ರೈತರ ಆಶಾಕಿರಣ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ
ಕ.ಪ್ರ. ವಾರ್ತೆ ತುಮಕೂರು ಜೂ.26
ತುಮಕೂರು ಜಿಲ್ಲೆಯ ರೈತ ಸಮುದಾಯದ ಆಶಾಕಿರಣವಾಗಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಗುಣಮಟ್ಟದ ಬೀಜ ಹಾಗೂ ರೋಗ ಮುಕ್ತ ಉತ್ತಮ ಗುಣಮಟ್ಟದ ಸಸಿಗಳನ್ನು ನಿರಂತರವಾಗಿ ಉತ್ಪಾದಿಸಿ, ರೈತರಿಗೆ ವಿತರಿಸಲಾಗುತ್ತಿದೆ ಎಂದು ತುಮಕೂರು ಸಮೀಪದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಲ್.ಬಿ. ನಾಯಕ್ ಹಾಗೂ ವಿಜ್ಞಾನಿ ಡಾ. ಗದಗಿಮಠ್ ತಿಳಿಸಿದರು.
ತುಮಕೂರು ಸಮೀಪದ ಹಿರೇಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತ ಸಮುದಾಯಕ್ಕೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಇತರೆ ಕೃಷಿಯೇತರ ತಂತ್ರಜ್ಞಾನಗಳನ್ನು ತಲುಪಿಸುವ ಘನೋದ್ದೇಶವನ್ನು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹೊಂದಿದ್ದು, ರೈತರ ಹಿತಾಸಕ್ತಿ ಕಾಪಾಡಲು ಕಟಿಬದ್ಧವಾಗಿದೆ. ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು, ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿದ ನೂತನ ತಂತ್ರಜ್ಞಾನ, ಸಂಶೋಧನೆಗಳು ಹಾಗೂ ಅಭಿವೃದ್ಧಿಪಡಿಸಿದ ಹೊಸ ಹೊಸ ತಳಿಗಳನ್ನು ರೈತರಿಗೆ ತಲುಪಿಸುವುದಲ್ಲದೆ, ಭಾರತೀಯ ತೋಟಗಾರಿಕಾ ಸಂಸ್ಥೆ ಅಭಿವೃದ್ಧಿಪಡಿಸಿದ ತಳಿಗಳ ಗುಣಮಟ್ಟದ ಬೀಜ ಹಾಗೂ ರೋಗ ಮುಕ್ತ ಉತ್ತಮ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಿ, ರೈತರಿಗೆ ವಿತರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಸೂಕ್ಷ್ಮ ಪೋಷಕಾಂಶಗಳ ಮಿಶ್ರಣ ಅಭಿವೃದ್ಧಿ: ಮುಖ್ಯ ಪೋಷಕಾಂಶಗಳ ಜತೆಯಲ್ಲೇ ಬೆಳೆಗೆ ಕೆಲಮೊಂದು ಸೂಕ್ಷ್ಮ ಪೋಷಕಾಂಶಗಳ ಅವಶ್ಯಕತೆಯೂ ಇರುತ್ತದೆ. ಹೀಗಾಗಿ, ಐಐಎಚ್ಆರ್, ತರಕಾರಿ ಸ್ಪೆಷಲ್, ಬಾಳೆ ಸ್ಪೆಷಲ್, ಮಾವು ಸ್ಪೆಷಲ್ ಹಾಗೂ ನಿಂಬೆ ಜಾತಿಯ ತಳಿಗಳ ಸ್ಪೆಷಲ್ ಎಂಬ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣವನ್ನು ಅಭಿವೃದ್ಧಿಪಡಿಸಲಾಗಿದೆ. ಕೃಷಿ ವಿಜ್ಞಾನ ಕೇಂದ್ರವು ಇವುಗಳನ್ನು ಹಿರೇಹಳ್ಳಿಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ, ಸ್ಥಳೀಯ ರೈತರಿಗೆ ಸೂಕ್ಷ್ಮ ಪೋಷಕಾಂಶಗಳು ಸುಲಭವಾಗಿ ಸಿಗುವ ವ್ಯವಸ್ಥೆ ಮಾಡಿದೆ. ಜತೆಯಲ್ಲಿಯೇ, ಕೇಂದ್ರದಲ್ಲಿ ಜೈವಿಕ ಜೀವಾಣುಗಳಾದ ಅರ್ಕಾ ಸೂಕ್ಷ್ಮಾಣು ಜೀವಾಣುಗಳ ಗೊಬ್ಬರ, ಟ್ರೈಕೋಡರ್ಮಾ, ಸೂಡೋಮೋನಾಸ್ ಹಾಗೂ ಜೈವಿಕ ಕೀಟ ನಾಶಕಗಳಾದ ಹೊಂಗೆ ಹಾಗೂ ಬೇವಿನ ಸೋಪನ್ನು ತಯಾರಿಸಿ ರೈತರಿಗೆ ತಲುಪಿಸಲಾಗುತ್ತಿದೆ.
