ತುಮಕೂರು

ನೈತಿಕ ಮೌಲ್ಯಗಳ ಕೊರತೆಯಿಂದಾಗಿ ಸಾಮಾಜಿಕ ಸಮಸ್ಯೆ ಸೃಷ್ಟಿ: ನ್ಯಾ.ಶಾರದಾ

Published On :

ಕುಣಿಗಲ್ ಕೋರ್ಟ್ ಆವರಣದಲ್ಲಿ ಕಾನೂನು ಅರಿವು-ನೆರವು ಶಿಬಿರ ಉದ್ಘಾಟನೆ
ಕ.ಪ್ರ.ವಾರ್ತೆ ಕುಣಿಗಲ್ ಜೂ.27
ಪ್ರಸ್ತುತ ದಿನಗಳಲ್ಲಿ ಮಾನವರಲ್ಲಿ ಎಲ್ಲಾ ಹಂತಗಳಲ್ಲೂ ನೈತಿಕ ಮೌಲ್ಯಗಳು ಕಳೆದುಕೊಳ್ಳುತ್ತಿರುವ ಕಾರಣ ಶಾರೀರಕ, ಮಾನಸಿಕ, ದೈಹಿಕ ಹಾಗೂ ಸಾಮಾಜಿಕವಾಗಿ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆಯಾದ ಆರ್.ಶಾರದಾ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಗುರುವಾರ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ವಕೀಲರ ಸಂಘ, ತಾಲೂಕು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಕಾನೂನು ಅರಿವು- ನೆರವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವರಲ್ಲಿ ನೈತಿಕತೆ ಕೊರತೆ ಇರುವ ಕಾರಣ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳುಗೆಡುವುತ್ತಾ ಆ ಪರಿಸರದಲ್ಲಿ ವಾಸಿಸುವ ಜನ, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವಂತೆ ಮಾಡಲಾಗುತ್ತಿದೆ. ಹಲವು ಸಮಸ್ಯೆಗಳು ಉಂಟಾಗುತ್ತಾ, ಸ್ವಾಸ್ತ್ಯ ಸಮಾಜದ ಪರಿಕಲ್ಪನೆಗೆ ಧಕ್ಕೆಯಾಗುತ್ತಿದೆ. ಮನುಷ್ಯರು ತಮ್ಮೊಳಗಿನ ನೈತಿಕತೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ತಮ್ಮ ಊರು, ಜನ, ದೇಶವನ್ನು ಪ್ರೀತಿಸಲು ಮುಂದಾದಾಗ ಹಲವು ಸಮಸ್ಯೆಗಳು ತನ್ನಿಂತಾನೆ ಪರಿಹಾರಗೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎನ್.ಮುನಿರಾಜು, ನಾವು ಸೇವಿಸುವ ಆಹಾರದಿಂದಲೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಈಗಿನ ಫಾಸ್ಟ್‌ಫುಡ್ ಸಂಸ್ಕೃತಿ ಭಾರತೀಯ ಸಂಸ್ಕೃತಿಗೆ ಒಗ್ಗಿಕೊಳ್ಳುವ ವಾತಾವರಣವಲ್ಲ. 'ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ನಾಣ್ನುಡಿಯಂತೆ ನಮ್ಮ ಆಹಾರ ಸೇವನೆ ಪದ್ಧತಿಯನ್ನು ನಾವು ಅರಿತು, ಸತ್ವಪೂರ್ಣ ಆಹಾರ ಸ್ವೀಕರಿಸಿದಾಗ ಆರೋಗ್ಯವಂತ ಸುಖೀಜೀವನ ನಿರ್ವಹಣೆ ಸಾಧ್ಯವಾಗುತ್ತದೆ ಎಂದರು.
ಅಪರ ಸಿವಿಲ್ ನ್ಯಾಯಾಧೀಶರಾದ ದಾಕ್ಷಾಯಿಣಿ, ವಕೀಲರ ಸಂಘದ ಅಧ್ಯಕ್ಷ ದಯಾನಂದ್, ಕಾರ್ಯದರ್ಶಿ ಚಂದ್ರಶೇಖರ್, ರೆಹಮಾನ್, ಎಪಿಪಿ ಸುರೇಖಾ ಹಿರೇಮಠ, ವಕೀಲರಾದ ರಂಗಸ್ವಾಮಿ, ಸತ್ಯಾನಾರಾಯಣ ಒಡೆಯರ್, ಮುಮ್ತಾಜ್ ಆಹಮದ್, ನಿಸ್ಸಾರ್ ಅಹಮದ್ ಇತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಪಾಲ್ಗೊಂಡಿದ್ದ ವಕೀಲರು, ಕಕ್ಷಿದಾರರು, ಸಾರ್ವಜನಿಕರು ಕೇಳಿದ ಮಾನಸಿಕ ಆರೋಗ್ಯ ನಿರ್ವಹಣೆ, ಗ್ಯಾಸ್ ಟ್ರಬಲ್, ಮನೆ ಔಷಧಗಳು ಮಾಡಿಕೊಳ್ಳುವ ಪ್ರಶ್ನೆಗಳಿಗೆ ಬಗ್ಗೆ ಆಯುಷ್ ವೈದ್ಯಾಧಿಕಾರಿ ಡಾ. ವಿ.ಬಿ. ಚಂದ್ರ, ಉತ್ತರ ನೀಡಿದರು. ಮನುಷ್ಯ ಆಹಾರ, ವಿಹಾರ, ವಿಚಾರದ ಬಗ್ಗೆ ಎಚ್ಚರ ವಹಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡಲ್ಲಿ ನಿರೋಗಿಯಾಗಿ ಸಂತೃಪ್ತ ಜೀವನ ನಡೆಸಬಹುದು ಎಂದರು.
ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಸುಶೀಲಾ, ಗರ್ಭೀಣಿ ಸ್ತ್ರೀ, ಬಾಣಂತಿಯರ ಆರೋಗ್ಯ ನಿರ್ವಹಣೆ ಮತ್ತು ಪ್ರಸವದ ನಂತರದ ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.