ತುಮಕೂರು

ಸೌಕರ್ಯ ಕಲ್ಪಿಸಿದರೆ ಗ್ರಾಮೀಣ ವಿದ್ಯಾರ್ಥಿಗಳಿಂದಲೂ ಸಾಧನೆ ಸಾಧ್ಯ'

Published On :

ಕುರುಬರಹಳ್ಳಿಯಲ್ಲಿ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಶಾಸಕ ಎಂ.ಟಿ. ಕೃಷ್ಣಪ್ಪ
ಕ.ಪ್ರ.ವಾರ್ತೆ ತುರುವೇಕೆರೆ ಜೂ.27
ಗ್ರಾಮಾಂತರ ಪ್ರದೇಶದಲ್ಲಿ ಓದುತ್ತಿರುವ ಶಾಲಾ- ಕಾಲೇಜಿನ ಮಕ್ಕಳಿಗೆ ಸರ್ಕಾರ ಸೂಕ್ತ ಮೂಲಭೂತ ಸೌಕರ್ಯ ಒದಗಿಸಿದರೆ ನಗರ ಪ್ರದೇಶದ ವಿದ್ಯಾರ್ಥಿಗಳಿಗೇ ಓದಿನಲ್ಲಿ ಅವರನ್ನು ಮೀರಿಸಿ ಅತ್ಯುತ್ತಮ ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಹೇಳಿದರು.
ತಾಲೂಕಿನ ಕುರುಬರಹಳ್ಳಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ 5 ಕೊಠಡಿಗಳ ನಿರ್ಮಾಣ ಮಾಡಲಾಗಿರುವ ಸರ್ಕಾರಿ ಪ್ರೌಢಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಸದ್ಯ ಗ್ರಾಮೀಣ ಜನರ ಬದುಕೇ ದುಸ್ತರವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಸರ್ಕಾರಗಳೂ ಸಹ ಶಾಲಾ- ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮೀನಾಮೇಷ ಎಣಿಸುತ್ತವೆ. ಉಪನ್ಯಾಸಕರು, ಪ್ರಾಯೋಗಾಲಯ, ಕೊಠಡಿಗಳು ಹಾಗೂ ಪೀಠೋಪಕರಣಗಳನ್ನು ಸಮರ್ಪಕವಾಗಿ ನೀಡಿದಲ್ಲಿ ಗ್ರಾಮೀಣ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಸಹಾಯಕವಾಗುತ್ತದೆ. ಬಹುಪಾಲು ಸರ್ಕಾರಿ ಶಾಲಾ- ಕಾಲೇಜಿನ ಶಿಕ್ಷಕ ವೃಂದ ಅತ್ಯಂತ ಪ್ರತಿಭಾನ್ವಿತರಾಗಿರುತ್ತಾರೆ. ಅವರ ಜ್ಞಾನಾರ್ಜನೆ ವಿದ್ಯಾರ್ಥಿಗಳಲ್ಲಿ ಅಡಗಿದಲ್ಲಿ ಮಕ್ಕಳೂ ಸಹ ಅಪ್ರತಿಮ ಬುದ್ಧಿವಂತರಾಗಲು ಸಾಧ್ಯವಿದೆ ಎಂದರು.
ಕುರುಬರ ಹಳ್ಳಿಯ ಪ್ರೌಢಶಾಲೆ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಸಾಧನೆ ಮಾಡರುವುದಕ್ಕೆ ಶಾಸಕ ಎಂ.ಟಿ. ಕೃಷ್ಣಪ್ಪ ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರನ್ನು ಅಭಿನಂದಿಸಿದರು. ಪೋಷಕರೂ ಸಹ ಮಕ್ಕಳ ವಿದ್ಯಾರ್ಜನೆ ಬಗ್ಗೆ ಕಳಕಳಿ ಇಟ್ಟು ಪ್ರಗತಿಯನ್ನು ಪರಿಶೀಲಿಸಬೇಕು ಎಂದರು.
ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಉತ್ತಮ ಸಾಧನೆಗೈದ ವಿದ್ಯಾರ್ಥಿ ಹಾಗೂ ಸಾಧನೆಗೆ ಕಾರಣೀಭೂತರಾಗಿರುವ ಶಿಕ್ಷಕರನ್ನು ಗ್ರಾಮಸ್ಥರೇ ಸತ್ಕರಿಸಿ ಆದರಿಸಬೇಕು. ಸರ್ಕಾರಿ ಶಾಲಾ ಶಿಕ್ಷಕರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಯಲ್ಲೇ ದಾಖಲು ಮಾಡಲು ಮುಂದಾಗಬೇಕು ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಕರೆ ನೀಡಿದರು.
