ತುಮಕೂರು

ಕೈ ಗಲಭೆಗೆ ರಾಜಣ್ಣನೇ ನೇರ ಹೊಣೆ

Published On :

ಕ.ಪ್ರ.ವಾರ್ತೆ ತುರುವೇಕೆರೆ ಜೂ.27
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಮ್ಮುಖ ನಡೆದ ಆತ್ಮಾವಲೋಕನಾ ಸಭೆ ವೇಳೆ ನಡೆದ ಅಹಿತಕರ ಘಟನೆಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೀತಾ ಅವರ ಪತಿ ರಾಜಣ್ಣನವರೇ ನೇರ ಹೊಣೆ ಎಂದು ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಟಿ.ಎನ್.ಶಿವರಾಜು ಆರೋಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಅಧ್ಯಕ್ಷತೆಯಲ್ಲಿ ತುರುವೇಕೆರೆ ಕಾಂಗ್ರೆಸ್ ಮುಖಂಡರ ಸಭೆ ಕರೆದು ಪಕ್ಷಕ್ಕಾಗಿರುವ ನಷ್ಟ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಕಾರ್ಯಕರ್ತರನ್ನು ಸಂಘಟನೆ ಮಾಡುವ ಸಲುವಾಗಿ ಸಭೆ ಕರೆದಿದ್ದರು. ಆ ವೇಳೆ ತಾಲೂಕಿನ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಸಭೆಗೆ ಹಾಜರಾಗಿದ್ದರು. ತಮ್ಮ ಅಧ್ಯಕ್ಷತೆಯಲ್ಲಿ ಕೆಲ ದಿನಗಳ ಹಿಂದೆ ಪಟ್ಟಣದಲ್ಲೇ ಆತ್ಮಾವಲೋಕನ ಸಭೆ ಆಯೋಜಿಸಲಾಗಿತ್ತು. ಆ ಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾ ರಾಜಣ್ಣ ಅವರನ್ನೂ ಸಹ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ಉದ್ದೇಶಪೂರ್ವಕವಾಗೇ ಸಭೆಗೆ ಗೈರುಹಾಜರಾಗಿದ್ದ ರಾಜಣ್ಣ ಹಾಗೂ ಅವರ ಬೆಂಬಲಿಗರು ಜಿಲ್ಲಾ ಮಟ್ಟದಲ್ಲಿ ಇದ್ದ ಸಭೆಗೆ ಹಾಜರಾಗಿದ್ದರು ಎಂದರು.
ಸಭೆಗೆ ಮದ್ಯಪಾನ ಮಾಡಿ ಬಂದಿದ್ದ ಗೀತಾ ಅವರ ಪತಿ ರಾಜಣ್ಣ, ತುರುವೇಕೆರೆಯ ಕಾಂಗ್ರೆಸ್ ಮುಖಂಡರನ್ನು ನೋಡಿದೊಡನೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮುಖಂಡರ ಮೇಲೆ ಕುರ್ಚಿಯನ್ನು ಎಸೆಯಲು ಮುಂದಾದರು. ಇದರಿಂದ ಕೋಪಗೊಂಡ ಇತರೆ ಕಾರ್ಯಕರ್ತರೂ ಸಹ ತಮ್ಮ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಕುರ್ಚಿಯನ್ನು ಕೈಗೆತ್ತಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದ ಹಾಗೆ ರಾಜಣ್ಣ ಕಾಂಗ್ರೆಸ್‌ನ ಹಿರಿಯ ಮುಖಂಡರನ್ನೆಲ್ಲಾ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಯಾವುದೇ ತಪ್ಪು ಮಾಡದ ಜಿಲ್ಲಾಧ್ಯಕ್ಷರನ್ನೂ ರಾಜಣ್ಣ ಮನಸ್ಸಿಗೆ ಬಂದಂತೆ ಬೈದದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು ಎಂದು ಟಿ.ಎನ್.