ತುಮಕೂರು

ಬಾರ್, ರೆಸ್ಟೋರೆಂಟ್‌ಗೆ ಗಾರ್ಡನ್ ರಸ್ತೆ ನಾಗರಿಕರಿಂದ ತೀವ್ರ ವಿರೋಧ

Published On :

ಮಠಾಧೀಶರು, ಸಾರ್ವಜನಿಕರು, ವಿದ್ಯಾರ್ಥಿಗಳಿಂದ ಪ್ರತಿಭಟನೆ. ಡಿಸಿಗೆ ಮನವಿ
ಕ.ಪ್ರ.ವಾರ್ತೆ ತುಮಕೂರು ಜೂ.27
ತುಮಕೂರಿನ ಗಾರ್ಡನ್ ರಸ್ತೆಯಲ್ಲಿ ಬಾರ್, ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿರುವುದನ್ನು ವಿರೋಧಿಸಿ ಗಾರ್ಡನ್ ರಸ್ತೆ ನಾಗರಿಕ ಹಿತರಕ್ಷಣಾ ಸಮಿತಿ, ವಿದ್ಯಾರ್ಥಿಗಳು, ಮಠಾಧೀಶರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ತುಮಕೂರು ಚಿಕ್ಕಪೇಟೆ ಗಾರ್ಡನ್ ರಸ್ತೆ ಅನೇಕ ದೇವಾಲಯಗಳು, ವಿದ್ಯಾರ್ಥಿ ನಿಲಯಗಳು, ವ್ಯಾಯಾಮ ಶಾಲೆಗಳಿಂದ ಕೂಡಿದೆ. ಅಗ್ರಹಾರ, ಚಿಕ್ಕಪೇಟೆ, ಗಾರ್ಡನ್ ರಸ್ತೆ, ದಿಬ್ಬೂರು, ಗುಬ್ಬಿ, ಬೆಳ್ಳಾವಿಯ ಕಡೆ ಸಾಗುವ ಜನತೆ, ಶಾಲಾ ವಾಹನಗಳು ಈ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ. ಜತೆಗೆ ಶಾಲೆಗಳೂ ಈ ಭಾಗದಲ್ಲೇ ಇವೆ. ಇದೀಗ  ಇದೇ ರಸ್ತೆಯಲ್ಲೇ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿರುವುದರಿಂದ ವಿದ್ಯಾರ್ಥಿಗಳು, ಭಕ್ತರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಕೂಡಲೇ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಅನುಮತಿ ನೀಡಿರುವುದನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್, ಶನೇಶ್ವರ ದೇವಾಲಯ ಟ್ರಸ್ಟ್, ವಾಸವಿ ವಿದ್ಯಾವೀಠ, ಆರ್ಯವೈಶ್ಯ ಮಂಡಳಿ, ವಾಸವಿ ಯುವಜನಸಂಘ, ವಾಸವಿ ಮಹಿಳಾ ಮಂಡಳಿ, ಕೋಟೆ ಆಂಜನೇಯ ಸ್ವಾಮಿ ಟ್ರಸ್ಟ್, ಕೋಡಿ ಬಸವೇಶ್ವರಸ್ವಾಮಿ ದೇವಾಲಯ, ಮುಳಕಟ್ಟಮ್ಮ ದೇವಾಲಯ ಟ್ರಸ್ಟ್, ಸವಿತಾ ಸಮಾಜ, ಲಂಬಾಣಿ ಸಮಾಜ, ಹಳ್ಳಿಕಾರರ ಸಂಘ, ಹಳ್ಳಿಕಾರರ ವಿದ್ಯಾರ್ಥಿನಿಲಯ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ವ್ಯಾಯಾಮ ಶಾಲೆ, ವೀರಶೈವ ಸಮಾಜ, ಬಸವ ಸೇನೆ, ಕನ್ನಡ ಸೇನೆ, ಮೈತ್ರಿ ಮಹಿಳಾ ಸಂಘ, ವಿಶ್ವಕರ್ಮ ಸಮಾಜ ಸೇರಿದಂತೆ ಇತರೆ ಸಂಘ -ಸಂಸ್ಥೆಗಳು, ಚಿಕ್ಕಪೇಟೆಯಲ್ಲಿರುವ ಹಿರೇಮಠದ ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಟಿ.ಬಿ. ಶೇಖರ್, ವಸಂತ್, ಸಿ.ಆರ್. ಮೋಹನ್‌ಕುಮಾರ್, ರವಿ ಹೆಬ್ಬಾಕ, ಕೋರಿ ಮಂಜುನಾಥ್, ಸಿ.ವಿ. ಮಹದೇವಯ್ಯ ನವರೊಡಗೂಡಿ ಪ್ರತಿಭಟನೆ ನಡೆಸಿ, ಡಿಸಿಗೆ ಮನವಿ ಸಲ್ಲಿಸಿತು.

'ಊರಾಚೆ ಮಾಡಲಿ'
ಊರಾಚೆ ಬಾರ್ ಮಾರ್ಕೆಟ್ ಮಾಡಲಿ, ಬಾರ್ ಉದ್ಯಾನವನಗಳನ್ನೂ ಮಾಡಲಿ. ಆದರೆ, ಜನರಿಗೆ ತೊಂದರೆಯಾಗುವಂತೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್‌ಡಿಯಾಗುವಂತೆ ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡುವುದು ಬೇಡ ಎಂದು ತುಮಕೂರಿನ ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸರ್ಕಾರಕ್ಕೆ ಮನವಿ ಮಾಡಿದರು. ಸರ್ಕಾರ ವಿನಾಕಾರಣ ಜನತೆಗೆ ತೊಂದರೆ ಕೊಡುವುದು ಬೇಡ ಎಂದು ಮನವಿ ಮಾಡಿದ ಶ್ರೀಗಳು, ಊರಾಚೆ ಕುಡಿದು ಉರುಳಾಡುವವರು ಉರುಳಾಡಲಿ, ಆದರೆ ಊರ ಮದ್ಯದಲ್ಲಿ ಬೇಡ ಎಂದು ಮಾರ್ಮಿಕವಾಗಿ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.