ತುಮಕೂರು

ನಿಂತಿದ್ದ ಲಗೇಜ್ ಆಟೋಕ್ಕೆ ವಾಹನ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು

Published On :

ಶಿರಾ: ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿಕ್ಕದಾಸರಹಳ್ಳಿ ಗ್ರಾಮದ ರಸ್ತೆಯಲ್ಲಿ ನಿಂತಿದ್ದ ಲಗೇಜ್ ಆಟೋವೊಂದಕ್ಕೆ ಹಿಂಬದಿಯಿಂದ  ವಾಹನ ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿ 5 ಜನ ಗಾಯಗೊಂಡಿರುವ ಘಟನೆ ನಡೆದಿದೆ. ಕಳ್ಳಂಬೆಳ್ಳ ಪೋಲಿಸ್ ಠಾಣಾ ವ್ಯಾಪ್ತಿಯ ಕಡವಿಗೆರೆಯಿಂದ ಚಿಕ್ಕದಾಸರಹಳ್ಳಿಗೆ 6 ಮಂದಿ ಲಗೇಜ್ ಆಟೋಮೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ನಾಗರಾಜಪ್ಪ (50) ಎಂಬಾತ ತೀವ್ರ ಗಾಯಗೊಂಡು ಅಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಾವನ್ನಪ್ಪಿದಿದ್ದಾನೆ. ಉಳಿದ ಐದು ಜನರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಸ್ಥಳಕ್ಕೆ ಕಳ್ಳಂಬೆಳ್ಳ ಠಾಣಾಧಿಕಾರಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಮೀನು ವಿವಾದ ಕೊಲೆಯಲ್ಲಿ ಅಂತ್ಯ
ಗುಬ್ಬಿ:
ಜಮೀನು ವಿವಾದದ ಹಿನ್ನೆಲೆಯಲ್ಲಿ ಅಣ್ಣ ತಮ್ಮಂದಿರ ನಡುವೆ ನಡೆಯುತ್ತಿದ್ದ ವಿವಾದ ಕೊಲೆಯಲ್ಲಿ ಅಂತ್ಯ ಗೊಂಡಿರುವ ಘಟನೆ  ತಾಲೂಕಿನ ಸಿ.ಎಸ್.ಪುರ ಹೋಹಳಿಯ ಮಾವಿನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಮಾವಿನಹಳ್ಳಿ ಗ್ರಾಮದ ನಿಂಗೇಗೌಡ (48)  ಮೃತಪಟ್ಟ ದುರ್ದೈವಿಯಾಗಿದ್ದು ಈತನ ತಮ್ಮ ಹೊನ್ನೇ ಗೌಡ ಜಮೀನು ವಿವಾದ ಹಿನ್ನೆಲೆಯಲ್ಲಿ ರಾತ್ರಿ ಮಾವಿನಹಳ್ಳಿ ಗ್ರಾಮದಿಂದ ತನ್ನ ತೋಟದ ಮನೆಗೆ ಹೋಗುತ್ತಿದ್ದ ಅಣ್ಣ ನಿಂಗೇಗೌಡನಿಗೆ ಮಾರ್ಗಮಧ್ಯೆ ಮಚ್ಚಿನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ.
ಪರಿಣಾಮ ತೀವ್ರ ಗಾಯಗೊಂಡ ನಿಂಗೇಗೌಡರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರುವುದಾಗಿ ತಾಲೂಕಿನ ಸಿ.ಎಸ್.ಪುರ ಪೊಲೀಸರು ತಿಳಿಸಿದ್ದಾರೆ. ಆರೋಪಿ ಹೊನ್ನೇ ಗೌಡ ತಲೆ ಮರೆಸಿಕೊಂಡಿದ್ದು ಪೊಲೀಸರು ಆರೋಪಿಯ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.

