ತುಮಕೂರು

'ಲೈಂಗಿಕ ವೃತ್ತಿನಿರತ ಮಹಿಳೆಗೆ ಕಾನೂನು ಅರಿವಿರಲಿ'

Published On :

ಕ.ಪ್ರ.ವಾರ್ತೆ ,  ತುಮಕೂರು ,  ಜೂ. 29
ದೌರ್ಜನ್ಯಕ್ಕೆ ಒಳಗಾದ ಲೈಂಗಿಕ ವೃತ್ತಿನಿರತ ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವ ಒಂದು ದಿನದ ಸಮಾವೇಶ ತುಮಕೂರಿನಲ್ಲಿ ನಡೆಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತುಮಕೂರು, ಕೆಸಾಪ್ಸ್ ಹಾಗೂ ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ, ಬೆಂಗಳೂರು ಮತ್ತು ಒಂದುಗೂಡು ಮಹಿಳಾ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಒಂದುಗೂಡು ಮಹಿಳಾ ಸಂಘದ ಇನ್ನೂರು ಐವತ್ತಕ್ಕೂ ಹೆಚ್ಚು ಸದಸ್ಯರು ತಮ್ಮ  ಮೇಲಾಗುವ ದೌರ್ಜನ್ಯದ ವಿರುದ್ಧ ಸಮಾಜಕ್ಕೆ ಅರಿವು ಮೂಡಿಸಲು ತುಮಕೂರಿನ ಪ್ರಧಾನ ರಸ್ತೆಗಳಾದ ಮಹಾತ್ಮ ಗಾಂಧಿ ರಸ್ತೆ, ಶಿರಾನಿ ರಸ್ತೆಗಳಲ್ಲಿ ಜಾಥಾ ನಡೆಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲ ಭವನದ ಆವರಣದಲ್ಲಿ ಜಾಥಾವನ್ನು ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ರಜಿನಿ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸುಜಾತಾ ಉಪಸ್ಥಿತರಿದ್ದರು. ನಂತರ ಸಿದ್ದಗಂಗಾ ಬಾಲಕರ ಕಾಲೇಜಿನ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪ್ರಭಾಕರ ಶಾಸ್ತ್ರಿ  ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಲೈಂಗಿಕತೆಯನ್ನು ಇತಿಹಾಸ, ಪುರಾಣ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿಶ್ಲೇಶಿಸಿ ಕಾಮವೆಂಬ ಸಹಜ ಪ್ರವೃತ್ತಿಯ ಬಗ್ಗೆ ದ್ವಿಮುಖ ಅಭಿಪ್ರಾಯಗಳು ನಾಗರಿಕ ಸಮಾಜದಲ್ಲಿ ಮೂಡುತ್ತಾ ಬಂದಿವೆ. ಪರಂಪರೆಯಲ್ಲಿ ಗೌರವಿಸಿದ ಲೈಂಗಿಕ ವೃತ್ತಿಯನ್ನು ಇಂದಿನ ಸಮಾಜ ಕಳಂಕದಿಂದ ನೋಡುತ್ತಿದೆ ಲೈಂಗಿಕ ವೃತ್ತಿ ನಿರತ ಮಹಿಳೆಯರು ಶೋಷಣೆ ಮತ್ತು ಕ್ರೌರ್ಯಕ್ಕೆ ಒಳಗಾಗಲು ಮೂಲಕಾರಣ ಬಡತನ ಎಂದರು. ಅಸಹಾಯಕತೆಗೆ ಸಿಲುಕಿ ಲೈಂಗಿಕ ವೃತ್ತಿಗೆ ಬಂದಿರುವ ಮಹಿಳೆಯರಿಗೆ ಸಮಾಜದ ಬೆಂಬಲದ ಅಗತ್ಯವಿದೆ. ಅವರಿಗೆ ಇತರರಂತೆ ಬಾಳುವ ಹಕ್ಕಿದೆ. ಪ್ರತಿಯೊಬ್ಬ ಮಹಿಳೆಯು ತನ್ನ ಸ್ವಾಭಿಮಾನವನ್ನು ಕಾಪಾಡಿಕೊಂಡು ಸಮಾಜದಲ್ಲಿನ ಕಳಂಕದ ಮನೋಭಾವವನ್ನು ಎದುರಿಸಿ ಜೀವನದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು. ಆ ದಿಸೆಯಲ್ಲಿ ಕಾನೂನು ಅರಿವು ಮತ್ತು ಅಭಿವೃದ್ಧಿ ಇಲಾಖೆಗಳ ಸಹಕಾರದ ಬೆಂಬಲ ಮಹತ್ವದ್ದು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ರಜಿನಿ ಮಾತನಾಡಿ, ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಲೈಂಗಿಕ ವೃತ್ತಿಯ ಮಹಿಳೆಗೆ ಆರೋಗ್ಯ ಮತ್ತು ಸಾಮಾಜಿಕ ಸವಲತ್ತುಗಳು ಅವಳ ಮೂಲಭೂತ ಹಕ್ಕು. ಅವುಗಳನ್ನು ಪಡೆಯಲು ಒಂದುಗೂಡು ಮಹಿಳಾ ಸಂಘವು ಶ್ರಮಿಸುತ್ತಿರುವುದು ಅಭಿನಂದನಾರ್ಹ. ಹೆಚ್.