ತುಮಕೂರು

ಸ್ವಂತಕ್ಕೆ ಬೇಕಾದಷ್ಟು ಆಸ್ತಿ ಮಾಡಿದ ಸೊಗಡು: ಆರೋಪ

Published On :

ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಸಿಪಿಐ, ಸಿಪಿಐಎಂ ಪಕ್ಷದ ಜಂಟಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣನವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು.
ಮೊದಲಿಗೆ ಮಾತನಾಡಿದ ಸಿಪಿಐ ರಾಜ್ಯ ಮುಖಂಡ ಶಿವಣ್ಣ, ಸ್ವಂತಕ್ಕೆ ಬೇಕಾದಷ್ಟು ಆಸ್ತಿ ಮಾಡಿದ ಸಚಿವ ಸೊಗಡು ಶಿವಣ್ಣ, ತುಮಕೂರು ನಗರಕ್ಕೆ ಮಾಡಿದ್ದಾದರೂ ಏನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಯಡಿಯೂರಪ್ಪನವರಿಗೆ ಈಗ ಜ್ಞಾನೋದಯವಾಗಿದೆ. ಸಚಿವ ಸೊಗಡು ಶಿವಣ್ಣ ಭ್ರಷ್ಟಾಚಾರ ಮಾಡಿದ್ದಾರೆ. ನಗರವನ್ನು ಹಾಳು ಮಾಡಿದ್ದಾರೆ ಎಂದು ಕೆಜೆಪಿ ರೋಡ್ ಶೋನಲ್ಲಿ ಟೀಕಿಸಿ ಹೋಗಿರುವುದು ಆಶ್ಚರ್ಯದ ಸಂಗತಿ. ಇದೆಲ್ಲಾ ನಡೆದಿದ್ದು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ. ಆಗ ಚಕಾರವೆತ್ತದ ಯಡಿಯೂರಪ್ಪ ಬಿಜೆಪಿ ಬಿಟ್ಟು, ಕೆಜೆಪಿ ಕಟ್ಟಿದ ಮೇಲೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಹಾಗೂ  ಅವಿವೇಕತನ ಎಂದು ಲೇವಡಿ ಮಾಡಿದರು.
ಕಳೆದ 4 ಬಾರಿಯಿಂದ ಶಾಸಕರಾಗಿರುವ ಸೊಗಡು ಶಿವಣ್ಣ, ತುಮಕೂರು ನಗರಕ್ಕೆ ಮೂಲಭೂತ ಸೌಲಭ್ಯ  ಒದಗಿಸುವಲ್ಲಿ ವಿಫಲರಾಗಿದ್ದಾರೆ. ಅವರದೇ ಸರ್ಕಾರ ಇದ್ದರೂ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ಬೇಜವಾಬ್ದಾರಿತನ ತೋರಿದ್ದಾರೆ. ಇದು ತುಮಕೂರು ನಗರ ಜನತೆಯ ದೌರ್ಭಾಗ್ಯ. ಹಣ ಇದ್ದರೂ ಸೌಲಭ್ಯ ಒದಗಿಸದ ಪುಣ್ಯವಂತ ಶಾಸಕ ಎಂದು ಛೇಡಿಸಿದರು.
ಆಪರೇಷನ್ ಕಮಲ: ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿ, ತಮ್ಮ ಪಕ್ಷದ ಸದಸ್ಯೆ ಗೌಸಿಯ ಪರ್ಹತ್ ಅವರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ಸಿಪಿಐಎಂ ಅನ್ನು ಅಭದ್ರಗೊಳಿಸುವ ಯತ್ನ ನಡೆಸಿದರು.  ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕು ಎನ್ನುವ ಒಂದೇ ಉದ್ದೇಶದಿಂದ ಶಿವಣ್ಣ ಏನೆಲ್ಲಾ ಅಪಮಾರ್ಗಗಳಿಗೆ ಪ್ರೋತ್ಸಾಹ ನೀಡಬೇಕೋ ಅಷ್ಟೆಲ್ಲಾ ನೀಡಿದರು.    ಒಂದು ಕೆಟ್ಟ ಸಂಪ್ರದಾಯಕ್ಕೆ ಚಾಲನೆ ನೀಡಿದ ಕೀರ್ತಿ ಸೊಗಡು ಶಿವಣ್ಣನವರದು ಎಂದರು.
ಮಾಹಿತಿಯಿಲ್ಲ: ಚುನಾವಣಾ ನೀತಿ ಸಂಹಿತೆ ಕುರಿತಂತೆ ಸಿಪಿಐ, ಸಿಪಿಐಎಂ ಪಕ್ಷಗಳಿಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಏನು ಮಾಡಬೇಕು ಎಂಬುದರ ಕುರಿತು ಯಾರೂ ಹೇಳುವವರೇ ಇಲ್ಲದಂತಾಗಿದೆ. ಒಂದು ರೀತಿಯಲ್ಲಿ ಚುನಾವಣಾಧಿಕಾರಿಗಳು ತಮ್ಮನ್ನು ಕಗ್ಗತ್ತಲಲ್ಲಿಟ್ಟಿದ್ದಾರೆ ಎಂದು ಎರಡೂ ಪಕ್ಷಗಳ ಮುಖಂಡರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಮುಖಂಡರಾದ ಎನ್. ಶಿವಣ್ಣ, ಗಿರೀಶ್, ಕಂಬೇಗೌಡ, ಸಿಪಿಐಎಂನ ಸೈಯದ್ ಮುಜೀಬ್, ಬಿ. ಉಮೇಶ್, ಎನ್.ಕೆ. ಸುಬ್ರಹ್ಮಣ್ಯ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.