ಸದಾಶಿವ ಆಯೋಗ ವರದಿ ವಿರೋಧಿಸುವವರ ಠೇವಣಿ ಕಳೆಯಿರಿ
ತಿಪಟೂರು:
ಸ್ವಾತಂತ್ರ್ಯ ಪೂರ್ವದಿಂದಲೂ ಈವರೆಗೆ ದಲಿತರ ಬೆಂಬಲದಿಂದ ಆಳಿದಂತಹ ಸರ್ಕಾರಗಳು ದಲಿತರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ದಲಿತರನ್ನು ದಲಿತರಾಗಿ ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಶೋಷಣೆ ಮಾಡುತ್ತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ) ತಾ.ಅಧ್ಯಕ್ಷ ನಾಗತಿಹಳ್ಳಿ ಕೃಷ್ಣಮೂರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿ ಜಾರಿಗೊಳಿಸಿ ಎಂದು ಬೀದಿ ಬೀದಿಗಳಲ್ಲಿ ಅರೆಬೆತ್ತಲೆ ಮೆರವಣಿಗೆ, ಧರಣಿ ಸತ್ಯಾಗ್ರಹ, ಬೃಹತ್ ಸಮಾವೇಶಗಳನ್ನು ಮಾಡಿ ಪೊಲೀಸರಿಂದ ಲಾಠಿ ಏಟು ತಿಂದು ಹಕ್ಕೊತ್ತಾಯ ಮಾಡಿದ್ದರೂ ಸಹ ಕೆಲ ಪಟ್ಟಭದ್ರ ಹಿತಾಸಕ್ತಿ ರಾಜಕಾರಣಿಗಳು ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಅಲ್ಪ ಜನಸಂಖ್ಯೆ ಇರುವವರನ್ನು ಬೆಂಬಲಿಸಿ,ದಲಿತರನ್ನು ದಮನ ಮಾಡಿ ಈ ವರದಿಯನ್ನು ಮೂಲೆಗುಂಪು ಮಾಡಿರುತ್ತಾರೆ. ಎ.ಜೆ.ಸದಾಶಿವಯ ಆಯೋಗ ವರದಿ ವಿರುದ್ಧವಾಗಿ ನಡೆದುಕೊಂಡ ಭ್ರಷ್ಟ ಮುಖಂಡರುಗಳನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಇಲ್ಲದಂತೆ ಸೋಲಿಸಬೇಕೆಂದು ದಸಂಸ ಕರೆ ನೀಡಿದ್ದು, ಈ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಚುನಾವಣಾ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಈ ಆಂದೋಲನದಲ್ಲಿ ದಲಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಕ್ಕ ಪಾಠ ಕಲಿಸಬೇಕಂದು ನಾಗತಿಹಳ್ಳಿ ಕೃಷ್ಣಮೂರ್ತಿ ತಿಳಿಸಿದ್ದಾರೆ.  

ಚುನಾವಣಾ ಪ್ರಚಾರಕ್ಕೆ ಇಂದಿನಿಂದ ಚಾಲನೆ
ಚಿಕ್ಕನಾಯಕನಹಳ್ಳಿ:
ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕೆ.ಎಸ್.ಕಿರಣ್‌ಕುಮಾರ್ ಅವರು 24ರಿಂದ ಚುನಾವಣಾ ಪ್ರಚಾರ ಪ್ರಾರಂಭಿಸಲಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಮಿಲಿಟರಿ ಶಿವಣ್ಣ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಗೆ ಹುಳಿಯಾರು ಹೋಬಳಿ ಮರೆನಡು ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಕೋರಿದ್ದಾರೆ.