ಐ.ವಿ, ಗುಪ್ತರೋಗಗಳು, ಅಪೌಷ್ಟಿಕತೆ, ಗರ್ಭಕೋಶದ ಕಾಯಿಲೆಗಳು ಮುಂತಾದವುಗಳಿಂದ ಪಾರಾಗಲು ಅವರು ನಿರಂತರವಾಗಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವುದು ಅವಶ್ಯಕ ಎಂದರು. ಈ ಸೌಲಭ್ಯವನ್ನು ಉಚಿತವಾಗಿ ನೀಡಲು ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಸಿದ್ಧವಿದೆ ಅದಕ್ಕಾಗಿ ಎಲ್ಲ ಮಹಿಳೆಯರು ಈ ಸೌಲಭ್ಯವನ್ನು  ಬಳಸಿಕೊಳ್ಳಲು ಕಳಕಳೆಯಿಂದ ಕರೆಯಿತ್ತರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಮಾತನಾಡಿ, ಅನಿವಾರ್ಯ ಪರಿಸ್ಥಿತಿಗಳಿಂದ ವೃತ್ತಿಗೆ ಬಂದಿರುವ ಮಹಿಳೆಯರು ನಿರಾಶರಾಗದೇ ಉಚಿತ ಕಾನೂನು ನೆರವು, ವೈದ್ಯಕೀಯ ಸೌಲಭ್ಯ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳು ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಗುಣಾತ್ಮಕ ಜೀವನ ನಡೆಸಲು ಕರೆ ಕೊಟ್ಟರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮಾತನಾಡಿ, ಅನೈತಿಕ ಸಾಗಣೆ ತಡೆ ಕಾಯಿದೆಗೆ  ಮಾರ್ಪಾಡಿನ ಅವಶ್ಯಕತೆಯಿದೆ. ವೃತ್ತಿನಿರತ ಮಹಿಳೆಯರು ತಮ್ಮ-ತಮ್ಮ  ಹಕ್ಕುಗಳಿಗಾಗಿ ಹೋರಾಡಲು ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಕಾರ್ಡ್ಸ್ ಸಂಸ್ಥೆ ಅಧ್ಯಕ್ಷ ಭಗವಾನ್ ದಾಸ್ ಮಾತನಾಡಿ, ಒಂದುಗೂಡು ಮಹಿಳಾ ಸಂಘದ ಸದಸ್ಯೆಯರು ಕಳೆದ  ಒಂದು ದಶಕದಲ್ಲಿ ಸಾಧಿಸಿರುವ ಸಂಘಟನೆಯನ್ನು ಅಭಿನಂದಿಸಿ ಹೆಚ್.ಐ.ವಿ ಗಿಂತ ದೊಡ್‌ಡ ಸವಾಲಾಗಿರುವ ಬದುಕಿನ ಸಮಸ್ಯೆಗಳನ್ನು ಎದುರಿಸಲು ಕೆಸಾಪ್ಸ್, ಕೆ.ಎಚ್.ಪಿ.ಟಿ, ಕಾರ್ಡ್ಸ್ ಮತ್ತು ಮುಂತಾದ ಹಲವು ಸಂಘ ಸಂಸ್ಥೆಗಳು ಬೆಂಬಲ ನೀಡಿವೆ ಅದಕ್ಕಾಗಿ ಅವರಿಗೆ ಧನ್ಯವಾದಗಳು ಎಂದರು.
ನಂತರ ಉಚಿತ ಕಾನೂನು ಸೇವಾ ಪ್ರಾಧಿಕಾರ ವತಿಯಂದ ನ್ಯಾಯಾಧೀಶರಾದ ಫೈರೋಜಾ ಹನೀಫಸಾಬ ಉಕ್ಕಲಿ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಹಾಗೂ ನ್ಯಾಯಾಧೀಶರಾದ ಬಿ.ಎಸ್. ವೇದಮೂರ್ತಿ ಅವರು ಮಹಿಳಾ ದೌರ್ಜನ್ಯ ತಡೆ ಕಾಯಿದೆ ಹಾಗೂ ಐಟಿಪಿ ಕಾಯಿದೆಗಳ ಕುರಿತು ಅರಿವು ನೀಡಿ ಜಾಗೃತಿ ಮೂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.