ತಿಳಿದಿದೆ. ಗ್ರಾಮದಲ್ಲಿ ಬಾಲಕಿ ಪತ್ತೆಯಾದ ಕೂಡಲೇ ಸಂಬಂಧಪಟ್ಟ ಸಿಡಿಪಿಒ ಉಷಾ ತಿರುಮಣಿ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ರಾಮನಾಥಪುರದಲ್ಲಿ ಬಿರುಸುಗೊಂಡ ಮಳೆ
ಹಾಸನ: ಕಳೆದ ಎರಡು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಸೋಮವಾರ ರಾತ್ರಿಯಿಂದ ಮತ್ತೆ ಬಿರುಸು ಪಡೆದು ಕೊಂಡಿದ್ದು ತುಂತುರು ಮಳೆಯಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ವಾರದಿಂದ ತುಂತುರು ಮಳೆ ಬೀಳುತ್ತಿದ್ದರೂ ಇಲ್ಲಿಯವರೆಗೂ ಭೂಮಿಗೆ ಹಾಕಿರುವ ತಂಬಾಕು ಮುಂತಾದ ಬೆಳೆಗೆ ಸರಿಯಾಗಿ ಭೂಮಿ ಹದವಾಗಿಲ್ಲ ಎಂದು ರೈತ ಮುಖಂಡ ಶಿರದನಹಳ್ಳಿ ಮಲ್ಲೇಶ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