ಬಹುಜನ ಸಮಾಜ ಪಕ್ಷಕ್ಕೆ  ಬೆಂಬಲ ಘೋಷಣೆ
ಮಧುಗಿರಿ:
ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಬಣದ ಎಲ್ಲ ಮುಖಂಡರು, ಕಾರ್ಯಕರ್ತರು ಬಹುಜನ ಸಮಾಜ ಪಾರ್ಟಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು   ಡಿಎಸ್‌ಎಸ್ ರಾಜ್ಯ ಖಜಾಂಚಿ ಬೆಲ್ಲದಮಡು ಕೃಷ್ಣಪ್ಪ ಘೋಷಿಸಿದರು. ಇಲ್ಲಿನ ಆರ್ಯ ಹರಿಜನ ವಿದ್ಯಾರ್ಥಿ ನಿಲಯದಲ್ಲಿ ನಡೆದ  ತಾ.ದಲಿತ ಮುಖಂಡರ ಸಭೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ  ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಾಜಕೀಯ ಸಿದ್ಧಾಂತ ಹಿನ್ನೆಲೆಯೊಳಗೆ ಬಿಎಸ್ಪಿ ಪಕ್ಷ ದಲಿತ ಸಂಘರ್ಷ ಸಮಿತಿ ಸಿದ್ಧಾಂತ ಎರಡು ಒಂದೇ ಆಗಿರುವುದರಿಂದ ಪ್ರಜಾಪ್ರಭುತ್ವದಡಿ ಶೇ.85ರಷ್ಟು ಜನ ಸಂಖ್ಯೆ ಉಳ್ಳ ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನೊಳಗೊಂಡ  ಜನರನ್ನು ಸಾಮಾಜಿಕ, ರಾಜಕೀಯವಾಗಿ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಸರ್ವಜನ ಹಿತಾಯ ಸರ್ವಜನ ಸುಖಾಯ  ಎಂಬ ಸೂತ್ರದಡಿ ಬಿಎಸ್ಪಿ ಜನಪರ ಕೆಲಸ ಮಾಡುವ ಪಕ್ಷವಾದ ಕಾರಣ ಡಿಎಸ್‌ಎಸ್ ಕೃಷ್ಣಪ್ಪ ಬಣ ಬೆಂಬಲ ಸೂಚಿಸಿದೆ ಎಂದರು.   ಮಧುಗಿರಿ ಧಾನಸಭಾ ಕ್ಷೇತ್ರದಲ್ಲಿ ಒಟ್ಟು 54 ಸಾವಿರ ಪ.ಜಾತಿ ಮತದಾರರಿದ್ದು ಎಲ್ಲರನ್ನು ಒಗ್ಗೂಡಿಸಿ ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ ಡಿಎಸ್‌ಎಸ್ ಕೆಲಸ ಮಾಡುತ್ತಿದ್ದು, ಹಾಗಾಗಿ ಪಕ್ಷಭೇದ ಮರೆತು ಎಲ್ಲರೂ ಒಗ್ಗೂಡಿ ತಾಲೂಕಿನ ಎಲ್ಲ ದಲಿತ ಮುಖಂಡರು ಬಿಎಸ್ಪಿ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಬೆಲ್ಲದಮಡು ಕೃಷ್ಣಪ್ಪ ಮನವಿ ಮಾಡಿದ್ದಾರೆ. ಜಿಲ್ಲಾ ಸಂಚಾಲಕ ಭರತ್‌ಕುಮಾರ್, ತಾ.ಮುಖಂಡ ಅಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಹ್ಲಾದ್ ಜೋಷಿ ಆಯ್ಕೆಗೆ ಸ್ವಾಗತ
ತಿಪಟೂರು:
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಂಸದ ಪ್ರಹ್ಲಾದ್ ಜೋಷಿಯವರನ್ನು ವಿಧಾನಸಭಾ ಚುನಾವಣೆಯ ಸಮಯದಲ್ಲಿ ನೇಮಿಸಿರುವುದು ಸ್ವಾಗತಾರ್ಹ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್ ತಿಳಿಸಿದ್ದಾರೆ.  ಪ್ರಹ್ಲಾದ್ ಜೋಷಿಯವರು ಪಕ್ಷಕ್ಕೆ ನಿಷ್ಠಾವಂತರಾಗಿದ್ದು, ಪಕ್ಷದ ವರ್ಚಿಸ್ವಿ ನಾಯಕರು. ಅವರು ಹತ್ತು ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು, ಎಲ್ಲಾ ಮುಖಂಡರನ್ನು ಮತ್ತು ಎಲ್ಲಾ ವರ್ಗದ ಕಾರ್ಯಕರ್ತರನ್ನು ಸಮಾನವಾಗಿ ಕೊಂಡೊಯ್ಯುವುದರ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಜಗದೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಡಿನಿಂದ ನಾಡಿಗೆ ಬಂದ ಆನೆಗಳು
ಚಿಕ್ಕನಾಯಕನಹಳ್ಳಿ: 
ತಾಲೂಕಿನ ಕಾಡೇನಹಳ್ಳಿ ಬಳಿ ಮೂರು ಆನೆಗಳು ಗೋಚರಿಸಿದ ಪರಿಣಾಮ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು.
