ತುಮಕೂರು

ಬಂಡವಾಳಶಾಹಿ ದುರಾಸೆಗೆ ಪರಂಪರೆ ಬಲಿ

Published On :

ಕಪ್ರ ವಾರ್ತೆ, ತುಮಕೂರು, ಮಾ.14: ಬಂಡವಾಳಶಾಹಿಗಳ ದುರಾಸೆಯಿಂದಾಗಿ ಭಾರತೀಯ ಪರಂಪರೆ ಬಲಿಯಾಗುತ್ತಿದೆ ಎಂದು ಸಂಶೋಧಕ ಹಾಗೂ ಸಿದ್ಧಗಂಗಾ ಕಾಲೇಜಿನ ಪ್ರಾಧ್ಯಾಪಕ ಡಾ.ಡಿ.ಎನ್ ಯೋಗೀಶ್ ವಿಷಾದಿಸಿದರು.
ಅವರು ತುಮಕೂರು ಗ್ರಾಮಾಂತರದ ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಂಪರಾ ಕೂಟ ಉದ್ಘಾಟನಾ ಸಮಾರಂಭದಲ್ಲಿ ಪರಂಪರೆ ಕುರಿತು ಉಪನ್ಯಾಸ ನೀಡಿದರು.
ಅಭಿವೃದ್ಧಿಯ ಹೆಸರಿನಲ್ಲಿ ಪರಂಪರೆ, ಸಂಸ್ಕೃತಿ ಆಪತ್ತು ಎದುರಿಸುತ್ತಿದೆ. ಬಂಡವಾಳಶಾಹಿಗಳ ದುರಾಸೆಗೆ ನೈಸರ್ಗಿಕ ಸಂಪತ್ತು ನಾಶವಾಗುತ್ತಿದೆ. ಈ ರೀತಿಯ ಕೆಟ್ಟ ಪರಂಪರೆಯನ್ನು ಭವಿಷ್ಯದ ಜನಾಂಗಕ್ಕೆ ಬಿಟ್ಟು  ಹೋದಂತಾಗುತ್ತದೆ. ನೈಸರ್ಗಿಕ ಲೂಟಿಯಿಂದಾಗಿ ಪರಿಸರ ಅಸಮತೋಲನ ಉಂಟಾಗಿ ಮುಂದಿನ ಜನಾಂಗ  ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
 ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರು ಪಡೆದುಕೊಂಡ ಅತ್ಯಮೂಲ್ಯ ಬಳುವಳಿಯೇ ಪರಂಪರೆ ಎಂದು ವ್ಯಾಖ್ಯಾನಿಸಿದ ಯೋಗೀಶ್, ಜಾಗತೀಕರಣದಿಂದಾಗಿ ಭಾರತೀಯ ಪರಂಪರೆ ಹಾಳಾಗುವ ಹಂತ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೈತಿಕ ನೆಲೆಗಟ್ಟಿನಲ್ಲಿ ಭಾರತೀಯರು: ಪರಂಪರಾ ಕೂಟ ಉದ್ಘಾಟಿಸಿದ ರಾಣಿಚೆನ್ನಮ್ಮ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಎಲ್.ಎನ್. ಮೂರ್ತಿ ಮಾತನಾಡಿ, ಇಡೀ ಬದುಕನ್ನು ಒಂದು ನೈತಿಕ ನೆಲೆಗಟ್ಟಿನಲ್ಲಿ ಭಾರತೀಯರು  ಬೆಳೆಸಿಕೊಂಡು ಬಂದರು. ಆದ್ದರಿಂದಲೇ ಜಗತ್ತಿನ ಇತಿಹಾಸದಲ್ಲಿ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಗೆ ಔನ್ನತ್ಯ ಬಂದಿದೆ ಎನ್ನುವುದು ಸ್ಪಷ್ಟ ಎಂದರು.
ಚರಿತ್ರೆಯ ಅಧ್ಯಯನದಿಂದ ಮಾನವ ತನ್ನ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸಿ, ಬದುಕನ್ನು ರೂಪಿಸಿಕೊಂಡಿದ್ದರೆ ಅವನ ಜೀವನ ಗತಿ ಬದಲಾಗುತ್ತಿತ್ತು. ಆದರೆ ಇಂದು ತರಗತಿಗಳಲ್ಲಿ ಪಠ್ಯ ವಸ್ತುವಾಗಿರುವ ಚರಿತ್ರೆಯು ಕೇವಲ ಪರೀಕ್ಷೆಗಾಗಿ ಮಾತ್ರ ಎಂಬಂತಾಗಿದೆ ಎಂದು ವಿಷಾದಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲ್ ಪ್ರೊ. ಬಿ.ಸಿ. ಸಣ್ಣಚಿಕ್ಕಯ್ಯ ಚರಿತ್ರೆಯಲ್ಲಿ ಒಳ್ಳೆಯ ಪರಂಪರೆಯ ಜತೆಗೆ ಕೆಟ್ಟ ಪರಂಪರೆಯೂ ಇದೆ. ನಾವು ಒಳ್ಳೆಯ ಪರಂಪರೆಯನ್ನು ಉಳಿಸಬೇಕು. ಇದರಿಂದ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ತುಮಕೂರು ವಿವಿ ಬಿಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಹೆಬ್ಬೂರು ಪ್ರಥಮ ದರ್ಜೆ ಕಾಲೇಜಿನ ಎನ್. ಲಕ್ಷ್ಮೀದೇವಮ್ಮ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ. ನಟರಾಜ ಬೂದಾಳ್, ಡಾ. ಜಿ.ಕೆ. ನಾಗರಾಜು ಇತರರಿದ್ದರು. ಪರಂಪರಾ ಕೂಟದ ಸಂಚಾಲಕರಾದ ಪ್ರೊ. ಎಸ್.ಎ. ಮಲ್ಲಿಕಾರ್ಜುನ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಹನುಮಂತರಾಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.