ಮಣ್ಣು, ನೀರು, ಎಲೆ ಪ್ರಯೋಗಾಲಯ: ಹಿರೇಹಳ್ಳಿ ಕೆವಿಕೆಯಲ್ಲಿ ಮಣ್ಣು, ನೀರು, ಎಲೆ ಪರೀಕ್ಷೆ ಪ್ರಯೋಗಾಲಯವಿದೆ. ರೈತರಿಗೆ ತಮ್ಮ ಜಮೀನಿನ ಮಣ್ಣಿನ ಮತ್ತು ನೀರಿನ ಮಾದರಿಗಳನ್ನು ಪರೀಕ್ಷಿಸಿಕೊಳ್ಳಲು ಅವಕಾಶವಿದೆ. ಅಣಬೆ ಬೇಸಾಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ಸ್ಥಳೀಯವಾಗಿ ಅಣಬೆ ಬೇಸಾಯಕ್ಕೆ ಪೂರಕವಾದ ಅಣಬೆ ಬೀಜಗಳನ್ನು ರೈತರ ಅಗತ್ಯಗಳಿಗೆ ಅನುಸಾರವಾಗಿ ಪೂರೈಸಲು ಅಣಬೆ ಬೀಜೋತ್ಪಾದನಾ ಘಟಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈತರ ಬೆಳೆಗಳ ರೋಗವನ್ನು ಪರೀಕ್ಷಿಸಲು ಸಸ್ಯ ರೋಗ ನಿಯಂತ್ರಣ ಘಟಕವನ್ನು ಸ್ಥಾಪಿಸಲಾಗಿದ್ದು, ಸಾಕಷ್ಟು ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಎಲ್.ಬಿ. ನಾಯಕ್, ಡಾ. ಗದಗೀಮಠ್ ತಿಳಿಸಿದರು.
ಧ್ವನಿ ಸಂದೇಶ: ಕೃಷಿ ಇಲಾಖೆ ವತಿಯಿಂದ ನೋಂದಾಯಿತ ಪ್ರಗತಿಪರ ರೈತರಿಗೆ ಆಯಾ ಕಾಲಕ್ಕೆ ತಕ್ಕಂತೆ ವಿವಿಧ ಬೆಳೆಗಳ ನಾಟಿ, ಪೋಷಕಾಂಶಗಳ ನಿರ್ವಹಣೆ ಮಾಹಿತಿ, ನೀರಿನ ಸದುಪಯೋಗ, ಕೀಟ ಹಾಗೂ ರೋಗಗಳ ನಿಯಂತ್ರಣ ಕ್ರಮಗಳು ಮುಂತಾದ ಮಾಹಿತಿಯನ್ನೊಳಗೊಂಡ ಧ್ವನಿ ಸಂದೇಶವನ್ನು ಕೃಷಿ ವಿಜ್ಞಾನ ಕೇಂದ್ರ ನಿರಂತರವಾಗಿ ಕಳುಹಿಸುವ ವ್ಯವಸ್ಥೆ ಮಾಡಿದೆ.