ಮಾನವನ ದುರಾಸೆಯಿಂದಾಗಿ ಕಾಡೆಲ್ಲಾ ನಾಡಾದ ಪರಿಣಾಮ, ಕಾಡಿನಲ್ಲಿ ವಾಸಿಸಬೇಕಾದ ಜೀವಿಗಳೆಲ್ಲಾ ನಾಡಿಗೆ ಬರುವಂತಾಗಿದೆ. ಪರಿಣಾಮ ಶನಿವಾರ ಬೆಳಿಗ್ಗೆ ಮೂರು ಗಂಡಾನೆಗಳು ಪಟ್ಟಣದ ಸಮೀಪವಿರುವ ಕಾಡೇನಹಳ್ಳಿ ಬಳಿ ಗೋಚರಿಸಿವೆ. ಅರಣ್ಯ ಇಲಾಖೆಯವರ ಹೇಳಿಕೆ ಪ್ರಕಾರ ಮೂರು ಆನೆಗಳು ಬನ್ನೇರುಘಟ್ಟ ಕಾಡಿನಿಂದ ತಪ್ಪಸಿಕೊಂಡು ಬಂದಿದ್ದು, ನೆಲಮಂಗಲ ಮಾರ್ಗವಾಗಿ ತುಮಕೂರು ಗುಬ್ಬಿ, ತಾಲೂಕಿನ ಗಂಟೇನಹಳ್ಳಿ ಮಾರ್ಗವಾಗಿ ಕಾಡೇನಹಳ್ಳಿ ಬಳಿಗೆ ಬಂದಿವೆ ಎಂದು ಹೇಳಿದರು. ಅರಣ್ಯ ಇಲಾಖೆ ಎಸಿಎಫ್, ಬಿ.ಎಸ್.ನಾಗೇಂದ್ರರಾವ್, ತಿಪಟೂರು ಆರ್‌ಎಫ್‌ಓ ಸತ್ಯನಾರಾಯಣರಾವ್, ಚಿ.ನಾ.ಹಳ್ಳಿ ಆರ್‌ಎಫ್‌ಓ ಮಾರುತಿ ಮತ್ತು ಇಲಾಖೆ ಸಿಬ್ಬಂದಿ ಆನೆಗಳನ್ನು ತೀರ್ಥಪುರ ಕಾಡಿನ ಕಡೆಗೆ ಸಾಗುಹಾಕುವಲ್ಲಿ ಯಶಸ್ವಿಯಾದರು.

ಬಾವಿಗೆ ಬಿದ್ದ ಕರಡಿ
ಗುಬ್ಬಿ:
ಗುಂಪಿನಿಂದ ಚದುರಿದ ಕರಡಿಯೊಂದು ಬಾವಿಗೆ ಬಿದ್ದ ಘಟನೆ ಶುಕ್ರವಾರ ರಾತ್ರಿ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಕುಂದುರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅರಣ್ಯ ಸಮೀಪದಲ್ಲೇ ಇರುವ ಕುಂದುರನಹಳ್ಳಿ ಗ್ರಾಮದ ಬಳಿ ಸಂಚರಿಸುತ್ತಿದ್ದ ಮೂರು ಕರಡಿಗಳ ಪೈಕಿ ಒಂದು ಕರಡಿ ಮಹದೇವಯ್ಯ ಎಂಬ ರೈತರ ತೋಟದಲ್ಲಿನ ತೆರೆದ ಬಾವಿಗೆ ಬಿದ್ದಿದೆ. ನೀರು ಇಲ್ಲದ 35 ಅಡಿ ಆಳದ ಬಾವಿಯಲ್ಲಿ ಬಿದ್ದ ಕರಡಿಯನ್ನು ಕಂಡ ಮತ್ತೆರಡು ಕರಡಿ ಬಾವಿಯ ಸುತ್ತ ಸುತ್ತಾಡುತ್ತಿದ್ದನ್ನು ಕಂಡ ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯವನ್ನು ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗವಿಸಿದ ವಲಯ ಅರಣ್ಯಧಿಕಾರಿ ಹರೀಶ್ ತಮ್ಮ ಸಿಬ್ಬಂದಿಯೊಂದಿಗೆ ಕರಡಿಯನ್ನು ಮೇಲೆತ್ತುವ ಕಾರ್ಯದಲ್ಲಿ ತೊಡಗಿದರು.

