ಇಂದಿನಿಂದ ದೇವರಾಯನದುರ್ಗ ಜಾತ್ರಾ ಮಹೋತ್ಸವ
ತುಮಕೂರು: ಜಿಲ್ಲೆಯ ಸುಪ್ರಸಿದ್ಧ ಯಾತ್ರಾಸ್ಥಳ ದೇವರಾಯನದುರ್ಗದಲ್ಲಿ ಮಾ.19 ರಿಂದ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಇಂದು ಸಂಜೆ 7 ಗಂಟೆಗೆ ಅಂಕುರಾರ್ಪಣೆ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಬುಧವಾರ ಧ್ವಜಾರೋಹಣ, 21 ರಂದು ಶೇಷವಾಹನೋತ್ಸವ, 22 ರಂದು ಸಿಂಹವಾಹನೋತ್ಸವ, 23 ಕ್ಕೆ ಪುಷ್ಪರಥ, 24ರಂದು ಪ್ರಹ್ಲಾದೋತ್ಸಹ ಹಾಗೂ ಸ್ವಾಮಿಗೆ ಕಲ್ಯಾಣೋತ್ಸವ ನಡೆಯಲಿದೆ. 25 ರ ಸೋಮವಾರ ದೊಡ್ಡ ಗರುಡ ವಾಹನೋತ್ಸವ, ನವಿಲುವಾಹನ, ಗಜೇಂದ್ರ ಮೋಕ್ಷ ಸೇವೆಗಳು ನಡೆಯಲಿವೆ.
ತಿಪಟೂರು: ವಿಕಲಚೇತನರಿಗೆ ಸಾಧನ-ಸಲಕರಣೆ ವಿತರಣೆ
ತಿಪಟೂರು: ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಮಾಚಘಟ್ಟ ಗ್ರಾಮದ ಅಂಬಿಕಾದೇವಿ ಮತ್ತು ಚೌಡೇಶ್ವರಿ ದೇವಿ 13ನೇ ವರ್ಷದ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಅಂಬಿಕಾದೇವಿ ದೇವಾಲಯ ಟ್ರಸ್ಟ್ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ವಿಕಲಚೇತನರಿಗೆ ಸಾಧನ-ಸಲಕರಣೆ ವಿತರಣೆ, ಅಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ಡಾ.ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ, ಹೊಸದುರ್ಗದ ಭಗೀರಥ ಪೀಠಾಧಿಕಾರಿ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಾಸಕ ಬಿ.ಸಿ.ನಾಗೇಶ್ ಸೇರಿದಂತೆ ಟ್ರಸ್ಟ್ಅಧ್ಯಕ್ಷ ಜಿ.ಎಂ.ಪ್ರಕಾಶ್ ಹಾಗೂ ನಿರ್ದೇಶಕರು, ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.
ಅಮಾನಿಕೆರೆ ಅಂಗಳಕ್ಕೆ ಕಾಡಾನೆಗಳು, ಬಾಳೆ, ಬದನೆ ಗಿಡ ನಾಶ
ಗುಬ್ಬಿ: ಅಮಾನಿಕೆರೆ ಅಂಗಳಕ್ಕೆ ಕಳೆದ ರಾತ್ರಿ ಕುಂಕುಮನಹಳ್ಳಿ ಕೆರೆಯಿಂದ ಮಲ್ಲಸಂದ್ರ ಮಾರ್ಗವಾಗಿ ಬಂದ ಎರಡು ಗಂಡು ಮತ್ತು ಒಂದು ಹೆಣ್ಣು ಕಾಡಾನೆ ಕೆರೆಯ ಗಣೇಶ ಕಡ್ಡಿಗಳ ಮಧ್ಯೆ ಕಾಣಿಸಿಕೊಂಡಿವೆ. ಕಳೆದ ಎರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಓಡಾಡಿದ್ದ ಈ ಆನೆಗಳು ಮಾಗಡಿ ತಾಲೂಕಿನ ಗಡಿಭಾಗದವರೆಗೆ ಸಂಚರಿಸಿ ಮರಳಿ ತುಮಕೂರು ಜಿಲ್ಲೆಗೆ ಬಂದಿವೆ. ಕುಂಕುಮನಹಳ್ಳಿ ಗ್ರಾಮದಲ್ಲಿ ಓರ್ವ ಕುರಿಕಾಯುವವನ್ನು ಬಲಿ ತೆಗೆದುಕೊಂಡು ಕಾಡಾನೆಗಳು ನೇರ ಗುಬ್ಬಿ ಅಮಾನಿಕೆರೆಯತ್ತ ಧಾವಿಸಿವೆ. ಕಾಡಾನೆಗಳು ಸಂಚಾರಿಸುವ ಮಾರ್ಗದ ಮಧ್ಯೆ ತಾಲೂಕಿನ ಕಳ್ಳಿಪಾಳ್ಯದ ರೈತ ರಂಗಪ್ಪ ಅವರ 100 ಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶ ಮಾಡಿದೆ. ತಾಲೂಕಿನ ಅಡಗೂರು ಗ್ರಾಮದ ರೈತ ಕುಮಾರ್, ರಂಗಪ್ಪ,ಬಸವರಾಜು ಅವರ ಹೊಲದಲ್ಲಿ ರಾಗಿಯ ಬೆಳೆಯನ್ನು ಅಡ್ಡಾದಿಡ್ಡಿ ತುಳಿದು ನಷ್ಟವನ್ನುಂಟು ಮಾಡಿದೆ. ನಂತರ ಸಿಂಗೋನಹಳ್ಳಿ ರೈತ ಕೆಂಪಣ್ಣ ಅವರ ತೋಟದ ಬದನೆಗಿಡಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಗುಬ್ಬಿ ಕೆರೆಯಲ್ಲಿ ವಾಸ್ತವ್ಯ ಹೂಡಿದ್ದು ಆನೆಗಳ ಸಂಚಾರ ಸ್ಥಳೀಯ ರೈತರಿಗೆ ಆತಂಕವನ್ನುಂಟು ಮಾಡಿದೆ. ಕಳೆದ ವರ್ಷ ಬಂದಿದ್ದ ಈ ಕಾಡಾನೆಗಳು ಲಕ್ಷಾಂತರ ರು.ಗಳ ಬೆಳೆಯನ್ನು ನಷ್ಟ ಮಾಡಿವೆ. ಈ ಭಾಗದಲ್ಲಿ ರೈತರು ಹಾಗೂ ಜನಸಮಾನ್ಯರು ಎಚ್ಚರಿಕೆಯಿಂದ ಓಡಾಡಬೇಕು ಎಂದು ಅರಣ್ಯಾಧಿಕಾರಿ ಕೆ.ಹರೀಶ್ ತಿಳಿಸಿದ್ದಾರೆ.