100 ರಿಂದ 120 ತರಬೇತಿ: ಸಂಸ್ಥೆಯ ಆವರಣದಲ್ಲಿ ಕೃಷಿ ಯಂತ್ರೋಪಕರಣಗಳ ಘಟಕ, ಜೈವಿಕ ಜೀವಾಣುಗಳ ಉತ್ಪಾದನಾ ಘಟಕ, ಲಘು ಪೋಷಕಾಂಶಗಳ ಉತ್ಪಾದನಾ ಘಟಕ, ಕಾಂಪೋಸ್ಟ್, ಎರೆಹುಳು ಉತ್ಪಾದನಾ ಘಟಕ, ಅಡಿಕೆ ತಟ್ಟೆ ಉತ್ಪಾದನಾ ಘಟಕ, ಮಳೆ ನೀರು ಸಂಗ್ರಹಣಾ ಹೊಂಡ, ಕೃಷಿ ಹೊಂಡಗಳಲ್ಲಿ ಮೀನು ಸಾಕಣೆ, ಹಣ್ಣಿನ ಬೆಳೆಗಳ ಸಸಿಗಳ ಮತ್ತು ಕಸಿ ಗಿಡಗಳ ಉತ್ಪಾದನಾ ಘಟಕ, ನವೀನ ಬೇಸಾಯ ಕ್ರಮಗಳ ಅಂಗವಾದ ಶೇಡ್ ನೆಟ್ ಮತ್ತು ಪಾಲಿ ಹೌಸ್ ತಂತ್ರಜ್ಞಾನಗಳ ಪ್ರದರ್ಶನ, ಹೂವಿನ ಸುಗಂಧ ಸಸ್ಯಗಳು, ಮತ್ತು ಔಷಧಿ ಸಸಿಗಳ ಉತ್ಪಾದನಾ ಘಟಕ ಮತ್ತು ಸಮಗ್ರ ಕೃಷಿ ಪದ್ದತಿ ಪರಿಚಯಿಸುವ ತಾಕುಗಳಿವೆ. ಜತೆಯಲ್ಲಿಯೇ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮೌಲ್ಯವರ್ಧಿತ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಕೆಯ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರವು ಪ್ರತಿವರ್ಷ ಸುಮಾರು 100 ರಿಂದ 120 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಿಗೆ ನಿರಂತರವಾಗಿ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದು, ಜಿಲ್ಲೆಯ ರೈತರು ಕೇಂದ್ರಕ್ಕೆ ಭೇಟಿ ನೀಡಿ ತಮಗೆ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಷಯ ತಜ್ಞರಾದ ಡಾ. ಕೆ.ಎನ್. ಜಗದೀಶ್, ಹನುಮಂತೇಗೌಡ, ರಮೇಶ್, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ರೈತರ ಸಮಸ್ಯೆ ನೀಗ ಲು ಸಿದ್ಧ
ತುಮಕೂರು: ರೈತರ ಸಮಸ್ಯೆಗಳನ್ನು ನೀಗಿಸಲು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸದಾ ಸಿದ್ದವಿದೆ. ಎಲ್ಲ ತರಹದ ಬೆಳೆ ಬೆಳೆಯಲು ರೈತರಿಗೆ ಸಲಹೆ, ನಾನಾ ರೀತಿಯ ತಂತ್ರಜ್ಞಾನ ತಲುಪಿಸಲು ಸದಾ ಸಿದ್ಧವಿದೆ. ಎಲ್ಲ ರೀತಿಯ ತಂತ್ರಜ್ಞಾನಗಳನ್ನು ಒಂದೆಡೆ ಸೇರಿಸಿ ರೈತರಿಗೆ ನೀಡಲಾಗುತ್ತಿದೆ. ರೈತರಿಗೆ ಆದಾಯ ತರುವ ನಿಟ್ಟಿನಲ್ಲಿ ಸಲಹೆ - ಸೂಚನೆಗಳನ್ನು ನೀಡಲಾಗುತ್ತಿದೆ. ಬೋರ್ವೆಲ್ ರೀಚಾರ್ಜ್, ಹನಿ ನೀರಾವರಿ, ಕಿರು ಧಾನ್ಯ ಬಳಕೆ, ಔಷಧೀಯ ಬೆಳೆ ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆ ನೀಡಲಾಗಿದೆ. ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಫೋನ್ ಮಾಡಿದರೆ ಸಾಕು ಸಲಹೆ, ಸೂಚನೆ, ಕೊಡಲು ಸಿದ್ಧವಿದೆ ಕೇಂದ್ರ. ಜತೆಗೆ ಅನಿವಾರ್ಯವಾದಲ್ಲಿ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ವಿಜ್ಞಾನಿಗಳು ತೆರಳಲಿದ್ದಾರೆ ಎಂದು ಕೇಂದ್ರದ ಡಾ.ಎಲ್.ಬಿ. ನಾಯಕ್ ಹಾಗೂ ಗದಗಿಮಠ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 0816-2243214, 9844481108 ಸಂಪರ್ಕಿಸುವಂತೆ ಕೋರಲಾಗಿದೆ.
55 ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ
ತುಮಕೂರು: ಕಳೆದ 3 ವರ್ಷಗಳ ಅವಧಿಯಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 55 ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ ತಾಕುಗಳನ್ನು ಬೆಳೆಸಲಾಗಿದೆ. 30 ತಂತ್ರಜ್ಞಾನದ ಮೂಲಕ ರೈತರ ತೋಟಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಬೆಳೆಸಲಾಗಿದೆ. ಕೇಂದ್ರಕ್ಕೆ 4 ವರ್ಷ ಪೂರ್ಣಗೊಂಡಿದೆ. ರೈತರಿಗೆ ತಂತ್ರಜ್ಞಾನ ವರ್ಗಾವಣೆಯಲ್ಲಿ ಹಿರೇಹಳ್ಳಿ ಕೆವಿಕೆ ಮಹತ್ವದ ಪಾತ್ರ ವಹಿಸುತ್ತಿದೆ. ಕಳೆದ 3 ವರ್ಷಗಳಲ್ಲಿ 55 ಪ್ರಾತ್ಯಕ್ಷಿಕೆ ತಾಕುಗಳನ್ನು ಕೇಂದ್ರದಲ್ಲೇ ಬೆಳೆಸಲಾಗಿದೆ. ಇದು ಖಾಯಂ. 35 ಎಕರೆ ವಿಸ್ತಾರದ ಕೇಂದ್ರದಲ್ಲಿ 5 ವಿವಿಧ ತರಕಾರಿ ಬೆಳೆಗಳ ಬೀಜೋತ್ಪಾದನೆ ಹಾಗೂ ಪಪ್ಪಾಯಿ ಸೇರಿದಂತೆ ಕೆಲ ತೋಟಗಾರಿಕೆ ಬೆಳೆಗಳ ಬೀಜೋತ್ಪಾದನೆ ಸಹ ನಡೆಸುತ್ತಿದೆ.
ತರಕಾರಿ ಬೆಳೆಗಳಲ್ಲಿ 16 ನಾನಾ ತಂತ್ರಜ್ಞಾನ, ಮಾವಿನ ಬೆಳೆಯಲ್ಲಿ 6, 20 ಕ್ಕೂ ಹೆಚ್ಚು ಪ್ರಾಕಾರದ ಹಣ್ಣಿನ ಬೆಳೆಗಳ ತಂತ್ರಜ್ಞಾನ, 6 ವಿವಿಧ ಹೂವಿನ ತಂತ್ರಜ್ಞಾನ, 3 ಅಣಬೆ ತಂತ್ರಜ್ಞಾನ ಸೇರಿದಂತೆ ಇತರೆ ಬೆಳೆಗಳಿಗೆ ಸಂಬಂಧಿಸಿದಂತೆ ಮೊದಲು ಕೇಂದ್ರದಲ್ಲಿ ಪ್ರಯೋಗಿಸಿ, ರೈತರಿಗೆ ವರ್ಗಾಯಿಸುವ ಕೆಲಸ ನಡೆದಿದೆ.
