ತುಮಕೂರು

ಕೆಜೆಪಿ ಏಳಿಗೆ ಸಹಿಸದ ಶಾಸಕರು ರಾಜಕೀಯ ಕೈಬಿಡಲಿ

Published On :

ಕ.ಪ್ರ.ವಾರ್ತೆ ತಿಪಟೂರು ಮಾ.27
ಹುಟ್ಟು ಹೋರಾಟಗಾರ, ಮಾಜಿ ಮುಖ್ಯಮಂತ್ರಿ, ಕಲ್ಪತರು ನಾಡಿನ ಜನತೆಯ ಆಶಾಕಿರಣ ಬಿ.ಎಸ್. ಯಡಿಯೂರಪ್ಪನವರ ದಿಟ್ಟ ನಾಯಕತ್ವ ಹಾಗೂ ಅವರು ಕಲ್ಪತರು ನಾಡಿಗೆ ಕೊಡಮಾಡಿದ ನೂರಾರು ಕೋಟಿ ರೈತಪರ, ಜನಪರ ಅಭಿವೃದ್ಧಿ ಯೋಜನೆಗಳ ಕೆಲಸ ಮೆಚ್ಚಿ ವಿವಿಧ ಪಕ್ಷಗಳ ತಾಲೂಕಿನ ಅನೇಕ ಮುಖಂಡರು, ನೂರಾರು ಕಾರ್ಯಕರ್ತರು ಮತ್ತು ವಿವಿಧ ಸಮುದಾಯದ ಮುಖಂಡರು ಕರ್ನಾಟಕ ಜನತಾ ಪಕ್ಷಕ್ಕೆ ಕಳೆದ ಒಂದು ವಾರದಿಂದ ಸೇರ್ಪಡೆಗೊಳ್ಳುತ್ತಿರುವುದು ತಾಲೂಕಿನಲ್ಲಿ ಕೆಜೆಪಿ ಗೆಲವಿಗೆ ಆನೆಬಲ ಬಂದಂತಾಗಿದೆ ಎಂದು ಅಭ್ಯರ್ಥಿ ಲೋಕೇಶ್ವರ ತಿಳಿಸಿದರು.
ನಗರದ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೇಶ್ವರ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು, ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಆಗುತ್ತಿರುವ ಗೊಂದಲ ಕೆಜೆಪಿ ಪಕ್ಷಕ್ಕೆ ಲಾಭವಾಗಿದೆ. ಆ ಪಕ್ಷದ ಮುಖಂಡರು ಕೆಜೆಪಿ ನಾಯಕತ್ವ ಹಾಗೂ ಪಕ್ಷ ಸಂಘಟನೆಯನ್ನು ಮೆಚ್ಚಿಕೊಂಡು ಕಳೆದ ಒಂದು ವಾರದಿಂದ ಸಾವಿರಾರು ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಮುಸ್ಲಿಂ ಬಾಂಧವರು, ಕ್ರಿಶ್ಚಿಯನ್ನರು, ಬೆಸ್ತರು, ವಿಶ್ವಕರ್ಮ, ಕುರುಬ ಸಮುದಾಯ ಹಾಗೂ ದೇವಾಂಗ ಜನಾಂಗದವರು ಸೇರಿದಂತೆ ಎಲ್ಲ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ವಿಧಾನಸಭಾ ಚುನಾವಣೆಯ ಪಕ್ಷದ ಗೆಲವಿನ ದಿಕ್ಸೂಚಿ ಎಂದರು. ಜೆಡಿಎಸ್‌ನ ಮಾಜಿ ನಗರಸಭಾ ಸದಸ್ಯರಾದ ನಾಸೀರ್ ಖಾನ್, ಮಮ್ತಾಜ್ ಬೇಗಂ, ಭಾಗ್ಯಮ್ಮ ಮತ್ತಿತರರು ಪಕ್ಷಕ್ಕೆ ಸೇರ್ಪಡೆಯಾದವರು.
ಹಳದಿ ಕಣ್ಣಿನಿಂದ ನೋಡುವುದು ನಿಲ್ಲಿಸಲಿ: ಮಾ.24ರ ಭಾನುವಾರ ತಾಲೂಕಿನ ಬೈರಾಪುರ ಗ್ರಾಮದ ಕಲ್ಲಾಳಮ್ಮ ದೇವಾಲಯದ ಬಳಿ ಬಿಜೆಪಿಯ ಕೆಲವರು ಕರ್ತವ್ಯ ನಿರತ ಪೊಲೀಸರ ಮೇಲೆ ನಡೆಸಿರುವ ಕೃತ್ಯವನ್ನು ನನ್ನ ತಲೆಗೆ ಕಟ್ಟಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಅವರ ಹೇಡಿತನಕ್ಕೆ ಸಾಕ್ಷಿಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಕಾಯಾವಾಚಾ ಕರ್ತವ್ಯ ನಿರ್ವಹಿಸಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದಿರುವ ನಾನು ಖಾಕಿಗೆ ಅವಮಾನ ಮಾಡುವಂತ ಹೀನ ಕೃತ್ಯಕ್ಕೆ ಎಂದೂ ಕೈ ಹಾಕುವುದಿಲ್ಲ ಎಂಬ ಸೂಕ್ಷ್ಮ ಪರಿಜ್ಞಾನ ಇಲ್ಲದ ಶಾಸಕ ಮಹಾಶಯರು, ತಮ್ಮ ಸೋಲನ್ನು ನೆನೆದು ಸಂಯಮ ಕಳೆದುಕೊಂಡು ಈ ರೀತಿಯ ಹತಾಶ ಮನೋಭಾವಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಆದ್ದರಿಂದ ಕೀಳುಮಟ್ಟದ ರಾಜಕೀಯ ಬಿಟ್ಟು ಯಾವಾಗಲೂ ಶಾಸಕರು ಹಳದಿ ಕಣ್ಣಿನಿಂದ ನಮ್ಮನ್ನು ನೋಡುವುದು ಬಿಟ್ಟು, ಕಲ್ಪತರು ನಾಡಿನ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಲಿ ಎಂದು ಕಿವಿ ಮಾತು ಹೇಳಿದರು.
ರಕ್ಷಣೆ ಮಾಡಿಲ್ಲ: ಯಾವತ್ತೂ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ರಕ್ಷಣೆ ಮಾಡಲಾಗದ ಶಾಸಕರು, ಸದರಿ ಘಟನೆಯಲ್ಲಿ ಕಾರ್ಯಕರ್ತರ ಆಕ್ರೋಶವನ್ನು ಎದುರಿಸಲಾಗದೆ ಘಟನೆಯ ಲಾಭವನ್ನು ವಾಮಮಾರ್ಗದಲ್ಲಿ ಪಡೆದುಕೊಳ್ಳಲು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅವರ ಹೇಡಿತನ ಪರಮಾವಧಿಯನ್ನು ಎತ್ತಿ ತೋರಿಸುತ್ತಿದೆ. ಆದ್ದರಿಂದ ಇನ್ನು ಮುಂದೆ ತಮ್ಮ ವಿರುದ್ಧ ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸುವುದು ಸೇರಿದಂತೆ ಸಾರ್ವಜನಿಕವಾಗಿ ನನ್ನ ಘನತೆಗೆ ಕುಂದುಂಟು ಮಾಡುವಂತೆ ನಡೆದುಕೊಂಡಲ್ಲಿ ಶಾಸಕರ ಮನೆ ಮುಂದೆ ನಾನು ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಜೊತೆ ಧರಣಿ ಹಮ್ಮಿಕೊಳ್ಳಬೇಕಾಗಬಹುದೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.