ರೈತರ ಜಮೀನಿಗೆ ಇನ್ನೂ ಹಣ ದೊರಕಿಲ್ಲ: ಆರೋಪ
ಶಿರಾ:
ತಾಲೂಕಿನ ಕಸಬಾ ಹೋಬಳಿಯ ಮುದಿಗೆರೆ ಕಾವಲ್ ರೈತರ ಜಮೀನುಗಳನ್ನು ಎರಡು ಹಂತಗಳಲ್ಲಿ ಸುಮಾರು 2128 ಎಕರೆಯನ್ನು ಕೈಗಾರಿಕಾ ಅಭಿವೃದ್ಧಿ ಮಂಡಳಿ ವಶಪಡಿಸಿಕೊಂಡಿದೆ. ಮೊದಲನೆ ಹಂತದ ಜಮೀನುಗಳನ್ನು ಕೈಬಿಟ್ಟು ಎರಡನೇ ಹಂತದ ಜಮೀನುಗಳ ರೈತರಿಗೆ ಈತನಕವು ಹಣ  ನಿಗದಿಗೊಳಿಸಿ ಕ್ರಮ ಕೈಗೊಳ್ಳದೆ  ಹಣವೂ ನೀಡದೆ ಸರ್ಕಾರವು ನಿರ್ಲಕ್ಷ ಧೋರಣೆ ತೋರಿಸುತ್ತಿದೆ ಎಂದು ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದರಿ ಮುದಿಗೆರೆ ಕಾವಲ್‌ನ ಎರಡನೇ ಹಂತದ 1211 ಎಕರೆ ಜಮೀನಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಶಿರಾಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು ರೈತರೊಡನೆ ಚರ್ಚಿಸಿದಾಗ ರೈತರು ಎಕರೆಗೆ ಇಂತಿಷ್ಟೆ ಹಣ ನಿಗದಿಗೊಳಿಸುವಂತೆ ಮನವಿ ಮಾಡಿದ್ದಾಗ ಸರ್ಕಾರದೊಂದಿಗೆ ಚರ್ಚಿಸಿ ಬೆಲೆ ನಿಗದಿಗೊಳಿಸಿ ಅಕ್ಟೋಬರ್ ತಿಂಗಳೊಗೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಅಂದಿನ ಜಿಲ್ಲಾಧಿಕಾರಿಗಳು ನೀಡಿದ್ದರು.
ಇದೇ ಸಂದರ್ಭದಲ್ಲಿ ಎರಡೂ ಹಂತದ ಜಮೀನುಗಳನ್ನು ಪಡೆದುಕೊಳ್ಳಿ ಎಂದು ರೈತರು ಮನವಿ ಕೂಡ ಮಾಡಿದ್ದರು. ಆದರೆ 6 ತಿಂಗಳು ಕಳೆದರೂ ಜಮೀನುಗಳಿಗೆ ಬೆಲೆ ನಿಗದಿಪಡಿಸಿಲ್ಲ. ರೈತರು ತಮ್ಮ ಜಮೀನುಗಳನ್ನು ಬೇರೆಯವರಿಗೂ ಮಾರಾಟ ಮಾಡುವಂತಿಲ್ಲ ಎಂದು ಅರೋಪಿಸಿದ್ದಾರೆ. ಇದೀಗ ರೈತರು ಬೇಸಿಗೆ ಬವಣೆಗೆ ತುತ್ತಾಗಿದ್ದು ಕಿತ್ತು ತಿನ್ನುವ ಬಡತನವನ್ನು ಸಹಿಸಲಾರದಂತಾಗಿದ್ದು ಸಾಲಗಳನ್ನು ತೀರಿಸಲಾರದಂತಹ ಪರಿಸ್ಥಿತಿಯಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.