ಸರ್ಕಾರಿ ಸಹಾಯಧನ ಸದುಪಯೋಗವಾಗಲಿ
ಕ.ಪ್ರ ವಾರ್ತೆ ಚಿಕ್ಕನಾಯಕನಹಳ್ಳಿ ಮಾ.20
ಸಾಲ ಪಡೆಯುವುದರಲ್ಲಿರುವ ಮಹತ್ವ ಪಡೆದ ಸಾಲದಿಂದ ಉತ್ತಮ ಜೀವನ ರೂಪಿಸಿಕೊಂಡಾಗ ಮಾತ್ರ ಸಾಲದ ಸಹಾಯ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದು ತಾಪಂ ಅಧ್ಯಕ್ಷ ಎಂ.ಎಂ.ಜಗದೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಜಲಾನಯನ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಗ್ರ ಜಲಾನಯನ ಅಭಿವೃದ್ದಿ ಯೋಜನೆಯಡಿಯಲ್ಲಿ ಶೆಟ್ಟೀಕೆರೆ ಹೋಬಳಿಯ 37 ಸ್ವಸಹಾಯ ಸಂಘಗಳಿಗೆ ತಲಾ 50ಸಾವಿರ ರು. ಸುತ್ತುನಿಧಿ ಚೆಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿಯಾಗಲಿ ಅಥವಾ ಸಂಸ್ಥೆಯಾಗಲಿ ಸರ್ಕಾರದ ಸಹಾಯವನ್ನೇ ನಂಬಿ ಕೂತರೆ ಯಶಸ್ಸು ಸಾಧಿಸಲಾಗುವುದಿಲ್ಲ. ಸಹಾಯ ಒಂದು ರೀತಿಯ ಊರುಗೋಲಿದ್ದಂತೆ, ಜೀವನ ಪೂರ್ತಿ ಊರುಗೋಲನ್ನೇ ನಂಬಿ ಬದುಕಬಾರದು ಎಂದು ಸಹಾಯಧನಕ್ಕಾಗಿ ಕಾಯಬಾರದೆಂಬುದನ್ನು ಮಾರ್ಮಿಕವಾಗಿ ತಿಳಿಸಿದರು. ಅರಣ್ಯ ಅಭಿವೃದ್ಧಿ ಯೋಜನೆಯಡಿ ಜಲಾನಯನ ಇಲಾಖೆ ಮೂಲಕ ವಿತರಿಸಿರುವ ಸಸಿಗಳನ್ನು ತಮ್ಮ ಮಕ್ಕಳಂತೆ ಸಲಹಿ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಇಂದು ಬ್ಯಾಂಕುಗಳು ಪುರುಷರಿಗೆ ಸಾಲ ನೀಡಲು ಹಿಂಜರಿಯುತ್ತಿವೆ. ಅದಕ್ಕೆ ಕಾರಣ ಅವರು ಮರುಪಾವತಿಯಲ್ಲಿ ವಿಫಲವಾಗಿರುವುದು. ಮಹಿಳೆಯರು ಎಲ್ಲಾ ವಿಚಾರಗಳಲ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಹಣಕಾಸು ಸಂಸ್ಥೆಗಳು ಅವರಿಗೆ ಸಾಲ ನೀಡಲು ನಾ ಮುಂದು, ತಾಮುಂದು ಎಂದು ಪೈಪೋಟಿ ನಡೆಸುತ್ತಿವೆ. ಇದನ್ನು ಮಾತೆಯರು ಉಳಿಸಿಕೊಳ್ಳಬೇಕು. ಜಲಾನಯನ ರೈತರ ಹಿತಕಾಯುವ ಇಲಾಖೆ. ಇಲಾಖೆಯ ರೂಪು ರೇಷೆಯಂತೆ ರೈತರು ಕಾರ್ಯಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ಮುಂದೊಂದು ದಿನ ಅಂತರ್ಜಲ ಬತ್ತಿ ನೀರಿಗೆ ಹಾಹಾಕಾರ ಉಂಟಾದೀತು ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು. ಜಿಪಂ ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಾಬಾಯಿ, ತಾಪಂ ಉಪಾಧ್ಯಕ್ಷೆ ಲತಾಕೇಶವಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ನಿರಂಜನ್,ದಾಕ್ಷಾಯಿಣಿ ರಮೇಶ್,ಇಒ ಎ.ಜಿ.ತಿಮ್ಮಯ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
'ಮನಶ್ಶಾಂತಿಗಾಗಿ ಹತ್ತು ನಿಮಿಷ ಮೀಸಲಿಡಿ'
ತುರುವೇಕೆರೆ, ಮಾ,19. ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಮನುಷ್ಯ ತನ್ನ ಮನಶ್ಶಾಂತಿಯನ್ನೇ ಮರೆತಿದ್ದಾನೆ. ಕೇವಲ ಹಣ ದುಡಿಯುವುದೊಂದೇ ಜೀವನದ ಮಹತ್ತರ ಸಾಧನೆ ಎಂಬಂತೆ ವರ್ತಿಸುತ್ತಿದ್ದಾನೆ. ಜೀವನದ ಅಂತ್ಯ ಕಾಲ ಸಮೀಪಿಸುತ್ತಿದ್ದಂತೆ ತಾನು ಶ್ರಮ ವಹಿಸಿ ದುಡಿದ ಹಣ ಔಷಧೋಪಚಾರಕ್ಕೇ ಮೀಸಲಿಡುವ ಸ್ಥಿತಿ ಕಂಡು ಮರುಗಬೇಕಾಗುತ್ತದೆ. ಆದ್ದರಿಂದ ದುಡಿಯುವ ಪ್ರತಿ ದಿನವೂ ನೆಮ್ಮದಿಯನ್ನು ಕಂಡುಕೊಳ್ಳಲು ಪ್ರತಿದಿನ ಕನಿಷ್ಠ 10 ನಿಮಿಷವಾದರೂ ನಿಶ್ಚಿಂತೆಯಿಂದ ದೇವರ ಧ್ಯಾನ ಮಾಡಿ ಎಂದು ಕಲ್ಪತರು ಆಶ್ರಮದ ಶಿವಕುಮಾರನಥ ಸ್ವಾಮೀಜಿ ಹೇಳಿದರು.