ಮಾವು, ಹಲಸು, ಸೀತಾಫಲ, ಮೂಸಂಬಿ, ನೆಲ್ಲಿಕಾಯಿ, ಸೀಬೆ, ಬಾಳೆ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳು, ತೊಗರಿ, ಜೋಳ, ರಾಗಿ, ಶೇಂಗಾ ಇತ್ಯಾದಿ ಧಾನ್ಯಗಳು. ವಿವಿಧ ರೀತಿಯ ಹೂವುಗಳ ತಳಿಗಳು, ನೀರು ನಿಲ್ಲಿಸದೆ ಬೆಳೆಯುವ ಬತ್ತದ ತಳಿ ಸೇರಿದಂತೆ ಇತರೆ ಬೆಳೆಗಳ ಕುರಿತಂತೆ ಪ್ರಾತ್ಯಕ್ಷಿಕೆ ಏರ್ಪಡಿಸಿ, ರೈತರಿಗೆ ಪರಿಚಯಿಸಲಾಗಿದೆ. ಈವರೆವಿಗೆ ಗಿಡದ ಬುಡ, ಭೂಮಿಗೆ ಪೋಷಕಾಂಶ ನೀಡಿ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ಈಗ ಗಿಡಗಳಿಗೇ ನೇರವಾಗಿ ಪೋಷಕಾಂಶ ಸಿಂಪಡಣೆ ಮಾಡುವುದರ ಮೂಲಕ ಪೋಷಕಾಂಶ ಒದಗಿಸಲಾಗುತ್ತಿದೆ. ಇದರಿಂದ ಇಳುವರಿಯೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯೋಗವಾಗಿದೆ. ಮುಂದಿನ ದಿನಗಳಲ್ಲಿ ಕಡಿಮೆ ಖರ್ಚಿನಲ್ಲಿ ಗಿಡಗಳಿಗೆ ಅಧಿಕ ಪೋಷಕಾಂಶ ದೊರಕುವಂತೆ ಮಾಡುವ ಸಂಶೋಧನೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಲಾಗುತ್ತಿದೆ. ಇದೊಂದು ಮಹತ್ವದ ಸಂಶೋಧನೆಯಾಗಲಿದೆ ಎಂದು ನಾಯಕ್ ಹಾಗೂ ಗದಗಿ ಮಠ ತಿಳಿಸಿದರು.
ಗೊಬ್ಬರ ತಯಾರಿಕೆ: ಸಾವಯವ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳ ತಯಾರಿಕೆ, ಸಾವಯವ ಔಷಧ ತಯಾರಿಕೆ ಪ್ರಕಾರಗಳಲ್ಲಿ 15 ತಂತ್ರಜ್ಞಾನಗಳನ್ನು ಇಲ್ಲಿ ಪ್ರಯೋಗಿಸಿ, ರೈತರಿಗೆ ಒದಗಿಸಲಾಗುತ್ತಿದೆ. ಔಷಧಗಳು, ಕೀಟ ನಾಶಕಗಳು, ಗೊಬ್ಬರವೂ ಇಲ್ಲಿ ರೈತರಿಗೆ ಲಭ್ಯ. ರೈತರಿಗೆ ಉಚಿತ ತೋಟಗಾರಿಕೆ ಬೆಳೆಗಳ, ಔಷಧ ತಯಾರಿಕೆ, ಗೊಬ್ಬರ ತಯಾರಿಕೆ ತರಬೇತಿಯನ್ನೂ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ.