22ರಂದು ಯುವಕ ಸಂಘ ಉದ್ಘಾಟನೆ
ಪಾವಗಡ: ಡಾ.ಬಿ.ಆರ್. ಅಂಬೇಡ್ಕರ್ ಕಲಾ ಮತ್ತು ಕ್ರೀಡಾ ಗ್ರಾಮೀಣಾಭಿವೃದ್ಧಿ ಯುವಕ ಸಂಘದ ವತಿಯಿಂದ ಯುವಕ ಸಂಘದ ಉದ್ಘಾಟನಾ ಸಮಾರಂಭವನ್ನು ತಾಲೂಕಿನ ಬೊಮ್ಮತನಹಳ್ಳಿ ಗ್ರಾಮದಲ್ಲಿ ಮಾ. 22ರಂದು ಬೆಳಿಗ್ಗೆ 10ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ತಹಸೀಲ್ದಾರ್ ಮಹಮ್ಮದ್ ಅಲ್ತಾಪ್ ಪಾಷ ನೆರೆವೇರಿಸಲಿದ್ದು ಅಧ್ಯಕ್ಷತೆಯನ್ನು ಡಿಎಸ್ಎಸ್ ಜಿಲ್ಲಾ ಸಂಚಾಲಕ ರಂಗೇಗೌಡ ವಹಿಸುವರು. ಅಂಬೇಡ್ಕರ್ ಭಾವ ಚಿತ್ರ ಅನಾವರಣವನ್ನು ಸಮಾಜ ಕಲ್ಯಾಣಾಧಿಕಾರಿ ವೈ.ಎನ್. ರಂಗನಾಥ್ ಹಾಗೂ ನಾಮಫಲಕ ಅನಾವರಣ ತಾಪಂ ಇಒ ರಂಗನಾಥ್ ನೆರವೇರಿಸಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ. ನಾಗರಾಜ್ ಹಾಗೂ ಪಾವಗಡ ವೃತ್ತ ಸಿಪಿಐ ಶೇಷಾದ್ರಿ ಹಿತವಚನಗಳನ್ನು ನುಡಿಯಲಿದ್ದಾರೆ. ಮುಖ್ಯ ಅಥಿತಿಗಳಾಗಿ ಪಿಎಸ್ಐ ರಾಮಕೃಷ್ಣಪ್ಪ, ಆರೋಗ್ಯಧಿಕಾರಿ ಡಾ.ಚನ್ನಕೇಶವ, ರೊಪ್ಪ ಗ್ರಾಪಂ ಪಿಡಿಒ ನಾಗರಾಜ್ ನಾಯಕ್, ಡಿಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಸಿ.ಕೆ.ತಿಪ್ಪೇಸ್ವಾಮಿ, ಡಿಎಸ್ಎಸ್ ಸಂಘದ ಅಧ್ಯಕ್ಷ ಬಿ.ಪಿ.ಪೆದ್ದಣ್ಣ ಸೇರಿದಂತ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮುಖಂಡ ಬೊಮ್ಮತನಹಳ್ಳಿ ಸಂಘದ ಅಧ್ಯಕ್ಷ ಪಾಂಡುರಂಗಪ್ಪ, ಉಪಾಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಗಂಗಯ್ಯ ಹಾಗೂ ತಿಪ್ಪೇಸ್ವಾಮಿ ಮತ್ತು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
26 ರಂದು ಬ್ರಹ್ಮರಥೋತ್ಸವ
ಈ ಬಾರಿಯ ಬ್ರಹ್ಮರಥೋತ್ಸವ ಮಾ.26 ರ ಮಂಗಳವಾರ ನಡೆಯಲಿದ್ದು, ಅಂದು ಸ್ವಾಮಿಗೆ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಅಂದು ಬೆಳಗ್ಗೆ ಯಾತ್ರಾದಾನ ನಡೆಯಲಿದ್ದು, ಮಧ್ಯಾಹ್ನ ಒಂದು ಗಂಟೆಗೆ ರಥೋತ್ಸವ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 6.30ರಿಂದ 7.30ರವರೆಗೆ ಭಕ್ತಿಗೀತೆಗಳ ಗಾಯನ ಹಾಗೂ 7.30 ರಿಂದ 9.30 ರವರೆಗೆ ಮೋಹಿನಿ ಭಸ್ಮಾಸುರ ಎಂಬ ಭಕ್ತಿ ಪ್ರಧಾನ ನೃತ್ಯರೂಪಕ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