ಸಮೀಪದ ಬಾಳಗಂಚಿಯ ಉಧ್ವವ ಶ್ರೀ ಶನೀಶ್ವರ ಜಡೆಮುನೇಶ್ವರ ಸ್ವಾಮಿ ಹಾಗೂ ಪಂಚ ಸೃಷ್ಟಿ ಶ್ರೀ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು. ಭಗವಂತನಲ್ಲಿ ಶ್ರದ್ಧೆ ಹಾಗೂ ನಂಬಿಕೆ ಇಟ್ಟು ನಡೆದುಕೊಂಡಲ್ಲಿ ಉತ್ತಮ ಚಾರಿತ್ಯ ಉಳ್ಳವರಾಗಿ ಬಾಳಬಹುದು ಎಂದರು. ಮಾಚಿ ದೇವ ಶಿವಯೋಗಾನಂದಪುರಿ ಸ್ವಾಮೀಜಿ ಮಾತನಾಡಿ ಧಾರ್ಮಿಕ ಮನೋಭಾವನೆ ಮೈಗೂಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬಾಳಬಹುದು. ಆತ ಸರ್ವರಿಂದಲೂ ಆದರಿಸಲ್ಪಡುವವನಾಗುತ್ತಾನೆ ಎಂದರು. ಬೀಚನಹಳ್ಳಿಯ ನರಸಿಂಹಸ್ವಾಮೀಜಿ ಮಾತನಾಡಿ ಹಿಂದೂಸ್ಥಾನದ ಸನಾತನ ಧರ್ಮ ಅತ್ಯಂತ ಶ್ರೇಷ್ಠದ್ದಾಗಿದೆ. ಆಧುನಿಕ ಯುಗ ಪ್ರಾರಂಭವಾಗಿದ್ದರೂ ಸಹ ದೈನಂದಿನ ಬದುಕಿನಲ್ಲಿ ಧಾರ್ಮಿಕ ಮನೋಭಾವ ರೂಢಿಸಿಕೊಂಡಲ್ಲಿ ಸುಖೀ ಜೀವನ ನಡೆಸಬಹುದಾಗಿದೆ ಎಂದರು.
ಅಧ್ಯಕ್ಷತೆಯನ್ನು ಪಂಚಸೃಷ್ಟಿ ಶ್ರೀ ಕ್ಷೇತ್ರದ ಚಂದ್ರೇಶ್ ಸ್ವಾಮೀಜಿ ವಹಿಸಿದ್ದರು. ವಚನ ವಾಚಸ್ಪತಿ ಎಡೆಯೂರು ಮೂಡಲಗಿರಿಯವರಿಂದ ಶಿವಶರಣರ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಎಡೆಯೂರು ಮೂಡಲಗಿರಿಯವರನ್ನು ಶಿವಕುಮಾರನಾಥ ಸ್ವಾಮೀಜಿ ಸನ್ಮಾನಿಸಿದರು. ವಿವಿಧ ಗ್ರಾಮಗಳ ಗ್ರಾಮದೇವತೆಗಳಾದ ಬಾಳಗಂಚಿಯ ಹೊನ್ನಾದೇವಿ, ಬೆನಕನಕೆರೆಯ ಮಾಯಮ್ಮ ದೇವಿ, ದೇವರ ಮಾವಿನಕೆರೆಯ ಲಕ್ಷ್ಮೀದೇವಿ, ಗೌಡರಹಳ್ಳಿಯ ಮಸಣಿಕೆ ಅಮ್ಮ ದೇವಿ, ಹೊನ್ನಮಾರನಹಳ್ಳಿಯ ಅಳುಕೋಟೆ ಮಾರಮ್ಮದೇವಿಯ ಮೆರವಣಿಗೆ ಮಾಡಲಾಯಿತು. ಕೆ.ಸಿದ್ದೇಗೌಡರು ಸ್ವಾಗತಿಸಿದರು. ಕೆ.ಸಿ.ಮಾಲಪ್ಪ ನಿರೂಪಿಸಿದರು. ಎಂ.ಬಿ.ವೈರಮುಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