ನಶಿಸುತ್ತಿರುವ ಹಣ್ಣುಗಳ ಸಂರಕ್ಷಣೆ: ಹಿರೇಹಳ್ಳಿ ಕೆವಿಕೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಅಡಕೆ ಗಿಡಗಳಿದ್ದು, ಆಸಕ್ತ ರೈತರು ಒಂದು ಗಿಡಕ್ಕೆ 15 ನೀಡಿ ಪಡೆಯಬಹುದಾಗಿದೆ. ಹಾಗೆಯೇ ಅಣಬೆ ಬೀಜ ಅಭಿವೃದ್ಧಿ ಹಿನ್ನೆಲೆಯಲ್ಲಿ ಬೀಜೋತ್ಪಾದನಾ ಘಟಕ ಆರಂಭಿಸಲಾಗಿದೆ. ಅಣಬೆ ಬೆಳೆಯುವ ರೈತರಿಗೆ ಕಡಿಮೆ ದರದಲ್ಲಿ ಅಣಬೆ ಬೀಜಗಳನ್ನು ಪೂರೈಸುವ ವ್ಯವಸ್ಥೆಯೂ ಇದೆ. ಬೆಟ್ಟದ ನೆಲ್ಲಿಕಾಯಿಯನ್ನು ಇಲ್ಲಿನ ವಾತಾವರಣದಲ್ಲೂ ಬೆಳೆಯಬಹುದಾಗಿದೆ. ಕೇಂದ್ರದಲ್ಲಿ ಬೆಳೆದಿರುವ ಬೆಟ್ಟದ ನೆಲ್ಲಿ ಕಾಯಿ ಸಂಸ್ಕರಣೆ ಹಾಗೂ ಪಾನೀಯ ತಯಾರಿಸಿ ಮಾರಾಟ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ನೇರಳೆ, ಸೀತಾಫಲದಂತಹ ನಶಿಸಿಹೋಗುತ್ತಿರುವ ಹಣ್ಣುಗಳನ್ನು ಬೆಳೆಯುವ ಮೂಲಕ 30ಕ್ಕೂ ಹೆಚ್ಚು ಹಣ್ಣಿನ ತಳಿಗಳನ್ನು ಸಂರಕ್ಷಿಸಲಾಗುತ್ತಿದೆ.
ಬಳ್ಳಿ ಬದಲಿಗೆ ಬೀಜ: ಬಳ್ಳಿ ನೆಟ್ಟು ವೀಳ್ಯದೆಲೆ ಬೆಳೆಯುವುದು ಸಾಮಾನ್ಯವಾಗಿತ್ತು. ಆದರೆ ಬೀಜ ನೆಟ್ಟು ವೀಳ್ಯದೆಲೆ ಬೆಳೆಯಬಹುದಾಗಿದೆ. ಹಲವು ವೀಳ್ಯದೆಲೆ ತಳಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಬಳ್ಳಿ ಬದಲಿಗೆ ಬೀಜ ಬಳಸಿ ಗಿಡ ಬೆಳೆಸುವ ಆವಿಷ್ಕಾರ ನಡೆದಿದೆ. ದೇಶದಲ್ಲೇ ಮೊದಲ ಬಾರಿಗೆ ಹೈಬ್ರಿಡ್ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಸುಮಾರು 100 ವಿವಿಧ ಜಾತಿಯ ವೀಳ್ಯದೆಲೆ ತಳಿ ಅಭಿವೃದ್ಧಿ ಹಾಗೂ ಇತರೆ ಕಾರ್ಯಕ್ಕಾಗಿ ಕೇಂದ್ರ ಸರ್ಕಾರ 3 ಕೋಟಿ ನೆರವು ನೀಡಿದೆ ಎಂದು ನಾಯಕ್ ಹಾಗೂ ಗದಗಿಮಠ್ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