ಕುರುಬರಹಳ್ಳಿಗೆ ಮುಂಬರುವ ದಿನಗಳಲ್ಲಿ ಸುವರ್ಣ ಗ್ರಾಮ ಯೋಜನೆಯನ್ನು ನೀಡುವುದಾಗಿ ಭರವಸೆ ನೀಡಿದರು.
ಖಾಸಗಿ ಶಾಲಾ ವ್ಯಾಮೋಹ ಬೇಡ:  ಖಾಸಗಿ ಶಾಲೆಗಳಿಗಿಂತ, ಸರ್ಕಾರಿ ಶಾಲೆಯ ಶಿಕ್ಷಕರು ವಿಚಾರ ಶೀಲರಾಗಿರುತ್ತಾರೆ. ಹಲವಾರು ಶಾಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಪಕ್ವವಾಗಿರುತ್ತಾರೆ. ಇಂತಹ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಸಿಗಲಿದೆ. ಆದ್ದರಿಂದ ದುಬಾರಿ ಹಣ ಕೀಳುವ ಖಾಸಗಿ ಶಾಲಾ ವ್ಯಾಮೋಹವನ್ನು ಬಿಟ್ಟು ಉಚಿತ ಹಾಗೂ ಉತ್ತಮ ಶಿಕ್ಷಣ ದೊರೆಯುವ ಸರ್ಕಾರಿ ಶಾಲೆಗಳಿಗೇ ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ ಹೇಳಿದರು.
ಸರ್ಕಾರಿ ಶಾಲಾ ಶಿಕ್ಷಕರಿಗೆ ಭದ್ದತೆ ಇರುತ್ತದೆ. ಸರ್ಕಾರ ಶಿಕ್ಷಣಕ್ಕಾಗೇ ಸಾವಿರಾರು ಕೋಟಿಗಳನ್ನು ನೀಡುತ್ತಿದೆ. ಪ್ರತಿಷ್ಠಿತ ಹುದ್ದೆಗಳಲ್ಲಿ ಇರುವವರು ಸರ್ಕಾರಿ ಶಾಲೆಯಲ್ಲೇ ಓದಿದವರು ಆಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದರು.
ಕುರುಬರಹಳ್ಳಿಯ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿರುವುದರಿಂದ ಹಾಗೂ ಶಾಲೆಗೆ ಗ್ರಾಮಾಂತರ ಪ್ರದೇಶದಿಂದ ಹೆಣ್ಣು ಮಕ್ಕಳು ಬರುತ್ತಿರುವುದರಿಂದ ಸಂಪಿಗೆ ಹೊಸಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ 2 ಹೊಲಿಗೆ ಯಂತ್ರವನ್ನು ನೀಡುವ ಭರವಸೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪದ್ಮಾವತಿ ಮುನಿಸ್ವಾಮಿ ಭರವಸೆ ನೀಡಿದರು.
ಸಮಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರಯ್ಯ, ಅಕ್ಷರ ದಾಸೋಹ ಸಹಾಯಕ ನಿದೇಶಕ ಡಿ.ಶಿವಣ್ಣ, ಮುಖ್ಯ ಶಿಕ್ಷಕ ಅನಂತಕುಮಾರ್, ಎಸ್‌ಎಸ್‌ಎ ಎಂಜಿನಿಯರ್ ಗಂಗಾಧರಯ್ಯ, ಗುತ್ತಿಗೆದಾರ ಡಿ.ಕಾಂತಯ್ಯ, ಸಿಆರ್‌ಪಿ ಕಂಬಯ್ಯ, ಮುಖ್ಯ ಶಿಕ್ಷಕಿ ನೂರ್ ಫಾತಿಮಾ, ಶಿವಲಿಂಗಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್, ಗ್ರಾಮದ ಮುಖಂಡ ಮುನಿಸ್ವಾಮಿ ಮೊದಲಾದವರು ಭಾಗವಹಿಸಿದ್ದರು.
ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮುಖ್ಯ ಶಿಕ್ಷಕಿ ನೂರ್ ಫಾತಿಮಾ ಸ್ವಾಗತಿಸಿದರು. ಶಿವಶಂಕರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.