ಶಿವರಾಜು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದ ಸಂಘಟನೆ ಕುರಿತು ಚರ್ಚಿಸುತ್ತಿದ್ದ ಸಭೆಗೆ ಅನಾಗರಿಕರಂತೆ ನುಗ್ಗಿ ಸಭೆಗೆ ಗೌರವ ನೀಡದೆ ಅಪಮಾನ ಮಾಡಿರುವ ಗೀತಾ ಹಾಗೂ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪಕ್ಷದ ಹೀನಾಯ ಸೋಲಿಗೆ ಕಾರಣರಾಗಿರುವ ಪಕ್ಷದ ಅಭ್ಯರ್ಥಿ ಗೀತಾ ಅವರನ್ನೂ ಸಹ ತಕ್ಷಣದಿಂದಲೇ ಪಕ್ಷದಿಂದ ಅಮಾನತು ಮಾಡಬೇಕು ಎಂದು ಶಿವರಾಜು ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚೌದ್ರಿ ಟಿ.ರಂಗಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಟಿ.ಎಸ್. ದಾನಿಗೌಡ, ಮಾಜಿ ಎಪಿಎಂಸಿ ನಿರ್ದೇಶಕ ನಂಜುಂಡಪ್ಪ, ಮುಖಂಡರಾದ ಟಿ.ಕೆ. ಸತೀಶ್, ಹಾಗೂ ಸಿ.ಜೆ.ಆನಂದ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಪಕ್ಷ ದ್ರೋಹ ಮಾಡಿಲ್ಲ: ಸ್ಪಷ್ಟನೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮಾಡಲಾಗಿದೆ ಎಂದು ಪಕ್ಷದ ಅಭ್ಯರ್ಥಿಯಾಗಿದ್ದ ಗೀತಾ ರಾಜಣ್ಣ ಅವರು ತಾಲೂಕಿನ ಕೆಲವು ಮುಖಂಡರ ವಿರುಧ್ಧ ಕೆಪಿಸಿಸಿಗೆ ದೂರು ಸಲ್ಲಿಸಿದ್ದರು. ಇವರ ದೂರಿನನ್ವಯ ಕಾಂಗ್ರೆಸ್ ಪಕ್ಷ ತಾಲೂಕಿನ ಮುಖಂಡರಾಗಿರುವ ಟಿ.ಎನ್.ಶಿವರಾಜು, ಚೌದ್ರಿ ಟಿ.ರಂಗಪ್ಪ, ಎಂ.ಎಲ್. ಗೋವಿಂದರಾಜು ಗೌಡ, ಬಿ.ಎಸ್. ವಸಂತಕುಮಾರ್, ಸಿ.ಎಸ್.ಪುರದ ಟಿ.ಎಂ.ಗೌಡ ಮೊದಲಾದವರಿಗೆ ಸ್ಪಷ್ಟನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮುಖಂಡರು ಸ್ವತಃ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾ ರಾಜಣ್ಣ ಅವರೇ ಜೆಡಿಎಸ್ ನೊಂದಿಗೆ ಶಾಮೀಲಾಗಿದ್ದರು. ತಮಗೆ ಮತ ನೀಡದಿದ್ದರೂ ಚಿಂತೆಯಿಲ್ಲ. ಜೆಡಿಎಸ್‌ಗೆ ನೀಡಿ ಎಂದು ಮತದಾರರಿಗೆ ಮನವಿ ಮಾಡಿಕೊಂಡಿದ್ದರು. ಜೆಡಿಎಸ್‌ನ ಅಭ್ಯರ್ಥಿಯೊಂದಿಗೆ ಸದಾ ಕಾಲ ಸಂಪರ್ಕದಲ್ಲಿದ್ದರು. ಇವರ ಸ್ವಕ್ಷೇತ್ರದಲ್ಲೇ ಕಾಂಗ್ರೆಸ್ ಪಕ್ಷ ಗಳಿಸಿರುವ ಮತವನ್ನು ಗಣನೆಗೆ ತೆಗೆದುಕೊಂಡರೆ ಗೀತಾ ರಾಜಣ್ಣ ಅವರು ಚುನಾವಣೆಯನ್ನು ಯಾವ ಮಟ್ಟದಲ್ಲಿ ಎದುರಿಸಿದ್ದರು ಎಂಬುದು ಸಾಬೀತಾಗುತ್ತದೆ ಎಂದು ಸ್ಪಷ್ಟನೆ ನೀಡಿರುವುದಾಗಿ ತಿಳಿದುಬಂದಿದೆ. ಕ್ಷೇತ್ರದ ಯಾವೊಬ್ಬ ಮುಖಂಡರಾಗಲೀ ಅಥವಾ ಕಾರ್ಯಕರ್ತರಾಗಲೀ ಪಕ್ಷ ದ್ರೋಹ ಮಾಡಿಲ್ಲ. ಅಭ್ಯರ್ಥಿಯೇ ಪಕ್ಷದ ಕಾರ್ಯಕರ್ತರನ್ನು ಮುಖಂಡರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.